Advertisement

ಜಗಳೂರು ಗಡಿಯಲ್ಲಿ ಕರಡಿ ಪ್ರತ್ಯಕ್ಷ

11:30 AM Jan 27, 2020 | Naveen |

ಭರಮಸಾಗರ: ಚಿತ್ರದುರ್ಗ ತಾಲೂಕಿನ ಗಡಿ ಗ್ರಾಮ, ಜಗಳೂರು ತಾಲೂಕು ಸಮೀಪದ ಆಜಾದ್‌ ನಗರದಲ್ಲಿ ಭಾನುವಾರ ಮಧ್ಯಾಹ್ನ ಕರಡಿ ಕಾಣಿಸಿಕೊಂಡಿದ್ದು, ರೇಷ್ಮೆ ಜಮೀನಿನ ಬಳಿಯ ಬೇವಿನ ಮರವೇರಿ ಕುಳಿತು ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿದೆ.

Advertisement

ಭಾನುವಾರ ಮಧ್ಯಾಹ್ನ ರೇಷ್ಮೆ ಜಮೀನಿನಲ್ಲಿ ನೀರು ಹಾಯಿಸುತ್ತಿದ್ದ ರೈತನಿಗೆ ಮೊದಲು ಕರಡಿ ಕಾಣಿಸಿಕೊಂಡಿದೆ. ಇದನ್ನು ಕಂಡು ಅಕ್ಕಪಕ್ಕದ ಜಮೀನುಗಳಲ್ಲಿ ಇದ್ದ ರೈತರನ್ನು ಕೂಗಿ ಕರೆದು ಕರಡಿಯನ್ನು ಓಡಿಸಲು ಪ್ರಯತ್ನಿಸಿದ್ದಾರೆ. ತಕ್ಷಣ ಕರಡಿ ರೇಷ್ಮೆ ಜಮೀನಿನ ಬಳಿ ಇದ್ದ ಬೇವಿನ ಮರವೇರಿ ಕುಳಿತಿದೆ. ಜನರು ಎಷ್ಟೇ ಪ್ರಯತ್ನಿಸಿದರೂ ಕರಡಿ ಮರದಿಂದ ಕೆಳಗಿಳಿಯಲಿಲ್ಲ. ಅದು ಕೂಡ ಭಯಪಟ್ಟಂತೆ ಕಂಡುಬಂದಿದೆ.

ಕರಡಿ ಮರವೇರಿರುವ ಸುದ್ದಿ ಅಕ್ಕಪಕ್ಕದ ಹಳ್ಳಿಗಳಿಗೂ ಹರಡಿ ನೆಲ್ಲಿಕಟ್ಟೆ, ಕಾಲಗೆರೆ, ಗೊಲ್ಲರಹಳ್ಳಿ, ಇಸಾಮುದ್ರ ಹೊಸಹಟ್ಟಿ ಸೇರಿದಂತೆ ಇತರೆ ಹಳ್ಳಿಗಳ ಯುವಕರು ಬಂದು ನೋಡಿಕೊಂಡು ಹೋಗುತ್ತಿದ್ದಾರೆ. ಆಜಾದ್‌ ನಗರದ ನೂರಕ್ಕೂ ಹೆಚ್ಚು ಯುವಕರು ಕರಡಿ ಕುಳಿತಿರುವ ಮರದ ಬಳಿ ಜಮಾಯಿಸಿದ್ದಾರೆ. ಕರಡಿ ಕಾಣಿಸಿಕೊಂಡಿದ್ದರಿಂದ ಊರ ಅಂಚಿನಲ್ಲಿ ಮಹಿಳೆಯರು ಮನೆ ಬಿಟ್ಟು ಹೊರ ಬರಲು ಹೆದರುತ್ತಿದ್ದಾರೆ. ಕರಡಿ ಮರವೇರಿದ ವಿಷಯವನ್ನು ಗ್ರಾಮಸ್ಥರು ಅರಣ್ಯ ಇಲಾಖೆಗೆ ತಿಳಿಸಿದರು. ಸಂಜೆ ವೇಳೆಗೆ ಉಪ ವಲಯ ಅರಣ್ಯಾಧಿಕಾರಿ ರುದ್ರಮುನಿ ಸ್ಥಳಕ್ಕೆ ಆಗಮಿಸಿರುವುದನ್ನು ಬಿಟ್ಟರೆ ಯಾವುದೇ ಸಿಬ್ಬಂದಿ ಇತ್ತ ಸುಳಿದಿಲ್ಲ. ಈ ಬಗ್ಗೆ ರುದ್ರಮುನಿಯವರನ್ನು ಪ್ರಶ್ನಿಸಿದಾಗ, ಚಿತ್ರದುರ್ಗದಿಂದ ವಾಚರ್‌ಗಳು ಬರುತ್ತಿದ್ದಾರೆ. ಮರದ ಸುತ್ತ ಬಲೆಯನ್ನು ಹಾಕಿ ಕರಡಿಯನ್ನು ಜೀವಂತವಾಗಿ ಸೆರೆ ಹಿಡಿದು ಕಾಡಿಗೆ ಬೀಡುವ ವ್ಯವಸ್ಥೆ ಮಾಡುವುದಾಗಿ ತಿಳಿಸಿದರು.

ಕೊಣಚಕಲ್ಲು ಗುಡ್ಡದಿಂದ ಕರಡಿಗಳು ಬರುತ್ತಿರುತ್ತವೆ. ಕಳೆದ ಎರಡು ತಿಂಗಳಿಂದ ನಿತ್ಯ 8-10 ಕರಡಿಗಳು ರೈತರಿಗೆ ಕಾಣಸಿಗುತ್ತಿವೆ. ಜಮೀನುಗಳಿಗೆ ರಾತ್ರಿ ವೇಳೆ ನೀರು ಹಾಯಿಸಲು ತೆರಳಲು ರೈತರು ಭಯ ಪಡುತ್ತಿದ್ದಾರೆ. ಯಾವುದೇ ಕಾರಣಕ್ಕೂ ಕರಡಿಯನ್ನು ಹೊಡೆದು ಸಾಯಿಸಲು ಬಿಡಲ್ಲ ಎಂದು ಆಜಾದ್‌ನಗರ ಗ್ರಾಮಸ್ಥ ದಾದಾಪೀರ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next