Advertisement

ತಾಳ್ಮೆ ಇರಲಿ…ಸಿನಿಪಥದಲ್ಲಿ ಹೊಸಬರು

09:37 PM Oct 03, 2019 | Team Udayavani |

ಮನುಷ್ಯ ಅಂದಮೇಲೆ ಆಸೆ, ಆಕಾಂಕ್ಷೆ ಮತ್ತು ಕನಸು ಸಹಜ. ಇವೆಲ್ಲವನ್ನು ಪಡೆಯಬೇಕಾದರೆ, ಬದುಕಲ್ಲಿ ತಾಳ್ಮೆ, ನಂಬಿಕೆ ಮುಖ್ಯ. ಈ ಅಂಶ ತುಂಬಿರುವ ಕಥೆ ಹೆಣೆದು, ಹೀಗೊಂದು ಹೊಸಬರ ತಂಡ “ರಾಜಪಥ’ ಹೆಸರಿನ ಚಿತ್ರ ಮಾಡಿದೆ. ಸೆನ್ಸಾರ್‌ ಕೂಡ “ಯು’ ಪ್ರಮಾಣ ಪತ್ರ ನೀಡಿದೆ. ಅಷ್ಟೇ ಅಲ್ಲ, ಮಲಯಾಳಂ ಮಂದಿ ಡಬ್ಬಿಂಗ್‌ ಹಕ್ಕು ಖರೀದಿಸಿದ್ದಾರೆ ಕೂಡ. ಇಂತಿಪ್ಪ, “ರಾಜಪಥ’ ಚಿತ್ರತಂಡದ ಖುಷಿಗೆ ಪಾರವೇ ಇಲ್ಲ.

Advertisement

ಈ ಚಿತ್ರವನ್ನು ಸಿದ್ದು ಮೂಗೂರು ನಿರ್ದೇಶನ ಮಾಡಿದ್ದಾರೆ. ಇವರಿಗಿದು ಮೊದಲ ಚಿತ್ರ. ಈ ಹಿಂದೆ ಕೆ.ಜಯರಾಂ, ರಾಮದಾಸ ನಾಯ್ಡು ಅವರ ಜೊತೆ ಅನುಭವ ಪಡೆದ ಸಿದ್ದು, ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಲೈಫ‌ಲ್ಲಿ ಕೆಲವನ್ನು ಈಡೇರಿಸಿಕೊಳ್ಳಬೇಕಾದರೆ, ತಾಳ್ಮೆ ಬೇಕು, ಶ್ರದ್ಧೆ ಇರಬೇಕು, ಶ್ರಮವೂ ಅಗತ್ಯ. ಇವೆಲ್ಲದರ ಸಾರವೇ “ರಾಜಪಥ’ ಎಂಬುದು ಚಿತ್ರತಂಡದ ಮಾತು. ಚಿತ್ರದಲ್ಲಿ ಹಲವು ಪಾತ್ರಗಳು ಕಾಣಿಸಿಕೊಳ್ಳಲಿದ್ದು, ಆರು ಪಾತ್ರಗಳು ಸಿನಿಮಾದ ಜೀವಾಳ. ಬೆಂಗಳೂರು, ನೆಲಮಂಗಲ ಸೇರಿದಂತೆ ಇತರೆ ಸ್ಥಳಗಳಲ್ಲಿ ಸುಮಾರು ಇಪ್ಪತ್ತೆರಡು ದಿನಗಳ ಕಾಲ ಚಿತ್ರೀಕರಣ ಮಾಡಲಾಗಿದೆ.

ಸಂತೋಷ್‌.ಹೆಚ್‌.ರಾಯ್ಕರ್‌ ಚಿತ್ರದ ಹೀರೋ. ಈ ಹಿಂದೆ ಕಿರುತೆರೆಯಲ್ಲಿ ನಟನೆ ಮಾಡಿ, ಸಹಾಯಕ ನಿರ್ದೇಶನ ವಿಭಾಗದಲ್ಲೂ ತಕ್ಕಮಟ್ಟಿಗಿನ ಅನುಭವ ಪಡೆದು, ಈಗ ನಾಯಕನಾಗಿದ್ದಾರೆ. ನಿರ್ಮಾಣದ ಜವಾಬ್ದಾರಿಯೂ ಇವರದೇ. ನಿತ್ಯಾ ಅವರು ಸಂತೋಷ್‌ಗೆ ನಾಯಕಿಯಾಗಿ ನಟಿಸಿದ್ದಾರೆ. ಸಿಂಧು ಎರಡನೇ ನಾಯಕಿಯಾಗಿ ನಟಿಸುತ್ತಿದ್ದಾರೆ. ಚಿತ್ರದಲ್ಲಿ ಉಮೇಶ್‌, ಸುಧೀರ್‌, ಆನಂದ್‌.ಡಿ.ಕಳಸ, ಎಸ್‌.ಎ. ಮುತ್ತಗಿ, ಲಕ್ಷಣ್‌ ಪೂಜಾರಿ, ರಮಾಕಾಂತ್‌ ಆರ್ಯನ್‌, ಬೇಬಿ ಪರಿಣಿತ, ಬೇಬಿ ಐಶ್ವರ್ಯ ಇತರರು ನಟಿಸಿದ್ದಾರೆ.

ಚಂದ್ರು ಓಬಯ್ಯ ಸಂಗೀತ ನೀಡಿದ್ದಾರೆ. ಜೊತೆಗೆ ಐದು ಹಾಡುಗಳಿಗೆ ಸಾಹಿತ್ಯ ನೀಡಿದ್ದಲ್ಲದೆ, ಮೂರು ಗೀತೆಗಳಿಗೆ ಧ್ವನಿಯಾಗಿದ್ದಾರೆ. ರಘು ಅವರ ಛಾಯಾಗ್ರಹಣವಿದೆ. ಸಂಜೀವ್‌ ರೆಡ್ಡಿ ಸಂಕಲನವಿದೆ. ಜೇಮ್ಸ್‌ ಪರಿಕಟ್ಟಿಲ್‌ ಹಿನ್ನೆಲೆ ಸಂಗೀತ ನೀಡಿದ್ದಾರೆ. ಸದ್ಯಕ್ಕೆ ಚಿತ್ರದ ಹಾಡುಗಳು ಹೊರಬಂದಿವೆ. ಬ್ರಹ್ಮಾನಂದ ಗುರೂಜಿ ಲಿರಿಕಲ್‌ ವಿಡಿಯೋ ಬಿಡುಗಡೆ ಮಾಡಿ, ತಂಡಕ್ಕೆ ಶುಭಹಾರೈಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next