Advertisement

ಸುಮನಾವತಿ ಸೇತುವೆಗೆ ಕೌ ಗೇಟ್‌; ಈಡೇರದ ಬೇಡಿಕೆ

01:05 AM Feb 07, 2020 | Sriram |

ಉಪ್ಪುಂದ: ಬಿಜೂರು ಗ್ರಾಮದ ಕಟ್ಟಿನ ಹೊಳೆಗೆ ಅಡ್ಡಲಾಗಿ ಬಹು ನಿರೀಕ್ಷಿತ ಕಿಂಡಿ ಅಣೆಕಟ್ಟು ಹಾಗೂ ಸೇತುವೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಇದಕ್ಕೆ ಕೌ ಗೇಟ್‌ ನಿರ್ಮಿಸಬೇಕೆಂಬ ರೈತರ ಕೂಗಿಗೆ ಸ್ಪಂದನೆ ದೊರಕಿಲ್ಲ. ಬಿಜೂರು ಹಾಗೂ ತಗ್ಗರ್ಸೆ ಗ್ರಾಮದ ನೂರಾರು ಎಕರೆ ಕೃಷಿ ಭೂಮಿಗೆ ನೀರು ಪೂರೈಸುವ ಸುಮನಾವತಿ ನದಿಗೆ ಬಿಜೂರಿನ ಅರೆಕಲ್ಲು ಬಳಿ ಅಣೆಕಟ್ಟು ಗ್ರಾಮಗಳ ಸಂಪರ್ಕ ಕೊಂಡಿಯಾಗಿ ಅನುಕೂಲವಾಗಿದೆ. ಆದರೆ ಇದರಿಂದ ಕೃಷಿಕರು ಮಾತ್ರ ಪರಿತಪಿಸುವಂತಾಗಿದೆ.

Advertisement

ಬೀಡಾಡಿ ಜಾನುವಾರುಗಳ ಹಾವಳಿ
ಬಿಜೂರು ಗ್ರಾಮದ ಅರೆಕಲ್ಲು, ಗರಡಿ, ನಿಸರ್ಗಕೇರಿ ಭಾಗದ ನೂರಾರು ಎಕರೆ ಹಾಗೂ ತಗ್ಗರ್ಸೆ ಗ್ರಾಮದ ಉದ್ದಾಬೆಟ್ಟು ಭಾಗದ‌ಲ್ಲಿ ಹತ್ತಾರು ಎಕರೆ ಕೃಷಿ ಭೂಮಿಯಲ್ಲಿ ಕೃಷಿಕರು ಮಳೆಗಾಲದ ಬೆಳೆಯ ಬಳಿಕ ಎರಡನೇ ಸುಗ್ಗಿ ಬೆಳೆಯಾಗಿ ಭತ್ತ ಬೆಳೆಯುತ್ತಾರೆ. ಆದರೆ ಬೀಡಾಡಿ ಜಾನುವಾರುಗಳು ಕೃಷಿ ಗದ್ದೆಗಳಿಗೆ ನುಗ್ಗಿ ಭತ್ತ ಬೆಳೆಯನ್ನು ತಿಂದು ಹಾಕುವುದರ ಜತೆಗೆ ಗದ್ದೆ ತುಂಬಾ ಓಡಾಡಿ ಬೆಳೆಯನ್ನು ಹಾಳುಮಾಡುತ್ತವೆ.

ಕೌ ಗೇಟ್‌ ಬೇಡಿಕೆ
ತಗ್ಗರ್ಸೆ, ಉದ್ದಾಬೆಟ್ಟು ಮುಂತಾದ ಭಾಗದಿಂದ ನೂರಾರು ಬೀಡಾಡಿ ಜಾನುವಾರುಗಳು ನಿತ್ಯ ರಾತ್ರಿ-ಹಗಲು ಎನ್ನದೆ ಈ ಸೇತುವೆ ಮೂಲಕ ಅರೆಕಲ್ಲು, ಗರಡಿ, ನಿಸರ್ಗಕೇರಿ ಭಾಗದ ಕೃಷಿ ಗದ್ದೆಗಳಿಗೆ ಬರುತ್ತದೆ. ಇಲ್ಲಿ ಕೌ ಗೇಟ್‌ ಅಳವಡಿಸಿದರೆ ಜಾನುವಾರುಗಳ ಹಾವಳಿಯನ್ನು ತಪ್ಪಿಸಬಹುದು. ಕೃಷಿಯನ್ನು ಉಳಿಸಬಹುದು. ಇಲ್ಲದಿದ್ದರೆ ನಿತ್ಯ ಬರುವ ಜಾನುವಾರು ಹಾವಳಿಯನ್ನು ತಡೆಯುವುದು ಕಷ್ಟಸಾಧ್ಯ. ಕೃಷಿಕರು ನಿತ್ಯ ತಮ್ಮ ಇತರೆ ಕೆಲಸಗಳನ್ನು ಬಿಟ್ಟು ಗದ್ದೆಗಳಲ್ಲಿ ಬೀಡುಬಿಟ್ಟು ಕಾಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಈ ಭಾಗದ ರೈತರು. ಇದರಿಂದ ಭೂಮಿ ಹಡಿಲು ಬೀಳುವ ಸಾಧ್ಯತೆ ಇರುತ್ತದೆ. ಕೌ ಗೇಟ್‌ ಅಳವಡಿಕೆಯಿಂದ ಹತ್ತಾರು ಎಕ್ರೆ ಕೃಷಿ ಭೂಮಿಗೆ ವರದಾನವಾಗಲಿದೆ ಎನ್ನುವ ಅಭಿಪ್ರಾಯ ರೈತರದ್ದು.

ಗೇಟ್‌ ಅಳವಡಿಕೆ ವಿಳಂಬ
ಡ್ಯಾಂ ಜತೆಗೆ ಕಾಲುವೆ ಕಾಂಕ್ರೀಟೀಕರಣ, ನದಿಯ ಬದಿಗೆ ತಡೆಗೋಡೆ ಕಾಮಗಾರಿ ಪೂರ್ಣಗೊಂಡಿದೆ. ಆದರೆ ಸ್ವಯಂಚಾಲಿತ ಕ್ರಸ್ಟ್‌ ಗೇಟ್‌ ಅಳವಡಿಕೆ ವಿಳಂಬಕೊಂಡಿತ್ತು. ಈ ಬಾರಿ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿರುವುದರಿಂದ ತುರ್ತು ಕ್ರಮ ಕೈಗೊಂಡಿದ್ದಾರೆ. ಇದರ ಕೆಲಸ ಪೂರ್ಣಗೊಳ್ಳದಿರುವುದರಿಂದ ನೀರು ಸೋರಿಕೆಯಾಗುತ್ತಿದೆ. ಈ ಬಾರಿಯೂ ಕೃಷಿ ಚಟುವಟಿಕೆಗಳಿಗೆ ನೀರಿನ ಸಮಸ್ಯೆ ಉದ್ಭವಿಸುವ ಲಕ್ಷಣ ಕಂಡುಬರುತ್ತಿರವುದರಿಂದ ರೈತರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.

ಸ್ವಯಂಚಾಲಿತ ಗೇಟ್‌
ಇಲ್ಲಿನ ರೈತರು ಸುಮನಾವತಿ ನದಿಯ ಕಿಂಡಿ ಅಣೆಕಟ್ಟಿನ ಹಿನೀರನ್ನು ನಂಬಿಕೊಂಡು ಸುಗ್ಗಿ ಬೆಳೆ ಬೆಳೆಯಲು ಮುಂದಾಗುತ್ತಾರೆ. ಕಿಂಡಿ ಅಣೆಕಟ್ಟು ದುಃಸ್ಥಿತಿಗೆ ತಲುಪಿದ ಕಾರಣ ನೀರು ಸೋರಿಕೆಯಾಗಿ ನೀರಿನ ಸಂಗ್ರಹ ಮಟ್ಟದಲ್ಲಿ ಕಡಿಮೆಯಾಗುತ್ತಿತ್ತು. ಇದರಿಂದ ಕೃಷಿ ಚಟುವಟಿಕೆ ನಡೆಸಲು ಸಮಸ್ಯೆ ಎದುರಾಗಿತ್ತು. ಅಂದಿನ ಶಾಸಕ ಗೋಪಾಲ ಪೂಜಾರಿ ಅವರಿಗೆ ಇಲ್ಲಿನ ರೈತರ ಮನವಿ ಮೇರೆಗೆ ಸಣ್ಣ ನೀರಾವರಿ ಇಲಾಖೆಯ ಮೂಲಕ 6.6 ಕೋಟಿ ರೂ. ವೆಚ್ಚದಲ್ಲಿ ಸ್ವಯಂಚಾಲಿತ ಗೇಟ್‌ ನಿರ್ಮಾಣಗೊಂಡಿತು.

Advertisement

ಕೌ ಗೇಟ್‌ ಅಳವಡಿಸಿದರೆ ಜಾನುವಾರುಗಳ ಹಾವಳಿಯನ್ನು ತಪ್ಪಿಸಬಹುದು. ಕೃಷಿಯನ್ನು ಉಳಿಸಬಹುದು. ಇಲ್ಲದಿದ್ದರೆ ನಿತ್ಯ ಬರುವ ಜಾನುವಾರು ಹಾವಳಿಯನ್ನು ತಡೆಯುವುದು ಕಷ್ಟಸಾಧ್ಯ.

ಭರವಸೆ ಸಿಕ್ಕಿದೆ
ಕೌ ಗೇಟ್‌ ಅಳವಡಿಸದೆ ಇರುವುದರಿಂದ ಬೀಡಾಡಿ ಜಾನುವಾರುಗಳ ಹಾವಳಿಯಿಂದ ಕೃಷಿಯನ್ನು ಮುಂದುವರಿಸಲು ಸಾಧ್ಯವಿಲ್ಲ. ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಲಾಗಿದೆ. ಕೌ ಗೇಟ್‌ ಅಳವಡಿಸಿ ಕೊಡುವ ಭರವಸೆ ನೀಡಿದ್ದಾರೆ.
– ರಾಜೇಂದ್ರ ಎಸ್‌. ಬಿಜೂರು, ಸ್ಥಳೀಯರು

ಶೀಘ್ರ ಕೆಲಸ
ಕ್ರಸ್ಟ್‌ ಗೇಟ್‌ಗೆ ಆರ್ಡರ್‌ ಮಾಡಲಾಗಿದ್ದು ಇದರ ಯಂತ್ರೋಪಕರಣಗಳು ಇನ್ನಷ್ಟೇ ಬರಬೇಕಿವೆೆ. ಬಳಿಕ ಕೆಲಸ ಪ್ರಾರಂಭಸುತ್ತೇವೆ. ಕ್ರಸ್ಟ್‌ಗೇಟ್‌ ಕಾಮಗಾರಿ ಸಂದರ್ಭ ಕೌ ಗೇಟ್‌ ಅಳವಡಿಕೆ ಮಾಡಲಾಗುತ್ತದೆ. ರೈತರಿಗೆ ಸಮಸ್ಯೆಯಾಗದಂತೆ ತುರ್ತು ವ್ಯವಸ್ಥೆ ಮಾಡಿಕೊಡಲಾಗಿದೆ. ಸದ್ಯದಲ್ಲೇ ಮೆಷಿನ್‌ ಬರಲಿದ್ದು ಸಾಧ್ಯವಾದಷ್ಟು ಬೇಗ ಕೆಲಸ ಪೂರ್ಣಗೊಳಿಸಲಾಗುವುದು.
ಜಯಶೀಲ ಶೆಟ್ಟಿ,
ಗುತ್ತಿಗೆದಾರರು.

ಶೀಘ್ರದಲ್ಲಿ ಕಾಮಗಾರಿ
ಕೃಷಿಕರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಅದೇ ಅನುದಾನದಲ್ಲಿ ಕೌ ಗೇಟ್‌ ಅಳವಡಿಸುವಂತೆ ಗುತ್ತಿಗೆದಾರರಿಗೆ ಸೂಚಿಸುತ್ತೇನೆ. ಈ ಕುರಿತು ಶೀಘ್ರದಲ್ಲಿ ಕಾಮಗಾರಿ ಆರಂಭಿಸಲು ಕ್ರಮಕೈಗೊಳ್ಳುತ್ತೇನೆ.
  -ಬಿ.ಎಂ.ಸುಕುಮಾರ್‌ ಶೆಟ್ಟಿ,
ಶಾಸಕರು

-ಕೃಷ್ಣ ಬಿಜೂರು

Advertisement

Udayavani is now on Telegram. Click here to join our channel and stay updated with the latest news.

Next