ದಾವಣಗೆರೆ: ಎಲ್ಲಾ ಇಲಾಖೆ ಅಧಿಕಾರಿಗಳು ಪ್ರತಿದಿನ ಅರ್ಧ ಗಂಟೆ ಕಚೇರಿಗೆ ಬರುವ ಸಾರ್ವಜನಿಕರ ಸಮಸ್ಯೆ, ಅಹವಾಲುಗಳ ಆಲಿಸಿ, ಸಾಧ್ಯವಾದರೆ ಕಾನೂನು ವ್ಯಾಪ್ತಿಯೊಳಗೆ ಅಲ್ಲಿಯೇ ಬಗೆಹರಿಸುವ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ಆಶಿಸಿದ್ದಾರೆ.
ಸೋಮವಾರ ತಮ್ಮ ಕಚೇರಿ ಸಭಾಂಗಣದಲ್ಲಿ ನಡೆದ ಜನಸ್ಪಂದನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೆಲಸ-ಕಾರ್ಯಗಳ ಎಷ್ಟೇ ಒತ್ತಡವಿದ್ದರೂ ಕಚೇರಿಗೆ ಬಂದಂತಹ ಸಾರ್ವಜನಿಕ ಸಮಸ್ಯೆ, ಆಲಿಸಿ. ಎಲ್ಲವನ್ನೂ ಮಾಡಲಿಕ್ಕಾಗುವುದಿಲ್ಲ. ಕಾನೂನು ವ್ಯಾಪ್ತಿಯೊಳಗೆ ಆಗುವುದಿದ್ದರೆ ಮಾಡಿಕೊಡುವ ಭರವಸೆ ನೀಡಿದರೆ ಎಷ್ಟೋ ಸಮಸ್ಯೆ ಬಗೆ ಹರಿಯುತ್ತದೆ ಎಂದರು.
ಸಾರ್ವಜನಿಕರ ಸೇವೆ ಸಲ್ಲಿಸುವುದು ಸೌಭಾಗ್ಯ. ನಾವು ಅಧಿಕಾರಿಗಳಾಗಿದ್ದೇವೆ ಎಂದರೆ ನಾವು ಸರ್ವಜ್ಞರೇನು ಅಲ್ಲ. ನಮಗಿಂತಲೂ ಒಳ್ಳೆಯ ಪ್ರತಿಭಾವಂತರು ಇದ್ದಾರೆ. ಆದರೆ, ಅವರಿಗೆ ಅವಕಾಶ ಸಿಕ್ಕಿರುವುದಿಲ್ಲ. ನಮಗೆ ದೇವರ ವಿಶಿಷ್ಟ ಆಶೀರ್ವಾದದಿಂದ ಜನರ ಕೆಲಸ ಮಾಡುವಂತಹ ಅವಕಾಶ ಸಿಕ್ಕಿರುವುದು ಸುದೈವ. ಅದನ್ನು ಜನರು, ಸಮಾಜದ ಸಲುವಾಗಿ ಚೆನ್ನಾಗಿ ಬಳಸಿಕೊಳ್ಳಬೇಕು. ಒಳ್ಳೆಯ ಕೆಲಸ ಮಾಡುವ ಮೂಲಕ ಜಿಲ್ಲೆಗೆ ಒಳ್ಳೆಯ ಹೆಸರು ತರಬೇಕು ಎಂದು ತಿಳಿಸಿದರು.
ಜನಸ್ಪಂದನ ಕಾರ್ಯಕ್ರಮ ಪ್ರಾರಂಭಿಸಿದ ನಂತರ ಸಾಕಷ್ಟು ಜನರು ಜಿಲ್ಲಾಧಿಕಾರಿಯವರ ಬಳಿ ಬರುವುದನ್ನ ನೋಡಿದರೆ ಅಧಿಕಾರಿಗಳು ಕೆಲಸ ಮಾಡದೇ ಇರುವ ಕಾರಣಕ್ಕೋ ಅಥವಾ ಜಿಲ್ಲಾಧಿಕಾರಿ ಹೇಳಿದರೆ ಕೆಲಸ ಆಗುತ್ತವೆ ಎಂಬ ಕಾರಣಕ್ಕೆ ಏನೋ ಸಾಕಷ್ಟು ಅರ್ಜಿದಾರರು ಬರುತ್ತಿದ್ದಾರೆ. ಸಾರ್ವಜನಿಕರು ಅಧಿಕಾರಿಗಳ ಬಳಿ ಬರುವುದಕ್ಕಿಂತಲೂ ನಾವೇ ಜನರ ಬಳಿ ಹೋಗಿ ಕೆಲಸ ಮಾಡಿಕೊಡಬೇಕು ಎಂದು ಸೂಚಿಸಿದರು.
ನಾನು ಕಚೇರಿಯಲ್ಲಿದ್ದಾಗ ಪ್ರತಿ ಅರ್ಧ ಗಂಟೆಗೊಮ್ಮೆ ಹೊರಗೆ ಬಂದು ಯಾರಾದರೂ ಜನರು ಇದ್ದಾರಾ, ಒಂದೊಮ್ಮೆ ಇದ್ದರೆ ಎಷ್ಟು ಹೊತ್ತಿನಿಂದ ಕಾಯುತ್ತಿದ್ದಾರೆ ಎಂದು ಕೇಳಿ ಕೆಲಸ ಮಾಡಿಕೊಡುತ್ತೇನೆ. ನಾನು ಆ ರೀತಿ ಹೊರಗೆ ಬರುವುದು ಯಾವ ಕಾರಣಕ್ಕೆ ಎಂದರೆ ನನ್ನನ್ನೂ ಭೇಟಿ ಮಾಡುವುದಕ್ಕೂ ಸಾಕಷ್ಟು ಅಡೆತಡೆ ಇರುತ್ತವೆ ಎಂಬುದು
ಗೊತ್ತು. ಆ ಕಾರಣಕ್ಕೆ ಹೊರಗೆ ಬಂದು ನೋಡುತ್ತೇನೆ. ನೀವು ಅಧಿಕಾರಿಗಳು ಸಹ ಅದೇ ರೀತಿ ನಿಮ್ಮ ಕೊಠಡಿಯಿಂದ ಹೊರ ಬಂದು ಸಾರ್ವಜನಿಕರಿದ್ದರೆ ಅವರಿಗೆ ಸ್ಪಂದಿಸಿ ಎಂದು ಸಲಹೆ ನೀಡಿದರು.
ನಾನು ದಾವಣಗೆರೆ ಜಿಲ್ಲಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡ ನಂತರ ಒಳ್ಳೆಯ ಮಾತು ಕೇಳಿ ಬರುತ್ತಿವೆ. ಅಂದರೆ ನನ್ನೊಟ್ಟಿಗೆ ಎಲ್ಲಾ ಇಲಾಖೆ ಅಧಿಕಾರಿಗಳು ಚೆನ್ನಾಗಿಯೇ ಕೆಲಸ ಮಾಡುತ್ತಿದ್ದಾರೆ ಎಂದರ್ಥ. ಇನ್ನೂ ಹೆಚ್ಚಿನ ಮಟ್ಟದಲ್ಲಿ ಒಳ್ಳೆಯ ಕೆಲಸ ಮಾಡುವ ಮೂಲಕ ಸಾರ್ವಜನಿಕರಿಗೆ ಸ್ಪಂದಿಸಬೇಕು. ನಾನು ಸದಾ ನಿಮ್ಮೊಂದಿಗೆ ಇರುತ್ತೇನೆ ಎಂದು ತಿಳಿಸಿದರು.
ಪ್ರಭಾರ ಅಪರ ಜಿಲ್ಲಾಧಿಕಾರಿ ಜಿ. ನಜ್ಮಾ, ಜಿಪಂ ಉಪ ಕಾರ್ಯದರ್ಶಿ ಬಿ. ಆನಂದ್, ಉಪ ವಿಭಾಗಾಧಿಕಾರಿ ಡಾ| ಮಮತಾ ಹೊಸಮನಿ, ಪಾಲಿಕೆ ಆಯುಕ್ತ ಮಂಜುನಾಥ್ ಆರ್. ಬಳ್ಳಾರಿ, ಸ್ಮಾರ್ಟ್‌ಸಿಟಿ ಯೋಜನೆ ಎಂಡಿ ರವೀಂದ್ರ ಬಿ.ಮಲ್ಲಾಪುರ, ಕೆ.ಎಚ್. ವಿಜಯ್‌ಕುಮಾರ್, ಡಾ| ರಾಘವೇಂದ್ರಸ್ವಾಮಿ ಇತರರು ಇದ್ದರು.