ಆ ಕಡೆ ನೀನಾಸಂ ಸತೀಶ್ ಅಭಿನಯದ “ಬ್ಯೂಟಿಫುಲ್ ಮನಸುಗಳು’ ಚಿತ್ರಕ್ಕೆ ಚಿತ್ರಮಂದಿರ ಸಿಗುತ್ತಿಲ್ಲ. ಈ ಕಡೆ “ಏನ್ ನಿನ್ ಪ್ರಾಬ್ಲಮ್ಮು’ ಎಂಬ ಚಿತ್ರಕ್ಕೆ 170ಕ್ಕೂ ಹೆಚ್ಚು ಚಿತ್ರಮಂದಿರಗಳು ಸಿಗುತ್ತಿವೆ. ಈಗಾಗಲೇ ಹಲವು ಚಿತ್ರಗಳಲ್ಲಿ ಗುರುತಿಸಿಕೊಂಡಿರುವ ಸತೀಶ್ ನೀನಾಸಂ ಅವರ ಚಿತ್ರಕ್ಕೆ ಹೀಗಾದರೆ ಹೇಗೆ ಎಂಬ ಪ್ರಶ್ನೆ ಬರಬಹುದು. ಜೊತೆಗೆ “ಏನ್ ನಿನ್ ಪ್ರಾಬ್ಲಿಮ್ಮು’ ಚಿತ್ರಕ್ಕೆ ಅಷ್ಟೊಂದು ಚಿತ್ರಮಂದಿರಗಳು ಸಿಕ್ಕಿದ್ದಾದರೂ ಹೇಗೆ ಎಂದು ಆಶ್ಚರ್ಯವಾಗಬಹುದು. ಈ ಪ್ರಶ್ನೆಗೆ ಉತ್ತರ, “ಏನ್ ನಿನ್ ಪ್ರಾಬ್ಲಿಮ್ಮು’ ಚಿತ್ರದ ನಿರ್ದೇಶಕ ಲಕ್ಕಿ, ಒಂಥರಾ ಲಕ್ಕಿ ಅಂತಲೇ ಹೇಳಬಹುದು.
“ಏನ್ ನಿನ್ ಪ್ರಾಬ್ಲಿಮ್ಮು’ ಮತ್ತು “ಚೌಕ’ ಚಿತ್ರಗಳನ್ನು ಜಾಕ್ ಮಂಜು ತಮ್ಮ ಮೈಸೂರು ಟಾಕೀಸ್ ಸಂಸ್ಥೆಯ ಮೂಲಕ ವಿತರಿಸುತ್ತಿದ್ದಾರೆ. ಎಲ್ಲಾ ಅಂದುಕೊಂಡಂತೆ ಆಗಿದ್ದರೆ, ಅವರು ಈ ವಾರ “ಚೌಕ’ ಚಿತ್ರವನ್ನು ಬಿಡುಗಡೆ ಮಾಡಬೇಕಿತ್ತು. ಈಗ “ಚೌಕ’ ಚಿತ್ರವು ಫೆಬ್ರವರಿ ಮೂರಕ್ಕೆ ಹೋಗಿದೆ. ಆ ಚಿತ್ರ ಎರಡು ವಾರಗಳ ಕಾಲ ಮುಂದಕ್ಕೆ ಹೋಗಿರುವುದರಿಂದ, ಅದೇ ಚಿತ್ರಮಂದಿರಗಳ ಸೆಟಪ್ಪಿನಲ್ಲಿ “ಏನ್ ನಿನ್ ಪ್ರಾಬ್ಲಿಮ್ಮು’ ಚಿತ್ರವನ್ನು ಬಿಡುಗಡೆ ಮಾಡುತ್ತಿದ್ದಾರೆ. ಈಗ “ಚೌಕ’ ಮುಂದೂಡಿಕೆಯಿಂದ ಮತ್ತು ಜಾಕ್ ಮಂಜು ಕಾರಣದಿಂದ, ಅನಾಯಾಸವಾಗಿ ಚಿತ್ರ ಬಿಡುಗಡೆಯಾಗುತ್ತಿದೆ.
ಇನ್ನು “ಬ್ಯೂಟಿಫುಲ್ ಮನಸುಗಳು’ ಚಿತ್ರಕ್ಕೂ ಅಂಥ ದೊಡ್ಡ ಸಮಸ್ಯೆಯೇನಾಗಿಲ್ಲ. ಚಿತ್ರಕ್ಕೆ ಚಿತ್ರಮಂದಿರಗಳು ಸಿಗುತ್ತಿಲ್ಲ, ಚಿತ್ರಮಂದಿರಗಳೆಲ್ಲಾ ಪರಭಾಷೆಯ ಚಿತ್ರಗಳ ಪಾಲಾಗುತ್ತಿವೆ ಎಂದು ಸತೀಶ್ ನೀನಾಸಂ ಬೇಸರಿಸಿಕೊಂಡು, ಫೇಸ್‌ಬುಕ್‌ನಲ್ಲಿ ಮೆಸೇಜು ಹಾಕಿದ್ದರು. ಮರುದಿನವೇ ಮೇನಕಾ ಸೇರಿದಂತೆ ಹಲವು ಚಿತ್ರಮಂದಿರಗಳಲ್ಲಿ ಚಿತ್ರ ಬಿಡುಗಡೆಯಾಗುತ್ತಿದೆ ಎಂಬ ಜಾಹೀರಾತು ಬಂದಿದೆ. ಈ ಕುರಿತು ಮಾತನಾಡುವ ಹಿರಿಯ ವಿತರಕ ಮತ್ತು ಪ್ರದರ್ಶಕ ಎಂ.ಎನ್. ಕುಮಾರ್, “ಸತೀಶ್ ಕನ್ನಡ ಚಿತ್ರಗಳಿಗೆ ಅನ್ಯಾಯವಾಗುತ್ತಿದೆ ಎಂದು ಹೇಳಿಕೊಂಡಿದ್ದಾರೆ.
ಆದರೆ, ಈ ಕುರಿತು ಯಾರೂ ಗಮನಕ್ಕೆ ತರಲಿಲ್ಲ. ವಿತರಕ ಮಲ್ಲಿಕಾರ್ಜುನ್ ಅವರು ನಮ್ಮ ಬಳಿ ಚಿತ್ರಮಂದಿರಕ್ಕೆ ಬಂದಿದ್ದು ಸೋಮವಾರ ಮಧ್ಯಾಹ್ನ. ತಕ್ಷಣವೇ ಅವರಿಗೆ ಚಿತ್ರಮಂದಿರಗಳನ್ನು ಅರೇಂಜ್ ಮಾಡಿ ಕೊಟ್ಟಿದ್ದೇವೆ. ಗಮನಕ್ಕೆ ತರದೆ, ಹೀಗೆ ಸುದ್ದಿ ಮಾಡಿದರೆ ಹೇಗೆ? ಪ್ರದರ್ಶಕರು ಯಾವತ್ತು ಕನ್ನಡ ಚಿತ್ರಗಳ ವಿರುದ್ಧ ಕೆಲಸ ಮಾಡಿಲ್ಲ. ಕನ್ನಡ ಚಿತ್ರಗಳು ಇಲ್ಲದ ಸಂದರ್ಭದಲ್ಲಿ ಪರಭಾಷಾ ಚಿತ್ರಗಳನ್ನು ಬಿಡಬಹುದು. ಅದು ಬಿಟ್ಟರೆ, ಸಮಸ್ಯೆ ಆಗಿಲ್ಲ’ ಎನ್ನುತ್ತಾರೆ ಕುಮಾರ್. ಅಲ್ಲಿಗೆ, ಮೊದಲು ಸಮಸ್ಯೆ ಎದುರಿಸಿದ್ದ “ಬ್ಯೂಟಿಫುಲ್ ಮನಸುಗಳು’ ಚಿತ್ರದ ಸಮಸ್ಯೆ ನಿವಾರಣೆಯಾದರೆ, “ಏನ್ ನಿನ್ ಪ್ರಾಬ್ಲಿಮ್ಮು’ ಚಿತ್ರಕ್ಕೆ ಬೋನಸ್ ಸಿಕ್ಕಿದೆ ಎಂದರೆ ತಪ್ಪಿಲ್ಲ.