ನೆಲಮಂಗಲ: ತಾಲೂಕಿನಲ್ಲಿ ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗಿಲ್ಲ. ಹೀಗಾಗಿ ಜನ ಆತಂಕದಿಂದ ಮಾನಸಿಕವಾಗಿ ಕುಗ್ಗುಬಾರದು ಎಂದು ಶಾಸಕ ಡಾ.ಕೆ. ಶ್ರೀನಿವಾಸಮೂರ್ತಿ ಸಲಹೆ ನೀಡಿದರು. ತಾಲೂಕಿನ ಅರಿಶಿನಕುಂಟೆ ಗ್ರಾಮದ ಮುಖ್ಯ ರಸ್ತೆಗಳ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಕೊರೊನಾ ಜತೆ ಜೀವನ ಸಾಗಿಸುವ ಅನಿವಾರ್ಯತೆ ಎದುರಾಗಿದೆ. ಮನುಷ್ಯನ ಆರೋಗ್ಯದ ಜತೆ ಅಭಿವೃದ್ಧಿ ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಡಾಂಬರೀಕರಣ ಮಾಡಲು ಮುಂದಾಗಿದ್ದೇವೆ. ಅನೇಕ ಕಾಮಗಾರಿ ತಾಲೂಕಿನಲ್ಲಿ ಆರಂಭವಾಗಿದ್ದು ಶೀಘ್ರ ಪೂರ್ಣವಾಗ ಲಿದೆ ಎಂದರು.
ಆತಂಕ ಬೇಡ ಎಚ್ಚರಿಕೆ ಇರಲಿ: ಕೊರೊನಾ ಬಂದಿದೆ ಎಂಬ ಆತಂಕ ಬಿಟ್ಟು ನಿಯಂತ್ರಣ ಮಾಡಲು ಎಚ್ಚರಿಕೆ ವಹಿಸಬೇಕು. ಸುಳ್ಳು ಸಂದೇಶಗಳಿಗೆ ಕಿವಿ ಕೊಡದೇ ಜೀವನ ಸಾಗಿಸಿ ಎಂದರು.
ಅಂತರ ಮರೆತ ಶಾಸಕ: ಕೊರೊನಾದ ಬಗ್ಗೆ ಎಚ್ಚರಿಕೆ ವಹಿಸಿ ಎನ್ನುವ ಶಾಸಕರು, ಮುಖಂಡರು ಅರಿಶಿನ ಕುಂಟೆಯಲ್ಲಿ ಕಾಮಗಾರಿ ಚಾಲನೆ ವೇಳೆ ಸಂಪೂರ್ಣ ಸಾಮಾಜಿಕ ಅಂತರ ಮರೆತಿದ್ದರು. ನೂರಾರು ಕಾರ್ಯಕರ್ತರು, ಮುಖಂಡರ ಗುಂಪಿನಲ್ಲಿ ಗುದ್ದಲಿ ಪೂಜೆ ಮಾಡಿ ಸಾಮಾಜಿಕ ಅಂತರಕ್ಕೆ ಎಳ್ಳುನೀರು ಬಿಟ್ಟಿದ್ದಾರೆ ಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದರು.
29.5 ಲಕ್ಷ ರೂ. ವೆಚ್ಚ: ಅರಿಶಿನಕುಂಟೆ ಆಂಜನೇಯಸ್ವಾಮಿ ದೇವಸ್ಥಾನದ ಮುಖ್ಯರಸ್ತೆ ಹಾಗೂ ಆದರ್ಶನಗರದ ಮುಖ್ಯ ರಸ್ತೆಯ ಡಾಂಬರೀಕರಣವನ್ನು 29.5 ಲಕ್ಷ ಶಾಸಕರ ಅನುದಾನದಲ್ಲಿ ಕಂಟ್ರಾಕ್ಟರ್ ಶ್ರೀನಿವಾಸ, ರಮೇಶ ನೇತೃತ್ವದಲ್ಲಿ ಮಾಡಲಾಗುತ್ತಿದೆ. ಜಿಪಂ ಸದಸ್ಯ ತಿಮ್ಮರಾಯಪ್ಪ, ತಾಪಂ ಸದಸ್ಯ ವೆಂಕಟೇಗೌಡ, ಮಾಜಿ ಅಧ್ಯಕ್ಷ ಕೃಷ್ಣಪ್ಪ, ಅಂದಿನ ಅರಿಶಿನಕುಂಟೆ ಗ್ರಾಪಂ ಅಧ್ಯಕ್ಷ ಲಕ್ಷಿನಾರಾಯಣ್, ಉಪಾಧ್ಯಕ್ಷೆ ರತ್ಮಮ್ಮ, ಸದಸ್ಯರಾದ ಮಂಜುನಾಥ್, ಶಕುಂತಲಾ, ಕೆಂಪರಾಜು, ಮುಖಂಡರಾದ ವಾಸು, ಮುನಿವೆಂಕಟಪ್ಪ, ಹನುಮಂತರಾಯಪ್ಪ ಇದ್ದರು.