ನಗು ಎಲ್ಲರ ಬದುಕಿಗೂ ಆಭರಣವೇ ಸರಿ. ಎದುರಾಗುವ ಅದೆಷ್ಟೋ ಕಷ್ಟಕರ ಸಂದರ್ಭಗಳನ್ನು ಸಮಾಧಾನಿಸುವ, ಬದಲಾಯಿಸುವ ಶಕ್ತಿಯುತ, ಯಾವುದೇ ಹಾನಿಯನ್ನು ಮಾಡದ ಆಯುಧವೂ ಹೌದು. ಕೆಲವೊಮ್ಮೆ ಸಂಬಂಧಗಳನ್ನು ಬೆಸೆಯುವ, ಇನ್ನು ಕೆಲವೊಮ್ಮೆ ಬಾಂಧವ್ಯಗಳನ್ನು ಗಟ್ಟಿಗೊಳಿಸುವ ಅಮೂಲ್ಯ ಸಾಧನ ಇದು. ಈ ಒಡವೆಯನ್ನು ತೊಟ್ಟುಕೊಂಡವರಿಗೆ ಜೀವನದ ಅದೆಷ್ಟೋ ಕ್ಲಿಷ್ಟಕರ ಕತ್ತಲ ದಾರಿ ಸುಲಭದಲ್ಲಿ ಬೆಳಕಿನತ್ತ ತೆರೆದುಕೊಳ್ಳುತ್ತದೆ. ನಗುವಿಗೆ ಅಂತಹ ಶಕ್ತಿ ಇದೆ. ಮನಸ್ಸಿನ ಆತ್ಮಸ್ಥೈರ್ಯ ಎಂಬ ಬ್ಯಾಟರಿ ಒಂದಿದ್ದರೆ ಸಾಕು, ನಗು ಎಂಬ ಬೆಳಕು ಸದಾ ಬೆಳಗುತ್ತದೆ.
ಆತ್ಮವಿಶ್ವಾಸದ ವ್ಯಕ್ತಿಯೊಬ್ಬನನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಇತ್ತೀಚೆಗೆ ಬಂದ ಸಿನೆಮಾವೊಂದು ಪೂರಕವಾಗಿದೆ. ಆಕೆ ಕನಸು ಕಂಗಳ ಹುಡುಗಿ. ತಾನೊಬ್ಬ ಪೈಲಟ್ ಆಗಬೇಕು, ಆಕಾಶದಲ್ಲಿ ಹಾರಾಡಬೇಕು ಎನ್ನುವ ಕನಸು ಹೊತ್ತವಳು. ಪ್ರತಿನಿತ್ಯವೂ ಶ್ರಮ, ಸತತ ಅಭ್ಯಾಸಗಳನ್ನು ನಡೆಸುತ್ತಿದ್ದಾಕೆ. ಉತ್ಸಾಹಕ್ಕೆ ಸಮಾನಾರ್ಥಕ ಪದವೇ ಆ ಹುಡುಗಿ. ಹೀಗೆ ಪ್ರತಿನಿತ್ಯ ತನ್ನ ಕನಸನ್ನು ಸಾಕಾರ ರೂಪಕ್ಕೆ ತರಲು ಪ್ರಯತ್ನಿಸುವ ಆಕೆಗೆ ಆ ಅವಕಾಶವೂ ಒದಗಿ ಬರುತ್ತದೆ. ಇನ್ನೇನು ತನ್ನ ಸ್ವಪ್ನ ಸಾಧನೆಯಾಗುವ ದಿನ ಹತ್ತಿರ ಬಂತು ಎನ್ನುವಾಗ ನಗುವಿನ ಚಿಲುಮೆಯ ಮುಖ ಆ್ಯಸಿಡ್ ದಾಳಿಗೆ ತುತ್ತಾಗುತ್ತದೆ. ಅವಳ ಕನಸು ಕಮರುತ್ತದೆ. ಇನ್ನೇನು ತನ್ನ ಬದುಕೇ ಮುಗಿಯಿತಲ್ಲಾ ಎನ್ನುವ ನೋವಿನಲ್ಲಿ ಕೆಲಕಾಲ ಕೊರಗಿದ ಆಕೆಗೆ ಮತ್ತೆ ತಾನು ಇಚ್ಛೆಪಟ್ಟಂತೆಯೇ ಬದುಕು ಸಾಗಿಸಬೇಕು ಎನ್ನುವ ಮನೋಸ್ಥೈರ್ಯ ಹುಟ್ಟುತ್ತದೆ. ಪ್ರೋತ್ಸಾಹ ನೀಡಿ ನೀರೆರೆಯುವುದಕ್ಕೆ ಹೆತ್ತವರು ಮತ್ತು ಗೆಳೆಯರೂ ಜತೆಯಾಗುತ್ತಾರೆ. ಆಕೆ ತನ್ನ ಛಲ, ಹಠ, ಬುದ್ಧಿವಂತಿಕೆ, ಹೆಚ್ಚಾಗಿ ಆತ್ಮವಿಶ್ವಾಸದ ಮೂಲಕ ಪ್ರಯತ್ನಿಸಿ ಪೈಲಟ್ ಆಗುತ್ತಾಳೆ.
ಇದು ಚಲನಚಿತ್ರಕ್ಕೆ ಸಂಬಂಧಿಸಿದ ಕತೆಯೇ ಇರಬಹುದು. ಆದರೆ ಇಂತಹ ಕ್ರೂರ ಸಂದರ್ಭಗಳು ಎಲ್ಲರ ಜೀವನದಲ್ಲಿಯೂ ಒಂದಿಲ್ಲೊಂದು ರೀತಿಯಲ್ಲಿ ತನ್ನ ದರ್ಪ ಮೆರೆಯುತ್ತದೆ. ಕೆಲವು ಘಟನೆಗಳು ಬದುಕನ್ನೇ ಮೂರಾಬಟ್ಟೆ ಮಾಡುವಷ್ಟರ ಮಟ್ಟಿಗೆ ಹೈರಾಣಾಗಿಸಿಬಿಡುತ್ತವೆ. ಹೀಗಾದಾಗೆಲ್ಲಾ ಅಯ್ಯೋ ಎಲ್ಲಾ ಮುಗಿಯಿತಲ್ಲಾ ಎನ್ನುವ ಭಾವನೆ ಬೇಡ. ಬದಲಾಗಿ ಮತ್ತೆ ನಮ್ಮ ಸಂತೋಷ, ನಗುವನ್ನು ಸೃಷ್ಟಿಸುವ ಸಂದರ್ಭಗಳನ್ನು ಸೃಷ್ಟಿ ಮಾಡಿಕೊಳ್ಳುವತ್ತ ಗಮನ ಹರಿಸಬೇಕು.
ಯಾರಿದ್ದಾರೋ ಇಲ್ಲವೋ ಒಟ್ಟಿನಲ್ಲಿ ನಮ್ಮ ಬದುಕು ನಮ್ಮ ಕೈಯೊಳಗಿರಬೆಕು ಎನ್ನುವ ಒಂದೇ ಒಂದು ಅಚಲ ನಿರ್ಧಾರ ಸಾಕು ನಮ್ಮ ಬದುಕು ಬದಲಾಗುವುದಕ್ಕೆ. ಎಲ್ಲಾ ಸಂದರ್ಭಗಳನ್ನೂ ಎದುರಿಸಿ ಮತ್ತೆ ಗಟ್ಟಿಯಾಗಿ ಎದ್ದು ನಿಲ್ಲುವುದಕ್ಕೆ. ಮತ್ತೆ ಗೆಲುವಿನ ಜತೆಗಿನ ಮುಗುಳ್ನಗುವಿನ ಜತೆಗೆ ಎಲ್ಲರಿಗೂ ಮಾದರಿಗಳಾಗುವುದಕ್ಕೆ. ಏಕೆಂದರೆ ಕಷ್ಟ ಕಷ್ಟವೇ ಅಲ್ಲ ಆತ್ಮವಿಶ್ವಾಸದ ನಗು ನಮ್ಮೊಂದಿಗಿದ್ದರೆ.
- ಭುವನ ಬಾಬು,ಪುತ್ತೂರು