ಲಕ್ಷ್ಮೇಶ್ವರ: ಸಕಲ ಕಷ್ಟಗಳ ನಿವಾರಕ, ಪ್ರಥಮ ಪೂಜಿತ, ವಿಘ್ನವಿನಾಶಕ ಗಣೇಶನ ಹಬ್ಬ ಸಮೀಪಿಸುತ್ತಿದ್ದು, ಗಣೇಶನ ಮೂರ್ತಿ ತಯಾರಕ ಕಲಾವಿದರು ವಿವಿಧ ರೂಪಗಳ ಬಣ್ಣದ ಮೂರ್ತಿಗಳಿಗೆ ಅಂತಿಮ ರೂಪ ನೀಡುವ ಕಾಯಕದಲ್ಲಿ ನಿರತರಾಗಿದ್ದಾರೆ. ಹಬ್ಬಕ್ಕೆ 6 ತಿಂಗಳ ಮೊಲದೇ ಪಟ್ಟಣದಲ್ಲಿ ಸಿದ್ಧಗೊಳ್ಳುವ ಸುಂದರ ಗಣೇಶ ಮೂರ್ತಿಗಳು ನೆರೆಯ ಗದಗ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಾರಾಟವಾಗುತ್ತವೆ.
ಕಳೆದ ನಾಲ್ಕೈದು ವರ್ಷಗಳ ಹಿಂದೆ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಪಿಓಪಿ ಗಣೇಶ ಮೂರ್ತಿಗಳನ್ನು ಸಂಪೂರ್ಣ ನಿಷೇಧಿಸಿ ಕಟ್ಟುನಿಟ್ಟಿನ ಆದೇಶ ನೀಡಿದಾಗಿನಿಂದ ಲಕ್ಷ್ಮೇಶ್ವರದ ಕಲಾವಿದರು ಪರಿಸರ ಸ್ನೇಹಿ ಗಣೇಶನ ಮೂರ್ತಿ ನಿರ್ಮಾಣಕ್ಕೆ ಬದ್ಧರಾಗಿದ್ದಾರೆ. ಜನರಿಂದ ಪರಿಸರ ಸ್ನೇಹಿ ಮೂರ್ತಿಗಳಿಗೆ ಬೇಡಿಕೆ ಹೆಚ್ಚಿದ್ದರಿಂದ ಸಹಜವಾಗಿ ಕಲಾವಿದರು ಗ್ರಾಹಕರ ಮನದಿಂಗಿತ ಅರಿತು ಹೆಚ್ಚಿನ ಪ್ರಮಾಣದಲ್ಲಿ ಪರಿಸರ ಸ್ನೇಹಿ ಗಣಪತಿ ಮೂರ್ತಿಗಳನ್ನು ನಿರ್ಮಿಸುತ್ತಿದ್ದಾರೆ. ಪಟ್ಟಣದ ಮೂರ್ತಿ ಕಲಾವಿದ ಸಹನರಾಜ ಚಕ್ರಸಾಲಿ ಸೇರಿದಂತೆ ಸುಮಾರು 15 ರಿಂದ 20ಕ್ಕೂ ಹೆಚ್ಚು ಮೂರ್ತಿ ಕಲಾವಿದರಿಂದ ಸ್ಥಳೀಯವಾಗಿ 15 ಸಾವಿರ ಗಣೇಶನ ಮೂರ್ತಿಗಳು ಅಂತಿಪ ರೂಪ ಪಡೆದು ಮಾರಾಟಕ್ಕೆ ಸಿದ್ಧಗೊಂಡಿವೆ. ಲಕ್ಷ್ಮೇಶ್ವರದಲ್ಲಿ ನಿರ್ಮಾಣವಾಗುವ ಗಣಪತಿ ಮೂರ್ತಿಗಳು ಅತ್ಯಂತ ಸುಂದರವಾಗಿರುವುದರಿಂದ ಪಟ್ಟಣ ಮತ್ತು ಸುತ್ತಮು ತ್ತಲಿನ ಗ್ರಾಮಗಳ ಜನರು, ಸಂಘ-ಸಂಸ್ಥೆಗಳು, ಸಾರ್ವ ಜನಿಕರು ಈಗಾಗಲೇ ತಮಗೆ ಇಷ್ಟವಾದ ಗಣೇಶನ ಮೂರ್ತಿಗಳನ್ನು ಗುರುತಿಸಿ ಮುಂಗಡ ಹಣ ನೀಡಿ ತಮ್ಮ ಗಣೇಶನ ಮೂರ್ತಿ ಗುರುತಿಸಿಟ್ಟಿದ್ದಾರೆ.
ಕಲಾವಿದರು ಏನಂತಾರೆ?: ಕಳೆದ 3 ವರ್ಷಗಳಿಂದ ಸರ್ಕಾರ ಪಿಓಪಿ ಮೂರ್ತಿಗಳನ್ನು ನಿಷೇಧಿಸಿದ್ದರಿಂದ ಪರಿಸರ ಸ್ನೇಹಿ ಗಣೇಶ ಮೂರ್ತಿಗೆ ಹೆಚ್ಚಿನ ಬೇಡಿಕೆ ಬಂದಿದೆ. ಬೇಡಿಕೆಗೆ ತಕ್ಕಂತೆ ಈ ವರ್ಷದ ಗಣೇಶೋತ್ಸವಕ್ಕೆ ಪರಿಸರ ಸ್ನೇಹಿ ಗಣೇಶನ ಮೂರ್ತಿಗಳನ್ನು ಸಿದ್ಧಪಡಿಸಲಾಗಿದೆ. ವಂಶಪಾರಂಪರ್ಯವಾಗಿ ನಮ್ಮ ಕುಟುಂಬಗಳು ಗಣೇಶನ ಮೂರ್ತಿ ಮಾಡುವುದನ್ನೇ ವೃತ್ತಿಯನ್ನಾಗಿಸಿಕೊಂಡು ಬದುಕು ಸಾಗಿಸುತ್ತಿದ್ದೇವೆ. ನೆರೆಯ ನಾಯಿಕೆರೂರ, ಕಡಕೋಳ ಮತ್ತಿತರ ಕಡೆಗಳಿಂದ ಮಣ್ಣು ಖರೀದಿಸಿ ತಂದು, ಹದ ಮಾಡಿ ಕುಟುಂಬದವರೆಲ್ಲರೂ ಸೇರಿ ಮೂರ್ತಿ ತಯಾರಿಸುತ್ತೇವೆ. ಈ ಸಲದ ಗಣೇಶೋತ್ಸವಕ್ಕಾಗಿ ಪಟ್ಟಣದ ಹತ್ತಾರು ಕುಟುಂಬಗಳು 15 ಸಾವಿರಕ್ಕಿಂತ ಹೆಚ್ಚು ಮೂರ್ತಿ ಸಿದ್ಧಪಡಿಸಿದ್ದು, ಗಣೇಶನ ಮೂರ್ತಿಗಳಿಗೆ ಅನುಗುಣವಾಗಿ ಬೆಲೆಗಳನ್ನು ನಿಗದಿಪಡಿಸಲಾಗುತ್ತದೆ. ಸಾಮಾನ್ಯ ಎತ್ತರ ಗಣಪತಿ ಮೂರ್ತಿಗಳು 500 ರೂ.ನಿಂದ 5 ಅಡಿ ಎತ್ತರದವರೆಗಿನ ಮಣ್ಣಿನ ಮೂರ್ತಿಗಳು 10 ಸಾವಿರ ರೂ. ವರೆಗೆ ಮಾರಾಟವಾಗುತ್ತವೆ ಎನ್ನುತ್ತಾರೆ ಕಲಾವಿದರು.
ಎಲ್ಲಾ ಮೂರ್ತಿಗಳು ಮಾರಾಟವಾದರೆ ಒಂದಿಷ್ಟು ಆದಾಯ
ಮಣ್ಣು-ಬಣ್ಣ ಇತರೇ ಖರ್ಚು ಸೇರಿ ಬೇಕಾದ ಎಲ್ಲ ವಸ್ತುಗಳ ಬೆಲೆ ಹೆಚ್ಚಳದಿಂದ ಗಣೇಶನ ಮೂರ್ತಿಗಳ ಬೆಲೆಯಲ್ಲೂ ಹೆಚ್ಚಳ ಅನಿವಾರ್ಯ. ಪಿಓಪಿ ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದರೂ ಮಹಾನಗರಗಳಲ್ಲಿ ಕೊನೆ ಹಂತದಲ್ಲಿ ಕದ್ದುಮುಚ್ಚಿ ಯಥೇತ್ಛವಾಗಿ ದೊಡ್ಡ ಗಾತ್ರದ ಪಿಓಪಿ ಗಣೇಶ ಮೂರ್ತಿಗಳು ಮಾರಾಟವಾಗುತ್ತವೆ. ಅವುಗಳ ಬೆಲೆ ಕಡಿಮೆ ಇರುವುದರಿಂದ ನಾವು ಸಿದ್ಧಪಡಿಸಿದ ದೊಡ್ಡ ಮೂರ್ತಿಗಳು ಮಾರಾಟವಾಗದೇ ಉಳಿಯುತ್ತವೆ. ನಿರ್ಮಾಣಗೊಂಡ ಎಲ್ಲಾ ಮೂರ್ತಿಗಳು ಮಾರಾಟವಾದರೆ ಮಾತ್ರ ಖರ್ಚು, ವೆಚ್ಚ ತೆಗೆದು ಸಣ್ಣ ಆದಾಯ ನಿರೀಕ್ಷಿಸಬಹುದಾಗಿದೆ ಎನ್ನುತ್ತಾರೆ ಕಲಾವಿದರಾದ ಪ್ರವೀಣ ಗಾಯ್ಕರ, ಫಕ್ಕಿರೇಶ ಕುಂಬಾರ, ಸಹನರಾಜ ಚಕ್ರಸಾಲಿ, ಪ್ರಕಾಶ ಕುಂಬಾರ, ಮಹೇಶ ಕುಂಬಾರ ಮತ್ತಿತರರು.
ಸನಾತನ ಪರಂಪರೆಯಂತೆ ಪ್ರತಿಯೊಬ್ಬರೂ ಶುದ್ಧ ಮಣ್ಣಿನ ಬಣ್ಣವಿಲ್ಲದ ಪರಿಸರ ಸ್ನೇಹಿ ಗಣೇಶನ ಮೂರ್ತಿ ಪ್ರತಿಷ್ಠಾಪಿಸಿ ಪೂಜಿಸಿದರೆ ಅದಕ್ಕೆ ಹೆಚ್ಚಿನ ಶಕ್ತಿ ಬರುತ್ತದೆ. ಇದರಿಂದ ನಮ್ಮ ಸಂಸ್ಕೃತಿ ಉಳಿಸಿ-ಬೆಳೆಸಲು ಸಾಧ್ಯವಾಗುತ್ತದೆ. ಅಲ್ಲದೇ, ಜಲಮೂಲಗಳಿಗೆ ಮತ್ತು ಪರಿಸರ ಹಾನಿ ತಪ್ಪಿಸಬಹುದಾಗಿದೆ. ಸಾರ್ವಜನಿಕವಾಗಿ ಪ್ರತಿಷ್ಠಾಪಿಸಲ್ಪಡುವ ಗಣೇಶನ ಮೂರ್ತಿಗಳ ವಿಸರ್ಜನೆ ಯನ್ನು 5, 7 ಇಲ್ಲವೇ 9 ಯಾವುದಾದರೊಂದು ದಿನ ನಿಗದಿಪಡಿಸಿ ಎಲ್ಲರೂ ಸೇರಿ ಸಾಮೂಹಿಕವಾಗಿ ಗಣೇಶ ವಿಸರ್ಜನೆ ಕಾರ್ಯ ಮಾಡಿದರೆ ಅರ್ಥಪೂರ್ಣವಾಗುತ್ತದೆ. ರಾಜ್ಯದ ಅನೇಕ ಹಿಂದೂಗಳೆಲ್ಲರೂ ಒಮ್ಮತದ ನಿರ್ಣಯದಿಂದ ವಿಶೇಷ ರೀತಿಯಲ್ಲಿ ಹಬ್ಬ ಆಚರಿಸುತ್ತಿರುವುದು ಎಲ್ಲ ಕಡೆ ಮಾದರಿಯಾಗಬೇಕು. –
ಚಿಕ್ಕರಸ ಪೂಜಾರ, ಅರ್ಚಕರು, ಸೋಮೇಶ್ವರ ದೇವಸ್ಥಾನ
ಕಳೆದ 2 ವರ್ಷ ಕೋವಿಡ್ ಹಿನ್ನೆಲೆಯಲ್ಲಿ ಸಾರ್ವಜನಿಕ ಗಣೇಶ ಪ್ರತಿಷ್ಠಾಪನೆಗೆ ಕೆಲ ನಿರ್ಬಂಧಗಳನ್ನು ವಿಧಿಸಲಾಗಿತ್ತು. ಈ ವರ್ಷ ಸಾರ್ವಜನಿಕ ಗಣೇಶೋತ್ಸವಕ್ಕೆ ಮುಕ್ತ ಅವಕಾಶ ನೀಡಬೇಕೋ? ಬೇಡವೋ ಎಂಬ ಬಗ್ಗೆ ಅಧಿಕೃತ ಆದೇಶ ಬಂದಿಲ್ಲ. ಈ ಬಗ್ಗೆ ಸರ್ಕಾರ ಕೈಗೊಳ್ಳುವ ನಿರ್ಧಾರ, ನಿಂಬಂಧನೆಗಳಿಗೆ ಎಲ್ಲರೂ ಬದ್ಧರಾಗಬೇಕಾಗುತ್ತದೆ. ಸದ್ಯ ಕೋವಿಡ್ ಪ್ರಕರಣಗಳು ಹೆಚ್ಚುತ್ತಿದ್ದು, ಗಣೇಶ ಹಬ್ಬದ ಆಚರಣೆ ಸಂದರ್ಭದಲ್ಲಿ ಆರೋಗ್ಯದತ್ತ ಹೆಚ್ಚು ಕಾಳಜಿ ವಹಿಸುವುದು ಮುಖ್ಯವಾಗಿದೆ. –
ಪರಶುರಾಮ ಸತ್ತಿಗೇರಿ, ಲಕ್ಷ್ಮೇಶ್ವರ ತಹಶೀಲ್ದಾರ್