Advertisement

ಕಲಾ ಸಂಪತ್ತನ್ನು ರಕ್ಷಿಸುವ ಕೆಲಸವಾಗಲಿ: ಡಾ|ಆಳ್ವ

10:17 PM Jul 05, 2019 | mahesh |

ಮಹಾನಗರ: ಸಮಾಜದಲ್ಲಿರುವ ಸಮಾನ ಆಸಕ್ತರು ಸೇರಿಕೊಂಡು ಕಲಾ ಸಂಪತ್ತನ್ನು ರಕ್ಷಿಸುವ ಕೆಲಸ ಮಾಡಬೇಕಾಗಿದೆ ಎಂದು ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ
ಡಾ| ಎಂ. ಮೋಹನ್‌ ಆಳ್ವ ಹೇಳಿದರು.

Advertisement

ಕರ್ನಾಟಕ ಪಶು ವೈದ್ಯಕೀಯ, ಪಶು ಹಾಗೂ ಮೀನುಗಾರಿಕಾ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರ್‌ ಇದರ ಅಂಗಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ ಇದರ ಸುವರ್ಣ ಮಹೋತ್ಸವದ ಅಂಗವಾಗಿ ಕರಾವಳಿ ಚಿತ್ರಕಲಾ ಚಾವಡಿ ಮಂಗಳೂರು ಇದರ ಸಹಭಾಗಿತ್ವದಲ್ಲಿ ಚಿತ್ರಕಲಾ ಶಿಬಿರ ಮತ್ಸ್ಯವರ್ಣವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು. ಚಿತ್ರ ಎನ್ನುವುದು ಒಂದು ಸಾಹಿತ್ಯ ಇದ್ದಂತೆ. ಸಾಹಿತ್ಯದ ನೂರು ಪುಟಗಳು ನಮಗೆ ಹೇಗೆ ಹೊಸ ಜ್ಞಾನವನ್ನು ನೀಡುತ್ತದೆಯೋ ಅದೇ ರೀತಿ ಕಲಾಕೃತಿಯೊಂದು ಅದೇ ರೀತಿಯಲ್ಲಿ ಕೆಲಸ ಮಾಡುತ್ತದೆ ಎಂದರು.

ಕಲೆಯಿಂದ ಸಾಮರಸ್ಯ
ಕಲೆಯಲ್ಲಿ ಜಾತಿ, ಧರ್ಮ, ಸಮಾಜ ಎನ್ನುವ ಹಂಗಿನಲ್ಲಿ ಸಿಕ್ಕಿಕೊಳ್ಳದೇ ಇಡೀ ಸಮಾಜವನ್ನು ಕಟ್ಟುವ ಕೆಲಸವನ್ನು ಮಾಡುವುದರಿಂದ ಸಮಾಜದಲ್ಲಿ ಸಾಮರಸ್ಯ ಗಟ್ಟಿಯಾಗಲು ಸಾಧ್ಯ. ಕಲಾವಿದರು ತಮ್ಮ ಸೃಜನಶೀಲತೆಯಿಂದ ಕಲಾಕೃತಿಯನ್ನು ರಚಿಸಿದಾಗ ಸಮಾಜಕ್ಕೂ ಉತ್ತಮ ಸಂದೇಶ ಸಾರಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದ ಡೀನ್‌ ಡಾ| ಎ. ಸೆಂಥಿಲ್‌ ವೇಲ್‌ ಮಾತನಾಡಿ, ಈ ಕಲಾಶಿಬಿರದ ಕಲಾಕೃತಿಗಳನ್ನು ಒಟ್ಟು ಸೇರಿಸಿ ಕ್ಯಾಟ್‌ಲಾಗ್‌ವೊಂದನ್ನು ಸಿದ್ಧಪಡಿಸಿಕೊಂಡು ಅದನ್ನು ಇ-ನೆಟ್‌ನಲ್ಲಿ ಹಾಕಿ ಮಾರಾಟ ಮಾಡಲಾಗುತ್ತದೆ. ಅಲ್ಲಿ ಬಂದ ಆದಾಯವನ್ನು ಕಾಲೇಜು, ವಿದ್ಯಾರ್ಥಿಗಳ ಅಭಿವೃದ್ಧಿಗೆ ವಿನಿಯೋಗ ಮಾಡಲಾಗುತ್ತದೆ ಎಂದರು.

ಕರಾವಳಿ ಚಿತ್ರಕಲಾ ಚಾವಡಿಯ ಅಧ್ಯಕ್ಷ ಕೋಟಿ ಪ್ರಸಾದ್‌ ಆಳ್ವ ಉಪಸ್ಥಿತರಿದ್ದರು. ಮತ್ಸ್ಯ ವರ್ಣ ಚಿತ್ರಕಲಾ ಶಿಬಿರದ ಸಂಯೋಜಕ ಡಾ| ಎಸ್‌.ಎಂ. ಶಿವಪ್ರಕಾಶ್‌ ಸ್ವಾಗತಿಸಿದರು. ಮೀನುಗಾರಿಕಾ ಕಾಲೇಜಿನ ಡಾ| ಶಿವಕುಮಾರ್‌ ಮಗದ ನಿರೂಪಿಸಿದರು. 30ಕ್ಕೂ ಹೆಚ್ಚು ಕಲಾವಿದರು ಈ ಚಿತ್ರಕಲಾ ಶಿಬಿರದಲ್ಲಿ ಭಾಗವಹಿಸುವ ಮೂಲಕ ಶಿಬಿರಕ್ಕೆ ಹೊಸ ಮೆರಗನ್ನು ತಂದುಕೊಟ್ಟರು.

Advertisement
Advertisement

Udayavani is now on Telegram. Click here to join our channel and stay updated with the latest news.

Next