ಬಳ್ಳಾರಿ: ಜಿಲ್ಲೆಯ ಪ್ರತಿಯೊಂದು ಇಲಾಖೆಯ ನೋಡಲ್ ಅಧಿಕಾರಿಗಳು ಸಕಾಲದಲ್ಲಿಯೇ ಮಾಹಿತಿ ನೀಡಬೇಕು ಮತ್ತು ಪರಿಣಾಮಕಾರಿ ಅನುಷ್ಠಾನ ಮಾಡುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕು ಎಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಾಜೀವ್ ಚಾವ್ಲಾ ಸೂಚನೆ ನೀಡಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಕಾಲ ಸೇವೆಗಳ ಅಧಿನಿಯಮ ಕುರಿತು ವೀಡಿಯೋ ಕಾನ್ಫರೆನ್ಸ್ ಮುಖಾಂತರ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಸೋಮವಾರ ನಡೆದ ಸಂವಾದಲ್ಲಿ ಮಾತನಾಡಿದರು.
ಸಕಾಲ ಯೋಜನೆ ಅಡಿಯಲ್ಲಿ ಜಿಲ್ಲಾಧಿಕಾರಿಗಳು, ಜಿಪಂ ಸಿಇಒ, ಅಪರ ಜಿಲ್ಲಾಧಿಕಾರಿಗಳು ಕೋಆರ್ಡಿನೇಟರ್‌ಗಳಾಗಿದ್ದು, ಸಕಾಲ ಯೋಜನೆ ಪರಿಣಾಮಕಾರಿಯಾಗಿ ಜಾರಿಯಾಗಬೇಕು. ಪ್ರತಿ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಗಳು ಪ್ರತಿ ತಿಂಗಳು ಸಭೆ ನಡೆಸಿ ಸಕಾಲಕ್ಕೆ ಸಂಬಂಧಿತ ಸಮಸ್ಯೆಗಳು ಅವುಗಳ ಇತ್ಯರ್ಥಗೊಳಿಸುವ ಬಗ್ಗೆ ಮಾಹಿತಿ ಪಡೆದುಕೊಂಡು ಕೇಂದ್ರಕ್ಕೆ ವಿವರ ಸಲ್ಲಿಸಬೇಕು. ಒಂದು ವೇಳೆ ಸಮಸ್ಯೆ ನಿಮ್ಮಲ್ಲೇ ಇತ್ಯರ್ಥಗೊಳಿಸುವುದಿದ್ದರೆ ಮಾಡಬಹುದು. ಜಿಲ್ಲಾಧಿಕಾರಿಗಳು ಇದಕ್ಕೆ ಪ್ರಮುಖ ಪಾತ್ರವಹಿಸಲಿದ್ದು, ಅವರ ಮೂಲಕ ಇಲಾಖೆವಾರು ನೋಡಲ್ ಅಧಿಕಾರಿಗಳಿಗೆ ಸಕಾಲ ಯೋಜನೆಗೆ ಸಂಬಂಧಿತ ಸಮಸ್ಯೆಗಳನ್ನು ಶೀಘ್ರದಲ್ಲಿ ಇತ್ಯರ್ಥವಾಗುವಂತೆ ಸೂಚನೆ ಕೊಡಬೇಕು ಎಂದರು.
ಕಡ್ಡಾಯವಾಗಿ ಸಕಾಲದ ಬಗ್ಗೆ ಪ್ರತಿ ಇಲಾಖೆಯಲ್ಲಿ ಬೋರ್ಡ್ ಹಾಕಬೇಕು. ಕಲಂ 5ರ ಪ್ರಕಾರ ಸ್ವೀಕೃತವನ್ನು ಅರ್ಜಿದಾರರಿಗೆ ನೀಡಿ ಸಕಾಲ ನಂಬರ್ ಕೋಡಬೇಕು. ಕೈಬರಹ ಅಥವಾ ಇನ್ನಿತರವಾಗಿಯು ಬರೆದುಕೊಂಡು ಬಂದಂಥ ಅರ್ಜಿಗಳಿಗೆ ಮಾನ್ಯತೆ ಇರುವುದಿಲ್ಲ. ಅದಕ್ಕಾಗಿ ಸಕಾಲದ ನೀತಿ ನಿಯಮಗಳ ಪ್ರಕಾರ ಅರ್ಜಿಯನ್ನು ಹಾಕಿ ಅದಕ್ಕೆ ಸಂಬಂಧಿತ ಮಾನ್ಯತಾ ನಂಬರ್ ಅರ್ಜಿದಾರರಿಗೆ ನೀಡಬೇಕು. ಇದರಿಂದ ಮುಂದೆ ಆಗುಹೋಗುಗಳ ಬಗ್ಗೆ ಸಕಾಲ ಜವಾಬ್ದಾರಿಯಾಗಿರುತ್ತದೆ ಎಂದು ತಿಳಿಸಿದರು.
ಗ್ರೂಪಿನಲ್ಲಿ ಮಾಹಿತಿ ತಿಳಿಸಿ: 2014ರ ಸಕಾಲ ತಿದ್ದುಪಡಿ ಪ್ರಕಾರ ಸೆಕ್ಷನ್ ಪ್ರಾಧಿಕಾರವು ವಿಶೇಷ ಮುತುವರ್ಜಿ ವಹಿಸಿ ಮೇಲ್ಮನವಿ ಅರ್ಜಿಗಳನ್ನು ಕಾಲಮಿತಿಯೊಳಗೆ ಮುಗಿಸಬೇಕು. ಸಕಾಲದ ಪ್ರಾಧಿಕಾರದ ಅಧಿಕಾರಿಗಳು ವಿಶೇಷ ಕರ್ತವ್ಯ ನಿಭಾಯಿಸಿ ಅರ್ಜಿಗಳನ್ನು ಇತ್ಯರ್ಥಗೊಳಿಸಬೇಕು. ರಾಜ್ಯಮಟ್ಟದ ಸಕಾಲ ವ್ಯಾಟ್ಸ್‌ಆಪ್ ಗ್ರೂಪ್ ರಚಿಸಲಾಗಿದೆ. ಇದರ ಮೂಲಕ ಪ್ರತಿ ಜಿಲ್ಲೆಯ ಜಿಲ್ಲಾಧಿಕಾರಿ, ಸಿಇಒ, ಅಪರ ಜಿಲ್ಲಾಧಿಕಾರಿಗಳು ಸಕಾಲ ಮಾಹಿತಿಗಳು, ಅರ್ಜಿಗಳ ಇತ್ಯರ್ಥ, ವಿಲೇವಾರಿ, ಸಮಸ್ಯೆಗಳು ಕುರಿತು ಮಾಹಿತಿ ಹಂಚಿಕೊಳ್ಳಬಹುದು. ಇದಕ್ಕಾಗಿ ಒಬ್ಬ ವಿಶೇಷ ಅಧಿಕಾರಿಯನ್ನು ಅಡ್ಮಿನ್ ಆಗಿ ನೇಮಕ ಮಾಡಲಾಗುತ್ತದೆ. ಅವರ ಮೂಲಕ ಮಾಹಿತಿ ಪಡೆದುಕೊಂಡು ಸಮಸ್ಯೆಗಳನ್ನು ಇತ್ಯರ್ಥಗೊಳಿಸಲು ಪ್ರಯತ್ನಿಸಲಾಗುತ್ತದೆ ಎಂದು ವಿವರಿಸಿದರು. ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್ ಮಾತನಾಡಿದರು. ಈ ಸಂದರ್ಭದಲ್ಲಿ ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.