ಇತ್ತೀಚಿನ ದಿನಗಳಲ್ಲಿ ಐಷಾರಾಮಿ ಕಾರುಗಳ ಅತಿವೇಗದ ಚಾಲನೆ ಮತ್ತು ಅಪಘಾತಗಳ ಸುದ್ದಿಯನ್ನು ಹೆಚ್ಚಾಗಿಯೇ ಕೇಳುತ್ತಿದ್ದೇವೆ. ಕೆಲವು ತಿಂಗಳ ಹಿಂದಷ್ಟೇ ಟಾಟಾ ಸನ್ಸ್‌ನ ಮಾಜಿ ಸಿಇಒ ಆಗಿದ್ದ ಸೈರಸ್ ಮಿಸ್ತ್ರಿ ಕೂಡ ಐಷಾರಾಮಿ ಕಾರೊಂದರ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಈ ಘಟನೆ ಜನಮಾನಸದಿಂದ ಮಾಸುವ ಮುನ್ನವೇ ಕ್ರಿಕೆಟಿಗ ರಿಷಭ್ ಪಂತ್ ಕೂಡ ತಮ್ಮ ಐಷಾರಾಮಿ ಕಾರಿನಲ್ಲಿ ಅಪಘಾತ ಮಾಡಿಕೊಂಡಿದ್ದಾರೆ. ಅದೃಷ್ಟವಶಾತ್ ಜನರ ಸಮಯ ಪ್ರಜ್ಞೆಯಿಂದಾಗಿ ಅವರ ಜೀವ ಉಳಿದಿದೆ.
ತಾಯಿಗೆ ಅಚ್ಚರಿ ನೀಡುವ ದೃಷ್ಟಿಯಿಂದ ರಿಷಭ್ ಪಂತ್ ದಿಲ್ಲಿಯಿಂದ ರೂರ್ಕೆಲಾಗೆ ಒಬ್ಬಂಟಿಯಾಗಿ ಹೊರಟಿದ್ದರು. ಬೆಳಗಿನ ಜಾವ 5.30ರ ವೇಳೆಗೆ ಹರಿದ್ವಾರ ಜಿಲ್ಲೆಯ ಮಂಗ್ಲೌರ್-ನರ್ಸಾನ್ ಹೈವೇಯಲ್ಲಿ ರಿಷಭ್ ಪಂತ್ ಅವರ ಕಾರು ಡಿವೈಡರ್‌ಗೆ ಢಿಕ್ಕಿ ಹೊಡೆದು, ಬಳಿಕ ಮಗುಚಿ ಬಿದ್ದು ಅಪಘಾತಕ್ಕೀಡಾಗಿದೆ. ಅದೇ ರಸ್ತೆಯಲ್ಲಿ ಸಾಗುತ್ತಿದ್ದ ಬಸ್ ಒಂದರ ಚಾಲಕ, ತತ್‌ಕ್ಷಣಕ್ಕೆ ಬಂದು ಕಾರಿನ ಕಿಟಕಿ ಒಡೆದು, ಪಂತ್ ಅವರನ್ನು ಹೊರಗೆ ಎಳೆಯದಿದ್ದರೆ, ಹೆಚ್ಚು ಅಪಾಯವೇ ಆಗುತ್ತಿತ್ತು. ಅದೃಷ್ಟವಶಾತ್ ಬಸ್ ಚಾಲಕನ ಸಮಯ ಪ್ರಜ್ಞೆಯಿಂದಾಗಿ ಪಂತ್ ಜೀವ ಉಳಿದಿದೆ.
ಸದ್ಯ ರಿಷಭ್ ಪಂತ್ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಮಾರಣಾಂತಿಕವಾದ ಪೆಟ್ಟೂ ಬಿದ್ದಿಲ್ಲ. ಅಲ್ಲಲ್ಲಿ ತರಚಿದ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಅವರ ಕ್ರಿಕೆಟ್ ಅಭಿಮಾನಿಗಳಿಗೆ ಇದು ಸಮಾಧಾನಕರ ಸುದ್ದಿ.
ಕಳೆದ ಸೆಪ್ಟಂಬರ್‌ನಲ್ಲಷ್ಟೇ ಟಾಟಾ ಸನ್ಸ್‌ನ ಮಾಜಿ ಸಿಇಒ ಸೈರಸ್ ಮಿಸ್ತ್ರಿ ಕೂಡ ಮಹಾರಾಷ್ಟ್ರದಲ್ಲಿ ರಸ್ತೆ ಅಪಘಾತದಲ್ಲಿ ಭೀಕರವಾಗಿ ಸಾವನ್ನಪ್ಪಿದ್ದರು. ಆಗಲೂ ಪ್ರತ್ಯಕ್ಷದರ್ಶಿಗಳು ಹೇಳುವ ಪ್ರಕಾರ, ಈ ಕಾರು ಅತಿವೇಗದಲ್ಲಿ ಚಾಲನೆ ಮಾಡುತ್ತಿತ್ತು. ಅಲ್ಲದೆ ಕಾರನ್ನು ನಿಯಂತ್ರಣಕ್ಕೆ ತರಲಾಗದೇ ಸೇತುವೆಗೆ ಢಿಕ್ಕಿ ಹೊಡೆದು ಕಾರು ಅಪಘಾತಕ್ಕೀಡಾಗಿತ್ತು.
ಈಗಲೂ ಅಂಥದ್ದೇ ಅನುಮಾನಗಳು ವ್ಯಕ್ತವಾಗುತ್ತಿವೆ. ಆರಂಭಿಕ ಮೂಲಗಳು ಹೇಳುವಂತೆ ಮತ್ತು ಸಿಸಿಟಿವಿ ದೃಶ್ಯಗಳ ಪ್ರಕಾರ ರಿಷಭ್ ಪಂತ್, ಅತಿವೇಗದಲ್ಲಿ ಕಾರನ್ನು ಚಲಾಯಿಸುತ್ತಿದ್ದರು. ಅಲ್ಲದೆ ಬೆಳಗಿನ ಜಾವ ನಿದ್ದೆಯ ಮಂಪರಿನಲ್ಲಿಯೂ ಕಾರು ನಿಯಂತ್ರಣ ತಪ್ಪಿದೆ. ಹೀಗಾಗಿ ಅಪಘಾತ ಸಂಭವಿಸಿರಬಹುದು. ಪಂಜಾಬ್‌ನ ನಟ ದೀಪ್ ಸಿಧು ಕೂಡ ಫೆಬ್ರವರಿಯಲ್ಲಿ ಪಂಜಾಬ್‌ನಲ್ಲಿಯೇ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಹೆದ್ದಾರಿಯಲ್ಲಿ ನಿಂತಿದ್ದ ಟ್ರಕ್‌ಗೆ ಢಿಕ್ಕಿ ಹೊಡೆದು ಕಾರು ಅಪ್ಪಚ್ಚಿಯಾಗಿತ್ತು.
ಈ ಘಟನೆಗಳನ್ನು ಗಮನಿಸಿದರೆ ಇತ್ತೀಚಿನ ದಿನಗಳಲ್ಲಿ ಆಗಿರುವ ಐಷಾರಾಮಿ ಕಾರುಗಳ ಅಪಘಾತಕ್ಕೆ ಅತಿವೇಗದ ಚಾಲನೆಯೇ ಕಾರಣ ಎಂಬುದು ದ್ಯೋತಕವಾಗುತ್ತದೆ. ಜತೆಗೆ ಐಷಾರಾಮಿ ಕಾರುಗಳಲ್ಲಿರುವ ಸುರಕ್ಷತ ವಿಷಯಗಳ ಮೇಲೆ ಅತಿಯಾದ ನಂಬಿಕೆ ಇರಿಸಿಕೊಂಡು ಅತಿವೇಗದ ಚಾಲನೆ ಮಾಡುತ್ತಿರಬಹುದು ಎಂಬ ಅನುಮಾನಗಳೂ ಇವೆ.
ಏನೇ ಆಗಲಿ, ಎಲ್ಲದಕ್ಕಿಂತ ಜೀವವೇ ಪ್ರಧಾನ. ಐಷಾರಾಮಿ ಕಾರುಗಳಲ್ಲಿ ಜೀವ ಉಳಿಸಬಲ್ಲ ಸುರಕ್ಷ ವಿಧಾನಗಳಿವೆ ಎಂಬುದು ನಿಜ. ಪಂತ್ ಅವರು ಬೇರೆ ಯಾವುದಾದರೂ ಕಾರನ್ನು ಓಡಿಸುತ್ತಿದ್ದರೆ, ಶುಕ್ರವಾರ ಸಂಭವಿಸಿದ ಅಪಘಾತದಲ್ಲಿ ವಿಷಯ ಬೇರೆಯೇ ಆಗಿರುತ್ತಿತ್ತು. ಆದರೆ ಸುರಕ್ಷ ವ್ಯವಸ್ಥೆಗಳು ಇವೆ ಎಂದ ಮಾತ್ರಕ್ಕೆ ಅಡ್ಡಾದಿಡ್ಡಿಯಾಗಿ ಕಾರನ್ನು ಓಡಿಸಬಾರದು. ಓಡಿಸುತ್ತಿರುವವರು ಮತ್ತು ಪಾದಾಚಾರಿಗಳು, ಇತರ ವಾಹನಗಳ ಸವಾರರ ಜೀವಗಳನ್ನು ಮನದಲ್ಲಿ ಇರಿಸಿಕೊಳ್ಳಬೇಕು.