Advertisement

ಏಳು ಸುತ್ತಿನ ಕೋಟೆ ಸ್ಫೂರ್ತಿ ಕೇಂದ್ರವಾಗಲಿ: ಪ್ರೊ|ಆರಾಧ್ಯ

10:10 AM Mar 11, 2019 | Team Udayavani |

ಚಿತ್ರದುರ್ಗ: ಪುರಾತನ ಕಾಲದ ಇತಿಹಾಸ ಹೊಂದಿರುವ ಸ್ಮಾರಕಗಳನ್ನು ರಕ್ಷಿಸಿ ಮುಂದಿನ ಪೀಳಿಗೆಗೆ ಉಳಿಸಬೇಕಾಗಿದೆ ಎಂದು ಇತಿಹಾಸ ಸಂಶೋಧಕ ಪ್ರೊ|ಶ್ರೀಶೈಲ ಆರಾಧ್ಯ ಹೇಳಿದರು.

Advertisement

ಇಲ್ಲಿನ ರಂಗಯ್ಯನಬಾಗಿಲು ಸಮೀಪದ ಉದ್ಯಾನವನದಲ್ಲಿ ನೆಹರು ಯುವ ಕೇಂದ್ರ, ಮದಕರಿ ಯುವಕ ಸಂಘದಿಂದ ಭಾನುವಾರ ಹಮ್ಮಿಕೊಳ್ಳಲಾಗಿದ್ದ ಸ್ವತ್ಛತಾ ಅರಿವು ಆಂದೋಲನ ಹಾಗೂ ಶ್ರಮದಾನ ಶಿಬಿರದಲ್ಲಿ ಅವರು ಮಾತನಾಡಿದರು.

ರಾಜ್ಯದಲ್ಲಿ ಅನೇಕ ಐತಿಹಾಸಿಕ ಸ್ಮಾರಕಗಳಿವೆ. ಪಾಳೇಗಾರರು ಆಳಿದ ಚಿತ್ರದುರ್ಗದ ಏಳುಸುತ್ತಿನ ಕೋಟೆ ಯುವಕರಿಗೆ ಸ್ಫೂರ್ತಿಯ ಕೇಂದ್ರವಾಗಬೇಕು. ಚಿತ್ರದುರ್ಗದಂತ ಸುಭದ್ರವಾದ ಕೋಟೆ ರಾಜ್ಯದಲ್ಲಿ ಬೇರೆ ಎಲ್ಲಿಯೂ ಇಲ್ಲ. ಕೋಟೆ, ಕೊತ್ತಲ, ಅರಮನೆ, ಗುರು ಮನೆ ಇವುಗಳೆಲ್ಲಾ ಉಳಿಯಬೇಕಾಗಿದೆ. ಸ್ಮಾರಕ ಮತ್ತು ಐತಿಹಾಸಿಕ ಸ್ಥಳಗಳನ್ನು ಸ್ವತ್ಛವಾಗಿಟ್ಟುಕೊಂಡು ರಕ್ಷಿಸುವ
ಕೆಲಸವನ್ನು ಯುವಕರು ಮಾಡಬೇಕಿದೆ ಎಂದು ಕರೆ ನೀಡಿದರು. 

ಕೋಟೆ ವಾಯುವಿಹಾರಿಗಳ ಸಂಘದ ಅಧ್ಯಕ್ಷ ಆರ್‌. ಸತ್ಯಣ್ಣ ಮಾತನಾಡಿ, ಪ್ಲಾಸ್ಟಿಕ್‌ ಬಳಕೆಯನ್ನು ನಿಷೇ ಧಿಸಬೇಕು.
ಸ್ವತ್ಛ ಭಾರತ ದೇಶದ ಪ್ರಧಾನಿ ನರೇಂದ್ರ ಮೋದಿಯವರ ಕನಸು. ಅವರ ಕನಸು ನನಸಾಗಿಸಬೇಕಾದರೆ ಪ್ರತಿಯೊಬ್ಬರು
ಸ್ವತ್ಛತೆಗೆ ಆದ್ಯತೆ ನೀಡಬೇಕು ಎಂದು ಮನವಿ ಮಾಡಿದರು.

ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಡಿ.ಗೋಪಾಲಸ್ವಾಮಿ ನಾಯಕ ಮಾತನಾಡಿ, ಸ್ವತ್ಛತೆ ಮತ್ತು ಶ್ರಮದಾನದ ಮೂಲಕ
ಪಾಳೇಗಾರರು ಆಳಿದ ಚಿತ್ರದುರ್ಗದ ಕೋಟೆಯನ್ನು ಉಳಿಸಿ ಬೆಳೆಸಬೇಕಿದೆ. ಸ್ಮಾರಕದ ಮಹತ್ವ ಹಾಗೂ ಸಂರಕ್ಷಣೆ
ಕುರಿತು ಮುಂದಿನ ದಿನಗಳಲ್ಲಿ ಇತಿಹಾಸ ಸಂಶೋಧಕರನ್ನು ಕರೆಸಿ ಉಪನ್ಯಾಸ ಹಮ್ಮಿಕೊಳ್ಳಲಾಗುವುದು. ಇದರಿಂದ
ಚಿತ್ರದುರ್ಗದ ಇತಿಹಾಸವನ್ನು ಯುವ ಪೀಳಿಗೆಗೆ ತಿಳಿಸಿದಂತಾಗುತ್ತದೆ ಎಂದರು.

Advertisement

ಕನಿಷ್ಠ ಮೂರು ತಿಂಗಳಿಗೊಮ್ಮೆಯಾದರೂ ಈ ರೀತಿಯ ಸ್ವತ್ಛತೆ ಮತ್ತು ಶ್ರಮದಾನದ ಮೂಲಕ ಸ್ಮಾರಕಗಳನ್ನು ಉಳಿಸೋಣ. ಲಾಲ್‌ ಬತೇರಿ ಮೇಲೆ ಕೆಲವರು ಮದ್ಯಸೇವಿಸಿ ಬಾಟಲಿಗಳನ್ನು ಅಲ್ಲಿಯೇ ಎಸೆದು ಹೋಗುತ್ತಾರೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಬೇಕಾಗಿರುವುದರಿಂದ ಪೊಲೀಸ್‌ ಇಲಾಖೆಯವರು ಕೂಡ ಸ್ಮಾರಕ ಮತ್ತು ಕೋಟೆ ಉಳಿವಿಗೆ ಗಮನ ಕೊಡಲಿ ಎಂದು ಮನವಿ ಮಾಡಿದರು.

ರಾಜಾ ಮದಕರಿನಾಯಕ, ಸೋಮಶೇಖರ್‌, ಉಮಾ ಶ್ರೀಶೈಲ ಆರಾಧ್ಯ, ಭದ್ರಣ್ಣ, ವೀರಭದ್ರಪ್ಪ, ಮಾರುತಿ, ಎಸ್‌. ಹೇಮಂತಕುಮಾರ್‌, ಎಂ. ಕಾರ್ತಿಕ್‌, ನವೀನ್‌, ಎಸ್‌. ಮಾರುತಿ, ನೀಲೇಶ್‌, ಅಭಿದರ್ಶನ್‌, ವಿನೋತ್‌, ಪ್ರಮೋದ್‌ ಇದ್ದರು. 

ಪ್ಲಾಸ್ಟಿಕ್‌ ನಿರ್ಮೂಲನೆಗೆ ಪಣ ತೊಡಿ ಹಿಂದಿನ ಕಾಲದಲ್ಲಿ ಮಾರುಕಟ್ಟೆಗೆ ಹೋಗಿ ಅಗತ್ಯ ವಸ್ತುಗಳನ್ನು ಖರೀದಿಸಬೇಕಾಗಿದ್ದರೆ ಕೈಯಲ್ಲಿ ಬಟ್ಟೆ ಚೀಲಗಳನ್ನು ಹಿಡಿದುಕೊಂಡು ಹೋಗುವ ಪದ್ಧತಿ ಇತ್ತು. ಈಗ ಎಲ್ಲೆಡೆ ಪ್ಲಾಸ್ಟಿಕ್‌ ಆವರಿಸಿಕೊಂಡಿರುವುದರಿಂದ ಬಟ್ಟೆ ಕೈಚೀಲಗಳು ಮಾಯವಾಗಿದೆ. ಪ್ಲಾಸ್ಟಿಕ್‌ ಕವರ್‌ನಲ್ಲಿ ಬಿಸಿ ಪದಾರ್ಥಗಳನ್ನು ಕಟ್ಟಿಸಿಕೊಂಡು ಬಂದು ಸೇವಿಸುವುದರಿಂದ ಅದರಲ್ಲಿರುವ ರಾಸಾಯನಿಕ ಅಂಶಗಳು ದೇಹದೊಳಗೆ ಸೇರಿಕೊಂಡು ಮನುಷ್ಯ ನಾನಾ ರೀತಿಯ ಕಾಯಿಲೆಗಳಿಗೆ ತುತ್ತಾಗುತ್ತಾನೆ. ಪ್ರಾಣಿ ಪಕ್ಷಿಗಳು ಪ್ಲಾಸ್ಟಿಕ್‌ಗಳನ್ನು ತಿಂದು ಸತ್ತಿರುವ ಉದಾಹರಣೆಗಳಿವೆ. ಹಾಗಾಗಿ ಪ್ಲಾಸ್ಟಿಕ್‌ ಬಳಸುವುದಿಲ್ಲವೆಂದು ಪ್ರತಿಯೊಬ್ಬರೂ ದೃಢ ಸಂಕಲ್ಪ ಮಾಡಬೇಕೆಂದು ಆರ್‌. ಸತ್ಯಣ್ಣ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next