Advertisement
ಬೆಳಗ್ಗೆ ಎದ್ದೊಡನೆ ಮುಖ ತೊಳೆದು ಟವೆಲ್ ಹಿಡಿದು ಒರೆಸಿಕೊಳ್ಳುತ್ತ ವಿವಿಧ ಭಂಗಿಗಳಲ್ಲಿ ಮುಖವನ್ನು ನೋಡಿಕೊಳ್ಳಲು ಪ್ರಾರಂಭಿಸುತ್ತೇನೆ. ಮತ್ತೂಮ್ಮೆ ಹೊರಡುವಾಗ ಕನ್ನಡಿ ನೋಡುತ್ತೇನೆ. ತೃಪ್ತಿ ಉಂಟಾಗದಿದ್ದರೆ, ಕೊನೆಗೆ ಮತ್ತೂಮ್ಮೆ ನಿಂತು ನಿಂತು ಒಟ್ಟಾರೆ ಉಡುಗೆತೊಡುಗೆಯೊಂದಿಗೆ ದೇಹ ಸೌಂದರ್ಯವನ್ನು ಸ್ವಮೌಲ್ಯಮಾಪನ ಮಾಡಿಕೊಳ್ಳುತ್ತೇವೆ. ನಿಜ ! ನಮ್ಮ ಸೌಂದರ್ಯ ನಮಗೆ ಆತ್ಮವಿಶ್ವಾಸವನ್ನು ತಂದುಕೊಡುತ್ತದೆ ಎನ್ನುವುದಕ್ಕಿಂತ ಆತ್ಮಸ್ಥೈರ್ಯವನ್ನೂ ತುಂಬುತ್ತದೆ.
Related Articles
Advertisement
ಕನ್ನಡಿಯೇ ಮುಖ್ಯಪಾತ್ರ ವಹಿಸುವ ಮಕ್ಕಳ ಹಳೆಯ ಕಥೆಯೊಂದನ್ನು ಇತ್ತೀಚೆಗೆ ಓದಿದ್ದೆ. ಅದರಲ್ಲಿ ಮರ ಕಡಿಯುವವನೊಬ್ಬನಿಗೆ ಕನ್ನಡಿ ದೊರೆತು, ಅವನು ತನ್ನ ಮುಖವನ್ನು ಕನ್ನಡಿಯಲ್ಲಿ ನೋಡುತ್ತಾನೆ. ಕನ್ನಡಿಯಲ್ಲಿ ಕಾಣುತ್ತಿರುವ ಪ್ರತಿಬಿಂಬವನ್ನು ತನ್ನ ಅಪ್ಪನೆಂದು ಭಾವಿಸಿ ಅದನ್ನು ಪೆಟ್ಟಿಗೆಯೊಳಗೆ ಭದ್ರವಾಗಿಡುತ್ತಾನೆ. ಹೀಗೆ ಪ್ರತಿದಿನ ಕನ್ನಡಿಯನ್ನು ತೆಗೆದು ಅಪ್ಪನೆಂದೇ ನೋಡುತ್ತಿರುತ್ತಾನೆ. ಒಂದು ದಿನ ಹೆಂಡತಿಗೆ ಸಂಶಯ ಬಂದು ಇಣುಕಿ ನೋಡಿದಾಗ ಕನ್ನಡಿಯಲ್ಲಿ ಕಂಡ ತನ್ನ ಪ್ರತಿಬಿಂಬದಿಂದ ಪ್ರತಿದಿನ ಗಂಡ ಯಾವುದೋ ಹೆಣ್ಣಿನ ಫೋಟೋವನ್ನು ಕದ್ದು ನೋಡುತ್ತಾನೆಂದು ಜಗಳಕ್ಕಿಳಿಯುತ್ತಾಳೆ. ಅವನು ಅದು ತನ್ನ ಅಪ್ಪನ ಫೋಟೋ ಎಂದು ವಾದಿಸುತ್ತಾನೆ. ಕೊನೆಗೆ ಇಬ್ಬರೂ ಒಟ್ಟಿಗೆ ಕನ್ನಡಿ ನೋಡಿ, “ಅದರಲ್ಲಿ ಕಾಣುತ್ತಿರುವುದು ನೀನೇ’ ಎಂದು ಗಂಡನಿಗೆ ಹೇಳುತ್ತಾಳೆ. “ನೀನೂ ಕಾಣುತಿದ್ದೀಯಾ’ ಎಂದು ಹೆಂಡತಿಗೂ ಹೇಳಿದಾಗ ಸತ್ಯ ಕನ್ನಡಿಯಿಂದ ಹೊರ ಬರುತ್ತದೆ.
ಮಲಯಾಳ ಮೂಲದ ಪಾಲ್ ಝಕಾರಿಯಾ ಅವರ ಕಥೆಯೊಂದರಲ್ಲಿ ಕಥಾನಾಯಕ ಏಸು, ಕ್ಷೌರಿಕನ ಅಂಗಡಿಯಲ್ಲಿ ûೌರ ಕುರ್ಚಿಯ ಎದುರಿನ ಮೇಜಿನ ಮೇಲೆ ಇರುವ ಕನ್ನಡಿಯನ್ನು ನೋಡುತ್ತಾನೆ. ಹೂಗಳನ್ನು, ಲತೆಗಳನ್ನು ಕೊರೆದ ಮರದ ಚೌಕಟ್ಟಿನೊಳಗೆ ಭದ್ರವಾಗಿರುವ ಒಂದು ಸುಂದರ ಕನ್ನಡಿ! ಏಸು ಕನ್ನಡಿಯನ್ನೇ ಗಮನಿಸುತ್ತಿರುವುದನ್ನು ನೋಡಿದ ಕ್ಷೌರಿಕ, “ರೋಮನ್ ಸೈನ್ಯಾಧಿಪತಿಯ ಮಗಳ ಮದುವೆಗೆ ಎರಡು ವಾರಗಳ ಕಾಲ ಅತಿಥಿಗಳ ಕ್ಷೌರ ಮಾಡಿದ್ದಕ್ಕೆ ದೊರೆತ ಕೊಡುಗೆ ಅದು’ ಎನ್ನುತ್ತಾನೆ ಹೆಮ್ಮೆಯಿಂದ. ಆದರೆ, ಏಸುವಿಗೆ ತನ್ನ ಬಡತನದಿಂದಾಗಿ ಸ್ವ-ಬಿಂಬವನ್ನು ನೋಡಲು ಕೂಡ ಭಯವಾಗುತ್ತದೆ. ದಟ್ಟದಾರಿದ್ರéದ ಸ್ಥಿತಿಗೆ ಕನ್ನಡಿ ಹಿಡಿಯುವ ಕತೆ ಇದು.
ಹಿಂದೆ ಮದುಮಗಳಿಗೆಂದು ತೆಗೆಯುವ ಸ್ನೋ, ಪೌಡರ್, ಕಾಡಿಗೆ, ಬಾಚಣಿಗೆ ಜೊತೆ ಒಂದು ಕನ್ನಡಿಗೆ ಶ್ರೇಷ್ಠ ಸ್ಥಾನವಿರುತಿತ್ತು. ಕನ್ನಡಿಯ ಆಯ್ಕೆಯಲ್ಲೂ ಅದೆಂಥ ಆಸಕ್ತಿ ಅನ್ನುತ್ತೀರಾ? ಮದುಮಗಳನ್ನು ಸಿಂಗಾರ ಮಾಡಿ ಬಳಿಕ ವಿವಿಧ ಭಂಗಿಗಳಲ್ಲಿ ಕನ್ನಡಿ ಮುಂದೆ ನಿಲ್ಲಿಸಿ ಫೋಟೋ ಕ್ಲಿಕ್ಕಿಸುವುದೂ ಕೂಡ ಒಂದು ಫ್ಯಾಷನ್ನೇ. ಈಗಲೂ ಕನ್ನಡಿ ಎಂದೊಡನೆ ಅದು ಬರೀ ಹೆಂಗಸರಿಗೆ ಮಾತ್ರ ಎಂಬ ತಿಳುವಳಿಕೆ ಇದೆ. ಆದರೆ, ಗಂಡಸರೇನು ಕಡಿಮೆ ಹೊತ್ತು ಕನ್ನಡಿ ನೋಡುವುದಿಲ್ಲ ! ಗಂಡಸರು ಬೆಳಗ್ಗೆ ಕ್ಷೌರ ಮಾಡಬೇಕಾದರೆ ಕನ್ನಡಿಯ ಮುಂದೆ ಸ್ಥಾಪನೆಗೊಳ್ಳಲೇಬೇಕು.
ಒಬ್ಬಂಟಿತನ ಬೇಸರವೆನಿಸಿದಾಗ ಕೆಲವರು ಕನ್ನಡಿ ನೋಡುತ್ತ ತಮ್ಮ ಪ್ರತಿಬಿಂಬದೊಂದಿಗೆ ಮಾತನಾಡಿಕೊಂಡಿರುತ್ತಾರೆ. ನಾನಂತೂ ಅತಿಯಾದ ಬೇಸರಕ್ಕೆ ಎದೆಯೊಡ್ಡಬೇಕಾಗಿ ಬಂದಾಗ ಮೊದಲು ಹೇಳುವುದು ನನ್ನ ಪಡಿಯಚ್ಚಿಗೆ. ಕನ್ನಡಿ ಮುಂದೆ ನಿಂತು ನನ್ನ ದುಃಖಗಳನ್ನೆಲ್ಲ ಕಕ್ಕಿ, ಅತ್ತು ಕಣ್ಣೊರೆಸಿಕೊಂಡು ಪ್ರತಿಬಿಂಬ ನೋಡಿ ನಗುತಂದುಕೊಂಡಾಗ ನನ್ನನ್ನು ನಾನೇ ಸಂತೈಸಲು ಕನ್ನಡಿಯಷ್ಟು ಆಪ್ತರು ನನಗೆ ಬೇರೆ ಯಾರೂ ಆಗಲಾರರು ಎಂದನಿಸಿಬಿಡುತ್ತದೆ.
ಇತ್ತೀಚಿನ ದಿನಗಳಲ್ಲಿ ಶಾಪಿಂಗ್ ಮಾಲ್‌ಗಳಲ್ಲಿ ಕಾಣಿಸಿಕೊಳ್ಳುವ ಕನ್ನಡಿ ಕೈಗಾರಿಕೆ, ವಿಜ್ಞಾನ, ಮನರಂಜನೆ, ಜವಳಿ, ಫ್ಯಾಷನ್, ಕಲೆ, ಸೌಂದರ್ಯ ಕ್ಷೇತ್ರ, ಚಪ್ಪಲಿ ಮಳಿಗೆ ಸೇರಿದಂತೆ ವಿವಿಧ ಸಾರ್ವಜನಿಕ ಕ್ಷೇತ್ರವನ್ನು ವಿಸ್ತಾರವಾಗಿ ವ್ಯಾಪಿಸಿದೆ. ಅಷ್ಟೇ ಏಕೆ ಪ್ರಾಥಮಿಕ ಶಾಲೆ ಹಾಗೂ ಪ್ರೌಢಶಾಲೆಗಳಲ್ಲೂ ಕೂಡಾ look smart ದರ್ಪಣಗಳ ಸಾಲುಗಳು ಕಡ್ಡಾಯವಾಗಿ ತಲೆಯೆತ್ತಿ ರಾರಾಜಿಸುತ್ತಿವೆ. ಇಂದು ಅದೆಷ್ಟು ಬಗೆಯ ಕನ್ನಡಿಗಳು? ಬೃಹದಾಕಾರದ ವಿವಿಧ ವಿನ್ಯಾಸಗಳ ಸುಂದರ ಸ್ವರೂಪಗಳು. ಕಾಲ ಬೆರಳಿನಿಂದ ಹಿಡಿದು ತಲೆಯವರೆಗೂ ತಿರುಗಿ ಮರುಗಿ ಹೇಗೆ ಬೇಕಾದರೂ ನೋಡಿಕೊಳ್ಳಬಹುದು. ಟೋಟಲ್ ಬಾಡಿ ಶೇಪ್ ನೋಡಿ ಡ್ರೆಸ್ಸಿಂಗ್ ಸೆನ್ಸ್ ಅನ್ನು ರೂಢಿಸಿಕೊಂಡು ಹೆಮ್ಮೆ ಪಟ್ಟುಕೊಳ್ಳಬಹುದು. ಬ್ಯೂಟಿಪಾರ್ಲರ್‌ಗೆ ಹೋಗಿ ಬಂದ ಬಳಿಕವೂ ಸೌಂದರ್ಯವರ್ಧಕ ಕ್ರಿಯೆ ಮುಗಿಸಿದ ಬಳಿಕ ಮುಂದೆ, ಹಿಂದೆ, ಎಡ, ಬಲಗಳನ್ನು ಪರೀಕ್ಷಿಸುತ್ತ ಹೇಗಿದ್ದವರು, ಹೇಗಾದೆವು ಎಂಬ ಪಾರದರ್ಶಕ ಫಲಿತಾಂಶವನ್ನು ತಿಳಿದುಕೊಳ್ಳಬಹುದು. ಕನ್ನಡಿಗೆ ಸಾಂಪ್ರದಾಯಿಕವಾಗಿ ಪೂಜನೀಯ ಸ್ಥಾನವನ್ನೂ ನೀಡಲಾಗಿದೆ. ವಿಷು ಹಬ್ಬದ ದಿನ ಬೆಳಗ್ಗೆ ಎ¨ªೊಡನೆ ನೋಡುವ ಕಣಿಯಲ್ಲೂ ಕನ್ನಡಿಯದ್ದೇ ಮುಖ್ಯ ಪಾತ್ರ. ಪ್ರಾಚೀನರು ನೀರನ್ನು ಕನ್ನಡಿಯಾಗಿ ಬಳಸುತ್ತಿದ್ದರಂತೆ. ಪುಷ್ಕರಣಿ, ಕೆರೆಗಳಲ್ಲಿ ಸಂಗ್ರಹವಾಗುತ್ತಿದ್ದ ಶುಭ್ರ ತಿಳಿನೀರು ಅವರು ಬಳಸುತ್ತಿದ್ದ ಮೊದಲ ಕನ್ನಡಿಯಾಗಿತ್ತಂತೆ. ಪಾತ್ರೆಗಳ ಆಕಾರಗಳನ್ನು ಹೋಲುವ ವಸ್ತುಗಳಲ್ಲಿ ನೀರನ್ನು ಸಂಗ್ರಹಿಸಿ ಕನ್ನಡಿಯನ್ನು ಸೃಷ್ಟಿಸುವ ಜಾಣ್ಮೆ ಅವರಿಗಿತ್ತು. ಸ್ನಾನದ ಹಂಡೆಗಳನ್ನು ಕೂಡಾ ಕನ್ನಡಿಯಾಗಿ ಬಳಸುತ್ತಿದ್ದ ಇವರು, ನೀರಿನಲ್ಲಿ ಪ್ರತಿಫಲಿಸುತ್ತಿದ್ದ ಮುಖ ಜಾದೂವೆಂದು ಪರಿಗಣಿಸುತ್ತಿದ್ದರಂತೆ. ಕನ್ನಡಿಗೆ ಆಧುನಿಕತೆಯ ಪ್ರಾಥಮಿಕ ಸ್ಪರ್ಶವಾಗಿದ್ದು ಕ್ರಿ.ಶ. ಮೊದಲ ಶತಮಾನದಲ್ಲಿ ಎಂದು ಹೇಳಲಾಗಿದೆ. ಇದು ಜನಸಾಮಾನ್ಯರ ಕೈಗೆಟುಕಲು 1835 ರವರೆಗೆ ಕಾಯಬೇಕಾಯಿತು ಎಂಬುದನ್ನು ಇದರ ಚರಿತ್ರೆ ಹೇಳುತ್ತದೆ. ಕನ್ನಡಿ ಪುರಾತನ ನಾಗರೀಕತೆಗಳ ಸಂಸ್ಕೃತಿಯ ಭಾಗವಾಗಿತ್ತು ಎಂಬುದು ಸ್ಪಷ್ಟ. ಈ ದರ್ಪಣವನ್ನು ಗೃಹಬಳಕೆ ಮತ್ತು ಅಲಂಕಾರಕ್ಕೆ ಬಳಸುತ್ತಿದ್ದರು. ಕಾಲ ಬದಲಾದಂತೆ ಇದು ವಿವಿಧ ಮಜಲುಗಳಲ್ಲಿ ತನ್ನ ಪಾತ್ರವನ್ನು ವಿರಾಜಮಾನವಾಗಿಸುವಲ್ಲಿ ಯಶಸ್ವಿ ಕಂಡಿತು ಎನ್ನಬಹುದು. ಗಾಜಿಗೂ ಕನ್ನಡಿಗೂ ತೀರಾ ಹತ್ತಿರದ ಸಂಬಂಧವೆಂಬುದು ನಮ್ಮ ಅರಿವಿಗೆ ನಿಲುಕುತ್ತದೆ. ಕನ್ನಡಿಯು ಗಾಜಿನ ಸಹಉತ್ಪನ್ನವಾಗಿದ್ದು ಗಾಜು ಆವಿಷ್ಕಾರಗೊಳ್ಳದಿದ್ದರೆ ಜಗತ್ತಿನಲ್ಲಿ ಕನ್ನಡಿಯೇ ಇರುತ್ತಿರಲಿಲ್ಲವೇನೋ? ಸರಿ ಸುಮಾರು ಒಂದೇ ಅವಧಿಯಲ್ಲಿ ಇವೆರಡು ಜನರ ಬಳಕೆಗೆ ತೆರೆದುಕೊಂಡಿತು. ಕನ್ನಡಿ ಎಂಬುದು ಸೌಂದರ್ಯಪ್ರಿಯರ ಬದುಕಿನ ಕನ್ನಡಿ. ಸುನೀತಾ ಕುಶಾಲನಗರ