Advertisement

ಅತಿವೃಷ್ಟಿ ಅಪಾಯ ಎದುರಿಸಲು ಸಜ್ಜಾಗಿ

02:09 PM May 17, 2022 | Niyatha Bhat |

ಶಿವಮೊಗ್ಗ: ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಸಂಭವಿಸಬಹುದಾದ ಅಪಾಯಗಳನ್ನು ಎದುರಿಸಲು ಎಲ್ಲಾ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಡಾ|ಸೆಲ್ವಮಣಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Advertisement

ಸೋಮವಾರ ಡಿಸಿ ಕಚೇರಿ ಸಭಾಂಗಣದಲ್ಲಿ ಮುಂಗಾರು ಹಂಗಾಮಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳ ಸಭೆ ನಡೆಸಿ, ಮುಂಗಾರು ಎದುರಿಸಲು ಕೈಗೊಳ್ಳುವ ಕ್ರಮಗಳ ಕುರಿತು ಕಾರ್ಯ ಯೋಜನೆ ಸಿದ್ಧಪಡಿಸಿ ವಾರದ ಒಳಗಾಗಿ ಸಲ್ಲಿಸುವಂತೆ ಅವರು ಸೂಚಿಸಿದರು.

ನಗರ ಪ್ರದೇಶದಲ್ಲಿ ಅತಿವೃಷ್ಟಿಯಿಂದ ಹಾನಿಗೀಡಾಗಬಹುದಾದ ಸೂಕ್ಷ್ಮ ಪ್ರದೇಶಗಳನ್ನು ಮೊದಲೇ ಗುರುತಿಸಿ ಸೂಕ್ತ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ಅಗತ್ಯ ಬಿದ್ದರೆ ಕಾಳಜಿ ಕೇಂದ್ರ ತೆರೆಯಬಹುದಾದ ಸ್ಥಳಗಳನ್ನು ಗುರುತಿಸಬೇಕು. ಕಾಳಜಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳ ಲಭ್ಯತೆಯನ್ನು ಖಾತ್ರಿಪಡಿಸಬೇಕು. ಅತಿವೃಷ್ಟಿ ಸಂದರ್ಭದಲ್ಲಿ ಸಾರ್ವಜನಿಕರು ನೆರವಿಗಾಗಿ ಸಂಪರ್ಕ ಮಾಡಲು 24×7 ಸಹಾಯಕೇಂದ್ರಗಳನ್ನು ತೆರೆಯಲು ಸಿದ್ಧತೆ ಮಾಡಬೇಕು. ಪರಿಹಾರ ಕಾರ್ಯಗಳನ್ನು ನಡೆಸಲು ಕಾರ್ಯಪಡೆ ರಚಿಸಿ ಅವರಿಗೆ ಸೂಕ್ತ ತರಬೇತಿ ನೀಡಬೇಕು. ಕಾರ್ಯಪಡೆಯಲ್ಲಿ ಪೊಲೀಸ್‌, ಕಂದಾಯ, ಆರೋಗ್ಯ ಸೇರಿದಂತೆ ಎಲ್ಲಾ ಪ್ರಮುಖ ಇಲಾಖೆಗಳ ಪ್ರತಿನಿಧಿಗಳು ಇರಬೇಕು ಎಂದರು.

ಜಲಾಶಯಗಳ ನೀರಿನ ಮಟ್ಟದ ಮಾಹಿತಿಯನ್ನು ನಿರಂತರವಾಗಿ ಅಧಿಕಾರಿಗಳ ನಡುವೆ ಹಂಚಿಕೊಳ್ಳಬೇಕು. ಜಲಾಶಯದಿಂದ ನೀರು ಬಿಡುಗಡೆ ಮಾಡುವ ಸಾಕಷ್ಟು ಪೂರ್ವದಲ್ಲಿ ಮಾಹಿತಿ ಒದಗಿಸಬೇಕು. ನೀರು ನಿಂತು ಸಾಂಕ್ರಾಮಿಕ ರೋಗಗಳು ಹರಡದಂತೆ ಮುನ್ನೆಚ್ಚರಿಕೆ ವಹಿಸಬೇಕು. ಆರೋಗ್ಯ ಇಲಾಖೆ ಸಿಬ್ಬಂದಿ ಸದಾ ಸನ್ನದ್ಧವಾಗಿರಬೇಕು. ಎಲ್ಲಾ ಆಸ್ಪತ್ರೆಗಳಲ್ಲಿ ಹಾವು ಕಡಿತದ ಔಷಧ ಲಭ್ಯವಿರುವಂತೆ ನೋಡಿಕೊಳ್ಳಬೇಕು. ಗಾಳಿ ಮಳೆಯಿಂದ ಮರ, ವಿದ್ಯುತ್‌ ಕಂಬಗಳು ಬಿದ್ದ ತಕ್ಷಣ ಅವುಗಳನ್ನು ತೆರವುಗೊಳಿಸಲು ಎಲ್ಲಾ ತಾಲೂಕುಗಳಲ್ಲಿ ತಂಡಗಳನ್ನು ರಚಿಸಬೇಕು. ಜೆಸಿಬಿ ಸೇರಿದಂತೆ ಅಗತ್ಯ ಎಲ್ಲ ಪರಿಕರಗಳನ್ನು ಸಿದ್ಧವಿಡಬೇಕು. ಮಳೆಯಿಂದಾಗಿ ಗುಡ್ಡ ಕುಸಿಯಬಹುದಾದ ಸ್ಥಳಗಳು, ಘಾಟಿ ಪ್ರದೇಶದಲ್ಲಿ ರಸ್ತೆ ಕುಸಿಯಬಹುದಾದ ಸ್ಥಳಗಳನ್ನು ಈಗಲೇ ಗುರುತಿಸಬೇಕು. ಅಂತಹ ಸಂದರ್ಭದಲ್ಲಿ ತಕ್ಷಣ ಸಂಚಾರ ವ್ಯವಸ್ಥೆ ಪುನರಾರಂಭಿಸಲು ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

ವಿದ್ಯುತ್‌ ಕಂಬಗಳು, ಟ್ರಾನ್ಸ್‌ಫಾರ್ಮರ್‌ ಗಳು ಸಾಕಷ್ಟು ಪ್ರಮಾಣದಲ್ಲಿ ಲಭ್ಯವಿದ್ದು, ಆದಷ್ಟು ಬೇಗ ವಿದ್ಯುತ್‌ ಸಂಪರ್ಕ ಪುನರ್‌ ಒದಗಿಸಲು ತಂಡಗಳನ್ನು ರಚಿಸಬೇಕು. ಪ್ರಸ್ತುತ 3 ಬೋಟ್‌ಗಳು ಜಿಲ್ಲಾಡಳಿತದಲ್ಲಿ ಲಭ್ಯವಿದ್ದು, ಇನ್ನಷ್ಟು ಅಗತ್ಯ ಬೋಟ್‌ಗಳನ್ನು ಪಡೆಯಲು ಕ್ರಮ ಕೈಗೊಳ್ಳಲಾಗುವುದು. ನಗರ ಪ್ರದೇಶದಲ್ಲಿ ಕಾಲುವೆಗಳ ಹೂಳೆತ್ತುವ ಕಾರ್ಯ ಮಳೆಗಾಲಕ್ಕಿಂತ ಮೊದಲೇ ಪೂರ್ಣಗೊಳಿಸಬೇಕು. ಜಾನುವಾರು, ಮಾನವ ಪ್ರಾಣ ಹಾನಿ ಸಂಭವಿಸಿದ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ 24ಗಂಟೆ ಒಳಗಾಗಿ ಪರಿಹಾರದ ಮೊತ್ತ ನೀಡಬೇಕು ಎಂದರು.

Advertisement

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮೀ ಪ್ರಸಾದ್‌, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿ ಕಾರಿ ಎಂ.ಎಲ್. ವೈಶಾಲಿ, ಮಹಾನಗರ ಪಾಲಿಕೆ ಆಯುಕ್ತ ಮಾಯಣ್ಣ ಗೌಡ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next