Advertisement

ಮಳೆ ನೀರು ಹರಿಯುವ ಕಾಲುವೆ ಕಾಮಗಾರಿ ಬಹುತೇಕ ಪೂರ್ಣ

12:25 AM May 07, 2019 | Team Udayavani |

ಬಜಪೆ: ಮಂಗಳೂರು ವಿಮಾನ ನಿಲ್ದಾಣದಿಂದ ಮಳವೂರು ಗ್ರಾಮ ಪಂಚಾಯತ್‌ನ ಕರಂಬಾರು ಪ್ರದೇಶದವರೆಗೆ ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರದ 6.75 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣಗೊಂಡ ಮಳೆ ನೀರು ಹರಿಯುವ ಕಾಲುವೆ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ಸೋಮವಾರ ದ.ಕ. ಜಿಲ್ಲಾಧಿಕಾರಿ ಶಶಿಕಾಂತ ಸೆಂಥಿಲ್‌ ಅವರು ಕರಂಬಾರು ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ರು.

Advertisement

ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಕಾಮಗಾರಿಯ ಟ್ಯಾಕ್ಸಿ ಬೇ ರಚನೆ ವೇಳೆ ಹಾಗೂ ಕಳೆದ ವರ್ಷ ಮೇ ತಿಂಗಳಲ್ಲಿ ಸುರಿದ ಬಾರಿ ಮಳೆಯಿಂದಾಗಿ ಮಣ್ಣು ಕರಂಬಾರು ಪ್ರದೇಶದ ಮಳೆ ನೀರು ಹರಿವ ತೋಡುಗಳಿಗೆ ಬಿದ್ದು ಅಪಾರ ಹಾನಿಯಾಗಿತ್ತು.

ಹೀಗಾಗಿ ಮಳೆ ನೀರು ಹರಿಯಲು ಕಾಲುವೆ ನಿರ್ಮಾಣ ಅನಿವಾರ್ಯವಾಗಿತ್ತು. ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯಲ್ಲಿ ಕೊಪ್ಪಳ, ಏರುಗುಡ್ಡೆ, ಪಂಚಕೋಟಿ, ಕೋರ್ದಬ್ಬು ದೈವಸ್ಥಾನದ ಬಳಿ,ಪಾದೆಬೆಟ್ಟು,ಬಗ್ಗಕೋಡಿ ಪ್ರದೇಶಕ್ಕೆ ಭೇಟಿ ನೀಡಿದ ಜಿಲ್ಲಾಧಿಕಾರಿ ಕಾಮಗಾರಿ ಪ್ರಗತಿಯ ಕುರಿತು ಪರಿಶೀ ಲನೆ ನಡೆಸಿದರು.

ಮಳೆಗಾಲಕ್ಕಿಂತ ಮುಂಚೆ
ಕಾಮಗಾರಿ ಪೂರ್ಣ
ಕಾಲುವೆಯ ಬಹುತೇಕ ಕಾಮಗಾರಿ ಪೂರ್ಣ ಗೊಂಡಿದ್ದು, ಕೆಲವು ಪ್ರದೇಶಗಳ ಸಮಸ್ಯೆ ಅರಿತು ಮುಂದಿನ ಕಾಮಗಾರಿ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದರು. ಒಂದು ಮಳೆ ಬಿದ್ದ ಮೇಲೆ ಮಳೆಗಾಲಕ್ಕಿಂತ ಮುಂಚಿತವಾಗಿಯೇ ಕಾಮಗಾರಿಯನ್ನು ಪೂರ್ಣ ಗೊಳಿಸಲಾಗುವುದು ಎಂದು ಜಿಲ್ಲಾ ಧಿಕಾರಿ ತಿಳಿಸಿದರು.

ಪರಿಹಾರ ಕೇವಲ
2 ಸಾವಿರ ರೂ.
ಪಂಚಕೋಡಿ ಪ್ರದೇಶದಲ್ಲಿ ತೆಂಗು, ಕಂಗು ತೋಟ, ಕೃಷಿ, ಬಾವಿಗೆ ಮಣ್ಣು ಬಿದ್ದು ಅಪಾರ ಹಾನಿಯಾಗಿದೆ. ಇದನ್ನೇ ನಂಬಿ ನಾವು ಬದುಕುತ್ತಿದ್ದೇವು. ಕೇವಲ 2 ಸಾವಿರ ರೂ. ಪರಿಹಾರವಷ್ಟೇ ಸಿಕ್ಕಿದೆ ಎಂದು ಸ್ಥಳೀಯ ಜಿಲ್ಲಾಧಿಕಾರಿಯ ಬಳಿ ತಮ್ಮ ಅಳಲನ್ನು ತೋಡಿಕೊಂಡರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ,ತತ್‌ಕ್ಷಣ ಪರಿಹಾರವಾಗಿ ಪ್ರಕೃತಿ ವಿಕೋಪದಡಿ 2 ಸಾವಿರ ರೂ.ನೀಡಲಾಗಿದೆ. ನಮ್ಮ ಕಡೆಯಿಂದ ಪ್ರಯತ್ನ ಮಾಡಲಾಗಿದೆ.ಈ ಬಗ್ಗೆ ಬೇರೆ ಪರಿಹಾರಕ್ಕೆ ಸರಕಾರಕ್ಕೆ ಮನವಿ ಮಾಡಲಾಗಿದೆ.ಪ್ಯಾಕೇಜ್‌ ಬಂದಲ್ಲಿ ನೀಡಲಾಗುವುದು. ಹೂಳು ಎತ್ತುವ ಕಾರ್ಯಕ್ಕೆ ಅವಕಾಶವಿದೆ.ಅದನ್ನು ಮಾಡಲಾಗುವುದು ಎಂದು ತಿಳಿಸಿದರು.

ವಿಮಾನ ನಿಲ್ದಾಣ ಪ್ರಾಧಿಕಾರದ ನಿರ್ದೇಶಕ ವಿ.ವಿ. ರಾವ್‌, ಡಿ.ಜಿ.ಎಂ.ರಾಜೀವ್‌ ಗುಪ್ತ, ಸಹಾಯಕ ಅಯುಕ್ತ ರವಿಚಂದ್ರ ನಾಯಕ್‌, ತಾ.ಪಂ. ಸದಸ್ಯೆ ಸುಪ್ರಿತಾ ಶೆಟ್ಟಿ, ತಹ ಶೀ ಲ್ದಾ ರ್‌ ಗುರುಪ್ರಸಾರ್‌ ಕಾರ್ಯಪಾಲಕ ಎಂಜಿ ನಿಯರ್‌ (ಪಿಆರ್‌ಇಡಿ) ಶಿವಶಂಕರ ಸ್ವಾಮಿ, ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಸುಜನ್‌ ಚಂದ್ರ ರಾವ್‌, ಕಿರಿಯ ಅಭಿಯಂತರ ಪ್ರಭಾಕರ್‌, ಪಲ್ಲವಿ, ವಿಮಾನ ನಿಲ್ದಾಣ ಪ್ರಾಧಿಕಾರದ ಎಂಜಿನಿಯರ್‌ ಶರತ್‌ಬಾಬು, ದೇವಿಪ್ರಸಾದ್‌, ಕಿಶೋರ್‌, ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಣ್ಣ ಕರಂಬಾರು, ಗುತ್ತಿಗೆದಾರರಾದ ಅನ್ವರ್‌ ಸಾದಾತ್‌, ಮುನಾವರ್‌, ಕಂದಾಯ ನಿರೀಕ್ಷಕ ನವೀನ್‌ ಕುಮಾರ್‌, ಗ್ರಾಮ ಕರಣಿಕೆ ವಿಜೇತಾ, ಪಂಚಾಯತ್‌ ಅಧ್ಯಕ್ಷ ಗಣೇಶ ಅರ್ಬಿ, ಉಪಾಧ್ಯಕ್ಷೆ ವನಜಾ ಬಿ. ಶೆಟ್ಟಿ , ಪಂಚಾಯತ್‌ ಸದಸ್ಯರಾದ ಲಕ್ಷಣ್‌ ಬಂಗೇರ, ಲಕ್ಷ್ಮಣ್‌, ಶಶಿಕಲಾ, ಕರಂಬಾರಿನ ಗ್ರಾಮಸ್ಥರು ಮೊದಲಾದವರು ಉಪಸ್ಥಿತರಿದ್ದರು.

ಕಾಲುವೆಗೆ ತೊಂದರೆ
ಕೆಲವೊಂದು ಕಡೆಗಳಲ್ಲಿ ಖಾಸಗಿಯವರು ಮಣ್ಣು  ಅಗೆಯುತ್ತಿರುವುದರಿಂದ ಕಾಲುವೆಗೆ ಮಣ್ಣು ಬೀಳುವ ಸಾಧ್ಯತೆ ಇದೆ. ಇದರಿಂದ ತೊಂದರೆಯಾಗಬಹುದು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‌ ಅವರೆಲ್ಲರನ್ನು ಕರೆಸಿ ತಡೆಗೋಡೆ ನಿರ್ಮಾಣ ಮಾಡಲು ಸೂಚನೆ ನೀಡಬೇಕು. ಸ್ಥಳೀಯ ಮನೆಯವರಿಗೆ ಯಾವುದೇ ಸಮಸ್ಯೆಯಾಗದಂತೆ ಎಚ್ಚರ ವಹಿಸಬೇಕು. ಇದಕ್ಕೆ ಸ್ಥಳೀಯರೂ ಸಹಕಾರ ನೀಡಬೇಕು ಎಂದು ಜಿಲ್ಲಾಧಿಕಾರಿ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next