Advertisement

ಮಳೆಗಾಲ: ವಿದ್ಯುತ್‌ ಸಮಸ್ಯೆ, ಸಾರ್ವಜನಿಕರಲ್ಲೂ ಇರಲಿ ಜಾಗ್ರತೆ

05:55 AM May 26, 2018 | Karthik A |

ಪುತ್ತೂರು: ಮಳೆಗಾಲ ಬಂತೆಂದರೆ ವಿದ್ಯುತ್‌ ಅವಘಡಗಳೂ ಹೆಚ್ಚುತ್ತವೆ. ಗಾಳಿ ಮಳೆ, ಸಿಡಿಲು, ಮಿಂಚು ಬಂದಾಗ ವಿದ್ಯುತ್‌ ಅವಘಡಗಳು ಉಂಟಾಗುತ್ತವೆ. ಈ ಕಾರಣದಿಂದ ಮೆಸ್ಕಾಂ ಮುನ್ನೆಚ್ಚರಿಕೆ ವಹಿಸುವ ಜತೆಗೆ, ಸಾರ್ವಜನಿಕರೂ ಜಾಗೃತ ಸ್ಥಿತಿಯಲ್ಲಿರಬೇಕಾಗುತ್ತದೆ. ಬೇಸಗೆ ಅಥವಾ ಚಳಿಗಾಲದಲ್ಲಿ ಇರುವ ವಿದ್ಯುತ್‌ ಸರಬರಾಜು ವ್ಯವಸ್ಥೆಗೂ ಮಳೆಗಾಲದ ಸರಬರಾಜು ವ್ಯವಸ್ಥೆಗೂ ವ್ಯತ್ಯಾಸವಿರುತ್ತದೆ. ಮಳೆಗಾಲದಲ್ಲಿ ಸಿಡಿಲು, ಮಳೆ ಬರುವಾಗ ಅಥವಾ ವಿದ್ಯುತ್‌ ತಂತಿಗಳಲ್ಲಿ ತಾಂತ್ರಿಕ ತೊಂದರೆಗಳು ಉಂಟಾದಾಗ ಸಾರ್ವಜನಿಕರೇ ಅದನ್ನು ಸರಿಪಡಿ ಸಲು, ಮುಟ್ಟಲು ಹೋಗಬಾರದು.

Advertisement

ವಿದ್ಯುತ್‌ ತಂತಿಯ ಇಕ್ಕೆಲಗಳಲ್ಲಿನ ಮರಗಳ ಕೊಂಬೆಗಳು ವಿದ್ಯುತ್‌ ತಂತಿಗೆ ತಾಗುವಂತಿದ್ದರೆ ಸಾಮಾನ್ಯವಾಗಿ ಮಳೆಗಾಲದ ಆರಂಭಕ್ಕೆ ಮೊದಲೇ ಸವರುವ ಕೆಲಸ ಮಾಡಬೇಕು. ಈ ನಿಟ್ಟಿನಲ್ಲಿ ಮೆಸ್ಕಾಂ ಸಿಬಂದಿ ಕಾರ್ಯನಿರ್ವಹಿ ಸುತ್ತಾರೆ. ಆದರೆ ಕೆಲವು ಖಾಸಗಿ ಜಾಗಗಳಲ್ಲಿ ಕೊಂಬೆಗಳು ವಿದ್ಯುತ್‌ ತಂತಿಗಳಿಗೆ ಸವರಿಕೊಂಡಿದ್ದರೆ ಮಳೆಗಾಲ ಆರಂಭವಾದ ಬಳಿಕ ಪ್ರಯತ್ನಿಸಬಾರದು. ಇಂತಹ ಕೆಲಸ ಮಾಡುವುದಿದ್ದರೂ ಸ್ಥಳೀಯ ಮೆಸ್ಕಾಂ ಕಚೇರಿಗೆ ಮಾಹಿತಿ ನೀಡಿ ಅವರ ಉಪಸ್ಥಿತಿಯಲ್ಲಿ ಕೆಲಸ ಮಾಡಬೇಕು ಎನ್ನುವುದು ಮೆಸ್ಕಾಂ ಅಧಿಕಾರಿಗಳ ಅಭಿಪ್ರಾಯ.


ಮೆಸ್ಕಾಂ ಸಂಪರ್ಕಿಸಿ

ವಿದ್ಯುತ್‌ ಅವಘಡಗಳ ಮುನ್ಸೂಚನೆ ಕಂಡುಬಂದಲ್ಲಿ ಅಥವಾ ವಿದ್ಯುತ್‌ ಅವಘಡ ಸಂಭವಿಸಿದಲ್ಲಿ 1912 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಮಾಹಿತಿ ನೀಡಬಹುದು. ಅಥವಾ ಸಮೀಪದ ಮೆಸ್ಕಾಂ ಕಚೇರಿಯನ್ನು, ಅಧಿಕಾರಿಗಳನ್ನು ಸಂಪರ್ಕಿಸಬಹುದು. ವಿದ್ಯುತ್‌ ಲೈನ್‌ ಗಳಲ್ಲಿ ತೊಂದರೆ ಸಂಭವಿಸಿದ ಸಂದರ್ಭದಲ್ಲಿ ಸಾರ್ವಜನಿಕರು ತಾವೇ ಸರಿಪಡಿಸಲು ಮುಂದಾಗದೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳನ್ನು ಸಂಪರ್ಕಿಸಿದಾಗ ಅಪಾಯಗಳನ್ನು ದೂರ ಮಾಡಬಹುದು.

ವಿಭಾಗದಲ್ಲಿ 27 ಲಕ್ಷ ರೂ. ನಷ್ಟ
ಪುತ್ತೂರು ವಿಭಾಗ ವ್ಯಾಪ್ತಿಯಲ್ಲಿ ಎಪ್ರಿಲ್‌ ಹಾಗೂ ಮೇ ತಿಂಗಳಲ್ಲಿ ಗಾಳಿ, ಮಳೆಯ ಸಂದರ್ಭದಲ್ಲಿ ವಿದ್ಯುತ್‌ ವ್ಯವಸ್ಥೆಗೆ ಸಂಬಂಧಿಸಿದಂತೆ 230 ವಿದ್ಯುತ್‌ ಕಂಬಗಳು ಧರಾಶಾಹಿಯಾಗಿವೆ. 40 ಟ್ಯಾನ್ಸ್‌ಫಾರ್ಮರ್‌ ಗಳಿಗೆ ಹಾನಿಯಾಗಿದ್ದು, ಒಟ್ಟು 27 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.


ಅಪಾಯಕ್ಕೆ ಕಾರಣರಾಗಬೇಡಿ

– ತುಂಡಾಗಿ ಬಿದ್ದಿರುವ ವಿದ್ಯುತ್‌ ಲೈನುಗಳನ್ನು ಮುಟ್ಟಬಾರದು.
- ಒದ್ದೆಯಾಗಿರುವ ವಿದ್ಯುತ್‌ ಕಂಬಗಳನ್ನು ಹಾಗೂ ಇತರೆ ವಿದ್ಯುತ್‌ ಉಪಕರಣಗಳನ್ನು ಮುಟ್ಟಬಾರದು.
– ಜಾನುವಾರುಗಳನ್ನು ವಿದ್ಯುತ್‌ ಕಂಬಗಳಿಗೆ ಕಟ್ಟಬಾರದು.
– ಒಟ್ಟೆ ಒಣಗಲು ವಿದ್ಯುತ್‌ ಸಾಮಗ್ರಿಗಳನ್ನು ಬಳಸಬಾರದು.
- ಸಿಡಿಲು, ಮಿಂಚು ಇದ್ದ ಸಂದರ್ಭದಲ್ಲಿ ಮೈನ್‌ ಸ್ವಿಚ್‌ ಅಥವಾ ಸ್ವಿಚ್‌ ಬೋರ್ಡ್‌ ಬಳಿ ನಿಲ್ಲಬಾರದು.

Advertisement


ಮೆಸ್ಕಾಂ ಸನ್ನದ್ಧ

ಮಳೆಗಾಲದಲ್ಲಿ ವಿದ್ಯುತ್‌ ವ್ಯವಸ್ಥೆಯನ್ನು ಬಳಕೆ ಮಾಡುವಾಗ ಸ್ವಯಂ ಜಾಗ್ರತೆ ವಹಿಸಬೇಕು. ವಿದ್ಯುತ್‌ ವ್ಯವಸ್ಥೆಯಲ್ಲಿ ಯಾವುದಾದರೂ ತೊಂದರೆ ಕಂಡುಬಂದರೆ ಮೆಸ್ಕಾಂಗೆ ತಿಳಿಸಬೇಕು. ಸಾರ್ವಜನಿಕರಿಂದ ದೂರುಗಳು ಬಂದಾಗ ಯಾವುದೇ ಸಂದರ್ಭದಲ್ಲಿ ತತ್‌ಕ್ಷಣ ಸ್ಪಂದಿಸಿ ಸ್ಥಳಕ್ಕೆ ಭೇಟಿ ನೀಡುವಂತೆ ಸಿಬಂದಿಗೆ ಸೂಚನೆ ನೀಡಲಾಗಿದೆ. ಸಿಬಂದಿಗೂ ರಕ್ಷಣಾ ಸಾಮಗ್ರಿಗಳನ್ನು ಒದಗಿಸಲಾಗಿದೆ. ಮೆಸ್ಕಾಂ ಎಲ್ಲ ರೀತಿಯಲ್ಲೂ ಸನ್ನದ್ಧವಾಗಿದೆ.
– ನರಸಿಂಹ ಕಾರ್ಯ ನಿರ್ವಾಹಕ ಎಂಜಿನಿಯರ್‌, ಮೆಸ್ಕಾಂ, ಪುತ್ತೂರು ವಿಭಾಗ

— ರಾಜೇಶ್‌ ಪಟ್ಟೆ

Advertisement

Udayavani is now on Telegram. Click here to join our channel and stay updated with the latest news.

Next