Advertisement
ಮನೆಯಲ್ಲಿ ತಮಗಿಷ್ಟವಾದ ಪ್ರಾಣಿ, ಪಕ್ಷಿ ಸಾಕುವುದು ಈಗಿನ ಟ್ರೆಂಡ್. ಹಿಂದೆ ಪ್ರಾಣಿ, ಪಕ್ಷಿ ಗಳನ್ನು ಸಾಕುವುದು ಗ್ರಾಮೀಣ ಭಾಗಗಳಿಗೇ ಸೀಮಿತವಾಗಿತ್ತು. ಆದರೆ ಈಗ ನಗರದ ಮಂದಿಯಲ್ಲಿ ಫ್ಯಾಶನ್ ಆಗಿ ಬೆಳೆಯುತ್ತಿದೆ. ಅದರಲ್ಲೂ ನಾಯಿ, ಬೆಕ್ಕು, ಹಕ್ಕಿಗಳನ್ನು ಸಾಕುವುದಕ್ಕೆ ಜನ ಹೆಚ್ಚು ಆಸಕ್ತಿ ತೋರಿಸುತ್ತಿದ್ದಾರೆ. ಮನೆ ಮಂದಿಯಲ್ಲಿ ಒಬ್ಬರಂತೆ ಕಾಣುವುದರಿಂದ ಇವುಗಳೂ ನಮಗೆ ತುಂಬಾ ಹತ್ತಿರವಾಗಿ ಬಿಟ್ಟಿವೆ.
ಮನೆಗಳಲ್ಲಿ ಪ್ರಾಣಿ, ಪಕ್ಷಿಗಳನ್ನು ಸಾಕುವುದರಿಂದ, ಅವುಗಳೊಂದಿಗೆ ಆಟವಾಡುವುದು, ಮಾತನಾಡುವುದರಿಂದ ಬ್ಯುಸಿಲೈಫ್ ನಲ್ಲಿರುವ ನಮ್ಮ ಮಾನಸಿಕ ಒತ್ತಡವೂ ಕಡಿಮೆಯಾಗುತ್ತದೆ ಎಂಬುದನ್ನು ಸಂಶೋಧನೆಯೊಂದು ದೃಢಪಡಿಸಿದೆ. ಹೀಗಾಗಿ ಇವುಗಳನ್ನು ಸಾಕಲೊಂದು ನೆಪ ಎಂಬಂತೆ ಸಾಕಷ್ಟು ಮಂದಿ ಪ್ರಾಣಿಗಳನ್ನು ಮನೆಯಲ್ಲಿ ಸಾಕುತ್ತಾರೆ. ಅದರೊಂದಿಗೆ ಹೆಚ್ಚಿನ ಸಮಯವನ್ನು ಕಳೆಯುತ್ತಾರೆ. ಮನೆ ಮಂದಿಯೊಂದಿಗೆ ಬೆರೆತ ಈ ಪ್ರಾಣಿಗಳು ಮನೆ ಮಂದಿಯ ಹಾಗೆ ಸಕಲ ಸುಖಭೋಗಗಳನ್ನೂ ಅನುಭವಿಸುತ್ತಿವೆ. ಅಂದರೆ ಅದಕ್ಕಾಗಿ ಮನೆ, ಮಲಗಲು ಬೆಡ್, ಆಹಾರ ತಿನ್ನಲು ಆಕರ್ಷಕ ತಟ್ಟೆಗಳು ಇತ್ಯಾದಿ. ಇನ್ನು ಕೆಲವರು ವಾಸ್ತು ನೆಪ ಕೊಟ್ಟು ಪ್ರಾಣಿ, ಪಕ್ಷಿಗಳನ್ನು ಸಾಕುತ್ತಿದ್ದಾರೆ. ನಾಯಿ, ಬೆಕ್ಕಿನೊಂದಿಗೆ ಮೀನು, ಮೊಲ, ವಿವಿಧ ಜಾತಿಯ ಪಕ್ಷಿಗಳನ್ನು ಸಾಕಲು ಎಲ್ಲರೂ ಇಷ್ಟಪಡುತ್ತಿದ್ದಾರೆ.
Related Articles
ಮನೆಯಲ್ಲಿ ಹಕ್ಕಿಗಳ ಕಲರವವಿದ್ದರೆ ಚೆನ್ನ ಎನ್ನುವ ಕಾರಣಕ್ಕಾಗಿಯೇ ಜನರು ಮನೆಯ ಮುಂಭಾಗದಲ್ಲಿ ಗೂಡನಿಟ್ಟು ವಿವಿಧ ಪಕ್ಷಿಗಳನ್ನು ಸಾಕುತ್ತಾರೆ. ಬಣ್ಣ ಬಣ್ಣದ ಪಕ್ಷಿಗಳು ಮನೆಯ ಸೌಂದರ್ಯವನ್ನು ಹೆಚ್ಚಿಸುವುದು ಮಾತ್ರ ವಲ್ಲ ಅವುಗಳ ಕಲರವ ಮನೆಯಲ್ಲಿ ತುಂಬಾ ಜನರಿದ್ದ ಅನುಭವವನ್ನೂ ಕೊಡುತ್ತದೆ. ಜತೆಗೆ ಇವು ಶುಭ ಸೂಚಕ ಎನ್ನುವ ಕಾರಣಕ್ಕೂ ಸಾಕಲು ಇಷ್ಟಪಡುತ್ತಾರೆ.
Advertisement
ಮನೆಯಲ್ಲಿ ನಾಯಿ, ಬೆಕ್ಕು ಮೊದಲಾದ ಪ್ರಾಣಿಗಳನ್ನು ಸಾಕುವ ಜನರೇ ಹೆಚ್ಚು. ಪಕ್ಷಿಗಳನ್ನು ಸಾಕುವವರ ಸಂಖ್ಯೆ ಕಡಿಮೆ. ಅದನ್ನು ಮನೆ ಒಳಗೆ ಸಾಕುವುದು, ನಿರ್ವಹಣೆ ಮಾಡುವುದು ಕಷ್ಟ ಎಂಬ ಕಾರಣಕ್ಕಾಗಿಯೇ ಪಕ್ಷಿ ಸಾಕಾಣಿಕೆಗೆ ಜನ ಹಿಂದೆ ಸರಿಯುತ್ತಾರೆ. ಪ್ರಾಣಿಗಳಿಗಿಂತಲೂ ಪಕ್ಷಿಗಳಿಗೆ ಹೆಚ್ಚಿನ ಆರೈಕೆ ಬೇಕಾಗುತ್ತದೆ. ನಮ್ಮ ಆರೈಕೆಯಲ್ಲಿ ತುಸು ಏರುಪೇರಾದರೂ ಅದನ್ನು ಗಂಭೀರವಾಗಿ ಸ್ವೀಕರಿಸುವ ಪಕ್ಷಿಗಳಿಗೆ ಮನುಷ್ಯರಂತೆಯೇ ಜ್ವರದಂತಹ ರೋಗಗಳು ಬೇಗನೆ ಬಾಧಿಸುವುದಿದೆ. ಹೀಗಾಗಿ ಈ ಕುರಿತು ಬಹಳಷ್ಟು ಎಚ್ಚರಿಕೆ ವಹಿಸಬೇಕಾಗುತ್ತದೆ.
ಮನೆಯಲ್ಲಿ ಹೆಚ್ಚಾಗಿ ಲವ್ ಬರ್ಡ್ಸ್, ಗಿಳಿ, ಪಾರಿವಾಳ, ಕಾಕ್‌ಟೈಲ್, ಗುಬ್ಬಚ್ಚಿ ಮೊದಲಾದ ಪಕ್ಷಿಗಳನ್ನು ಸಾಕಲಾಗುತ್ತದೆ. ಲವ್ ಬರ್ಡ್ಸ್ ಮತ್ತು ಗಿಳಿಗಳಲ್ಲಿ ಹಲವು ಬಣ್ಣ, ಜಾತಿಯವುಗಳಿವೆ. ಇವು ನೋಡಲು ಆಕರ್ಷಕವಾಗಿರುತ್ತವೆ. ಕೆಲವು ಪಕ್ಷಿಗಳು ನಾವು ಮಾತನಾಡುವುದಕ್ಕೆ ಪ್ರತಿಕ್ರಿಯೆಯನ್ನೂ ಕೊಡುವುದರಿಂದ ಮನೆಯಲ್ಲಿ ಸಾಕುವುದು ಖುಷಿ ಕೊಡುತ್ತದೆ.
ಇರಲಿ ಎಚ್ಚರಿಕೆಪಕ್ಷಿಗಳು ಹೆಚ್ಚಾಗಿ ನಾಜೂಕು ಸ್ವಭಾವ ಹೊಂದಿರುತ್ತವೆ. ಹೀಗಾಗಿ ಇವುಗಳನ್ನು ಸಾಕುವಾಗ ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ. ಪಕ್ಷಿಗಳ ಗೂಡನ್ನು ಎರಡು ದಿನಗಳಿಗೊಮ್ಮೆಯಾದರೂ ಶುಚಿಗೊಳಿಸಬೇಕು. ಇಲ್ಲವಾದರೆ ಅದರಿಂದಲೂ ರೋಗ ಹರಡುವ ಸಾಧ್ಯತೆ ಇದೆ. ಸಮಯಕ್ಕೆ ಸರಿಯಾಗಿ ನೀರು, ಆಹಾರ ಪೂರೈಸಬೇಕು. ಒಂಟಿ ಪಕ್ಷಿಗಳು ಬೇಗನೆ ಬೇಸರಗೊಳ್ಳುವುದರಿಂದ ಜೋಡಿ ಹಕ್ಕಿಗಳನ್ನು ಸಾಕುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದು ಒಳ್ಳೆಯದು. ಪಕ್ಷಿಗಳಿಗೆ ಪ್ರೀತಿಯ ಆರೈಕೆ ಮುಖ್ಯ
ಮನೆಯಲ್ಲಿ ಪಕ್ಷಿಗಳನ್ನು ಸಾಕುವುದಾದರೆ ಅದಕ್ಕೆ ತಿಂಡಿ ತಿನಸುಗಳಿಂದ ಹೆಚ್ಚಾಗಿ ಅದನ್ನು ಪ್ರೀತಿಯಿಂದ ನೋಡಿಕೊಳ್ಳುವುದು ಬಹುಮುಖ್ಯ. ಪ್ರೀತಿಯಿಂದ ಅವುಗಳೊಡನೆ ಮಾತನಾಡುತ್ತಿರುವುದರಿಂದ ಅವು ನಿಧಾನವಾಗಿ ನಮ್ಮ ಮಾತಿಗೆ ಪ್ರತಿಕ್ರಿಯೆ ನೀಡಲಾರಂಭಿಸುತ್ತವೆ. ಹಕ್ಕಿಗಳಿಗೆ ಬೇಗನೆ ರೋಗಗಳು ಆವರಿಸುವುದರಿಂದ ಈ ಬಗ್ಗೆ ಹೆಚ್ಚು ನಿಗಾ ವಹಿಸಬೇಕಾಗುತ್ತದೆ.
– ಸದಾಶಿವ ಶೆಣೈ,
ಪಕ್ಷಿ ಸಾಕುವವರು ಪ್ರಜ್ಞಾ ಶೆಟ್ಟಿ