ಕೋಲಾರ: ಈ ಬಾರಿ ನಡೆಯುತ್ತಿರುವ ಎಸ್ಸೆಸ್ಸೆಲ್ಸಿ ಪರೀಕ್ಷೆ ಹೊಸ ರೀತಿಯದ್ದಾಗಿದ್ದು ಮಕ್ಕಳಿಗೆ ಒಎಂಆರ್ ಶೀಟ್, ಬಹು ಆಯ್ಕೆ ಪ್ರಶ್ನೆಗಳ ಕುರಿತು ಅರಿವು ಮೂಡಿಸುವ ಅಗತ್ಯವಿದೆ ಎಂದು ಪ್ರಭಾರ ಕ್ಷೇತ್ರ ಶಿಕ್ಷಣಾಧಿಕಾರಿ ರಾಮಕೃಷ್ಣಪ್ಪ ಸೂಚಿಸಿದರು.
ತಾಲೂಕಿನ ಕ್ಯಾಲನೂರು ಕರ್ನಾಟಕ ಪಬ್ಲಿಕ್ ಶಾಲೆಯ ಪರೀಕ್ಷಾ ಕೇಂದ್ರಕ್ಕೆ ಕೇಂದ್ರದಲ್ಲಿ ಕೈಗೊಂಡಿ ರುವ ಸಿದ್ಧತೆಗಳನ್ನು ಪರಿಶೀಲನೆ ನಡೆಸಿ ಮಾತನಾಡಿದರು. ಮಕ್ಕಳು ನಿರಾತಂಕವಾಗಿ ಪರೀಕ್ಷೆ ಬರೆಯುವ ವಾತಾ ವರಣ ಸೃಷ್ಟಿಸುವುದು ಶಿಕ್ಷಕರ ಕ ರ್ತವ್ಯ. ಪರೀಕ್ಷೆಯಷ್ಟೇ ಮಕ್ಕಳ ಸುರಕ್ಷತೆಗೂ ಆದ್ಯತೆ ನೀಡಬೇಕಾಗಿದೆ. ಕೋವಿಡ್ ಸೋಂಕು ಮಕ್ಕಳಿಗೆ ತಾಗದಂತೆ ಪರೀಕ್ಷಾ ಕೇಂದ್ರದಲ್ಲಿ ಎಲ್ಲಾ ಮುಂಜಾಗ್ರತಾ ಕ್ರಮ ವಹಿಸಬೇಕು ಎಂದು ತಿಳಿಸಿದರು.
ಸ್ವತ್ಛತೆ ಕೈಗೊಳ್ಳಿ: ಮಕ್ಕಳು ಶಾಲೆಗಳಿಗೆ ಬಾರದ ಕಾರಣ ಶೌಚಾಲಯಗಳು ಬಳಕೆಯಾಗದೇ ಕೊಳಕು ತುಂಬಿ ರುವ ಸಾಧ್ಯತೆ ಇದ್ದು, ಅವುಗಳನ್ನು ಸ್ವತ್ಛಗೊಳಿಸಿ, ಬ್ಲೀಚಿಂಗ್ ಪೌಡರ್ ಹಾಗೂ ಫಿನಾಯಲ್ ಹಾಕಿ ಸ್ವತ್ಛತೆ ಹಾಗೂ ಸೋಂಕು ರಹಿತವಾಗಿರುವಂತೆ ನೋಡಿಕೊಳ್ಳಿ ಎಂದು ತಾಕೀತು ಮಾಡಿದರು.
ಶೌಚಾಲಯದಲ್ಲಿ ಯಥೇಚ್ಚವಾಗಿ ನೀರು ಇರುವಂತೆ ನೋಡಿಕೊಳ್ಳಿ, ಕೈ ತೊಳೆಯಲು ಸೋಪು ಒದಗಿಸಿ, ಶಾಲಾ ಆವರಣ, ಕೊಠಡಿಗಳಲ್ಲಿ ಸ್ವತ್ಛತೆ, ಗಾಳಿ ಬೆಳಕು ಇರುವಂತೆ ವ್ಯವಸ್ಥೆ ಮಾಡಿ ಎಂದು ಸೂಚಿಸಿದರು. ನೆಲದ ಮೇಲೆಕೂರಿಸದಿರಿ: ಪ್ರತಿ ವಿದ್ಯಾರ್ಥಿಗೊಂದು ಡೆಸ್ಕ್ ಒದಗಿಸಲು ಸೂಚಿಸಿರುವುದರಿಂದ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಇತರೆ ಶಾಲೆಗಳಿಂದಲೂ ಡೆಸ್ಕ್ ತರಿಸಿಕೊಳ್ಳಿ. ಯಾವುದೇ ಕಾರಣಕ್ಕೂ ಮಕ್ಕಳನ್ನು ನೆಲದ ಮೇಲೆ ಕೂರಿಸಿ ಪರೀಕ್ಷೆ ಬರೆಸಬಾರದು ಎಂದು ತಿಳಿಸಿದರು. ಕೇಂದ್ರಗಳಿಗೆ ಆಶಾ ಕಾರ್ಯಕರ್ತೆಯರು, ಶುಶ್ರೂಷಕಿಯರ ನೇಮಕ, ಭದ್ರತೆಗೆ ಪೊಲೀಸರ ನಿಯೋಜನೆಗಾಗಿ ಕೇಂದ್ರದ ಮುಖ್ಯ ಅಧೀಕ್ಷಕರು ಮೊದಲೇ ಮನವಿ ಸಲ್ಲಿಸಿ ಎಂದು ತಿಳಿಸಿ, ಪ್ರತಿ ಹಂತದಲ್ಲೂ ಎಚ್ಚರಿಕೆ ವಹಿಸಲು ಕಿವಿಮಾತು ಹೇಳಿದರು.
ಸಿದ್ಧತೆಗೆ ಮೆಚ್ಚುಗೆ: ಪರೀಕ್ಷಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುವ ಸಿಬ್ಬಂದಿಗೆ ಲಸಿಕೆ ಹಾಕಿಸಿಕೊಂಡಿರು ವುದನ್ನು ಖಾತ್ರಿ ಪಡಿಸಿಕೊಳ್ಳಿ, ಯಾವುದೇ ನಿರ್ಲಕ್ಷ್ಯ ಮಾಡದಿರಿ, ಗೊಂದಲಕ್ಕೆ ಅವಕಾಶ ಬೇಡ. ಪರೀಕ್ಷೆ ಸುಗಮವಾಗಿ ನಡೆಸಿ ಎಂದು ತಿಳಿಸಿ, ಕೇಂದ್ರದಲ್ಲಿ ಕೈಗೊಂಡಿರುವ ಸಿದ್ಧತೆಗಳ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಬಿಆರ್‌ಪಿ ಪ್ರವೀಣ್, ಇಸಿಒ ರಾಘವೇಂದ್ರ,ಮುಖ್ಯಶಿಕ್ಷಕರಾದ ಓ.ಮಲ್ಲಿಕಾರ್ಜುನ, ಶಿಕ್ಷಕರಾದ ರಾಮಂಜಪ್ಪ, ಶಿವಪ್ಪ, ವಹೀದಾ, ಸಯೀದಾ, ರಾಧಾ, ಭಾಗ್ಯಶ್ರೀ, ಸೌಮ್ಯಾ, ರಾಧಿಕಾ, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.