Advertisement

 ಮಳವೂರು ಗ್ರಾಮ ಸಭೆ

10:23 AM Jan 10, 2018 | Team Udayavani |

ಮಳವೂರು: ಗುರುಪುರ ನದಿ ನೀರು ಕಲುಷಿತಗೊಂಡು ಮೀನುಗಳ ಸಾವು ಹಾಗೂ ಮಳವೂರು ವೆಂಟಡ್‌ ಡ್ಯಾಂ
ನೀರು ಕಲುಷಿತವಾಗದಂತೆ ಮುನ್ನೆಚ್ಚರಿಕೆಯ ಕ್ರಮವನ್ನು ಗ್ರಾಮ ಪಂಚಾಯತ್‌ ಈಗಲೇ ಕೈಗೊಳ್ಳಬೇಕು. ನೀರು ಕಲುಷಿತಗೊಳ್ಳಲು ಕಾರಣವಾದ ಕಂಪೆನಿಯ ವಿರುದ್ಧ ಕಠಿನ ಕ್ರಮ ಕೈಗೊಳ್ಳಬೇಕು ಎಂದು ಮಳವೂರು ಗ್ರಾಮ
ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿದರು.

Advertisement

ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ ಮಳವೂರು ಮತ್ತು ಕೆಂಜಾರು ಗ್ರಾಮಗಳ 2017- 18ನೇ ಸಾಲಿನ ದ್ವಿತೀಯ ಹಂತದ ಗ್ರಾಮ ಸಭೆಯು ಗ್ರಾಮ ಪಂಚಾಯತ್‌ ಅಧ್ಯಕ್ಷ ಗಣೇಶ್‌ ಅರ್ಬಿ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ಮಳವೂರು ಗ್ರಾ.ಪಂ.ವಠಾರದಲ್ಲಿ ನಡೆಯಿತು.

ಕಳೆದ ಬಾರಿ ಗುರುಪುರ ನದಿ ನೀರು ಕಲುಷಿತಗೊಂಡು ಪರಿಸರ ದುರ್ವಾಸನೆಗೆ ಕಾರಣವಾಗಿತ್ತು. ಈ ಬಗ್ಗೆ ಪಂಚಾಯತ್‌ ನಿರ್ಣಯ ಕೈಗೊಂಡು ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿತ್ತು. ಆದರೆ ಈ ಬಾರಿ ಕೂಡ ಪಂಚಾಯತ್‌ ತುರ್ತು ಕ್ರಮಕೈಗೊಳ್ಳಬೇಕು. ವೆಂಟಡ್‌ ಡ್ಯಾಂನ ನೀರು ಬಹುಗ್ರಾಮಗಳಿಗೆ ಸರಬರಾಜು ಆಗುವ ಕಾರಣ ಹೆಚ್ಚು ಜಾಗ್ರತೆ ವಹಿಸಬೇಕು. ಪ್ರತಿನಿಧಿ ನೀರಿನ ವರದಿ ಪಂಚಾಯತ್‌, ಜಿಲ್ಲಾಧಿಕಾರಿ, ಸಂಬಂಧಪಟ್ಟ ಇಲಾಖೆಗೆ ನೀಡುವಂತಾಗಬೇಕು. ಕಂಪೆನಿಗಳಿಂದ ಹೊರಬಿಡುವ ತ್ಯಾಜ್ಯ ನೀರಿನ ಪರೀಕ್ಷೆಯಾಗಬೇಕು. ಕಂಪೆನಿಗಳು ತ್ಯಾಜ್ಯ ಶುದ್ಧೀಕರಣ ಉಪಕರಣ ಬಳಸುತ್ತದೆಯೇ ಎಂಬುದನ್ನು ಪರಿಶೀಲಿಸಬೇಕು. ತಪ್ಪಿತಸ್ಥ ಕಂಪೆನಿಯ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು.

ಈ ಬಗ್ಗೆ ಪ್ರತಿಕ್ರಿಯಿಸಿದ ಗ್ರಾ.ಪಂ. ಅಧ್ಯಕ್ಷ ಗಣೇಶ್‌ ಅರ್ಬಿ, ಈಗಾಗಲೇ ಜಿಲ್ಲಾಧಿಕಾರಿಗೆ ಮನವಿ ಮಾಡಲಾಗಿದೆ. ಕಳೆದ ಬಾರಿ ಆಮ್ಲಜನಕದ ಕೊರತೆಯಿಂದ ಮೀನುಗಳು ಸತ್ತಿವೆ ಎಂದು ಪರಿಸರ ಇಲಾಖೆ ಹೇಳಿದೆ. ಈ ನೀರು 8 ಗ್ರಾ.ಪಂ.ನ 13 ಗ್ರಾಮಗಳಿಗೆ ಸರಬರಾಜು ಆಗುತ್ತಿದೆ. ಪ್ರತಿನಿಧಿ ನೀರಿನ ವರದಿಯನ್ನು ಪಂಚಾಯತ್‌ಗೆ ಸಲ್ಲಿಸುವಂತೆ ಮನವಿ ಮಾಡಲಾಗುವುದು ಎಂದರು.

12 ಮನೆಗಳಿಗೆ ಸಂಪರ್ಕ ರಸ್ತೆ ಇಲ್ಲ
ಕಳೆದ ಹಲವು ವರ್ಷಗಳಿಂದ ವಿಮಾನ ನಿಲ್ದಾಣ ಸಮೀಪದ 12 ಮನೆಗಳಿಗೆ ರಸ್ತೆ ಸಂಪರ್ಕ ಇಲ್ಲ ಎಂದು ಮನವಿ ಮಾಡಲಾಗುತ್ತಿದೆ. ಅದರೂ ಇನ್ನೂ ಕೂಡ ಪಂಚಾಯತ್‌ ಕ್ರಮಕೈಗೊಂಡಿಲ್ಲ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.

Advertisement

ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಇಲ್ಲಿ ಶುದ್ಧ ನೀರಿನ ಘಟಕವಿದೆ. ಇದು ಮಲೀನವಾಗದಂತೆ ನೋಡಬೇಕಾಗಿದೆ. ಅಲ್ಲಿನ ನಿವಾಸಿಗಳಲ್ಲಿ ಹಕ್ಕುಪತ್ರ ಇಲ್ಲ. 94 ಸಿಸಿಯಲ್ಲಿ ಹಕ್ಕುಪತ್ರ ಸಿಕ್ಕಿದಲ್ಲಿ ಸಂಪರ್ಕ ರಸ್ತೆಯನ್ನು ತುರ್ತಾಗಿ ಮಾಡಲಾಗುವುದು ಎಂದರು.

ಅಂಬೇಡ್ಕರ ಭವನ ಕುರಿತು ಚರ್ಚೆ
ಕಳೆದ ಹಲವು ವರ್ಷಗಳಿಂದ ಕರಂಬಾರು ಅಂಬೇಡ್ಕರ್‌ ನಗರದಲ್ಲಿ ಅಂಬೇಡ್ಕರ್‌ ಭವನ ನಿರ್ಮಾಣಕ್ಕೆ ಜಾಗ ನಿಗದಿ ಪಡಿಸಲು ಸಾಧ್ಯವಾಗಲಿಲ್ಲ. ಪಂಚಾಯತ್‌ ಇದನ್ನು ಕಾರ್ಯಗತಗೊಳಿಸಿಲ್ಲ ಎಂಬುದು ಸಭೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. 

ಅಧ್ಯಕ್ಷ ಗಣೇಶ್‌ ಅರ್ಬಿ ಮಾತನಾಡಿ, ಈಗಾಗಲೇ ಮೂರು ಜಾಗವನ್ನು ಇದರಲ್ಲಿ ಪ್ರಸ್ತಾವಿಸಲಾಗಿತ್ತು. ಅದರಲ್ಲಿ ಒಂದನ್ನು ಈಗಾಲೇ ಸಮತಟ್ಟು ಮಾಡಿದೆ. ಆ ಮೂಲೆಯಲ್ಲಿರುವ ಜಾಗ ಬೇಡವೇ ಬೇಡ. ಸರಕಾರಿ ಜಾಗ ಬೇಕಾದಷ್ಟಿವೆ. 137/3 ಮತ್ತು 32 ಸಿಯಲ್ಲಿ ಭವನ ನಿರ್ಮಾಣ ಮಾಡಬೇಕು. ಈ ಬಗ್ಗೆ ಸಾಮಾನ್ಯ ಸಭೆಯಲ್ಲಿ ನಿರ್ಣಯ ಮಾಡಿ ತಹಶೀಲ್ದಾರ್‌, ಕಂದಾಯ ನಿರೀಕ್ಷಕರಿಗೆ ಮನವಿ ಮಾಡಲಾಗುವುದು ಎಂದು ಹೇಳಿದರು. ಇದಕ್ಕೆ ಪೂರಕವಾಗಿ ಕಂದಾಯ ನಿರೀಕ್ಷ ನವೀನ್‌ ಕುಮಾರ್‌ ಮಾತನಾಡಿ, 2 ದಿನಗಳಲ್ಲಿ ಸರ್ವೆ ಮಾಡಿ ಕಳುಹಿಸಲಾಗುವುದು ಎಂದು ತಿಳಿಸಿದರು.

ತೊಗರಿ ಬದಲು ಹೆಸರುಕಾಳು ಕೊಡಿ
ಪಡಿತರ ಚೀಟಿಗೆ ತೊಗರಿ ಬೇಳೆಗಿಂತ ಹೆಸರು ಬೇಳೆ ಕಾಳು ಕೊಡಿ ಎಂದು ಆಹಾರ ಮತ್ತು ಪಡಿತರ ಪೂರೈಕೆ ಇಲಾಖೆಯ ತಹಶೀಲ್ದಾರ್‌ ವಾಸು ಶೆಟ್ಟಿ ಅವರಿಗೆ ಗ್ರಾಮಸ್ಥರು ವಿನಂತಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಅವರು, ಹೆಸರು ಕಾಳು ಕೆಲವು ಸಮಯಗಳಿಗೆ ಮಾತ್ರ ಸೀಮಿತವಾದ ಬೆಳೆ. ಇದರಿಂದ ಎಲ್ಲ ಸಮಯದಲ್ಲಿ ಇದನ್ನು ಕೊಡಲು ಸಾಧ್ಯವಿಲ್ಲ. ಈ ಬಾರಿ ಕುಚ್ಚಲು ಅಕ್ಕಿ ಬಂದಿದೆ. ಪಡಿತ ಚೀಟಿಯಲ್ಲಿ ಹೆಸರು ಸೇರಿಸುವವರು ತಿದ್ದುಪಡಿಗಳ ಪಡಿತರ ಚೀಟ್‌ ಈ ತಿಂಗಳ ಅಂತ್ಯಕ್ಕೆ ಬರುತ್ತದೆ ಎಂದರು.

ನಾಟಿ ಇಳುವರಿ ಜಾಸ್ತಿ
ಕೂಲಿಕಾರ್ಮಿಕರ ಸಮಸ್ಯೆಗೆ ಈಗಾಲೇ ಯಾಂತ್ರಿಕೃತವಾಗಿ ಭತ್ತದ ಕೃಷಿ ಮಾಡಬಹುದಾಗಿದೆ. ಕೇವಲ ನಾಲ್ಕು ಕೂಲಿಕಾರ್ಮಿಕರಿಂದ ಈಗ ಭತ್ತದ ಕೃಷಿ ಮಾಡಬಹುದಾಗಿದೆ. ಈ ಬಾರಿ ಯಂತ್ರದಿಂದ ನಾಟಿ ಮಾಡಿ ಇಳುವರಿ ಜಾಸ್ತಿ ಬಂದಿದೆ ಎಂದು ರೈತರು ಹೇಳುತ್ತಿದ್ದಾರೆ. ಸಿಬಂದಿ ಕೊರತೆ ಇದೆ. 9 ಗ್ರಾಮ ಪಂಚಾಯತ್‌ನ 28 ಗ್ರಾಮಗಳಲ್ಲಿ ಒಬ್ಬನೇ ಕಾರ್ಯನಿರ್ವಹಬೇಕಾಗಿದೆ. ಎಕ್ಕಾರು ಮತ್ತು ಮಳವೂರಿನಲ್ಲಿ ಕೃಷಿ ಇಲಾಖೆಯ ವಸತಿಗೃಹ ಇದೆ. ಸಿಬಂದಿಯ ಕೊರತೆಯಿಂದ ಇದರ ಸದುಪಯೋಗವಾಗುತ್ತಿಲ್ಲ ಎಂದು ಕೃಷಿ ಅಧಿಕಾರಿ ಬಶೀರ್‌ ತಿಳಿಸಿದರು.

ತೆಂಗಿನ ಮರಕ್ಕೆ ರೋಗ ಬರಲು ಬಿಳಿ ನೊಣ (ಪಾಂತೆ)ಕಾರಣವಾಗಿದೆ. ಇದಕ್ಕೆ ಹಳದಿ ರಟ್ಟಿನ ಪೆಟ್ಟಿಗೆ ಮಾಡಿ ಹರಳೆಣ್ಣೆ ಹಚ್ಚಿ ಮರದ ಸಮೀಪ ಕಟ್ಟಬೇಕು. ಕೀಟನಾಶಕ ಸಿಂಪಡಿಸಬೇಕು ಎಂದು ಅವರು ತಿಳಿಸಿದರು.

ಹಕ್ಕುಪತ್ರ ಸಿದ್ಧ
ಮಳವೂರು ಗ್ರಾಮ ಪಂಚಾಯತ್‌ ವ್ಯಾಪ್ತಿಯ 94ಸಿಸಿಯಲ್ಲಿ ಹಕ್ಕು ಪತ್ರ ಕಾರ್ಯ ಮುಗಿದಿದೆ. ಶಾಸಕರು ದಿನ ನಿಗದಿ ಮಾಡಿದ ಮೇಲೆ ಇದನ್ನು ವಿತರಿಸಲಾಗುವುದು. ಇದರಲ್ಲಿ ಡಿಸಿ ಮನ್ನಾ ಮತ್ತು ಅರಣ್ಯ ಇಲಾಖೆಯ ಜಾಗವನ್ನು ಕೂಡ ನೀಡಲಾಗಿದೆ. ರಸ್ತೆಯ ಹತ್ತಿರದ ಜಾಗ ಬಿಟ್ಟು ಉಳಿದವನ್ನು ನೀಡಲಾಗಿದೆ. ಮಳವೂರು ಗ್ರಾಮ ಪಂಚಾಯತ್‌ನಲ್ಲಿ 56 ಮಂದಿಯಲ್ಲಿ 38 ಮಂದಿಯ ಹಕ್ಕುಪತ್ರ ಸಿದ್ಧವಾಗಿದೆ ಎಂದರು.

ನೋಡಲ್‌ ಅಧಿಕಾರಿಯಾಗಿ ಮಂಗಳೂರು ಉತ್ತರ ಶಿಕ್ಷಣ ಸಂಯೋಜಕಿ ಪ್ರಭಾ ಆಗಮಿಸಿದ್ದರು. ತಾ.ಪಂ. ಸದಸ್ಯೆ ಸುಪ್ರೀತಾ ಶೆಟ್ಟಿ , ಗ್ರಾ.ಪಂ. ಉಪಾಧ್ಯಕ್ಷೆ ವನಜ ಬಿ. ಶೆಟ್ಟಿ, ಗ್ರಾ.ಪಂ. ಸದಸ್ಯರು ಹಾಗೂ ವಿವಿಧ ಇಲಾಖಾಧಿಕಾರಿಗಳು ಉಪಸ್ಥಿತರಿದ್ದರು. ಸಭೆಯನ್ನು ಪಿಡಿಒ ವಿಶ್ವನಾಥ ಬಿ. ನಿರ್ವಹಿಸಿದರು.

ಸಿಬಂದಿ ಕೊರತೆ 
ಬೊಂದೇಲ್‌ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬಂದಿ ಕೊರತೆ ಇದೆ. ಮೂರು ಮಂದಿಯಲ್ಲಿ ಒಬ್ಬರು ಮಾತ್ರ ಇದ್ದಾರೆ. ಬಜಪೆಯಲ್ಲಿಯೂ ಕಾರ್ಯ ನಿರ್ವಹಿಸಬೇಕಾಗಿದೆ. ಸ್ಟಾಫ್ ನರ್ಸ್‌ ಬೇಕು. ಈ ಬಗ್ಗೆ ಪಂಚಾಯತ್‌ನಿಂದ ಕ್ರಮಕೈಗೊಳ್ಳುವಂತೆ ಡಾ| ಸವಿತಾ ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next