ಬೆಂಗಳೂರು: ಬಿಸ್ಕತ್, ಚಾಕಲೇಟ್, ಅಡುಗೆ ಎಣ್ಣೆ, ಹಾಲಿನ ಪೌಡರ್ ಮತ್ತಿತರ ಆಹಾರ ಸಾಮಗ್ರಿಗಳನ್ನು ಬಳಸುತ್ತಿದ್ದರೆ ಜೋಕೆ. ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ಹೊಸ ಪ್ಯಾಕೇಟ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿರುವ ದೊಡ್ಡ ದಂಧೆ ಸೃಷ್ಟಿಯಾಗಿದೆ.
ಸಿಸಿಬಿ ಪೊಲೀಸರು ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಜಂಟಿಯಾಗಿ ನಡೆದ ಕಾರ್ಯಾಚರಣೆಯಲ್ಲಿ ಅವಧಿ ಮೀರಿದ ಆಹಾರ ವಸ್ತುಗಳನ್ನು ಹೊಸ ಪ್ಯಾಕೇಟ್‌ಗಳಲ್ಲಿ ತುಂಬಿ ಮಾರಾಟ ಮಾಡುತ್ತಿರುವುದು ಪತ್ತೆಯಾಗಿದೆ. ಅವಧಿ ಮೀರಿದ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿದಲ್ಲದೆ, ಮಾರಾಟ ಮಾಡು ತ್ತಿದ್ದ ಅರೋಪದ ಮೇಲೆ ಸಿಸಿಬಿ ಪೊಲೀಸರು ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಕೆಲ ಅಂಗಡಿಗಳು ಮತ್ತು ಗೋದಾಮು ಗಳ ಮೇಲೆ ದಾಳಿ ನಡೆಸಿದ್ದಾರೆ.
ಕಾಟನ್‌ಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ನಲಬಂದ ಲೇನ್, ಎ.ಎಸ್.ಚಾರ್ ಸ್ಟ್ರೀಟ್ ಕ್ರಾಸ್ ನಲ್ಲಿರುವ ಚಂದ್ರಪ್ರಕಾಶ್ ಎಂಬುವರ ಹೆಸರಿ ನಲ್ಲಿರುವ ಹರಿಹಂತ್ ಟ್ರೇಡಿಂಗ್ ಕಂಪನಿಯ ಗೋದಾಮು ಪರಿಶೀಲಿಸಿದಾಗ ಅವಧಿ ಮೀರಿದ ಆಹಾರ ಪದಾರ್ಥಗಳು ದಾಸ್ತಾನು ಮಾಡಿ ಸಾರ್ವಜನಿಕರಿಗೆ ಮಾರಾಟಕ್ಕೆ ಮುಂದಾಗಿರುವುದು ಕಂಡುಬಂದಿದೆ.
ಅವಧಿ ಮೀರಿದ ಆಹಾರ ಪದಾರ್ಥಗಳ ಅಕ್ರಮ ಸಂಗ್ರಹಣೆಯ ಕುರಿತು ಹೋಲ್‌ಸೇಲ್ ಅಂಗಡಿಯ ಮಾಲೀಕರನ್ನು ಪ್ರಶ್ನಿಸಿದಾಗ, ಈ ಆಹಾರ ಪದಾರ್ಥಗಳನ್ನು ಪಿ.ವಿ.ಆರ್ ರಸ್ತೆ, ರಾಣಾಸಿಂಗ್ ಪೇಟೆಯ ಗೋದಾಮುನಿಂದ ತಂದಿರುವುದಾಗಿ ತಿಳಿಸಿದ್ದಾರೆ. ಈತನ ಮಾಹಿತಿ ಮೇರೆಗೆ ಸಿಸಿಬಿ ಮತ್ತು ಆಹಾರ ಸಂರಕ್ಷಣಾ ಅಧಿಕಾರಿಗಳು ಆ ಗೋದಾಮು ಭೇಟಿ ನೀಡಿ ಪರಿಶೀಲಿಸಿದ್ದು, ಅಲ್ಲಿ ಪ್ರತಿಷ್ಠಿತ ಕಂಪನಿಗಳ ಅವಧಿ ಮೀರಿದ ಬಿಸ್ಕೆಟ್ ಹಾಗೂ ಚಾಕಲೇಟ್‌ಗಳು, ಅಡುಗೆ ಎಣ್ಣೆ, ಹಾಲಿನ ಪೌಡರ್ ಸೇರಿ ಅವಧಿ ಮೀರಿದ ಇತರೆ ಆಹಾರ ಪದಾರ್ಥಗಳನ್ನು ವಶಕ್ಕೆ ಪಡೆಯಲಾಗಿದೆ. ಈ ಸಂಬಂಧ ಅಂಗಡಿ ಮತ್ತು ಗೋಡೌನ್ ಮಾಲೀಕರುಗಳಿಗೆ ಆಹಾರ ಸುರಕ್ಷತಾ ಕಾಯ್ದೆ ಅಡಿಯಲ್ಲಿ ನೋಟಿಸ್ ನೀಡಿ ಕ್ರಮಕೈಗೊಳ್ಳಲಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಅಮಾಯಕರ ಜೀವ ಉಳಿದಿದೆ: ಸಿಸಿಬಿ ಅಧಿಕಾರಿಗಳು ಮತ್ತು ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳ ಈ ಜಂಟಿ ಕಾರ್ಯಾಚರಣೆಯಿಂದಾಗಿ ಅಮಾಯಕ ಸಾರ್ವಜನಿಕ ಜೀವ ಉಳಿದಿದೆ. ಅವಧಿ ಮೀರಿದ ಬಿಸ್ಕೆಟ್ ಮತ್ತು ಹಾಲಿನ ಪೌಡರ್‌ಗಳು ಸೇರಿ ಇತರೆ ವಸ್ತುಗಳ ಪ್ಯಾಕೇಟ್‌ಗಳನ್ನು ಬದಲಾಯಿಸಿ ಅವಧಿ ಮೀರಿದ ಪದಾರ್ಥಗಳನ್ನು ಮರು ಬಳಕೆ ಮಾಡುತ್ತಿರುವುದು ದಾಳಿ ವೇಳೆಯ ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಮಕ್ಕಳು ಬಳಸುವ ಆಹಾರ ಪದಾರ್ಥಗಳನ್ನು ಆರೋಪಿಗಳು ಯಾವುದೇ ಭಯವಿಲ್ಲದೇ ಮಾರಾಟ ಮಾಡುತ್ತಿದ್ದಾರೆ. ಈ ಬಗ್ಗೆ ಮಾಲೀಕರನ್ನು ಪ್ರಶ್ನಿಸಿದ್ದಾಗ ಪ್ರಾಣಿಗಳ ಆಹಾರ ತಯಾರಿಕೆಗೆ ಬಳಸುತ್ತೇವೆ ಎಂದು ಹೇಳಿದ್ದಾರೆ.
ಸದ್ಯ ಅವಧಿ ಮುಗಿದ ವಸ್ತುಗಳ ಸ್ಯಾಂಪಲ್‌ಗಳನ್ನು ಪಡೆದು ಎಫ್‌ಎಸ್‌ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಆಧರಿಸಿ ಮುಂದಿನ ಕ್ರಮಕೈಗೊಳ್ಳಲಾಗುತ್ತದೆ. ದಾಳಿ ವೇಳೆ ಪ್ರತಿಷ್ಠಿತ ಕಂಪನಿಗಳ ಹೆಸರಿನ, ರಾಶಿ ರಾಶಿ ಮೂಟೆಗಳಲ್ಲಿ ತುಂಬಿಡಲಾಗಿದ್ದ ಬಿಸ್ಕೆಟ್, ಚಾಕೋಲೇಟ್, ಚಾಕೋಲೇಟ್ ಪೌಡರ್, ಅಡುಗೆ ಎಣ್ಣೆ, ಡಾಲ್ಡಾ, ತುಪ್ಪ, ರವೆ, ಹಾಲಿನಪುಡಿ ಸೇರಿ ಇತರೆ ಪದಾರ್ಥಗಳು ಪತ್ತೆಯಾಗಿದೆ ಎಂದು ಸಿಸಿಬಿ ಪೊಲೀಸರು ಹೇಳಿದರು.
ಪ್ರಕರಣ ಬೆಳಕಿಗೆ ಬಂದಿದ್ದು ಹೇಗೆ?: ಅಂಗಡಿಯೊಂದರಲ್ಲಿ ಇತ್ತೀಚೆಗೆ ಅವಧಿ ಮುಗಿದ ಬಿಸ್ಕತ್ ಸಿಕ್ಕಿದ್ದು, ಅದರ ಮೂಲವನ್ನು ಸಿಸಿಬಿ ಮತ್ತು ಆಹಾರ ಸುರಕ್ಷತಾ ಅಧಿಕಾರಿಗಳು ಹುಡುಕಿಕೊಂಡು ಬಂದಿದ್ದಾರೆ. ಹೀಗೆ ಹುಡುಕಿಕೊಂಡು ಬಂದ ಅಧಿಕಾರಿಗಳಿಗೆ ಹೋಲ್‌ಸೇಲ್ ಅಂಗಡಿಯ ಮಾಹಿತಿ ಸಿಕ್ಕಿದೆ. ಅವರನ್ನು ವಿಚಾರಿಸಿದ್ದಾಗ ಎರಡು ಗೋಡೌನ್ ಬಗ್ಗೆ ಮಾಹಿತಿ ನೀಡಿದ್ದರು. ಈ ಆಧಾರದ ಮೇಲೆ ದಾಳಿ ನಡೆಸಲಾಗಿದೆ ಎಂದು ಪೊಲೀಸರು ಹೇಳಿದರು.
ಪೊಲೀಸರಿಗೆ ಬಂದಂತಹ ಮಾಹಿತಿ ಆಧರಿಸಿ ಗೋಡೌನ್‌ಗಳ ಮೇಲೆ ದಾಳಿ ನಡೆಸಲಾಗಿದೆ. ಈ ವೇಳೆ ಅವಧಿ ಮೀರಿದ ಆಹಾರ ಪದಾರ್ಥಗಳು ಪತ್ತೆಯಾಗಿವೆ. ಅವುಗಳ ಸ್ಯಾಂಪಲ್ ಸಂಗ್ರಹಿಸಿ ಎಫ್ ಎಸ್‌ಎಲ್‌ಗೆ ಕಳುಹಿಸಲಾಗಿದೆ. ಆಹಾರ ಸುರಕ್ಷತಾ ಇಲಾಖೆ ಅಧಿಕಾರಿಗಳು ಗೋಡೌನ್ ಮಾಲೀಕರಿಗೆ ನೋಟಿಸ್ ನೀಡಿದ್ದಾರೆ. ತನಿಖೆ ಮುಂದುವರಿದಿದೆ. ●
ಡಾ. ಶರಣಪ್ಪ, ಸಿಸಿಬಿ ಜಂಟಿ ಪೊಲೀಸ್ ಆಯುಕ್ತ