ಬ್ಯಾಡಗಿ: ಪ್ರಸ್ತುತ ದಿನಗಳಲ್ಲಿ ರೈತರು ಎದುರಿಸುತ್ತಿರುವ ಸಂಕಷ್ಟಗಳನ್ನು ನಾನೂ ಅನುಭವಿಸಿ ಬಂದಿದ್ದೇನೆ. ಹೀಗಾಗಿ ಶಾಸಕನಾಗಿ ರೈತರ ನೆರವಿಗೆ ಶಕ್ತಿಮೀರಿ ಪ್ರಯತ್ನಿಸುವ ಮೂಲಕ ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಕೆಲಸ ನಿರ್ವಹಿಸಲು ಸದಾ ಬದ್ಧ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಭರವಸೆ ನೀಡಿದರು.
ಪಟ್ಟಣದ ಶಾಸಕರ ಭವನದಲ್ಲಿ 2018 ಸೆ. 1ರಂದು ಸುರಿದ ಭಾರಿ ಗಾಳಿ ಮಳೆಗೆ ತಾಲೂಕಿನ ಕದರಮಂಡಲಗಿ ಗ್ರಾಮದ ಮಲ್ಲಪ್ಪ ಮಾಯಪ್ಪ ಕುಮ್ಮೂರ ಅವರಿಗೆ ಸೇರಿದ ರೇಷ್ಮೆ ಹುಳು ಸಾಕಾಣಿಕೆ ಮನೆ ಧ್ವಂಸಗೊಂಡಿದ್ದು ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ಬಿಡುಗಡೆಗೊಂಡ 2 ಲಕ್ಷ ರೂ. ಚೆಕ್ ವಿತರಿಸಿ ಅವರು ಮಾತನಾಡಿದರು.
ಪ್ರತಿವರ್ಷವೂ ಅತೀವೃಷ್ಟಿ, ಅನಾವೃಷ್ಟಿ ಎದುರಿಸುತ್ತಿದ್ದೇವೆ. ಹೀಗಾಗಿ ಪ್ರಕೃತಿಯೂ ರೈತನಿಗೆ ಸಹಕಾರ ನೀಡುತ್ತಿಲ್ಲ. ಅಷ್ಟೇ ಅಲ್ಲದೆ ಭವಿಷ್ಯದ ದಿನಗಳಲ್ಲೂ ಕೈಜೋಡಿಸುವ ಲಕ್ಷಣಗಳೂ ಕಾಣುತ್ತಿಲ್ಲ. ಹೀಗಾಗಿ ಪ್ರತಿನಿತ್ಯ, ಪ್ರತಿಕ್ಷಣವೂ ರೈತ ಬದುಕಿಗಾಗಿ ಹೋರಾಟ ಮಾಡುವಂತಾಗಿದೆ. ಶಾಸಕನಾಗಿ ಕ್ಷೇತ್ರದ ರೈತರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದರು.
ಪ್ರಕೃತಿ ವಿಕೋಪಕ್ಕೆ ಕೃಷಿ ಸರಣಿ ವೈಫಲ್ಯ ಕಾಣುತ್ತಿದೆ. ಎಂತಹುದೇ ಸಂಕಷ್ಟ ಎದುರಾದರೂ ಎದೆಗುಂದಬಾರದು. ಸಹಿಸುವ ಶಕ್ತಿ ಪಡೆದುಕೊಳ್ಳಬೇಕು. ಸಹನೆ ಕಳೆದುಕೊಂಡು ಆತ್ಮಹತ್ಯೆಯಂತಹ ಸ್ವಯಂಕೃತ ಅಪರಾಧಗಳಿಗೆ ಇಳಿಯಬಾರದು. ಎಲ್ಲ ಕಷ್ಟಗಳನ್ನು ಸಹಿಸಿಕೊಳ್ಳುವ ಶಕ್ತಿ ರೈತನಿಗೆ ಭಗವಂತನೇ ಕರುಣಿಸಿದ್ದಾನೆ. ಈ ಹಿನ್ನೆಲೆಯಲ್ಲಿ ರೈತರು ಯಾವುದೇ ಕಾರಣಕ್ಕೂ ದುಡುಕಿನ ನಿರ್ಧಾರ ತೆಗೆದುಕೊಳ್ಳದಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಗುರುಬಸವರಾಜ್, ಶಂಕ್ರಣ್ಣ ಮಾತನನವರ, ನ್ಯಾಯವಾದಿಗಳಾದ ಎಸ್.ಎಚ್.ಕುಡಪಲಿ, ಶಿವನಗೌಡ ಬಸನಗೌಡ್ರ, ವಿಷ್ಣುಕಾಂತ್ ಬೆನ್ನೂರ, ಬಳಿಗಾರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.