Advertisement

ಪೆಟ್ರೋಲ್‌, ಡೀಸೆಲ್‌ ಕಳ್ಳರಿದ್ದಾರೆ ಎಚ್ಚರ!

11:07 AM Oct 29, 2018 | Team Udayavani |

ಮಹಾನಗರ: ರೈಲು, ಬಸ್‌ ನಿಲ್ದಾಣ ಸೇರಿದಂತೆ ನಗರದ ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳಲ್ಲಿ ಹೆಚ್ಚು ಸಮಯ ವಾಹನ ನಿಲ್ಲಿಸಿ ಹೋಗಬೇಕಾದರೆ ಎಚ್ಚರ ವಹಿಸುವ ಅಗತ್ಯವಿದೆ. ಏಕೆಂದರೆ, ಸವಾರರು ತಮ್ಮ ಕೆಲಸ ಮುಗಿಸಿ ಹಿಂದಿರುಗುವಷ್ಟರಲ್ಲಿ ವಾಹನದ ಇಂಧನ ಟ್ಯಾಂಕ್‌ನಲ್ಲಿರುವ ಪೆಟ್ರೋಲ್‌-ಡೀಸೆಲ್‌ ಖಾಲಿಯಾಗಿರುತ್ತದೆ!

Advertisement

ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳಲ್ಲಿ ಅಥವಾ ವಾಹನ ನಿಲುಗಡೆ ಮಾಡಿರುವ ಸ್ಥಳಗಳಲ್ಲಿ ರಾತ್ರಿ ಹೊತ್ತು ಹೊಂಚು ಹಾಕಿ ಪೆಟ್ರೋಲ್‌, ಡೀಸೆಲ್‌ ಕದಿಯುತ್ತಿರುವ ಘಟನೆಗಳು ಹೆಚ್ಚಾಗುತ್ತಿದ್ದು, ಪೆಟ್ರೋಲ್‌ ಖದೀಮರ ಬಗ್ಗೆ ಎಚ್ಚರಿಕೆಯಿಂದಿರುವುದು ಆವಶ್ಯಕ. ಈ ಬಗ್ಗೆ ಕೆಲವರು ಪೊಲೀಸ್‌ ದೂರು ನೀಡಿದರೆ, ಮತ್ತೆ ಕೆಲವರು ಅನವಶ್ಯ ಅಲೆದಾಡಬೇಕಾಗುತ್ತದೆ ಎಂದು ಸುಮ್ಮನಾಗುತ್ತಿದ್ದಾರೆ.

ಪಾರ್ಕ್‌ ಮಾಡಿದ ವಾಹನ ಸುರಕ್ಷಿತವಲ್ಲ
ಸಾಮಾನ್ಯವಾಗಿ ಜನರು ರೈಲು ಅಥವಾ ಬಸ್‌ಗಳಲ್ಲಿ ದೂರದೂರಿಗೆ ಹೋಗಬೇಕಾದ ಸಂದರ್ಭದಲ್ಲಿ ರೈಲ್ವೇ ನಿಲ್ದಾಣ ಅಥವಾ ಬಸ್‌ ನಿಲ್ದಾಣದ ಬಳಿಯ ಪಾರ್ಕಿಂಗ್‌ ಸ್ಥಳದಲ್ಲಿ ವಾಹನಗಳನ್ನು ನಿಲ್ಲಿಸುತ್ತಾರೆ. ಹೀಗೆ ಪಾರ್ಕ್‌ ಮಾಡಿದಕ್ಕೆ ಹಣವನ್ನೂ ನೀಡುತ್ತಾರೆ. ಆದರೆ ಪಾರ್ಕ್‌ ಮಾಡಿದ ವಾಹನ ಸುರಕ್ಷಿತವಾಗಿ ಇರುತ್ತದೆ ಎಂಬ ಬಗ್ಗೆ ಯಾವ ಖಚಿತತೆಯೂ ಇರುವುದಿಲ್ಲ. ಏಕೆಂದರೆ ಬೇಕೆಂದೇ ಹೊಂಚು ಹಾಕಿ ಅಥವಾ ತಮ್ಮ ವಾಹನದಲ್ಲಿ ಪೆಟ್ರೋಲ್‌ ಖಾಲಿಯಾಯಿತೆಂದು ರಾತ್ರಿ ಹೊತ್ತಿನಲ್ಲಿ ದ್ವಿಚಕ್ರ ವಾಹನಗಳಿಂದ ಪೆಟ್ರೋಲ್‌ ಕದಿಯುವವರ ಸಂಖ್ಯೆ ಹೆಚ್ಚುತ್ತಿದೆ. 

ಗಂಜಿಮಠ-ನಾರ್ಲಪದವು ಬಳಿ ಬುಧವಾರ ರಾತ್ರಿ ಜಿ. ಯಾಕೂಬ್‌ ಅವರು ತಮ್ಮ ಮನೆ ಪಕ್ಕದಲ್ಲಿ ನಿಲ್ಲಿಸಿದ್ದ ಗ್ಯಾಸ್‌ ಲೋಡ್‌ನ‌ ಲಾರಿಯಿಂದ 10,000 ರೂ. ಮೌಲ್ಯದ 120 ಲೀಟರ್‌ ಡೀಸೆಲ್‌ ಕಳವಾಗಿದೆ ಎಂದು ಈಗಾಗಲೇ ಬಜಪೆ ಪೊಲೀಸ್‌ ಠಾಣೆಗೆ ದೂರು ದಾಖಲಿದ್ದಾರೆ.

ಮಂಗಳೂರು ನಿವಾಸಿಯೋರ್ವರು ಕಳೆದ ರವಿವಾರ ಹಂಪನಕಟ್ಟೆ ಸೆಂಟ್ರಲ್‌ ರೈಲ್ವೇ ನಿಲ್ದಾಣದ ಪಾರ್ಕಿಂಗ್‌ ಸ್ಥಳದಲ್ಲಿ ತಮ್ಮ ದ್ವಿಚಕ್ರ ವಾಹನವನ್ನು ನಿಲ್ಲಿಸಿದ್ದರು. ಟ್ಯಾಂಕ್‌ನಲ್ಲಿ ಸುಮಾರು ಎರಡು ಲೀಟರ್‌ ಇದ್ದ ಪೆಟ್ರೋಲ್‌ ಎರಡು ದಿನಗಳ ಅನಂತರ ಮಂಗಳವಾರ ಬೆಳಗ್ಗಿನ ಜಾವ ಬಂದು ನೋಡಿದಾಗ ಸಂಪೂರ್ಣ ಖಾಲಿಯಾಗಿತ್ತು. ವಾಹನ ಚಾಲುಗೊಳ್ಳಲು ಬೈಕಿಗೆ ಪೆಟ್ರೋಲ್‌ ನ್ನು ಸಂಪರ್ಕಿಸುವ ವಯರ್‌ ಸಡಿಲ ಕನೆಕ್ಷನ್‌ನಲ್ಲಿದ್ದು, ವಾಹನದ ಕೆಳಭಾಗದಲ್ಲಿ ಪೆಟ್ರೋಲ್‌ ಚೆಲ್ಲಿತ್ತು. ಅಲ್ಲದೆ ಬಿಸಿಲು ತಾಗದ ಜಾಗದಲ್ಲಿ ವಾಹನ ನಿಲ್ಲಿಸಿರುವುದರಿಂದ ಎರಡು ಲೀಟರ್‌ ಪೆಟ್ರೋಲ್‌ ಬಿಸಿಲಿಗೆ ಆರಿ ಹೋಗುವ ಸಾಧ್ಯತೆಯೂ ಇಲ್ಲ. ಇದರಿಂದ ಪೆಟ್ರೋಲ್‌ ಕಳವಾಗಿರುವುದು ಸ್ಪಷ್ಟವಾಗಿದೆ. ಆದರೆ ಈ ಬಗ್ಗೆ ಪಾರ್ಕಿಂಗ್‌ನಲ್ಲಿ ಶುಲ್ಕ ಸಂಗ್ರಹಿಸುವವರ ಬಳಿ ವಿಚಾರಿಸಿದರೆ ಗಮನಕ್ಕೆ ಬಂದಿಲ್ಲ ಎನ್ನುತ್ತಾರೆ ಅವರು.

Advertisement

ಹೆಲ್ಮೆಟ್‌ ಕಳ್ಳರ ಹಾವಳಿ
ಹಿಂಬದಿ ಸವಾರರಿಗೂ ಹೆಲ್ಮೆಟ್‌ ಕಡ್ಡಾಯ ಆದೇಶ ಬಂದ ಬಳಿಕ ಹೆಲ್ಮೆಟ್‌ ಕಳವು ಪ್ರಕರಣ ಹೆಚ್ಚಿದ್ದರೆ, ಬಳಿಕ ಕಡಿಮೆಯಾಗಿತ್ತು. ಆದರೆ ಈಗ ಬೈಕ್‌ ಮೇಲೆ ಹೆಲ್ಮೆಟ್‌ ಇರಿಸಿ ಹೋದರೆ ಹೆಲ್ಮೆಟ್‌ನ್ನೂ ಲಪಟಾಯಿಸುವ ಕಳ್ಳರ ಸಂಖ್ಯೆ ಹೆಚ್ಚುತ್ತಿದೆ. 

24×7 ಸಿಬಂದಿ ಇದ್ದರೂ
ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಕಳವಾಗುತ್ತಿರುವುದು ಇದು ಮೊದಲಲ್ಲ. ಈ ಹಿಂದೆ ಅನೇಕ ಬಾರಿ ವಯರ್‌ ತುಂಡರಿಸಿ ಕಳವು ಮಾಡಿರುವ ಬಗ್ಗೆಯೂ ಸಾರ್ವಜನಿಕರು ದೂರಿಕೊಂಡಿದ್ದಾರೆ. ಈ ಎಲ್ಲ ಪಾರ್ಕಿಂಗ್‌ ಸ್ಥಳಗಳಲ್ಲಿ ಪಾರ್ಕಿಂಗ್‌ ಶುಲ್ಕ ತೆಗೆದುಕೊಳ್ಳುವ ಸಿಬಂದಿ ಮತ್ತು ಭದ್ರತಾ ಸಿಬಂದಿ 24×7 ಕೆಲಸದಲ್ಲಿರುತ್ತಾರೆ. ಆದರೂ ಕಳವು ನಡೆಯುತ್ತಿರುವುದು ವಿಪರ್ಯಾಸ. 

ದೂರು ಬಂದಿಲ್ಲ
ರೈಲ್ವೇ ಸ್ಟೇಷನ್‌ ಅಥವಾ ಇತರ ಸಾರ್ವಜನಿಕ ಪಾರ್ಕಿಂಗ್‌ ಸ್ಥಳಗಳಲ್ಲಿ ಪೆಟ್ರೋಲ್‌, ಡೀಸೆಲ್‌ ಕಳವು ಆದ ಬಗ್ಗೆ ಯಾವುದೇ ದೂರುಗಳು ಈವರೆಗೆ ಬಂದಿಲ್ಲ. ದೂರು ಬಂದಲ್ಲಿ ಆ ಬಗ್ಗೆ ಪರಿಶೀಲಿಸಲಾಗುವುದು.
– ಉಮಾ ಪ್ರಶಾಂತ್‌,
ಡಿಸಿಪಿ,ಕಾನೂನು ಮತ್ತು ಸುವ್ಯವಸ್ಥೆ

ವಿಶೇಷ ವರದಿ

Advertisement

Udayavani is now on Telegram. Click here to join our channel and stay updated with the latest news.

Next