ಬೆಳ್ತಂಗಡಿ: ಹೊಸ ಪೀಳಿಗೆಯ ಪ್ರತಿಭಾನ್ವಿತರು ಭಾರತದ ಪ್ರಾಚೀನ ಕಾಲದ ಇತಿಹಾಸ ಪ್ರತಿನಿಧಿಸುವ ಶಾಸನ, ಸ್ಥಳ ನಾಮ ಮತ್ತಿತರ ಪುರಾವೆಗಳನ್ನು ಸಂಗ್ರಹಿಸಿ ಭಾರತೀಯ ಜ್ಞಾನ ಪರಂಪರೆಗೆ ಕೊಡುಗೆ ನೀಡುವ ಸಂಶೋಧನ ಪ್ರಜ್ಞೆ ಹೊಂದ ಬೇಕು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.
ಉಜಿರೆಯ ಶ್ರೀ ಧರ್ಮಸ್ಥಳ ಮಂಜು ನಾಥೇಶ್ವರ ಕಾಲೇಜಿನ ಇತಿಹಾಸ ವಿಭಾಗದ ಸಹಯೋಗದೊಂದಿಗೆ ಶುಕ್ರವಾರ ಧರ್ಮ ಸ್ಥಳದ ವಸಂತ್ ಮಹಲ್ ಸಭಾಭವನದಲ್ಲಿ ಜರಗಿದ ಭಾರತೀಯ ಪುರಾಭಿಲೇಖ ಸಂಸ್ಥೆಯ 45ನೇ ವಾರ್ಷಿಕ ಅಧಿವೇಶನ ಮತ್ತು ಭಾರತೀಯ ಸ್ಥಳನಾಮ ಸಂಸ್ಥೆಯ 39ನೇ ವಾರ್ಷಿಕ ಸಮಾವೇಶದ ಎರಡು ದಿನಗಳ ಅಧಿವೇಶನ ಉದ್ಘಾಟಿಸಿ ಅವರು ಮಾತನಾಡಿದರು.
ಭಾರತವು ಉಳಿದ ದೇಶಗಳಂತಲ್ಲ. ವಿದೇಶಗಳಿಗೆ ಅವುಗಳದ್ದೇ ಆದ ಐತಿಹಾಸಿಕ ಹಿನ್ನೆಲೆ ಇದೆ. ಭಾರತಕ್ಕೆ ಆ ಐತಿಹಾಸಿಕ ಹಿನ್ನೆಲೆಯ ಜತೆಗೆ ಪ್ರಾಚೀನ ಪರಂಪರೆಯ ಶ್ರೇಷ್ಠ ಮಾದರಿಗಳ ಇತಿಹಾಸವೂ ಇದೆ. ಈಗಾಗಲೇ ಆಗಿಹೋದ ವಿವರಗಳ ಜತೆಗೆ ಪ್ರಾಚೀನ ಪರಂಪರೆಯ ಮೌಲ್ಯ ವನ್ನು ಬಿಂಬಿಸುವ ಹಾಗೆ ಧಾರ್ಮಿಕ, ಆಧ್ಯಾತ್ಮಿಕ ಮತ್ತು ವಿವೇಚನಾತ್ಮಕ ಅಂಶ ಗಳ ಇತಿಹಾಸವನ್ನೂ ಭಾರತದಲ್ಲಿ ಕಾಣ ಬಹುದು. ವಿದ್ಯಾರ್ಥಿಗಳು ಈ ಪರಂ ಪರೆಯ ಒಳಗಿರುವ ಮಹತ್ವದ ಐತಿ ಹಾಸಿಕ ಅಂಶಗಳನ್ನು ಶೋಧಿಸುವುದರ ಕಡೆಗೆ ಹೆಚ್ಚಿನ ಒಲವು ತೋರಬೇಕು ಎಂದು ಸಲಹೆ ನೀಡಿದರು.
ಪ್ರಕಟಿತವಾದ ವಿಶೇಷ ಸಂಚಿಕೆಗಳನ್ನು ಎಸ್.ಡಿ.ಎಂ ಸಂಸ್ಥೆಗಳ ಕಾರ್ಯದರ್ಶಿ ಡಾ| ಬಿ. ಯಶೋವರ್ಮ, ಕಾಲೇಜಿನ ಪ್ರಾಂಶುಪಾಲ ಡಾ| ಸತೀಶ್ಚಂದ್ರ ಬಿಡುಗಡೆ ಗೊಳಿಸಿದರು. ಭಾರತೀಯ ಪುರಾಭಿಲೇಖ ಸಂಸ್ಥೆಯ ವತಿಯಿಂದ ಡಾ| ಡಿ. ವೀರೇಂದ್ರ ಹೆಗ್ಗಡೆ, ಡಾ| ಬಿ. ಯಶೋವರ್ಮ ಹಾಗೂ ಡಾ| ಸತೀಶ್ಚಂದ್ರ ಅವರನ್ನು ಸಮ್ಮಾನಿಸಲಾಯಿತು.
ಭಾರತೀಯ ಪುರಾಭಿಲೇಖ ಸಂಸ್ಥೆಯ ಅಧ್ಯಕ್ಷ ಡಾ| ಟಿ.ಎಸ್. ರವಿಶಂಕರ್, ಉಪಾಧ್ಯಕ್ಷ ಪಿ.ಎನ್. ನರಸಿಂಹಮೂರ್ತಿ, ಕಾರ್ಯಾಧ್ಯಕ್ಷ ಜೈ ಪ್ರಕಾಶ್ ಹಾಗೂ ಭಾರತೀಯ ಸ್ಥಳನಾಮ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ| ಕೃಷೇಂದುರೇ ಉಪಸ್ಥಿತರಿದ್ದರು. ಎಸ್.ಡಿ.ಎಂ. ಕಾಲೇಜು ಪ್ರಾಂಶುಪಾಲ ಡಾ| ಸತೀಶ್ಚಂದ್ರ ಎಸ್. ಸ್ವಾಗತಿಸಿ, ಸೂರ್ಯ ನಾರಾಯಣ ಭಟ್ ನಿರೂಪಿಸಿದರು. ಟಿ.ಎಸ್. ರವಿಶಂಕರ್ ವಂದಿಸಿದರು.
ಮಹತ್ವದ ಜವಾಬ್ದಾರಿ
ಇತಿಹಾಸ, ಪ್ರಾಚೀನತೆ ಪ್ರತಿನಿಧಿಸುವ ವಸ್ತು, ವಿಚಾರ ಗಳನ್ನು ವರ್ತಮಾನದಲ್ಲಿ ಪ್ರಚುರಪಡಿಸುವು ದರ ಹಿಂದೆ ಮೌಲಿಕ ಕಾರಣಗಳಿವೆ. ಸಂಗ್ರಹಿತ ವಸ್ತುಗಳ ಪ್ರದರ್ಶನ ಪ್ರಚಾರದ ಉದ್ದೇಶಕ್ಕಲ್ಲ. ಬದಲಾಗಿ ಪ್ರಾಚೀನ ಶ್ರೇಷ್ಠತೆಯನ್ನು ಹೊಸ ಪೀಳಿಗೆಗೆ ಪರಿಚಯಿಸುವ ಮಹತ್ವದ ಜವಾಬ್ದಾರಿ ಅಡಕವಾಗಿದೆ.
- ಡಾ| ಡಿ. ವೀರೇಂದ್ರ ಹೆಗ್ಗಡೆ, ಶ್ರೀಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ