Advertisement

ಮೊಬೈಲ್‌ ಬಳಸುವಾಗ ಎಚ್ಚರ ವಹಿಸಿ

08:43 AM Jul 27, 2017 | |

ದಾವಣಗೆರೆ: ಮಕ್ಕಳು ಮೊಬೈಲ್‌ ಬಳಕೆ ಮಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಜಿಲ್ಲಾ ಸತ್ರ ಮತ್ತು ಪ್ರಧಾನ ನ್ಯಾಯಾಲಯದ ನ್ಯಾಯಾಧೀಶೆ ಎಂ. ಶ್ರೀದೇವಿ ಕಿವಿಮಾತು ಹೇಳಿದ್ದಾರೆ. 

Advertisement

ಬುಧವಾರ ಡಿಆರ್‌ಆರ್‌ ಪ್ರೌಢಶಾಲೆಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಲಯನ್ಸ್‌ ಕ್ಲಬ್‌, ಮಾನವ ಹಕ್ಕುಗಳ ವೇದಿಕೆ, ಇತರೆ ಸಂಘ, ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಂಡ ಕಾನೂನು ಜ್ಞಾನ ಪ್ರಸಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಕ್ಕಳು ಆದಷ್ಟು ಮೊಬೈಲ್‌ ಬಳಸಬಾರದು. ತಂದೆ-ತಾಯಿ ಮೊಬೈಲ್‌ನಿಂದ ಯಾರಿಗಾದರೂ ಅಶ್ಲೀಲ ಸಂದೇಶ ಕಳುಹಿಸಿದರೆ ಮುಂದೆ ಪೋಷಕರ ಜತೆ ಮಕ್ಕಳಿಗೂ ಸಮಸ್ಯೆ ಆಗಲಿದೆ ಎಂದರು.

18 ವರ್ಷದೊಳಗಿನ ಮಕ್ಕಳು ವಾಹನ ಚಲಾಯಿಸುವಂತಿಲ್ಲ. ಆದರೂ ಅನೇಕ ಮಕ್ಕಳು ಬೈಕ್‌ ಸವಾರಿ ಮಾಡುತ್ತಾರೆ. ಶಾಲೆ, ಕಾಲೇಜು, ಟ್ಯೂಷನ್‌ಗೆ ಬೈಕ್‌ ತೆಗೆದುಕೊಂಡು  ಹೋಗುತ್ತಾರೆ. ಅಪ್ರಾಪ್ತರು ವಾಹನ ಚಾಲನೆ ಮಾಡಿ, ಅಪಘಾತ ಸಂಭವಿಸಿದರೆ, ಆ ವಾಹನ ಮಾಲೀಕರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ. ಘಟನೆಯಲ್ಲಿ ಜೀವ
ಹೋದರೆ ಪೋಷಕರಿಗೆ ತುಂಬಲಾರದ ನಷ್ಟವಾಗುತ್ತದೆ. ಆರ್ಥಿಕ ಹೊರೆ ಸಹ ಬೀಳುತ್ತದೆ ಎಂದು ಎಚ್ಚರಿಸಿದರು.

ಮಕ್ಕಳು ಮೊಬೈಲ್‌, ಟಿವಿ, ಕಂಪ್ಯೂಟರ್‌ ಬದಲು ಪುಸ್ತಕ, ಪತ್ರಿಕೆ ಓದುವ ಹವ್ಯಾಸ ಬಳಸಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಹಂತ ಪ್ರಮುಖವಾದುದಾಗಿದ್ದು, ಈ ಹಂತದಲ್ಲಿ ಮಾನಸಿಕ ಕಿರಿಕಿರಿ ಹೆಚ್ಚು, ವಿದ್ಯಾರ್ಥಿಗಳು ಈ ಹಂತದಲ್ಲಿ ಧ್ಯಾನ, ಪ್ರಾಣಾಯಾಮ,ಯೋಗಾಭ್ಯಾಸ ಮಾಡುವ ಮೂಲಕ ಏಕಾಗ್ರತೆ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಕೆಂಗಬಾಲಯ್ಯ ಮಾತನಾಡಿ, ಮಕ್ಕಳಿಗೂ ಕಾನೂನು ನೆರವು ಕೊಡಲು ನಮ್ಮ ಕಾನೂನು ಪ್ರಾಧಿಕಾರ ಸಿದ್ಧವಿದೆ. ಯಾವುದೇ ಸಮಸ್ಯೆ ಇರಲಿ, ನೀವು ನಮ್ಮೊಂದಿಗೆ ಹಂಚಿಕೊಂಡಾಗ ಅದಕ್ಕೆ ಉಚಿತವಾಗಿ ಕಾನೂನು ಸಲಹೆ ನೀಡುತ್ತೇವೆ. ಬಾಲ್ಯ ವಿವಾಹ ನಡೆಯುವಾಗ, ಸ್ನೇಹಿತರು ಕಾನೂನುಬಾಹಿರ ಕೆಲಸ ಮಾಡಿದಾಗ ನಮಗೆ ತಿಳಿಸಿದರೆ ಅಂತವರಿಗೆ ಮಾರ್ಗದರ್ಶನ ನೀಡಲು ಕ್ರಮ ವಹಿಸಲಾಗುವುದು ಎಂದರು.

ಪರೀಕ್ಷೆಯಲ್ಲಿ ಕಡಮೆ ಅಂಕ ಬಂದದ್ದಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವಂತಹ ಮಟ್ಟಕ್ಕೆ ಇಂದಿನ ಮಕ್ಕಳು ಬೆಳೆದಿದ್ದಾರೆ. ಇದು ಸರಿಯಲ್ಲ. ಪರೀಕ್ಷೆಯಲ್ಲಿ ಫೇಲಾದರೆ ಮತ್ತೂಮ್ಮೆ ಪರೀಕ್ಷೆ ಬರೆದು, ಉತ್ತಮ ಅಂಕ ಗಳಿಸಬಹುದು.
ಮಕ್ಕಳು ಯಾರೂ ಸಹ ಅಂತಹ ಆಲೋಚನೆ ಮಾಡಬೇಡಿ. ಒಂದು ವೇಳೆ ಯಾರಾದರೂ ಈ ರೀತಿ ಆಲೋಚಿಸಿದರೆ ಅಂತಹವರಿಗೆ ಬುದ್ಧಿ ಹೇಳಿ, ಅವರ ಪೋಷಕರಿಗೆ ತಿಳಿಸಿ ಎಂದು ಅವರು ತಿಳಿಸಿದರು.

Advertisement

ಮಾನವ ಹಕ್ಕುಗಳ ಕುರಿತು ಉಪನ್ಯಾಸ ನೀಡಿದ ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಎಲ್‌.ಎಚ್‌.ಅರುಣ್‌ ಕುಮಾರ್‌ ಮಾತನಾಡಿ, ಎಲ್ಲಾ ರಾಷ್ಟ್ರಗಳ ನಡುವೆ ಶಾಂತಿ ಸೌಹಾರ್ದತೆ, ಸಹಕಾರಗಳಿಗೆ ಮಾನವ ಹಕ್ಕುಗಳು ಸಹಕಾರಿಯಾಗಿವೆ. ಪ್ರಪಂಚದಲ್ಲಿ ಜನಾಂಗೀಯ ಹತ್ಯೆ, ಯುದ್ದ ತಡೆಯುವಲ್ಲಿ ಅಂತಾರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಯಶಸ್ವಿಯಾಗಿದೆ. ದೇಶ, ಭಾಷೆ, ಜಾತಿ, ಧರ್ಮ, ವರ್ಗಗಳನ್ನೂ ಮೀರಿ ಇಡೀ ಪ್ರಪಂಚದ ಮಾನವರೆಲ್ಲಾ ಒಂದೇ ಎನ್ನುವ ಉದಾತ್ತ ಧ್ಯೇಯದೊಂದಿಗೆ ಮಾನವ  ಹಕ್ಕುಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸುತ್ತಿವೆ ಎಂದರು. 

ಧರ್ಮಪ್ರಕಾಶ ರಾಜನಹಳ್ಳಿ ರಾಮಶೆಟ್ಟಿ ವಿದ್ಯಾಸಂಸ್ಥೆ ಅಧ್ಯಕ್ಷ ಆರ್‌.ಆರ್‌. ಶ್ರೀನಿವಾಸಮೂರ್ತಿ, ವಕೀಲರ ಸಂಘದ
ಅಧ್ಯಕ್ಷ ಲೋಕಿಕೆರೆ ಸಿದ್ಧಪ್ಪ, ಆರ್‌.ಎಚ್‌. ಟ್ರಸ್ಟ್‌  ನ ಟ್ರಸ್ಟಿ ಆರ್‌.ಎಸ್‌. ಸ್ವಾತಿ, ವಿದ್ಯಾಸಂಸ್ಥೆಯ ಆಡಳಿತಾಧಿಕಾರಿ ಎಂ. ಬಸವರಾಜಪ್ಪ ವೇದಿಕೆಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next