Advertisement
ಪಿಟಿಐ ಸುದ್ದಿಸಂಸ್ಥೆಗೆ ಭಾನುವಾರ ನೀಡಿದ ಸಂದರ್ಶನದಲ್ಲಿ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಜಮ್ಮು-ಕಾಶ್ಮೀರದಲ್ಲಿ ಶಾಂತಿ ನೆಲೆಸಬೇಕೆಂದರೆ ಸೇನಾ ಕಾರ್ಯಾ ಚರಣೆಯ ಜೊತೆ ಜತೆಗೇ ಸರಕಾರದ ಇಚ್ಛಾಶಕ್ತಿಯೂ ಸಾಗಬೇಕು ಎಂದಿದ್ದಾರೆ. ತಾವು ಅಧಿಕಾರ ವಹಿಸಿಕೊಂಡಾಗಿನಿಂದ ಪರಿಸ್ಥಿತಿಯು ಸ್ವಲ್ಪಮಟ್ಟಿಗೆ ಸುಧಾರಿಸಿದೆ ಎಂದೂ ಅವರು ಹೇಳಿದ್ದಾರೆ. ಸರಕಾರವು ಈಗಾಗಲೇ ಸಂಧಾನ ಕಾರರೊಬ್ಬರನ್ನು ನೇಮಿಸಿದೆ. ಅವರು ಕಣಿವೆ ರಾಜ್ಯದ ಜನರ ಸಂಕಷ್ಟಗಳು, ಅಹವಾಲುಗಳನ್ನು ಆಲಿಸಲಿದ್ದಾರೆ. ನಂತರ ರಾಜಕೀಯ ಮಟ್ಟದಲ್ಲೇ ಅವುಗಳನ್ನು ಪರಿಹರಿಸಲಾಗುತ್ತದೆ. ಸೇನೆಯ ಬಳಕೆಯು ಕಾಶ್ಮೀರ ವಿವಾದ ಬಗೆಹರಿಸುವ ಒಂದು ಭಾಗವಷ್ಟೆ. ಹಿಂಸೆಗೆ ಪ್ರಚೋದಿಸುವಂಥ ಉಗ್ರರನ್ನು ಮೊದಲು ಸದೆಬಡಿಯಬೇಕು. ನಂತರ, ಯುವಕರು ಉಗ್ರವಾದದತ್ತ ಆಕರ್ಷಿತರಾಗದಂತೆ ಮಾಡಬೇಕು. ಸೇನೆಯು ಈಗಾಗಲೇ ಉಗ್ರ ಸಂಘಟನೆಗಳ ಮೇಲೆ ಒತ್ತಡ ತರುವಂಥ ಕೆಲಸ ಮಾಡುತ್ತಿದೆ ಎಂದೂ ಹೇಳಿದ್ದಾರೆ ಜ. ರಾವತ್.ಪಾಕ್ ಪ್ರತಿಕ್ರಿಯೆ: ಗಡಿ ದಾಟಿ ಪಾಕಿಸ್ಥಾನದ ಮೇಲೆ ದಾಳಿ ನಡೆಸಲು ಗೊತ್ತಿದೆ ಎಂಬ ಜ. ರಾವತ್ ಅವರ ಹೇಳಿಕೆಗೆ ರವಿವಾರ ಪಾಕಿಸ್ಥಾನ ಪ್ರತಿಕ್ರಿಯೆ ನೀಡಿದೆ. ಜ| ರಾವತ್ ಅವರು ಬೇಜವಾಬ್ದಾರಿಯುತ ಹೇಳಿಕೆ ನೀಡುತ್ತಿದ್ದಾರೆ. ಅವರು ಬಯಸಿದ್ದೇ ಆದಲ್ಲಿ, ನಮ್ಮ ಸಾಮರ್ಥ್ಯವನ್ನು ಪರೀಕ್ಷಿಸಲಿ. ಅವರಲ್ಲಿರುವ ಅನುಮಾನವನ್ನು ನಿವಾರಿಸಲು ನಮಗೂ ಗೊತ್ತು ಎಂದು ಪಾಕ್ ವಿದೇಶಾಂಗ ಸಚಿವ ಖ್ವಾಜಾ ಆಸಿಫ್ ಹೇಳಿದ್ದಾರೆ.
ಹೊಸ ಬೆಟಾಲಿಯನ್: ಇದೇ ವೇಳೆ, ದೇಶದ ಎರಡು ಪ್ರಮುಖ ಗಡಿ ಭದ್ರತಾ ಪಡೆಗಳಾದ ಬಿಎಸ್‌ಎಫ್ ಮತ್ತು ಐಟಿಬಿಪಿಗೆ 15 ಹೊಸ ಬೆಟಾಲಿಯನ್ ಅನ್ನು ಸೇರಿಸಲು ಕೇಂದ್ರ ಸರಕಾರ ಚಿಂತನೆ ನಡೆಸಿದೆ. ಚೀನ, ಪಾಕಿಸ್ಥಾನ ಮತ್ತು ಬಾಂಗ್ಲಾದ ಗಡಿಗಳಲ್ಲಿ ಭದ್ರತೆ ಹೆಚ್ಚಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗುವುದು ಎಂದು ಕೇಂದ್ರ ಗೃಹ ಇಲಾಖೆಯ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.