ರಾಣಿಬೆನ್ನೂರ: ಬೆಂಕಿ ಅವಘಡಗಳು ಸಂಭವಿಸಿದಾಗ ಅಗ್ನಿಶಾಮಕ ಸಿಬ್ಬಂದಿ ಬರುವ ಮುನ್ನ ಅನಾಹುತ ತಪ್ಪಿಸಲು ಪ್ರತಿಯೊಬ್ಬರೂ ಪ್ರಯತ್ನಿಸಬೇಕು ಎಂದು ಅಗ್ನಿ ಶಾಮಕ ಸಿಬ್ಬಂದಿ ಜಯದೇವ ವಾಸನದ ಹೇಳಿದರು.
ಮಂಗಳವಾರ ತಾಲೂಕಿನ ಸುಣಕಲ್ಬಿದರಿ ಗ್ರಾಮದ ಸದ್ಗುರು ಶಿವಾನಂದ ಸಂಯುಕ್ತ ಪದವಿ ಪೂರ್ವ ಕಾಲೇಜಿನಲ್ಲಿ ಅಗ್ನಿಶಾಮಕ ಠಾಣೆ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದ ವತಿಯಿಂದ ಹಮ್ಮಿಕೊಳ್ಳಲಾದ ಬೆಂಕಿಯ ವರ್ಗಿಕರಣ, ಬೆಂಕಿ ನಂದಿಸುವ ವಿಧಾನಗಳು ಹಾಗೂ ಅಗ್ನಿ ಮುಂಜಾಗ್ರತಾ ರಕ್ಷಣಾ ಕಾರ್ಯಗಳ ವಿಶೇಷ ಉಪನ್ಯಾಸದಲ್ಲಿ ಅವರು ಮಾತನಾಡಿದರು.
ಬೆಂಕಿ ಅನಾಹುತ ನಿರ್ವಹಣೆ ಮತ್ತು ತಡೆಗಟ್ಟುವಿಕೆ ಕೇವಲ ಅಗ್ನಿ ಶಾಮಕ ಇಲಾಖೆಯೊಂದರಿಂದ ಸಾಧ್ಯವಿಲ್ಲ. ಈ ಕಾರ್ಯದಲ್ಲಿ ಪ್ರತಿಯೊಬ್ಬ ನಾಗರಿಕರೂ ವಿಷಯಗಳನ್ನು ಅರಿತುಕೊಂಡು ಭಾಗಿಯಾಗುವುದು ಅತ್ಯಗತ್ಯವಿದೆ. ಅಗ್ನಿ ದುರಂತಗಳು ಸಂಭವಿಸದಂತೆ ತಡೆಯಲು ತ್ಯಾಜ್ಯ ವಸ್ತುಗಳ ರಾಶಿಯ ಸರಿಯಾದ ನಿರ್ವಹಣೆ ಮಾಡಬೇಕು ಎಂದರು. ಪೆಟ್ರೋಲ್, ಡಿಸೇಲ್, ಸೀಮೆ ಎಣ್ಣೆಯಂತಹ ವಸ್ತುಗಳ ಸಂಗ್ರಹಣೆ ಮಾಡಿದಲ್ಲಿ ಅತ್ಯಂತ ಜಾಗೃತೆ ವಹಿಸಬೇಕು. ಸಂಘ ಸಂಸ್ಥೆಗಳು ಹಾಗೂ ಕಚೇರಿಗಳು ಮತ್ತು ಹೆಚ್ಚು ಜನ ಸೇರುವ ಸ್ಥಳಗಳಲ್ಲಿ ಅಗ್ನಿ ಶಾಮಕ ಇಲಾಖೆಯನ್ನು ಸಂಪರ್ಕಿಸಿ, ಅಲ್ಲಿ ಬೆಂಕಿ ಅನಾಹುತ ತಡೆಗಟ್ಟುವಿಕೆ ಮುಂಜಾಗ್ರತಾ ಕ್ರಮಗಳನ್ನು ಅವರ ಸಲಹೆಯಂತೆ ಸಲಕರಣೆ ಅಳವಡಿಸಿಕೊಂಡು, ಆ ವ್ಯವಸ್ಥೆಯು ಸರಿಯಾಗಿರುವುದನ್ನು ಪ್ರತಿವರ್ಷ ಇಲಾಖೆಯಿಂದ ಪ್ರಮಾಣಿಕರಿಸಿಕೊಳ್ಳಬೇಕು ಎಂದರು.
ಕಟ್ಟಡಗಳಲ್ಲಿ ಉತ್ತಮ ಗುಣಮಟ್ಟದ ವಿದ್ಯುತ್ ವೈಯರ್ ಅಳವಡಿಸಿರುವುದನ್ನು ಖಚಿತಪಡಿಸಿ ಕೊಳ್ಳಬೇಕು. ಬೆಂಕಿ ಅನಾಹುತಗಳು, ಅವುಗಳ ನಿರ್ವಹಣೆಗೆ ನಿರ್ದಿಷ್ಟ ಯಂತ್ರಗಳ ಬಳಸುವ ಬಗ್ಗೆ ತಿಳಿಸಿ ಪ್ರಾಯೋಗಿಕವಾಗಿ ಬೆಂಕಿ ನಂದಿಸುವ ವಿಧಾನಗಳನ್ನು ಸಿ.ಸಿ. ತಾವರಗೊಂದಿ, ಬಸವರಾಜ ಬಸವನಕೊಪ್ಪ, ವಿನಯ್ ಎಂ.ಕೆ., ಎಸ್.ಎಸ್.ರಾಠೊಡ ಅವರು ಪ್ರಾತ್ಯಕ್ಷತೆಯನ್ನು ನೀಡಿ ವಿದ್ಯಾರ್ಥಿಗಳಿಗೆ ತಿಳಿಸಿಕೊಟ್ಟರು. ಪ್ರಾಚಾರ್ಯ ಪಿ.ಮುನಿಯಪ್ಪ ಅಧ್ಯಕ್ಷತೆ ವಹಿಸಿದ್ದರು. ಯೋಜನಾಧಿಕಾರಿ ಶಿವಾನಂದ ಎಸ್., ಸುಮಾ ಜಿ., ಎಸ್.ಎಸ್.ಬಡ್ನಿ, ಕೆ.ಜೆ.ಆಶಾ ಸೇರಿದಂತೆ ಮತ್ತಿತರರು ಇದ್ದರು.