ಬೀದರ: ಜೀವನದ ಅಂತಿಮ ಸತ್ಯ ಅರಿಯಬೇಕಾದರೆ ಭವಬಂಧನದಿಂದ ಮುಕ್ತರಾಗಿ ನಿರ್ಲಿಪ್ತತತೆ ದಬೇಕಾಗುತ್ತದೆ. ಪರಮ ಸತ್ಯ ಅರಿವುದೇ ಬಸವಾದಿ ಶರಣರ- ಸಂತರ ಜೀವನದ ಧ್ಯೇಯವಾಗಿತ್ತು ಎಂದು ಬಸವಕಲ್ಯಾಣ ಅನುಭವ ಮಂಟಪದ ಶ್ರೀ ಸಂಗಮೇಶ್ವರ ದೇವರು ಹೇಳಿದರು.
ನಗರದ ಡಾ| ಚನ್ನಬಸವ ಪಟ್ಟದ್ದೇವರ ಪ್ರಸಾದ ನಿಲಯದಲ್ಲಿ ನಡೆದ 84ನೇ ತಿಂಗಳ ಅನುಭವ ಮಂಟಪ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ದುರಾಸೆಯ ಅಮಲಿನಲ್ಲಿದ್ದು ಬದುಕಿನ ನಿಜತ್ವ ಅರಿಯಲಾರದೆ ನರಕಕ್ಕೆ ಭಾಜನನಾಗುತ್ತಿದ್ದಾನೆ. ಅದ್ಭುತ ಆಸೆಯಿಂದ ಜೀವನದ ಪರಮ ಸತ್ಯ ಅರಿಯಲು ಸಾಧ್ಯವಿದೆ ಎಂದು ವಿಷಯ ಪ್ರತಿಪಾದಿಸಿದರು.
ಸನ್ಮಾನ ಸ್ವೀಕರಿಸಿದ ಸಂಗೀತ ಮತ್ತು ನೃತ್ಯ ಅಕಾಡೆಮಿ ಸದಸ್ಯ ಪ್ರೊ| ಎಸ್.ವಿ. ಕಲ್ಮಠ ಮಾತನಾಡಿ, ಲಿಂ| ಚನ್ನಬಸವ ಪಟ್ಟದ್ದೇವರ ಮತ್ತು ಪಂ| ಪುಟ್ಟರಾಜ ಗವಾಯಿಗಳ ಚಾರಗಳು ಅನ್ಯೋನ್ಯವಾಗಿವೆ. ದೀನ-ದಲಿತರ, ಬಡ ಅನಾಥ ಮಕ್ಕಳ ಸೇವೆ ಮಾಡುವುದು ಪೂಜ್ಯರ ಉದ್ದೇಶವಾಗಿತ್ತು. ಶಿವನ ಸ್ವರೂಪರಾದ ಹಾನಗಲ್ ಕುಮಾರ ಸ್ವಾಮಿಗಳ ವಿಚಾರಗಳಿಗೆ ಪಟ್ಟದ್ದೇವರು ಬದ್ಧರಾಗಿದ್ದು, ಗುರು-ಶಿಷ್ಯರ ಸಂಬಂಧ ಅವಿನಾಭಾವ ಸಂಬಂಧವಾಗಿದೆ ಎಂದರು. ಗುರು ಪರಂಪರೆಯಿಂದ ಬಂದಿರುವ ಆಶ್ರಮಗಳು ಗುರುವಿನ ಬಾಂಧವ್ಯ ಹೊಂದಿವೆ. ರಸ್ತೆಯಲ್ಲಿ ಭಿಕ್ಷೆ ಬೇಡುವ ಅನಾಥ ಮಕ್ಕಳಿಗೆ ವೀರೇಶ ಪುಣ್ಯಾಶ್ರಮ ಆಶ್ರಯವಿದ್ದಂತೆ ಹಾಗೂ ಪಟ್ಟದ್ದೇವರು ಬಡ ದೀನ ದಲಿತರ ಅನಾಥ ಮಕ್ಕಳಿಗೆ ತ್ರಿವಿಧ ದಾಸೋಹ ಮಾಡುತ್ತಿದ್ದರು. ಅದೇ ರೀತಿಯಾಗಿ ಪುಟ್ಟರಾಜ ಗವಾಯಿಗಳ ಸಂಗೀತ ಸೇವೆ ಅವಿಸ್ಮರಣಿಯವಾಗಿದೆ ಎಂದು ಹೇಳಿದರು.
ಡಾ| ಬಸವಲಿಂಗ ಪಟ್ಟದ್ದೇವರು ಮಾತನಾಡಿ, ಬಸವಾದಿ ಶರಣರ- ಸಂತರ ಸಂಗದ ಅನುಭಾವದಿಂದ ಜೀವನದ ಒತ್ತಡದಿಂದ ಮುಕ್ತರಾಗಬಹುದು. ಒಂದು ಮರ ಭದ್ರವಾಗಿರಬೇಕಾದರೆ ಮರದ ಬೇರು ಗಟ್ಟಿಯಾಗಿರಬೇಕು. ಹೃದಯದಲ್ಲಿ ಕಸ ಬೀಳದಂತೆ ದೇವರ ಒಲುಮೆಯಾಗಬೇಕಾದರೆ ಅಂತರಂಗದ ಬಟ್ಟಲು ಸ್ವತ್ಛವಾಗಿರಬೇಕು ಎಂದು ನುಡಿದರು. ಪ್ರೊ| ಎಸ್.ಬಿ. ಬಿರಾದಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಗೋದಾವರಿ ಬಿರಾದಾರ, ಮಹಾಲಿಂಗ ಸ್ವಾಮಿಗಳು ಮತ್ತು ಸಂಗಪ್ಪಾ ಹಿಪ್ಪಳಗಾಂವೆ ವೇದಿಕೆಯಲ್ಲಿದ್ದರು. ಸಿ.ಎನ್. ರಘುನಾಥ ಸ್ವಾಗತಿಸಿದರು ಪ್ರೊ| ಉಮಾಕಾಂತ ಮೀಸೆ ನಿರೂಪಿಸಿದರು. ಯೋಗೇಂದ್ರ ಯದ್ಲಾಪುರೆ ವಂದಿಸಿದರು. ಶ್ರೀಕಾಂತ ಬಿರಾದಾರ, ಸಂಗ್ರಾಮಪ್ಪಾ ಬಿರಾದಾರ, ಮಲ್ಲಿಕಾರ್ಜುನ ಹುಡಗೆ, ನೀಲಕಂಠ ಬಿರಾದಾರ ಹಾಗೂ ಶ್ರೀಕಾಂತ ಸ್ವಾಮಿ ಇದ್ದರು.