Advertisement

ಜಾರಿ ಬೀಳುವ ಮುನ್ನ ಜಾಗೃತರಾಗಿ

11:25 PM Nov 22, 2020 | mahesh |

ಕೋವಿಡ್ ಕಾರಣದಿಂದ ಮಾರ್ಚ್‌ ತಿಂಗಳಿನಿಂದ ಶೈಕ್ಷಣಿಕ ಚಟುವಟಿಕೆಗಳು ಒಂದು ರೀತಿಯ ಸ್ತಬ್ಧತೆಯನ್ನು ಅನುಭವಿಸುತ್ತಿವೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ವೃತ್ತಿ ಶಿಕ್ಷಣ ಆಕಾಂಕ್ಷಿ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಸಿ.ಇ.ಟಿ. ಪರೀಕ್ಷೆಯನ್ನು ನಡೆಸಿ ಫ‌ಲಿತಾಂಶ ಪ್ರಕಟಿಸಿದೆ. ವಾಡಿಕೆಯಂತೆ ಸಿ.ಇ.ಟಿ. ಪ್ರಕ್ರಿಯೆಗಳು ಮುಗಿದಿದ್ದರೆ ಇಷ್ಟು ಹೊತ್ತಿಗೆ ಪ್ರವೇಶ ನಡೆದು, ವೃತ್ತಿ ಶಿಕ್ಷಣ ತರಗತಿಗಳು ಪ್ರಾರಂಭವಾಗಬೇಕಿತ್ತು. ಈಗ ಎಲ್ಲ ಪ್ರಕ್ರಿಯೆಗಳು ನಿರೀಕ್ಷೆಗಿಂತಲೂ ನಿಧಾನವಾಗಿ ಸಾಗುತ್ತಿವೆ.

Advertisement

ಪರೀಕ್ಷಾ ಪ್ರಾಧಿಕಾರದಿಂದ ಸಿ.ಇ.ಟಿ. ಮೂಲಕ ಸೀಟು ಹಂಚಿಕೆ ಪ್ರಕ್ರಿಯೆಗಳ ಪ್ರಮುಖ ಘಟ್ಟವಾದ ದಾಖಲಾತಿಗಳ ಪರಿಶೀಲನೆಯನ್ನು ಆನ್‌ಲೈನ್‌ ಮೂಲಕ ನಡೆಸಲಾಯಿತು. ಒಂದು ತಿಂಗಳಿಗೂ ಮಿಕ್ಕಿ ನಡೆದ ಈ ಪ್ರಕ್ರಿಯೆಯಲ್ಲಿ ನೂರಾರು ವಿದ್ಯಾರ್ಥಿಗಳು ತಮ್ಮ ಮೂಲ ದಾಖಲೆಗಳನ್ನು ಅಪ್‌ಲೋಡ್‌ ಮಾಡಿ ಪ್ರವೇಶ ಪ್ರಕ್ರಿಯೆಯ ಮುಂದಿನ ಹಂತಕ್ಕೆ ಅರ್ಹತೆ ಪಡೆದಿರುತ್ತಾರೆ. ಈ ಪ್ರಕ್ರಿಯೆಗಳಲ್ಲಿ ವಿದ್ಯಾರ್ಥಿಗಳು ಹಲವಾರು ತೊಂದರೆ ಗಳನ್ನು ಅನುಭವಿಸಿದ್ದಾರೆ.

ಪ.ಪೂ. ಕಾಲೇಜಿನಲ್ಲಿ ಮಾರ್ಗದರ್ಶನ ಅಗತ್ಯ
ಪ್ರಾಯಃ ವಿದ್ಯಾರ್ಥಿಗಳಿಗೆ ಅಂತರ್ಜಾಲದ ಬಗ್ಗೆ, ಆನ್‌ಲೈನ್‌ ಪ್ರಕ್ರಿಯೆ ಗಳ ಬಗ್ಗೆ ಸೂಕ್ತ ಮಾಹಿತಿ ಇಲ್ಲದೆ ಅವರು ತಪ್ಪಿ ಬಿದ್ದಿರುವ ಸಾಧ್ಯತೆಗಳು ಹೆಚ್ಚು. ಸೂಕ್ತವಾದ ಮೂಲ ಸೌಕರ್ಯಗಳಾದ ಇಂಟರ್‌ನೆಟ್‌, ಪ್ರಿಂಟರ್‌, ಸ್ಕ್ಯಾನರ್‌ ಮೊದಲಾದ ಸಲಕರಣೆಗಳ ಅಲಭ್ಯತೆಯಿಂದಾಗಿ ವಿದ್ಯಾರ್ಥಿಗಳು ಸೈಬರ್‌ ಸೆಂಟರ್‌ಗಳನ್ನು ಆಶ್ರಯಿಸ ಬೇಕಾಗಿದ್ದು, ಅಲ್ಲಿ ತಿಳಿದೋ, ತಿಳಿಯದೆಯೋ ಆಗುವ ಕಣ್ತಪ್ಪಿನಿಂದ ಅಥವಾ ಸೂಕ್ತವಾದ ಮಾಹಿತಿ ಕೊರತೆಯಿಂದ ವಿದ್ಯಾರ್ಥಿಗಳ ಉನ್ನತ ಅಧ್ಯಯನಕ್ಕೆ ಹೊಡೆತ ಬೀಳುತ್ತಿರು ವುದು ಸತ್ಯ. ದ್ವಿತೀಯ ಪಿಯುಸಿ ವಿದ್ಯಾರ್ಥಿಗಳ ಶೈಕ್ಷಣಿಕ ವರ್ಷದ ಕೊನೆಯಲ್ಲಿ ಸಿಇಟಿ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಪ್ರಾರಂಭ ಆಗುವುದರಿಂದ ವಿದ್ಯಾರ್ಥಿಗಳು ತಮ್ಮ ಅಂತಿಮ ಪರೀಕ್ಷೆಯ ಬಗ್ಗೆ ಹೆಚ್ಚು ಗಮನ ಹರಿಸಿರುವುದರಿಂದ, ಈ ಅರ್ಜಿ ಸಲ್ಲಿಸುವಲ್ಲಿ ತಪ್ಪುಗಳು ಆಗುವುದು ಸಹಜ. ಹಾಗಾಗಿ ಪ್ರತೀ ಪದವಿಪೂರ್ವ ಕಾಲೇಜಿನಲ್ಲಿ ಸಿಇಟಿ ಅರ್ಜಿ ಸಲ್ಲಿಸಲು ಬೇಕಾದ ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿ, ಪದವಿಪೂರ್ವ ವಿಭಾಗದ ಪ್ರಾಧ್ಯಾಪಕರು ತಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಿ ಅರ್ಜಿ ಸಲ್ಲಿಸುವಂತೆ ಮಾಡಿದಲ್ಲಿ ಇಂತಹ ತಪ್ಪುಗಳನ್ನು ಗಣನೀಯವಾಗಿ ಕಡಿಮೆ ಮಾಡಬಹುದು.

ಆಪ್ಷನ್‌ ಎಂಟ್ರಿ ದೋಷ
ಸಿ.ಇ.ಟಿ. ಪ್ರಕ್ರಿಯೆ ಮೂಲಕ ವಿದ್ಯಾರ್ಥಿಗಳಿಗೆ ಸೀಟು ಹಂಚಿಕೆ ಆದ ಬಳಿಕ, ಹಲವಾರು ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿಗೆ ಬಂದು ಸಿ.ಇ.ಟಿ. ಮೂಲಕ ಸೀಟು ಸಿಗದ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಾರೆ. ಆಪ್ಷನ್‌ ಎಂಟ್ರಿಯಲ್ಲಿ ಆದ ವ್ಯತ್ಯಯದಿಂದ ಅವರಿಗೆ ಬೇಕಾದ ಕಾಲೇಜು, ಕೋರ್ಸ್‌ ನಲ್ಲಿ ಸೀಟು ಹಂಚಿಕೆ ಆಗದಿರುವುದು ಕಂಡು ಬರುತ್ತದೆ.

ಆಪ್ಷನ್‌ಎಂಟ್ರಿ ಲಿಂಕ್‌ ಬಿಡುಗಡೆ
ವಿದ್ಯಾರ್ಥಿಗಳು ತಮ್ಮ ಆಯ್ಕೆಯ ಕಾಲೇಜು ಮತ್ತು ಕೋರ್ಸ್‌ನ್ನು ಆಯ್ಕೆ ಮಾಡಲು ಆಪ್ಷನ್‌ಎಂಟ್ರಿ ಮಾಡುವ ಲಿಂಕ್‌ಅನ್ನು ಪರೀಕ್ಷಾ ಪ್ರಾಧಿಕಾರದ ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ವಿದ್ಯಾರ್ಥಿಗಳು ತಮ್ಮ ಸಿ.ಇ.ಟಿ. ರ್‍ಯಾಂಕ್‌ಗೆ ಅನು ಗುಣವಾಗಿ ಸಾಕಷ್ಟು ಕಾಲೇಜುಗಳ ಪಟ್ಟಿ ಹಾಗೂ ತಮ್ಮ ಇಚ್ಛೆಯ ಕೋರ್ಸ್‌ಗಳ ಪಟ್ಟಿ ಮಾಡಿಕೊಳ್ಳುವುದು ಉತ್ತಮ.

Advertisement

ಕ್ರಮಾಂಕವೂ ಅಗತ್ಯ
ಆಪ್ಷನ್‌ ಕೊಡುವಾಗ ನಾವು ಅನುಸರಿಸುವ ಕ್ರಮಾಂಕವೂ ಅತೀ ಮುಖ್ಯ ವಾಗಿರುತ್ತದೆ. ವಿದ್ಯಾರ್ಥಿಗಳು ಕೊಡುವ ಆಪ್ಷನ್‌ಗಳು ಅವುಗಳ ಪ್ರಾಶಸ್ತ್ಯವನ್ನು ಕೂಡಾ ಪ್ರತಿನಿಧಿಸುತ್ತವೆ. ವಿದ್ಯಾರ್ಥಿಗಳು ಆಪ್ಷನ್‌ ಎಂಟ್ರಿ ಮಾಡುವಾಗ ಸಾಕಷ್ಟು ಎಚ್ಚರಿಕೆ ವಹಿಸಿ, ತಾನು ಬಯಸುವ ಕಾಲೇಜು/ಕೋರ್ಸ್‌ ಗಳನ್ನು ತನ್ನ ಪ್ರಾಶಸ್ತ್ಯಕ್ಕೆ ಅನುಗುಣ ವಾಗಿ ಪರೀಕ್ಷಾ ಪ್ರಾಧಿಕಾರದ ವೆಬ್‌ ಪೋರ್ಟಲ್‌ನಲ್ಲಿ ಸಲ್ಲಿಸಬೇಕಾಗುತ್ತದೆ.

ದೂರಗಾಮಿ ಪರಿಣಾಮ
ಪೂರ್ವತಯಾರಿ ಮಾಡದೇ ಯಾರೋ ಹೇಳಿದ ಮಾತನ್ನು ಕೇಳಿ ಅಥವಾ ಯಾರಿಗೋ ಆಪ್ಷನ್‌ ಎಂಟ್ರಿ ಮಾಡಲು ಕೊಟ್ಟರೆ, ಅವರು ಈ ಎಲ್ಲ ಮಾಹಿತಿಯನ್ನು ಅವಲೋಕನ ಮಾಡದೆ, ತಮಗೆ ಗೊತ್ತಿರುವ ಕೆಲವೇ ಕೆಲವು ಕಾಲೇಜುಗಳಲ್ಲಿ ಒಂದಷ್ಟು ಆಪ್ಷನ್‌ಗಳನ್ನು ಕೊಟ್ಟು ಅರ್ಹ ವಿದ್ಯಾರ್ಥಿಗಳಿಗೆ ಸೂಕ್ತವಾದ ಕಾಲೇಜಿನಲ್ಲಿ ಸೀಟು ಸಿಗದೇ ಹೋಗಬಹುದು. ಇದರಿಂದ ಯಾರದೋ ಅರಿವಿನ ಕೊರತೆಯಿಂದ ಆದ ಪ್ರಮಾದದ ಫ‌ಲವಾಗಿ ವಿದ್ಯಾರ್ಥಿಗಳಿಗೆ ಹಂಚಿಕೆಯಾದ ಕಾಲೇಜು ಅಥವಾ ಕೋರ್ಸ್‌ ಇಷ್ಟವಾಗದೆ ಹೋಗಬಹುದು ಅಥವಾ ಸೂಕ್ತ ಅರ್ಹತೆ ಇದ್ದರೂ ಆ ವಿದ್ಯಾರ್ಥಿಗೆ ಅದಕ್ಕೆ ಅನುಗುಣವಾದ ಕಾಲೇಜು ಸಿಗದೆ ಹೋಗಬಹುದು. ಇದರಿಂದ ಆಗಬಹು ದಾದ ದೂರಗಾಮೀ ಪರಿಣಾಮಗಳಾದ ವಿದ್ಯಾರ್ಥಿಗಳಲ್ಲಿ ಭ್ರಮನಿರಸನ, ಕಲಿಕೆಯಲ್ಲಿ ಅನಾಸಕ್ತಿ ಮೊದಲಾದ ಸಮಸ್ಯೆ ಗಳಿಗೆ ಕಾರಣವಾಗುತ್ತವೆ. ಪ್ರಕ್ರಿಯೆಯಲ್ಲಿ ಸೀಟು ಹಂಚಿಕೆ ಆದ ಬಳಿಕ ವಿದ್ಯಾರ್ಥಿಗಳಿಗೆ ಇರುವುದು ಎರಡೇ ಆಯ್ಕೆ. ಒಂದು ಹಂಚಿಕೆ ಆದ ಕಾಲೇಜಿಗೆ ಹೋಗಿ ಪ್ರವೇಶ ಪ್ರಕ್ರಿಯೆಯನ್ನು ಪೂರೈಸುವುದು ಅಥವಾ ಸೀಟು ಇಷ್ಟ ಇಲ್ಲವಾದರೆ ಸಿ.ಇ.ಟಿ. ಪ್ರಕ್ರಿಯೆಯಿಂದ ಹೊರಬರುವುದು. ತನ್ನಇಷ್ಟದ ಕಾಲೇಜು/ಕೋರ್ಸ್‌ ಗೆ ಪ್ರವೇಶ ಸಿಗದೆ ಇದ್ದಲ್ಲಿ ಇವೆರಡೂ ಆಯ್ಕೆಗಳೂ ಕೂಡಾ ವಿದ್ಯಾರ್ಥಿಗಳಿಗೆ ನೋವನ್ನು ತರುವುದು ನಿಶ್ಚಿತ.

ಕಾಲೇಜುಗಳ ವಿವರ
ಕಳೆದ ವರ್ಷ ಯಾವ ಕಾಲೇಜಿನಲ್ಲಿ ಯಾವ ಕೋರ್ಸ್‌ಗೆ ಕಟ್‌ ಆಫ್ ರ್‍ಯಾಂಕ್‌ ಎಷ್ಟು ಇತ್ತು ಅನ್ನುವುದನ್ನು ಈ ಮುಂದಿನ ಅಂತರ್ಜಾಲ ಪುಟದಲ್ಲಿ () ಪರೀಕ್ಷಾ ಪ್ರಾಧಿಕಾರದವರು ಪ್ರಕಟಿಸಿದ್ದಾರೆ. ಇದರಲ್ಲಿ ಆಸಕ್ತ ವಿದ್ಯಾರ್ಥಿಗಳು ತಮ್ಮ ಇಚ್ಛೆಯ ಕಾಲೇಜನ್ನು ಮತ್ತು ಕೋರ್ಸ್‌ನ್ನು ಆಯ್ಕೆ ಮಾಡಿ, ಯಾವ ವಿಭಾಗದಲ್ಲಿ ಎಷ್ಟು ಕಟ್‌ ಆಫ್ ರ್‍ಯಾಂಕ್‌ ಇತ್ತು ಅನ್ನುವುದನ್ನು ತಿಳಿದುಕೊಳ್ಳಬಹುದು. ಈ ಮಾಹಿತಿಯ ಮೂಲಕ ಕಾಲೇಜಿನಲ್ಲಿ ತಮ್ಮ ರ್‍ಯಾಂಕ್‌ಗೆ ಸೀಟು ಸಿಗಬಹುದೋ ಇಲ್ಲವೋ ಎಂದು ಅಂದಾಜು ಮಾಡಬಹುದು.

ವೇಣುಗೋಪಾಲ ರಾವ್‌ ಎ. ಎಸ್‌., ಬಂಟಕಲ್ಲು

Advertisement

Udayavani is now on Telegram. Click here to join our channel and stay updated with the latest news.

Next