Advertisement

ಸರ್ಕಾರಿ ಕಚೇರಿಗಳಿಗೆ ಬರುವ ಜನರ ಜೊತೆ ಸೌಜನ್ಯದಿಂದ ವರ್ತಿಸಿ: ಸಿಎಂ

09:25 PM Jun 05, 2023 | Team Udayavani |

ದಾವಣಗೆರೆ: ರಾಜ್ಯದ ಎಲ್ಲ ಜಿಲ್ಲೆಗಳ ಲ್ಲೂ ಜನಸ್ನೇಹಿ ಆಡಳಿತ ನೀಡಬೇಕು ಹಾಗೂ ಆಡಳಿತ ಅತ್ಯಂತ ಪಾರದರ್ಶಕವಾಗಿರಬೇಕು. ಜನರ ಕಷ್ಟಗಳಿಗೆ ಸ್ಪಂದಿಸದ ಯಾವುದೇ ಅಧಿಕಾರಿಯೇ ಆಗಿರಲಿ, ಮುಲಾಜಿಲ್ಲದೆ ನಿರ್ದಾಕ್ಷಿಣ್ಯವಾಗಿ ಸೂಕ್ತ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಕೆ ನೀಡಿದರು.

Advertisement

ನಗರದಲ್ಲಿ ಸೋಮವಾರ ನಡೆದ ಅಧಿಕಾರಿಗಳ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರ್ಕಾರಿ ಕಚೇರಿಗಳಿಗೆ ಬರುವ ಜನರ ಜೊತೆ ಸೌಜನ್ಯ ಮತ್ತು ಗೌರವಯುತವಾಗಿ ನಡೆದುಕೊಳ್ಳಬೇಕು. ಕಷ್ಟ ಆಲಿಸಬೇಕು. ವಿಳಂಬ ಎನ್ನುವುದು ಭ್ರಷ್ಟಾಚಾರಕ್ಕೆ ಎಡೆ ಮಾಡಿಕೊಡುತ್ತದೆ. ಹಾಗಾಗಿ ಯಾವುದೇ ಕಾರಣಕ್ಕೂ ವಿಳಂಬವಾಗದಂತೆ ಸಮಸ್ಯೆಗಳಿಗೆ ಪರಿಹಾರ ನೀಡಬೇಕು ಎಂದು ಸೂಚಿಸಿದರು.

ಯಾವುದೇ ಹಂತದ ಅಧಿಕಾರಿಗಳೇ ಆಗಿರಲಿ ಜನರಿಗೆ ಸ್ಪಂದಿಸಬೇಕು. ಜಿಲ್ಲಾ ಮಂತ್ರಿಗಳು ಹೇಳಿದ್ದನ್ನು ಕೇಳಿ, ಸೂಕ್ತ ಪರಿಹಾರ ನೀಡಬೇಕು. ಯಾರು ಜನರ ಆಶೋತ್ತರಗಳಿಗೆ ಸ್ಪಂದಿಸುವುದಿಲ್ಲವೋ ಅಂತಹ ಅಧಿಕಾರಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನರೇ ಮಾಲಿಕರು. ಮತ ಎಂಬ ಹಕ್ಕು ಚಲಾಯಿಸಿ ನಮ್ಮನ್ನು ಅಧಿಕಾರಕ್ಕೆ ಕಳುಹಿಸಿಕೊಟ್ಟಿದ್ದಾರೆ. ಅವರ ಜೊತೆಗೆ ನಾವು ಜನಪ್ರತಿನಿಧಿಗಳು ಇರುತ್ತೇವೆ. ಜನರ ಸೇವೆ ಮಾಡುವುದಕ್ಕಾಗಿಯೇ ಅಧಿಕಾರಿಗಳನ್ನು ನೇಮಕ ಮಾಡಿಕೊಳ್ಳಲಾಗುತ್ತದೆ. ಅಧಿಕಾರಿಗಳು ಜನಪ್ರತಿನಿಧಿಗಳು ಹೇಳುವಂತದ್ದಕ್ಕೆ ಗೌರವ ನೀಡಬೇಕು. ಗೌರವ ನೀಡದೆ, ಸಮಸ್ಯೆಗೆ ಸ್ಪಂದಿಸದೆ ಅಸಡ್ಡೆ ಮಾಡುವ, ಉಡಾಫೆಯಾಗಿ ವರ್ತಿಸುವ ಅಧಿಕಾರಿಗಳಿಗೆ ಯಾವುದೇ ಕಾರಣಕ್ಕೂ ಜಾಗವೇ ಇಲ್ಲ ಎಂಬುದನ್ನು ಸ್ಪಷ್ಟವಾಗಿ ಹೇಳ ಬಯಸುತ್ತೇನೆ ಎಂದು ಎಚ್ಚರಿಸಿದರು.

ರಾಜ್ಯದ ಜನ ಭಾರಿ ಬದಲಾವಣೆ ಬಯಸಿರುವುದರಿಂದ ಅವರ ಆಶೋತ್ತರಳಿಗೆ ಸ್ಪಂದಿಸಬೇಕಾಗಿರುವುದು ನಮ್ಮ ಕರ್ತವ್ಯ. ಯಾರಾದರೂ ಅಧಿಕಾರಿಗಳು ಜನರ ಆಶೋತ್ತರಗಳಿಗೆ ಸ್ಪಂದಿಸದೆ ಹೋದಲ್ಲಿ ಯಾವುದೇ ಮುಲಾಜಿಲ್ಲದೇ ನಿರ್ದಾಕ್ಷಿಣ್ಯವಾಗಿ ಕ್ರಮ ತೆಗೆದುಕೊಳ್ಳಲಾಗುವುದು. ಯಾವುದೇ ಅಧಿಕಾರಿಗಳು ಅಂತದ್ದಕ್ಕೆ ಆಸ್ಪದ ಕೊಡದೆ ಕೆಲಸ ಮಾಡಬೇಕು ಎಂದು ತಿಳಿಸಿದರು.

Advertisement

ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ತಮ್ಮ ಅಧೀನದಲ್ಲಿ ಬರುವ ಆಸ್ಪತ್ರೆ, ಹಾಸ್ಟೆಲ್‌ ಇತರೆ ಕಚೇರಿಗಳಿಗೆ ಪದೆ ಪದೇ ಭೇಟಿ ನೀಡಿ ಅಲ್ಲಿನ ವ್ಯವಸ್ಥೆ ಬಗ್ಗೆ ಪರಿಶೀಲನೆ ನಡೆಸಬೇಕು. ಇದರಿಂದ ಉಳಿದ ಅಧಿಕಾರಿಗಳು ಜನರ ಆಶೋತ್ತರ, ಸಮಸ್ಯೆಗಳಿಗೆ ಸಕಾಲದಲ್ಲಿ ಸ್ಪಂದಿಸುತ್ತಾರೆ ಮತ್ತು ಭ್ರಷ್ಟಾಚಾರವೂ ಕಡಿಮೆ ಆಗುತ್ತದೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳು, ಜಿಪಂ ಸಿಇಒಗಳು ಕಚೇರಿಯಲ್ಲೇ ಕೂರದೇ ಪದೆಪದೇ ತಮ್ಮ ಅಧೀನದ ಕಚೇರಿಗಳಿಗೆ ಭೇಟಿ ನೀಡಿ, ಪರಿಶೀಲಿಸಬೇಕು ಮತ್ತು ಫೀಲ್ಡ್‌ಗೆ ಹೋಗುವುದನ್ನು ಕಲಿಯಬೇಕು. ಫೀಲ್ಡ್‌ಗೆ ಇಳಿಯಬೇಕು ಎಂದು ಕಟ್ಟುನಿಟ್ಟಿನ ಸೂಚನೆ ನೀಡಿದರು.

ತಹಶೀಲ್ದಾರ್‌ ಕಚೇರಿಗಳಲ್ಲಿ ಜನರನ್ನು ಪದೆಪದೇ ಅಲೆಸಲಾಗುತ್ತದೆ. ಭ್ರಷ್ಟಾಚಾರ ಹೆಚ್ಚಾಗಿದೆ ಎಂಬ ಮಾಹಿತಿ ಇದೆ. ಹಾಗಾಗಿ ಜಿಲ್ಲಾಧಿಕಾರಿಗಳು ತಹಶೀಲ್ದಾರ್‌ ಒಳಗೊಂಡಂತೆ ಇತರೆ ಅಧೀನ ಕಚೇರಿಗಳಿಗೆ ಭೇಟಿ ನೀಡ ಬೇಕು. ಮಾಧ್ಯಮಗಳಲ್ಲಿ ವರದಿಯಾಗುವಂತಹ ಸಮಸ್ಯೆಗಳು ಮತ್ತು ಜನರ ಅಹವಾಲುಗಳಿಗೂ ತ್ವರಿತವಾಗಿ ಸ್ಪಂದಿಸಬೇಕು ಎಂದು ಸೂಚಿಸಿದರು.

ಸರ್ಕಾರದ ಎಲ್ಲ ಹಂತದ ಅಧಿಕಾರಿಗಳು ಜನಪ್ರತಿನಿಧಿಗಳ ಜೊತೆ ಉತ್ತಮ ಸಂಬಂಧ ಇಟ್ಟುಕೊಳ್ಳಬೇಕು. ಜನಪ್ರತಿನಿಧಿಗಳು ಜನರ ಕಷ್ಟ ಸುಖ ಪ್ರಸ್ತಾಪ ಮಾಡುತ್ತಾರೆ. ಅದಕ್ಕೆ ಅಧಿಕಾರಿಗಳು ಸ್ಪಂದಿಸುವ ಕೆಲಸ ಮಾಡಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ಮುಖ್ಯಮಂತ್ರಿಗಳು ಸೂಚಿಸಿದರು.

ಸಚಿವರಾದ ಎಸ್‌.ಎಸ್‌. ಮಲ್ಲಿಕಾರ್ಜುನ್‌, ಡಾ| ಎಂ.ಸಿ. ಸುಧಾಕರ್‌, ಶಾಸಕರಾದ ಕೆ.ಎಸ್‌. ಬಸವಂತಪ್ಪ, ಡಿ.ಜಿ. ಶಾಂತನಗೌಡ, ಬಿ. ದೇವೇಂದ್ರಪ್ಪ, ಬಸವರಾಜ್‌ ಶಿವಗಂಗಾ, ಎಂ.ಪಿ. ಲತಾ ಮಲ್ಲಿಕಾರ್ಜುನ್‌, ಬಿ.ಪಿ. ಹರೀಶ್‌, ಮೇಯರ್‌ ಬಿ.ಎಚ್‌. ವಿನಾಯಕ ಪೈಲ್ವಾನ್‌ ಇತರರು ಇದ್ದರು.

ಸೌಲಭ್ಯ ಐಷಾರಾಮಿ ಜೀವನಕ್ಕೆ ಅಲ್ಲ
ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯತ್‌ ಮುಖ್ಯ ಕಾರ್ಯನಿರ್ವಹಕಾಧಿಕಾರಿ ಒಳಗೊಂಡಂತೆ ಎಲ್ಲ ಅಧಿಕಾರಿಗಳಿಗೆ ಸರ್ಕಾರ ವಾಹನ ಸೇರಿ ಎಲ್ಲ ರೀತಿಯ ಸೌಲಭ್ಯ ಒದಗಿಸುತ್ತಿರುವುದು ಜನರ ಸೇವೆ ಮಾಡುವುದಕ್ಕಾಗಿ. ಐಷಾರಾಮಿ ಜೀವನ ನಡೆಸಲಿಕ್ಕೆ ಅಲ್ಲವೇ ಅಲ್ಲ. ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು ಆರಾಮವಾಗಿ ಇರುವುದಕ್ಕೆ ಅಲ್ಲ. ಸರ್ಕಾರ ಕೊಟ್ಟಿರುವಂತಹ ಸೌಲಭ್ಯಗಳನ್ನು ಬಳಸಿಕೊಂಡು ಜನರ ಸಮಸ್ಯೆಗೆ ತ್ವರಿತವಾಗಿ ಸ್ಪಂದಿಸಬೇಕು. ಯಾವುದೇ ಕಾರಣಕ್ಕೂ ಅಧಿಕಾರ ದುರುಪಯೋಗ, ದುರ್ಬಳಕೆ, ಭ್ರಷ್ಟಾಚಾರಕ್ಕೆ ಅವಕಾಶ ಆಗದಂತೆ ನೋಡಿಕೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

ನೈತಿಕ ಪೊಲೀಸ್‌ಗಿರಿಗೆ ಆಸ್ಪದವಿಲ್ಲ
ಪೊಲೀಸ್‌ ಇಲಾಖೆ ಕಾನೂನು-ಶಾಂತಿ-ಸುವ್ಯವಸ್ಥೆ ಕಾಪಾಡಬೇಕು. ರಾಜ್ಯದ ಯಾವುದೇ ಭಾಗದಲ್ಲೇ ಆಗಲಿ ನೈತಿಕ ಪೊಲೀಸ್‌ಗಿರಿಗೆ ಅವಕಾಶವೇ ಇಲ್ಲ. ಯಾರೇ ಆಗಲಿ ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಸರ್ಕಾರ ಅವಕಾಶ ನೀಡುವುದಿಲ್ಲ. ಯಾರೇ ಆಗಲಿ ಕಾನೂನನ್ನು ಕೈಗೆ ತೆಗೆದುಕೊಂಡಲ್ಲಿ ಅವರ ವಿರುದ್ಧ ಸರ್ಕಾರ ಕಾನೂನು ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಎಚ್ಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next