Advertisement

ಕಾವೇರಿ ಭಾಗದವರಂತೆ ಮೂಡಲಿ ಒಗ್ಗಟ್ಟು

11:00 AM Feb 12, 2019 | |

ಸಿಂಧನೂರು: ತುಂಗಭದ್ರಾ ನದಿ ವ್ಯಾಪ್ತಿ ಹಾಗೂ ಕಾವೇರಿ ನದಿ ವ್ಯಾಪ್ತಿಯ ಜನಪ್ರತಿನಿಧಿಗಳಲ್ಲಿ ಬಹಳಷ್ಟು ವ್ಯತ್ಯಾಸವಿದೆ. ಕಾವೇರಿ ನದಿ ಭಾಗದ ಹೋರಾಟಗಾರರ ಕಿಚ್ಚು, ಅಲ್ಲಿನ ಜನಪ್ರತಿನಿಧಿಗಳ ಒಗ್ಗಟ್ಟು ನಮ್ಮಲ್ಲಿ ಇಲ್ಲವಾಗಿದೆ. ಅಂತಹ ಒಗ್ಗಟ್ಟು ನಮ್ಮ ಭಾಗದ ರೈತರು, ಹೋರಾಟಗಾರರು, ಜನಪ್ರತಿನಿಧಿಗಳಲ್ಲಿ ಮೂಡಬೇಕಿದೆ ಎಂದು ಸಂತೆಕೆಲ್ಲೂರುಮಠದ ಶ್ರೀ ಗುರುಬಸವ ಮಹಾಂತ ಸ್ವಾಮೀಜಿ ಹೇಳಿದರು.

Advertisement

ತುಂಗಭದ್ರಾ ಉಳಿಸಿ ಆಂದೋಲನ ಸಮಿತಿಯಿಂದ ನಗರದ ಸ್ತ್ರೀ ಶಕ್ತಿ ಭವನದಲ್ಲಿ ಸೋಮವಾರ ನಡೆದ ರೈತರ ಬೃಹತ್‌ ಪ್ರತಿಭಟನಾ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಈ ಭಾಗದ ಜನಪ್ರತಿನಿಧಿಗಳ ಹಾಗೂ ಕೆಲ ಹೋರಾಟಗಾರರ ಬೇಜವಾಬ್ದಾರಿಯಿಂದ ತುಂಗಭದ್ರಾ ನದಿಯಲ್ಲಿನ ಹೂಳು ಎತ್ತುವ ಕೆಲಸ ಆಗುತ್ತಿಲ್ಲ. ನಮ್ಮಲ್ಲಿ ಒಗ್ಗಟ್ಟು ಇಲ್ಲದ್ದರಿಂದ ನದಿಯಲ್ಲಿನ 18 ಟಿಎಂಸಿ ಅಡಿ ಹೂಳು ತೆಗೆಯುವ ಕೆಲಸ ಆಗುತ್ತಿಲ್ಲ. ಹೀಗಾಗಿ ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಎರಡು ಬೆಳೆಗೆ ನೀರು ಸಿಗುತ್ತಿಲ್ಲ. ಲಕ್ಷಾಂತರ ಜನರ ಜೀವನಾಡಿಯಾದ ತುಂಗಭದ್ರಾ ನದಿಯಲ್ಲಿನ ಹೂಳು ತೆಗೆದರೆ ಮಾತ್ರ ಎರಡು ಬೆಳೆಗೆ ನೀರು ಲಭ್ಯವಾಗಿ ರೈತರ ಜೀವನ ಸಮೃದ್ಧವಾಗಲು ಸಾಧ್ಯ ಎಂದ ಅವರು, ರಕ್ತ ಕೊಟ್ಟೇವು ತುಂಗಭದ್ರಾ ನೀರು ಕೊಡೇವು ಎಂಬ ಹೋರಾಟದ ಕಿಚ್ಚು ಪ್ರತಿಯೊಬ್ಬರಲ್ಲಿ ಬರಬೇಕು. ಅಂದಾಗ ನೀರಿನ ಸಮಸ್ಯೆ ಪರಿಹಾರ ಸಾಧ್ಯ ಎಂದರು.

ತುಂಗಭದ್ರಾ ಜಲಾಶಯದಲ್ಲಿನ ಹೂಳು ತೆರವು ಅಸಾಧ್ಯ ಎನ್ನುತ್ತಿರುವ ಸರ್ಕಾರ ಪರ್ಯಾಯವಾಗಿ ಮತ್ತೂಂದು ಕಡೆ ಜಲಾಶಯ ನಿರ್ಮಾಣ ಮಾಡುವ ಯೋಜನೆ ರೂಪಿಸಿದೆ. ಆದಷ್ಟು ಬೇಗ ಇದು ಕಾರ್ಯರೂಪಕ್ಕೆ ಬಂದರೆ ಒಳ್ಳೆಯದು. ಇದಕ್ಕೆ ಈ ಭಾಗದ ಜನಪ್ರತಿನಿಧಿಗಳು ಪಕ್ಷಭೇದ ಮರೆತು ಕೆಲಸ ಮಾಡಬೇಕು ಎಂದರು.

ಮಾಜಿ ಶಾಸಕ ಹಂಪನಗೌಡ ಬಾದರ್ಲಿ ಮಾತನಾಡಿ, ಈ ಭಾಗದ ರೈತರ ಹಿತಕ್ಕಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತುಂಗಭದ್ರಾ ನದಿಯ ಬಗ್ಗೆ ಗಮನಹರಿಸಿದ್ದಾರೆ. ಸಮಾನಾಂತರ ಜಲಾಶಯ ನಿರ್ಮಾಣ ಯೋಜನೆ ಕೈಗೆತ್ತಿಕೊಳ್ಳಲಾಗಿದೆ ಎಂದರು.

Advertisement

ತುಂಗಭದ್ರಾ ಉಳಿಸಿ ಹೋರಾಟ ಸಮಿತಿ ಅಧ್ಯಕ್ಷ ವಿಠuಪ್ಪ ಗೋರಂಟ್ಲಿ ಮಾತನಾಡಿ, ತುಂಗಭದ್ರಾ ಜಲಾಶಯದ ನೀರಿನ ದುರ್ಬಳಕೆಯಿಂದ ಕಳೆದ ಮೂರು ವರ್ಷದಿಂದ ರೈತರಿಗೆ ಸಮರ್ಪಕ ನೀರು ಸಿಗುತ್ತಿಲ್ಲ. ಸರ್ಕಾರ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಮುಂದಾಗುತ್ತಿಲ್ಲ. ಕಾವೇರಿ ಹಾಗೂ ದಕ್ಷಿಣ ಕರ್ನಾಟಕದ ಇನ್ನಿತರ ಯೋಜನೆಗಳಿಗೆ ಆದ್ಯತೆ ನೀಡದಂತೆ ಈ ಭಾಗದ ಕೃಷ್ಣ, ತುಂಗಭದ್ರಾ ಯೋಜನೆಗಳಿಗೂ ಅಷ್ಟೇ ಮಹತ್ವ ಕೊಡಬೇಕು. ಕೃಷ್ಣಾ ಬಿ ಸ್ಕೀಮ್‌ ಯೋಜನೆ ತ್ವರಿತಗತಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.

ಅಖೀಲ ಭಾರತ ಕೃಷಿ ಸಂಘದ ರಾಜ್ಯಾಧ್ಯಕ್ಷ ಭಾರದ್ವಾಜ್‌, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಚಾಮರಾಜ ಮಾಲಿಪಾಟೀಲ, ಕರ್ನಾಟಕ ರೈತ ಸಂಘದ ರಾಜ್ಯಾಧ್ಯಕ್ಷ ಡಿ.ಎಚ್. ಪೂಜಾರ, ಸಾಹಿತ್ಯ ಮತ್ತು ಪರಿಸರ ಹಿತರಕ್ಷಣಾ ವೇದಿಕೆ ವೆಂಕಟೇಶ ಎಂ.ಆರ್‌., ಎಡದಂಡೆ ನೀರು ಬಳಕೆದಾರರ ಸಂಘದ ಶಂಭುಲಿಂಗ ಗೌಡ, ದಶರತರೆಡ್ಡಿ, ಹನುಮನಗೌಡ ಬೆಳಗುರ್ಕಿ ಮಾತನಾಡಿದರು. ನಾಗನಗೌಡ, ಅಮರಪ್ಪ ಗುಡಿಹಾಳ, ಅಂಬಣ್ಣ ಆರೋಲಿ, ದಾನಪ್ಪ ನಿಲೋಗಲ್‌, ಬಸನಗೌಡ ಬ್ಯಾಗವಾಟ, ತ್ರಿವಿಕ್ರಮ ಜೋಶಿ, ರವಿಗೌಡ ಮಲ್ಲದಗುಡ್ಡ ಸೇರಿ ವಿವಿಧ ಜಿಲ್ಲೆ, ತಾಲೂಕುಗಳ ರೈತ ಮುಖಂಡರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next