Advertisement

ಫಲಿತಾಂಶ ಸುಧಾರಣೆಗೆ ಬದ್ಧತೆ ಇರಲಿ

07:16 AM Jan 29, 2019 | Team Udayavani |

ಕಲಬುರಗಿ: ಕಲಬುರಗಿ ಸೇರಿದಂತೆ ಹೈ.ಕ.ಭಾಗದಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶ ಸುಧಾರಣೆ ಹಾಗೂ ವಿದ್ಯಾರ್ಥಿಗಳಲ್ಲಿ ಆತ್ಮಸ್ತೈರ್ಯ ಹೆಚ್ಚಿಸಲು ಹೈದ್ರಾಬಾದ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ತೀವ್ರ ನಿಗಾ ಕಲಿಕಾ ತರಬೇತಿ ಆರಂಭಿಸಿದ್ದು, ಇದರ ಸದುಪಯೋಗ ಪಡೆದು ಮುಂಬರುವ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅಗ್ರ ಹತ್ತು ಜಿಲ್ಲೆಯಲ್ಲಿ ಕಲಬುರಗಿ ಜಿಲ್ಲೆ ಸ್ಥಾನ ಪಡೆಯಬೇಕು ಎಂದು ಜಿಲ್ಲಾಧಿಕಾರಿ ಆರ್‌.ವೆಂಕಟೇಶ ಕುಮಾರ ಹೇಳಿದರು.

Advertisement

ನಗರದ ಡಾ| ಎಸ್‌.ಎಂ. ಪಂಡಿತ ರಂಗಮಂದಿರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಕಲಬುರಗಿ ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಅನುದಾನ ರಹಿತ ಪ್ರೌಢ ಶಾಲೆಗಳ ಮುಖ್ಯ ಗುರುಗಳು ಮತ್ತು ವಿಜ್ಞಾನ ಶಿಕ್ಷಕರಿಗೆ ಆಯೋಜಿಸಲಾಗಿದ್ದ ಎಸ್‌ಎಸ್‌ಎಲ್‌ಸಿ ಗುಣಾತ್ಮಕ ಫಲಿತಾಂಶದತ್ತ ನಮ್ಮ ಚಿತ್ತ’ ಎಂಬ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.

ಈ ನಿಟ್ಟಿನಲ್ಲಿ ಶಿಕ್ಷಕ ವೃಂದ ಹೆಚ್ಚಿನ ಶ್ರಮ ವಹಿಸಿ ಫಲಿತಾಂಶದಲ್ಲಿ ಬದಲಾವಣೆ ತರಲು ಪ್ರಯತ್ನಿಸಬೇಕು. ಕನಿಷ್ಠ ಶೇ.90ರಷ್ಟು ಫಲಿತಾಂಶ ಪಡೆಯಲೇಬೇಕೆಂದು ಬದ್ಧತೆಯಿಂದ ಕಾರ್ಯನಿರ್ವಹಿಸಿ ಎಂದು ಕರೆ ನೀಡಿದರು.

ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳು ಇತರೆ ವಿದ್ಯಾರ್ಥಿಗಳಂತೆ ಹೆಚ್ಚಿನ ಅಂಕ ಗಳಿಸಬೇಕು ಹಾಗೂ ಫಲಿತಾಂಶ ಸುಧಾರಿಸಬೇಕು ಎಂಬುದು ವಿಶೇಷ ತರಗತಿಗಳ ಉದ್ದೇಶ. ಪರೀಕ್ಷೆಗೆ ಇನ್ನು ಎರಡು ತಿಂಗಳು ಮಾತ್ರ ಬಾಕಿ ಇದೆ. ಮಕ್ಕಳಿಗೆ ಹಿಂದಿನ 10 ಸಾಲಿನ ಪ್ರಶ್ನೆ ಪತ್ರಿಕೆ ಬಿಡಿಸುವುದರೊಂದಿಗೆ ವಾರಕೊಮ್ಮೆ ಕಿರು ಪರೀಕ್ಷೆ ನಡೆಸಬೇಕು. ಇದಲ್ಲದೆ ಮಕ್ಕಳು ಅರಿಯುವಂತೆ ಸರಳ ಹಾಗೂ ಬಗೆ ಬಗೆಯ ವಿಧಾನದಲ್ಲಿ ಬೋಧಿಸಬೇಕು. ಈ ಸಂಬಂಧ ಡಿಡಿಪಿಐ ಅವರು ಪ್ರತಿ 15 ದಿನಕೊಮ್ಮೆ ತಾಲೂಕು ಮಟ್ಟದಲ್ಲಿ ಶಿಕ್ಷಕರ ಸಭೆ ಕರೆದು ಬೋಧನಾ ಕ್ರಮ ಪರಿಶೀಲಿಸಬೇಕು ಹಾಗೂ ವಾರಕೊಮ್ಮೆ ಕಲಿಕಾ ತರಬೇತಿ ಪ್ರಗತಿ ಮಾಹಿತಿ ನೀಡಬೇಕು ಎಂದು ನಿರ್ದೇಶನ ನೀಡಿದರು.

ನಕಲು ಮುಕ್ತ ಪರೀಕ್ಷೆ ನಡೆಸಿ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯನ್ನು ನಕಲು ಮುಕ್ತವಾಗಿ ನಡೆಸಬೇಕು. ಫಲಿತಾಂಶ ಶೇಕಡಾವಾರು ಕಡಿಮೆ ಬಂದರು ಚಿಂತೆಯಿಲ್ಲ. ಗುಣಮಟ್ಟದ ಶಿಕ್ಷಣವೇ ನಮ್ಮ ಆದ್ಯತೆಯಾಗಿರಬೇಕು. ಗುಣಮಟ್ಟ ಶಿಕ್ಷಣದಿಂದ ಮಾತ್ರ ಸರ್ವಾಂಗಿಣ ಅಭಿವೃದ್ಧಿ ಸಾಧ್ಯ ಎಂದು ಹೇಳಿದರು.

Advertisement

ಜಿಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ. ರಾಜಾ ಮಾತನಾಡಿ, ಕಳೆದ ಡಿಸೆಂಬರ್‌ನಲ್ಲಿ ಚಿತ್ತಾಪುರ, ಸೇಡಂ ತಾಲೂಕಿನ ಕೆಲವೊಂದು ಶಾಲೆಗಳಿಗೆ ಭೇಟಿ ನೀಡಿದಾಗ ಅಲ್ಲಿನ ಶಾಲೆ ಶಿಕ್ಷಕರ ಬೋಧನಾ ಕ್ರಮ ಉತ್ತಮವಾಗಿತ್ತು. ಶಿಕ್ಷಕರು ಮಕ್ಕಳಿಗೆ ಸಹಾಯಕವಾಗುವಂತೆ ಬೋಧನಾ ಕ್ರಮ ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಪಂ ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಶರಣಗೌಡ ಡಿ. ಪಾಟೀಲ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಇಂಗ್ಲಿಷ್‌ ಎಂದರೆ ಭಯವಾಗಿ ಏರ್ಪಟ್ಟಿದೆ. ಗಣಿತ, ವಿಜ್ಞಾನ ಕಬ್ಬಿಣದ ಕಡಲೆಯಾಗಿದೆ. ಸರಳವಾಗಿ ಕನ್ನಡ ಮಾತಾಡುವಂತೆ ಇಂಗ್ಲಿಷ್‌ ಮಾತನಾಡಲು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿದಲ್ಲಿ ಈ ಭಯ ಹೋಗಲಾಡಿಸಬಹುದಾಗಿದೆ ಎಂದು ಹೇಳಿದರು.

ಕಲಬುರಗಿ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯದ ಸಹ ನಿರ್ದೇಶಕ ನಾರಾಯಣ ಗೌಡ ಮಾತನಾಡಿ, ಹೈ.ಕ.ಭಾಗದ 6 ಜಿಲ್ಲೆಯ 542 ಪ್ರೌಢಶಾಲೆಗಳಲ್ಲಿ ತೀವ್ರ ನಿಗಾ ಕಲಿಕಾ ತರಬೇತಿ ಆರಂಭಿಸಲಾಗಿದೆ. ನಕಲು ಮುಕ್ತ ಪರೀಕ್ಷೆ ನಡೆಸಲು ಮಕ್ಕಳನ್ನು ಈಗಿನಿಂದಲೆ ಮಾನಸಿಕವಾಗಿ ಸದೃಢಗೊಳಿಸಿ ಎಂದು ಹೇಳಿದರು.

ಪಾಠದೊಂದಿಗೆ ಪವಾಡವು ಆಗಲಿ: ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಕಲಬುರಗಿ ವಿಭಾಗೀಯ ಕಚೇರಿ ಸಹ ನಿರ್ದೇಶಕ ಜಿ. ವಿಜಯಕುಮಾರ ಮಾತನಾಡಿ, ಪ್ರತಿ ವರ್ಷ ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದಾಗ‌ ಜಿಲ್ಲೆಯ ಸ್ಥಾನ ಕೆಳ ಹಂತದಲ್ಲಿರುತ್ತದೆ. ಇದನ್ನು ಹೋಗಲಾಡಿಸಬೇಕಾದರೆ ನಾವು ಪಾಠದೊಂದಿಗೆ ಪವಾಡವು ಮಾಡಬೇಕಾಗಿದೆ. ಮಕ್ಕಳಿಗೆ ಪ್ರತಿ ಪಾಠದಲ್ಲಿ ಅವರಿಗೆ ಏನು ತಿಳಿದಿದೆ ಎನ್ನುವುದನ್ನು ಪರಿಶೀಲಿಸಲು ಸಾರಾಂಶ ರೂಪದಲ್ಲಿ ಬರೆಸಬೇಕು. ಶೇ.100ರಲ್ಲಿ ಶೇ.80ರಷ್ಟು ಬರಿತಾರೆ, ಉಳಿದಿರೋದು ಶೇ.20 ಇದರ ಬಗ್ಗೆ ಸ್ವಲ್ಪ ಗಮನ ಹರಿಸಿದರೆ ಸಾಕು ಫಲಿತಾಂಶ ಸುಧಾರಿಸಬಹುದಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ 2017-18ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೇ. 100ರಷ್ಟು ಫಲಿತಾಂಶ ಪಡೆದ ಶಾಲೆಗಳ ಪೈಕಿ ಜಿಲ್ಲೆಯ 6 ಸರ್ಕಾರಿ, 1 ಅನುದಾನಿತ ಹಾಗೂ 7 ಅನುದಾನ ರಹಿತ ಫ್ರೌಢಶಾಲೆ ಮುಖ್ಯ ಗುರುಗಳಿಗೆ ಸನ್ಮಾನ ಮಾಡಿ ಗೌರವಿಸಲಾಯಿತು. ನಂತರ ರಾಜ್ಯ ಮಟ್ಟದ ಸಂಪನ್ಮೂಲ ಶಿಕ್ಷಕ ಮಹಮ್ಮದ ಗನೀಫ್‌ ಅವರು ವಿಜ್ಞಾನ ವಿಷಯದ ಕುರಿತು ಕೆಲವೊಂದು ಉಪಯುಕ್ತ ಮಾಹಿತಿ ನೀಡಿದರು.

ಕಾರ್ಯಾಗಾರದಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಜಿಲ್ಲೆಯ ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಸೇರಿದಂತೆ ಒಟ್ಟು 742 ಪ್ರೌಢ ಶಾಲೆಗಳ ಮುಖ್ಯಗುರುಗಳು ಹಾಗೂ ವಿಜ್ಞಾನ ಶಿಕ್ಷಕರು ಭಾಗಿಯಾಗಿದ್ದರು.

ಕಲಬುರಗಿ ಉತ್ತರ ಕ್ಚೇತ್ರ ಶಿಕ್ಷಣಾಧಿಕಾರಿ ಸಿ.ಎಸ್‌.ಮುಧೋಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಬುರಗಿ ಪ್ರಭಾರಿ ಡಿಡಿಪಿಐ ಚಂದ್ರಶೇಖರ ಪಾಟೀಲ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next