Advertisement

ಜರ್ಮನಿಯಲ್ಲಿ  ಬಾಗಲಕೋಟೆ ವಿದ್ಯಾರ್ಥಿ ಕಾಣೆ; ಚಪ್ಪಲಿ, ಸೈಕಲ್ ಪತ್ತೆ

01:10 PM Jun 22, 2017 | Team Udayavani |

ಬಾಗಲಕೋಟೆ: ಸರ್ಕಾರದ ಪ್ರೋತ್ಸಾಹಧನ ಯೋಜನೆಯಡಿ ಉನ್ನತ ವ್ಯಾಸಂಗಕ್ಕಾಗಿ ಜರ್ಮನಿಗೆ ತೆರಳಿದ್ದ ವಿದ್ಯಾರ್ಥಿಯೊಬ್ಬ ಐದು ದಿನಗಳಿಂದ ಕಾಣೆಯಾಗಿದ್ದಾನೆ. ನಗರ ಸಮೀಪದ ಸೀಮಿಕೇರಿ ಗ್ರಾಮದ ಮಂಜುನಾಥ ಸಿದ್ದಣ್ಣ ಚೂರಿ (28) ಜರ್ಮನಿಯಲ್ಲಿ ಎಂಎಸ್‌ ವ್ಯಾಸಂಗ ಮಾಡುತ್ತಿದ್ದ. ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳಿಗೆ ರಾಜ್ಯ ಸರ್ಕಾರ ನೀಡುವ ಪ್ರೋತ್ಸಾಹಧನ ಯೋಜನೆಯಡಿ ಹ್ಯಾಂಬರ್ಗ್‌ ತಾಂತ್ರಿಕ ವಿಶ್ವ ವಿದ್ಯಾಲಯದಲ್ಲಿ ಮಾಸ್ಟರ್‌ ಆಫ್‌ ಸೈನ್ಸ್‌ ವಿಭಾಗದಲ್ಲಿ 4ನೇ ಸೆಮಿಸ್ಟರ್‌ನಲ್ಲಿ ಓದುತ್ತಿದ್ದ.

Advertisement

ಗೊತ್ತಾಗಿದ್ದು ಯಾವಾಗ?: ಒಂದೂವರೆ ವರ್ಷದ ಹಿಂದೆ ಜರ್ಮನಿಗೆ ಹೋಗಿದ್ದ ಮಂಜುನಾಥ, ಏಳು ತಿಂಗಳ ಹಿಂದೆ ರಸ್ತೆ ಅಪಘಾತದಲ್ಲಿ ತಂದೆ ಸಿದ್ದಣ್ಣ ಚೂರಿ ಅವರನ್ನು ಕಳೆದುಕೊಂಡಿದ್ದ. ತಂದೆ ತೀರಿಕೊಂಡಿದ್ದಾಗ ಬಾಗಲಕೋಟೆಗೆ
ಬಂದಿದ್ದ ಆತ, ತಿಂಗಳ ಬಳಿಕ ಮರಳಿ ಹೋಗಿದ್ದ. ಬೀಳಗಿ ಪಟ್ಟಣದ ಗಾಂಧಿನಗರದಲ್ಲಿ ವಾಸವಾಗಿದ್ದ ಚೂರಿ ಕುಟುಂಬ, ತಂದೆಯ ನಿಧನದ ಬಳಿಕ ಸೀಮಿಕೇರಿ ಬಳಿ ಇರುವ ಸೋದರಮಾವನ (ತಾಯಿಯ ತಮ್ಮ) ಮನೆಯ ಪಕ್ಕದಲ್ಲೇ
ಬಾಡಿಗೆ ಮನೆ ಮಾಡಿ, ತಾಯಿಯನ್ನು ಬಿಟ್ಟು ಹೋಗಿದ್ದ. ಪ್ರತಿದಿನ ಬೆಳಗ್ಗೆ ಮತ್ತು ರಾತ್ರಿ ತಾಯಿಗೆ ದೂರವಾಣಿ ಕರೆ ಮಾಡಿ ಮಾತನಾಡುತ್ತಿದ್ದ. ಆದರೆ, ರವಿವಾರ ಆತನಿಂದ ಫೋನ್‌ ಬಂದಿರಲಿಲ್ಲ. 

ಓದು ಹೆಚ್ಚಿಗೆ ಇರಬೇಕು. ಅದಕ್ಕಾಗಿ ಫೋನ್‌ ಮಾಡಿರಲಿಕ್ಕಿಲ್ಲ ಎಂದು ಭಾವಿಸಿ ತಾಯಿ ಮಹಾನಂದಾ ಸುಮ್ಮನಾಗಿದ್ದರು. ಸೋಮವಾರವೂ ಫೋನ್‌ ಬಂದಿರಲಿಲ್ಲ. ಆದರೆ, ಮಂಗಳವಾರ ಜರ್ಮನಿಯಲ್ಲಿ ಮಂಜುನಾಥ ಚೂರಿ ಜತೆಗೆ
ವ್ಯಾಸಂಗ ಮಾಡುತ್ತಿರುವ ಅನಿಲ ದೇಶಪಾಂಡೆ ಎಂಬಾತ ಅಲ್ಲಿನ ಪೊಲೀಸರಿಗೆ ದೂರು ನೀಡಿದ್ದಾನೆ. ಆ ಬಳಿಕ ಅಲ್ಲಿನ ವಿದೇಶಾಂಗ ಸಚಿವಾಲಯದ ಅಧಿಕಾರಿಗಳು ಹಾಗೂ ಪೊಲೀಸರು ಅನಿಲ್‌ ಮೂಲಕ ಮನೆಗೆ ಫೋನ್‌ ಮಾಡಿಸಿ, ನಿಮ್ಮ ಪುತ್ರ ಕಾಣುತ್ತಿಲ್ಲ. ಮೂರು ದಿನಗಳಿಂದ  ಕಾಣೆಯಾಗಿದ್ದಾನೆ ಎಂದು ತಿಳಿಸಿದ್ದಾರೆ.

ಆತಂಕದಲ್ಲಿ ಕುಟುಂಬ: ಮಂಜುನಾಥನಿಗೆ ತಾಯಿ ಮಹಾನಂದ ಚೂರಿ, ಹಿರಿಯ ಸಹೋದರಿ ಕವಿತಾ, ಕಿರಿಯ ಸಹೋದರಿ ವಿಜಯಲಕ್ಷ್ಮೀ ಇದ್ದಾರೆ. ಕವಿತಾಳನ್ನು ಮಹಾಲಿಂಗಪುರ ಮತ್ತು ವಿಜಯಲಕ್ಷ್ಮಿಯನ್ನು  
ಬಸವನಬಾಗೇವಾಡಿಯ ಮನಗೂಳಿಗೆ ಮದುವೆ ಮಾಡಿಕೊಡಲಾಗಿದೆ. ಸದ್ಯ ತಾಯಿ ಒಬ್ಬರೇ ಸೀಮಿಕೇರಿಯಲ್ಲಿದ್ದು, ಮಂಜುನಾಥ ಕಾಣೆಯಾದ ವಿಷಯ ತಿಳಿದು ಇಬ್ಬರೂ ಸಹೋದರಿಯರು, ಮಾವಂದಿರು ಬಂದಿದ್ದಾರೆ. ಇಡೀ ಕುಟುಂಬ, ಮಂಜುನಾಥನ ಸೋದರ ಮಾವ ಮಲ್ಲಿಕಾರ್ಜುನ ಡೋಮನಾಳ ಅವರ ಮನೆಯಲ್ಲಿದ್ದು, ತೀವ್ರ ದುಃ ಖದಲ್ಲಿದ್ದಾರೆ.

ಸುಷ್ಮಾ ಸ್ವರಾಜ್‌- ಮೋದಿಗೆ ಟ್ವೀಟ್‌:
ಮಂಜುನಾಥ ಚೂರಿ ಕಾಣೆಯಾದ ಕುರಿತು ಬಾಗಲಕೋಟೆಯ ಎಸ್ಪಿ, ಸಂಸದ ಗದ್ದಿಗೌಡರ ಅವರಿಗೆ ಕುಟುಂಬದವರು ತಿಳಿಸಿದ್ದಾರೆ. ಟ್ವೀಟ್‌ ಮೂಲಕ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌, ಪ್ರಧಾನಿ ಮೋದಿ ಅವರ ಗಮನಕ್ಕೆ ತಂದಿದ್ದಾರೆ.
ಬಾಗಲಕೋಟೆಯ ಎಸ್ಪಿ ಸಿ.ಬಿ. ರಿಷ್ಯಂತ ಅವರ ಸಹಪಾಠಿಯೊಬ್ಬರು ಜರ್ಮನಿಯಲ್ಲಿ ಅಧಿಕಾರಿಯಾಗಿದ್ದು, ಅವರ ಮೂಲಕ ಮಂಜುನಾಥನ ಪತ್ತೆಗೆ ಪ್ರಯತ್ನಿಸಿದ್ದಾರೆ.

Advertisement

ವಿದ್ಯಾರ್ಥಿಯ ಚಪ್ಪಲಿ, ಸೈಕಲ್, ಪತ್ರ ಪತ್ತೆ:
ಜರ್ಮನಿಯಲ್ಲಿ ನಾಪತ್ತೆಯಾಗಿದ್ದ ಬಾಗಲಕೋಟೆ ವಿದ್ಯಾರ್ಥಿಯ ಸೈಕಲ್, ಚಪ್ಪಲ್ ಹಾಗೂ ಕನ್ನಡದಲ್ಲಿ ಬರೆದಿಟ್ಟಿರುವ ಪತ್ರ ಹ್ಯಾಮ್ಸ್ ಬರ್ಗ್ ನದಿ ಸಮೀಪ ಪತ್ತೆಯಾಗಿರುವುದಾಗಿ ಜರ್ಮನಿಯ ಪೊಲೀಸ್ ಮೂಲಗಳು ತಿಳಿಸಿರುವುದಾಗಿ ಮಾಧ್ಯಮದ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next