Advertisement
ಚೀನಾದ ಬೈಟೆಡ್ಯಾನ್ಸ್ ಒಡೆತನದ ಈ ಆ್ಯಪ್ ಭಾರತದಲ್ಲೂ ಅತ್ಯಂತ ಜನಪ್ರಿಯತೆಯನ್ನು ಗಳಿಸಿದೆ. 2018ರಲ್ಲಿ ಐಓಎಸ್ ಆ್ಯಪ್ ಸ್ಟೋರ್‌ನಲ್ಲಿ ಅತೀ ಹೆಚ್ಚು ಡೌನ್ ಲೋಡ್ ಮಾಡಲ್ಪಟ್ಟ ಆ್ಯಪ್ ಇದು. ತನ್ನ ಆಕರ್ಷಕ ಫೀಚರ್ ಗಳಿಂದಲೆ ಜನರನ್ನು ಸುಲಭವಾಗಿ ಮೋಸದ ಕೂಪಕ್ಕೆ ತಳ್ಳುತ್ತಿದೆ. ವರ್ಣರಂಜಿತ ಜಾಹೀರಾತಿನ ಮೂಲಕ ಜನರನ್ನು ಆಕರ್ಷಿಸಿ ಅದರ ಮೂಲಕವೇ ಬಳಕೆದಾರರನ್ನು ದೋಚುವ ವ್ಯವಸ್ಥಿತ ಜಾಲವೊಂದು ಪತ್ತೆಯಾಗಿದೆ. ಹೀಗಾಗಿ ಟಿಕ್ ಟಾಕ್ ಬಳಸುವ ಜನರು ಎಚ್ಚರ ವಹಿಸುವುದು ಸೂಕ್ತ.
Related Articles
Advertisement
ಟಿಕ್ ಟಾಕ್ ಮೂಲಕ ಸ್ನೇಹಿತರನ್ನು ಸಂಪಾದಿಸುವ ಮುನ್ನ ಎಚ್ಚರಿಕೆ ವಹಿಸಿ. ಕೆಲವರು ತಮ್ಮ ಚಾಕಚಕ್ಯತೆಯನ್ನು ಬಳಸಿ ಸುಲಭದಲ್ಲಿ ಜನರನ್ನು ಯಾಮಾರಿಸುತ್ತಿದ್ದಾರೆ. ಅದಕ್ಕಾಗಿ ಅಪರಿಚಿತರೊಡನೆ ಸ್ನೇಹ ಸಂಪಾದಿಸುವುದು, ಖಾಸಗಿ ವಿವರ ಹಂಚಿಕೊಳ್ಳುವುದು ಇವೆಲ್ಲಾ ಅಪಾಯಕ್ಕೀಡು ಮಾಡಬಹುದು.
ಕೆಲವೊಮ್ಮೆ ಟಿಕ್ ಟಾಕ್ ಮಾಡಿದ ವಿಡಿಯೋಗಳನ್ನು ಟ್ರೋಲ್ ಕೂಡ ಮಾಡುತ್ತಾರೆ. ತುಂಬಾ ಲೈಕ್ಸ್ ಬಂದ ವಿಡಿಯೋಗಳಿಗೆ ಅಶ್ಲೀಲ ಆಡಿಯೋ ಸೇರಿಸಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡುವ ವ್ಯವಸ್ಥಿತ ಜಾಲವು ಕೂಡ ಪತ್ತೆಯಾಗಿದೆ. ಇತ್ತೀಚೆಗೆ ತಮಿಳು ಸಂಸ್ಕೃತಿಯನ್ನು ಕೀಳಾಗಿ ಕಾಣುವುದರ ಜೊತೆಗೆ ಪೋರ್ನೊಗ್ರಫಿಯನ್ನು ಉತ್ತೇಜಿಸುತ್ತಿದೆ ಎಂಬ ಕಾರಣಕ್ಕಾಗಿ ತಮಿಳುನಾಡು ಸರ್ಕಾರ ಈ ಆ್ಯಪನ್ನು ಬ್ಯಾನ್ ಮಾಡಲು ಚಿಂತನೆ ನಡೆಸಿತ್ತು. ಕರ್ನಾಟಕದಲ್ಲಿ ಮಾತ್ರವಲ್ಲದೆ ದೇಶಾದ್ಯಂತ ಈ ಆ್ಯಪ್ ಅನ್ನು ನಿಷೇಧ ಮಾಡಬೇಕೆಂಬ ಪ್ರಸ್ತಾಪವೂ ಚಾಲ್ತಿಯಲ್ಲಿತ್ತು. ನಂತರದಲ್ಲಿ ಟಿಕ್ ಟಾಕ್ ತನ್ನ ಫೀಚರ್ ಗಳಲ್ಲಿ ಕೆಲವೊಂದು ಬದಲಾವಣೆ ಮಾಡಿಕೊಂಡ ನಂತರ ಬಳಕೆದಾರರಿಗೆ ಆ್ಯಪ್ ಸ್ಟೋರ್ ಗಳಲ್ಲಿ ಸುಲಭವಾಗಿ ದೊರಕುತ್ತಿದೆ.
ಈ ಅಪ್ಲಿಕೇಶನ್ ನ ವ್ಯಾಮೋಹಕ್ಕೆ ಸಿಲುಕಿ ಹಲವು ಯುವಕ-ಯುವತಿಯರು ತಮ್ಮ ಪ್ರಾಣಕ್ಕೂ ಕುತ್ತು ತಂದುಕೊಂಡಿದ್ದಾರೆ. ಸಾಮಾಜಿಕವಾಗಿ ಗುರುತಿಸಿಕೊಳ್ಳಬೇಕು, ತಾನು ಕೂಡ ಸೆಲೆಬ್ರಿಟಿಯಾಗಬೇಕು, ರಾತ್ರಿ – ಬೆಳಗಾಗುವುದರೊಳಗೆ ಫೇಮಸ್ ಆಗಿಬಿಡುತ್ತೇವೆ ಎಂಬ ಮನೋಭಾವನೆ ಹಲವರನ್ನು ವಿಷಕೂಪಕ್ಕೆ ತಳ್ಳುತ್ತಿದೆ. ಅತೀಯಾದ ಬಳಕೆಯೇ ಹ್ಯಾಕರ್ ಗಳ ಪಾಲಿಗೆ ಪಂಚಾಮೃತವಾಗುತ್ತಿದೆ. ಆದ್ದರಿಂದ ಟಿಕ್ ಟಾಕ್ ನಲ್ಲಿ ಖಾಸಗಿ ಮಾಹಿತಿಗಳನ್ನು ಅಪ್ಲೋಡ್ ಮಾಡುವುರ ಮೊದಲು ಸ್ವಲ್ಪ ಯೋಚಿಸಿ.
– ಮಿಥುನ್ ಮೊಗೇರ