Advertisement

ಸಂಚಾರ ನಿಯಮ ಉಲ್ಲಂಘಿಸಿದ್ರೆ ಜೋಕೆ

03:23 PM Aug 16, 2019 | Team Udayavani |

ತುಮಕೂರು: ನಗರದಲ್ಲಿ ಸಂಚಾರ ಉಲ್ಲಂಘಿಸಿ ವಾಹನ ಚಲಾಯಿಸುವವರ ಮೇಲೆ ಹದ್ದಿನ ಕಣ್ಣಿಡಲು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಇಂಟಿ ಗ್ರೆಟೆಡ್‌ ಸಿಟಿ ಕಮಾಂಡಿಂಗ್‌ ಆ್ಯಂಡ್‌ ಕಂಟ್ರೋಲಿಂಗ್‌ ಕೇಂದ್ರಕ್ಕೆ ಗುರುವಾರ ಸಂಸದ ಜಿ.ಎಸ್‌. ಬಸವರಾಜು ಚಾಲನೆ ನೀಡಿದರು.

Advertisement

ಮಹಾನಗರ ಪಾಲಿಕೆ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕೇಂದ್ರದ ಬಗ್ಗೆ ನಗರದ ಜನತೆಗೆ ವ್ಯಾಪಕ ಅರಿವು ಮೂಡಿಸ ಬೇಕಾಗಿದೆ. ಈ ಹಿನ್ನೆಲೆಯಲ್ಲಿ ಒಂದು ತಿಂಗಳ ನಂತರ ಸಂಚಾರ ಉಲ್ಲಂಘನೆಗೆ ಈ ಕೇಂದ್ರದ ಮೂಲಕ ನೋಟಿಸ್‌ ಜಾರಿ ಮಾಡಿ ದಂಡ ಸಂಗ್ರಹಿಸಬೇಕು ಎಂದು ಅಭಿಪ್ರಾಯಪಟ್ಟರು.

8 ವೃತ್ತಗಳಲ್ಲಿ ಕ್ಯಾಮರಾ: ನಗರದ ಪ್ರಮುಖ 8 ವೃತ್ತಗಳಲ್ಲಿ ರಸ್ತೆ ನಿಯಮ ಉಲ್ಲಂಘಿಸುವ ವಾಹನ ಸುಲಭವಾಗಿ ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮರಾ ಅಳವಡಿಸಿದ್ದು, ಇದರಿಂದ ಶಿಸ್ತುಬದ್ಧ ಸಾರಿಗೆ ವ್ಯವಸ್ಥೆ ನಗರದಲ್ಲಿ ಅನುಷ್ಠಾನಗೊಳ್ಳಲಿದೆ ಎಂದರು.

ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಮಾತನಾಡಿ, ಕ್ಯಾತ್ಸಂದ್ರ, ಬಟವಾಡಿ, ಟೌನ್‌ಹಾಲ್ ಸರ್ಕಲ್, ಶಿವಕುಮಾರ ಸ್ವಾಮೀಜಿ ಸರ್ಕಲ್ ಸೇರಿ 8 ಜಂಕ್ಷನ್‌ಗಳಲ್ಲಿ ರೆಡ್‌ಲೈಟ್ ವೈಲೇಷನ್‌, ಡಿಟಿಕ್ಷನ್‌ ಕ್ಯಾಮರಾ, ಆಟೋಮ್ಯಾಟಿಕ್‌ ನಂಬರ್‌ಪ್ಲೇಟ್, ರೆಕಗ್ನಿಷನ್‌ ಕ್ಯಾಮೆರಾ ಸೇರಿ ವಿವಿಧ ರೀತಿಯ ಸಿಸಿ ಕ್ಯಾಮರಾ ಅಳವಡಿಸಲಾಗಿದ್ದು, ಈ ಕ್ಯಾಮರಾಗಳು ರಸ್ತೆ ಉಲ್ಲಂಘನೆ ಮಾಡುವ ವಾಹನಗಳ ನಂಬರ್‌ ಪ್ಲೇಟ್ ಸೆರೆಹಿಡಿಯಲಿವೆ ಎಂದು ಹೇಳಿದರು.

ಅಪರಾಧ ಚಟುವಟಿಕೆ ಮೇಲೂ ನಿಗಾ: ಸಂಬಂಧಿಸಿದ ವಾಹನ ಮಾಲೀಕರಿಗೆ ದಂಡ ವಿಧಿಸಲು ನೋಟಿಸ್‌ ಅನ್ನು ಈ ಕೇಂದ್ರದ ಮೂಲಕ ಜನರೇಟ್ ಮಾಡಿ ಪೊಲೀಸ್‌ ಇಲಾಖೆ ಜಾರಿ ಮಾಡಲಿದೆ. ಕೇಂದ್ರೀಕೃತ ವ್ಯವಸ್ಥೆಯಿಂದ ನಗರದಲ್ಲಿ ಕಳ್ಳತನ ಸೇರಿ ವಿವಿಧ ಅಪರಾಧ ಚಟುವಟಿಕೆ ಮೇಲೂ ನಿಗಾವಹಿಸ ಬಹುದಾಗಿದೆ ಎಂದರು.

Advertisement

ಪಾಲಿಕೆ ಆವರಣದಲ್ಲಿ ತಾತ್ಕಾಲಿಕವಾಗಿ ಕೇಂದ್ರ ಪ್ರಾರಂಭವಾಗಿದ್ದು, ತದನಂತರ ಜಿಲ್ಲಾ ಎಸ್‌ಪಿ ಕಚೇರಿ ಆವರಣಕ್ಕೆ ಶಾಶ್ವತವಾಗಿ ಸ್ಥಳಾಂತರ ಗೊಳ್ಳಲಿದೆ. ಬೀದಿದೀಪ ನಿರ್ವಹಣೆ, ಜಿಪಿಎಸ್‌ ಆಧಾರಿತ ಆಸ್ತಿಗಳ ನೋಂದಣಿ ಸೇರಿ ವಿವಿಧ ಅತ್ಯಾಧುನಿಕ ಸೌಲಭ್ಯಗಳನ್ನು ನಿರ್ವಹಿಸಲಿದೆ. ಎಫ್ಕಾನ್‌ ಇಂಡಿಯಾ ಸಂಸ್ಥೆ 5 ವರ್ಷ ಕೇಂದ್ರ ನಿರ್ವಹಿಸಿ ಪಾಲಿಕೆಗೆ ಹಸ್ತಾಂತರಿ ಸಲಿದೆ ಎಂದು ತಿಳಿಸಿದರು. ಮೇಯರ್‌ ಲಲಿತಾ ರವೀಶ್‌, ಡೀಸಿ ಡಾ. ರಾಕೇಶ್‌ಕುಮಾರ್‌, ಎಸ್‌ಪಿ ಡಾ. ಕೋನ ವಂಶಿಕೃಷ್ಣ, ಪಾಲಿಕೆ ಆಯುಕ್ತ ಟಿ. ಭೂಬಾಲನ್‌ ಸೇರಿದಂತೆ ಹಲವರು ಹಾಜರಿದ್ದರು.

ಸ್ಮಾರ್ಟ್‌ ತುಮಕೂರು ಆ್ಯಪ್‌ಗೆ ಚಾಲನೆ: ಆಸ್ತಿ ತೆರಿಗೆ ಪಾವತಿ, ನೀರು ಬಿಲ್ಲು, ಸಕಾಲ ಮತ್ತಿತರ ಸೌಲಭ್ಯ ಪಡೆಯಲು ನಗರದ ಜನರಿಗೆ ಅನುಕೂಲವಾಗುವ ಸ್ಮಾರ್ಟ್‌ ತುಮಕೂರು ಆ್ಯಪ್‌ಗೆ ಸಂಸದ ಜಿ.ಎಸ್‌. ಬಸವರಾಜು ಹಾಗೂ ಶಾಸಕ ಜಿ.ಬಿ. ಜ್ಯೋತಿಗಣೇಶ್‌ ಚಾಲನೆ ನೀಡಿದರು.
Advertisement

Udayavani is now on Telegram. Click here to join our channel and stay updated with the latest news.

Next