Advertisement

ನೀರು ಬಾಟಲಿ ಖರೀದಿಸುವಾಗ ಎಚ್ಚರಿಕೆ ಇರಲಿ

11:08 PM May 10, 2019 | Team Udayavani |

ಉಡುಪಿ: ಬಿಸಿಲ ಝಳದಿಂದಾಗಿ ಜನರು ಕಂಡಕಂಡಲ್ಲಿ ನೀರು ಕುಡಿಯುವುದು ಸಹಜ. ಶುಚಿತ್ವ ಜಾಗೃತಿಯಿಂದಾಗಿ ಬಹುತೇಕ ಎಲ್ಲರೂ ಬಿಸಿಲೇರಿ ನೀರನ್ನು ಶುದ್ಧ ಜಲವೆಂದು ಕುಡಿಯುತ್ತಾರೆ. ಆದರೆ ಇದರಲ್ಲೂ ಮೋಸ ಮಾಡುವವರಿದ್ದಾರೆನ್ನಲಾಗುತ್ತಿದೆ.

Advertisement

ಮಣಿಪಾಲ ಆಸ್ಪತ್ರೆಯ ನಿವೃತ್ತ ಹಿರಿಯ ಪ್ರಯೋಗಾಲಯ ತಂತ್ರಜ್ಞ ನಿತ್ಯಾನಂದ ಪಾಟೀಲ್‌ ಅವರು ಎರಡು ದಿನಗಳ ಹಿಂದೆ ಉಡುಪಿ ಕೋರ್ಟ್‌ ಎದುರಿನ ಅಂಗಡಿಯೊಂದರಿಂದ ಬಿಸ್ಲೆರಿ ನೀರಿನ ಬಾಟಲಿಯನ್ನು ಖರೀದಿಸಿ ಕುಡಿದರು. ಸಂಜೆಯಾಗುತ್ತಲೆ ನಿತ್ರಾಣ ಬಂತು. ಇವರು ಬೇರೆಲ್ಲಿಯೂ ಆ ದಿನ ಆಹಾರವನ್ನು ತೆಗೆದುಕೊಂಡಿರಲಿಲ್ಲ. ಮನೆ ಹೊರತುಪಡಿಸಿ ಇತರೆಡೆಗಳಲ್ಲಿ ಕುಡಿಯುವುದೂ ಇಲ್ಲ.

ಆದ್ದರಿಂದ ಈ ನೀರಿನ ದೋಷ ಕಾರಣ ಎಂದು ನಿರ್ಣಯಕ್ಕೆ ಬಂದ ಅವರು ಬಾಟಲಿಯ ಮೊಹರು ನೋಡಿದಾಗ “ಬೆಸ್ಟ್‌ ಬಿಫೋರ್‌ 6 ಮಂತ್ಸ್’ ಮತ್ತು ಉತ್ಪಾದನ ದಿನಾಂಕ
2018 ಮೇ ಎಂದಿತ್ತು.

ಪಾಟೀಲ್‌ ಅವರ ಪ್ರಕಾರ ಒಂದೋ ಇಂತಹ ಹಳೆಯ ಬಾಟಲಿಗಳನ್ನು ಮಾರಾಟ ಮಾಡುತ್ತಿರಬಹುದು ಅಥವಾ ಕುಡಿದು ಬಿಸಾಡಿದ ಬಾಟಲಿಗೆ ಕಲಬೆರಕೆಯ ನೀರನ್ನು ತುಂಬಿಸಿ ದಂಧೆ ನಡೆಸುತ್ತಿರಬಹುದು. “ಈಗಂತೂ ಬೇಸಗೆ ಬಿಸಿ. ಬಾಯಾರಿಕೆಯಾದಾಗಲೆಲ್ಲ ಬಿಸಿಲೇರಿ ನೀರನ್ನು ಖರೀದಿಸಿ ಕುಡಿಯುತ್ತಾರೆ. ಎಷ್ಟು ಜನರು ಕಲಬೆರಕೆ ನೀರನ್ನು ಮಾರಾಟ ಮಾಡುತ್ತಾರೋ? ಎಷ್ಟು ಜನರ ಆರೋಗ್ಯ ಹಾಳಾಗುತ್ತದೋ ಗೊತ್ತಿಲ್ಲ’ ಎನ್ನುತ್ತಾರೆ ನಿತ್ಯಾನಂದ ಪಾಟೀಲ್‌. ಪ್ಲಾಸ್ಟಿಕ್‌ ಕೆಟ್ಟದ್ದು ಎಂದು ಹೇಳುತ್ತಲೇ ನಾವು ಪ್ಲಾಸ್ಟಿಕ್‌ ಸಂಪರ್ಕವಿರುವ ಆಹಾರವನ್ನೇ ತಿನ್ನುತ್ತಿದ್ದೇವೆ, ಕುಡಿಯುತ್ತಿದ್ದೇವೆ. ಇದರ ಮಧ್ಯೆ ತಿಂಗಳುಗಳ ಕಾಲ ಪ್ಲಾಸ್ಟಿಕ್‌ ಸಂಪರ್ಕ ಭಾಗ್ಯವಿರುವ ನೀರು ಕುಡಿದರೆ ಹೇಗಿರಬಹುದು? ಜನರು ಇಂತಹ ಬಾಟಲಿಗಳನ್ನು ಖರೀದಿಸುವಾಗ ಎಚ್ಚರಿಕೆ ಇಂದಿರಬೇಕು. ಬಾಟಲಿಯ ಮುದ್ರಿತ ಭಾಗದಲ್ಲಿರುವ ವಿವರಗಳನ್ನು ಓದಬೇಕು. ಯಾವುದೇ ಆಹಾರ ಸಾಮಗ್ರಿ, ನೀರಿನ ಬಾಟಲಿ ಖರೀದಿಸುವಾಗ ಬಿಲ್‌ ಪಡೆದಿರಬೇಕು. ಹೀಗಾದರೆ ಮಾರಾಟ ಮಾಡಿದವರ ವಿರುದ್ಧ ಕಾನೂನು ರೀತಿಯ ಕ್ರಮಗಳನ್ನು ಕೈಗೊಳ್ಳಲು ಸಾಧ್ಯ.

ಆಹಾರ ಪ್ಯಾಕೇಟ್‌, ನೀರಿನ ಬಾಟಲಿಯ ಉತ್ಪಾದನ ದಿನಾಂಕ ಮತ್ತು ಅವಧಿಯನ್ನು ನೋಡಬೇಕು. ಖರೀದಿಸಿದ ಅಂಗಡಿಯಿಂದ ಬಿಲ್‌ನ್ನು ಕಡ್ಡಾಯವಾಗಿ ಪಡೆದಿರಬೇಕು. ಎರಡು ಸಾಕ್ಷಿಗಳನ್ನು ಕೊಟ್ಟರೆ ದೋಷಪೂರಿತ ಸಾಮಗ್ರಿ ಮಾರಾಟ ಮಾಡಿದವರ ವಿರುದ್ಧ ಕ್ರಮ ಜರುಗಿಸಲು ಸಾಧ್ಯ.
– ಡಾ| ವಾಸುದೇವ,
ಅಂಕಿತಾಧಿಕಾರಿ, ಆಹಾರ ಸುರಕ್ಷಾ ವಿಭಾಗ, ಉಡುಪಿ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next