ಕೋಲಾರ: ಲೋಕಸಭೆ ಚುನಾವಣೆ ಮತ ಎಣಿಕೆಗೆ ನೇಮಕಗೊಂಡಿರುವ ಸಿಬ್ಬಂದಿ ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿಭಾಯಿಸಬೇಕಿದ್ದು ಯಾವುದೇ ಕಾರಣಕ್ಕೂ ಲೋಪ ಆಗದಂತೆ ಎಚ್ಚರ ವಹಿಸಬೇಕೆಂದು ಜಿಲ್ಲಾಧಿಕಾರಿ ಜೆ.ಮಂಜುನಾಥ್ ಹೇಳಿದರು.
ಶಿಕ್ಷೆಗೆ ಗುರಿಯಾಗುವಿರಿ: ಮತದಾನ ಪ್ರಕ್ರಿಯೆಯಂತೆಯೇ ಮತ ಎಣಿಕೆಗೂ ಸಾಕಷ್ಟು ಪ್ರಕ್ರಿಯೆಗಳಿದ್ದು, ಅವುಗಳನ್ನು ಅನುಸರಿಸಬೇಕಾಗಿದೆ. ಅನುಮಾನಗಳೇನಾದರೂ ಇದ್ದರೆ ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ಕರ್ತವ್ಯದಲ್ಲಿ ನಿಯಮಗಳನ್ನು ಮೀರಿದ್ದೇ ಆದಲ್ಲಿ ದಂಡದ ಸಮೇತ 3 ತಿಂಗಳು ವಿವಿಧ ಶಿಕ್ಷೆಗೆ ಗುರಿಯಾಗುತ್ತೀರಿ ಎಂದು ಹೇಳಿದರು.
ಅಗತ್ಯ ಸೌಲಭ್ಯ: ಈಗಾಗಲೇ ಮತಯಂತ್ರಗಳನ್ನು 15 ಭದ್ರತಾಕೊಠಡಿಗಳಲ್ಲಿ ಇರಿಸಲಾಗಿದ್ದು, ಅಂದು ಒಂದೊಂದೇ ಕೊಠಡಿಯನ್ನು ತೆರೆದು ಯಂತ್ರ ನೀಡಲಾಗುತ್ತದೆ. ಕನಿಷ್ಠ 17 ರಿಂದ 23 ಸುತ್ತುಗಳವರೆಗೆ ಎಣಿಕೆ ನಡೆಯಲಿರುವುದರಿಂದ ತಡವಾಗಲಿದೆ. ಆದರೂ ಅವಸರ ಪಡುವ ಅಗತ್ಯವಿಲ್ಲ. 8 ಗಂಟೆ ಒಳಗೆ ವರದಿ ನೀಡಬೇಕಿದ್ದು, ಸಿಬ್ಬಂದಿಗೆ ತಿಂಡಿ, ಊಟ ಸೇರಿ ಅಗತ್ಯ ಸೌಲಭ್ಯ ಕಲ್ಪಿಸಿರುವುದಾಗಿ ಹೇಳಿದರು.
ತರಬೇತುದಾರ ತಿಲಗರ್ ಮಾತನಾಡಿ, ಮತ ಎಣಿಕೆ ದಿನದಂದು ಗುರುತಿನ ಚೀಟಿಯೊಂದಿಗೆ ಸಿಬ್ಬಂದಿ ಕಡ್ಡಾಯವಾಗಿ ಹಾಜರಾಗಬೇಕು. ಮತದಾನ ಕೇಂದ್ರಕ್ಕೆ ಮುಖ್ಯವಾಗಿ ಮೊಬೈಲ್ಗಳನ್ನು ಕಡ್ಡಾಯವಾಗಿ ತರಬೇಡಿ ಎಂದು ಎಚ್ಚರಿಸಿದರು.
Advertisement
ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಗುರುವಾರ ಮತ ಎಣಿಕೆ ಸಿಬ್ಬಂದಿ, ಅಧಿಕಾರಿಗಳಿಗೆ ನಡೆದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು. ಲೋಕಸಭಾ ಚುನಾವಣೆಯಲ್ಲಿ ಮತ ಎಣಿಕೆ ಅಂತಿಮ ಮತ್ತು ಪ್ರಮುಖ ಘಟ್ಟವಾಗಿದೆ. ಮತ ಎಣಿಕೆಗೆ ಸಿಬ್ಬಂದಿ ತಪ್ಪದೇ ಕಡ್ಡಾಯವಾಗಿ ಬಂದು, ತಮ್ಮ ಜವಾಬ್ದಾರಿ ನಿರ್ವಹಿಸಬೇಕಿದೆ. ನಿಯಮ ಉಲ್ಲಂಘಿಸಿದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
Related Articles
Advertisement
ಎಷ್ಟೆಷ್ಟು ಮತಗಟ್ಟೆ-ಟೇಬಲ್: ಶಿಡ್ಲಘಟ್ಟ ಕ್ಷೇತ್ರದ 242 ಮತಗಟ್ಟೆಗಳಿಗೆ ಸಂಬಂಧಿಸಿದಂತೆ 12 ಟೇಬಲ್, ಚಿಂತಾಮಣಿ 245 ಮತಗಟ್ಟೆಗಳಿಗೆ 14 ಟೇಬಲ್, ಶ್ರೀನಿವಾಸಪುರದ 266 ಮತಗಟ್ಟೆಗಳಿಗೆ 7 ಟೇಬಲ್, ಮುಳಬಾಗಿಲಿನ 279 ಮತಗಟ್ಟೆಗಳಿಗೆ 7 ಟೇಬಲ್, ಕೆಜಿಎಫ್‌ನ 234 ಟೇಬಲ್ಗಳಿಗೆ 7 ಟೇಬಲ್, ಬಂಗಾರಪೇಟೆ 259 ಮತಗಟ್ಟೆಗಳಿಗೆ 7 ಟೇಬಲ್, ಕೋಲಾರದ 284 ಮತಗಟ್ಟೆಗಳಿಗೆ 14 ಹಾಗೂ ಮಾಲೂರಿನ 249 ಮತಗಟ್ಟೆಗಳಿಗೆ 7 ಟೇಬಲ್ಗಳ ವ್ಯವಸ್ಥೆ ಮಾಡಿರುವುದಾಗಿ ವಿವರಿಸಿದರು.
ಹಾಗೆಯೇ ಚಾಚೂ ತಪ್ಪದೆ ಸಮಯ ಪಾಲನೆ ಮಾಡಬೇಕಿದ್ದು, ಚುನಾವಣಾಧಿಕಾರಿಗಳು ಆದೇಶ ಮಾಡುವವರೆಗೂ ಎಣಿಕಾ ಕೇಂದ್ರ ಬಿಟ್ಟು ಯಾರೂ ಬರುವಂತಿಲ್ಲ. ಮರು ಎಣಿಕೆ ಮತ್ತಿತರ ಸಮಸ್ಯೆಗಳಾಗುವ ಸಾಧ್ಯತೆಗಳಿರುತ್ತವೆ.
ಈ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಕರ್ತವ್ಯವನ್ನು ಉತ್ತಮವಾಗಿ ನಿರ್ವಹಿಸಬೇಕು ಎಂದು ಹೇಳಿದರು. ಕಾರ್ಯಾಗಾರದಲ್ಲಿ ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ, ಉಪವಿಭಾಗಾಧಿಕಾರಿ ಸೋಮಶೇಖರ್ ಇದ್ದರು.