Advertisement

ಸ್ತನಗಳ ಬಗ್ಗೆ ಇರಲಿ ಅರಿವು, ಎಚ್ಚರಿಕೆ

06:39 PM Nov 29, 2020 | Suhan S |

ಪ್ರತೀ ವರ್ಷ ಅಕ್ಟೋಬರ್‌ ತಿಂಗಳನ್ನು ಜಾಗತಿಕವಾಗಿ ಸ್ತನದ ಕ್ಯಾನ್ಸರ್‌ ಅರಿವಿನ ತಿಂಗಳು ಎಂಬುದಾಗಿ ಆಚರಿಸಲಾಗುತ್ತದೆ. ಮಹಿಳೆಯರಲ್ಲಿ ಅತ್ಯಂತ ಸಾಮಾನ್ಯವಾಗಿ ಕಾಣಿಸಿಕೊಳ್ಳುವ ಕ್ಯಾನ್ಸರ್‌ ಆಗಿರುವ ಇದು ಭಾರತ ಮತ್ತು ಇಡಿಯ ಜಗತ್ತಿನಲ್ಲಿ ಅತೀ ಹೆಚ್ಚು ಕ್ಯಾನ್ಸರ್‌ ಸಂಬಂಧಿ ಮರಣಗಳಿಗೆ ಕಾರಣ ಎನ್ನಿಸಿಕೊಂಡಿದೆ.

Advertisement

ಕೋವಿಡ್ ಸಾಂಕ್ರಾಮಿಕವು ಆವರಿಸಿರುವ ಕಾಲದಲ್ಲಿ ಅನೇಕ ವಿಧದ ಕಾಯಿಲೆಗೆ ಒಳಗಾದವರು ಕಾಯಿಲೆಯು ಮುಂದುವರಿದ ಹಂತ ತಲುಪಿದ ಬಳಿಕವಷ್ಟೇ ಆಸ್ಪತ್ರೆಗೆ ಭೇಟಿ ನೀಡುತ್ತಿರುವುದನ್ನು ಕಂಡಿದ್ದೇವೆ. ರೋಗಿಗಳು ಖಂಡಿತವಾಗಿ ಕೊರೊನಾ ವೈರಸ್‌ ಸೋಂಕು ತಗುಲಬಹುದು ಎಂಬ ಭಯ ಹೊಂದಿರುತ್ತಾರೆ. ಆದರೆ ಇದೇ ವೇಳೆ ಕ್ಯಾನ್ಸರ್‌ ಕಾಯಿಲೆ ಮತ್ತು ಅದರಿಂದಾಗಿ ಉಂಟಾಗುತ್ತಿರುವ ಮರಣದ ದರ ಹೆಚ್ಚುತ್ತಿರುವ ಬಗ್ಗೆಯೂ ನಾವು ತಿಳಿದುಕೊಳ್ಳುವುದು ಒಳ್ಳೆಯದು. ಯಾಕೆಂದರೆ, ಕೊರೊನಾದಿಂದ ಉಂಟಾಗುವ ಸಾವಿನ ಪ್ರಮಾಣಕ್ಕಿಂತ ಕ್ಯಾನ್ಸರ್‌ನಿಂದ ಉಂಟಾಗುವ ಸಾವಿನ ಪ್ರಮಾಣ ಹೆಚ್ಚಿದೆ. ಹಾಗಾಗಿ ಈ 2020 ವರ್ಷದಲ್ಲಿ ಕ್ಯಾನ್ಸರ್‌, ಅದರಲ್ಲೂ ಸ್ತನದ ಕ್ಯಾನ್ಸರ್‌ ಬಗ್ಗೆ ನಾವು ಹೆಚ್ಚು ತಿಳಿದುಕೊಳ್ಳಬೇಕಾಗಿದೆ.

2020ರ ಸೆಪ್ಟಂಬರ್‌ 1ರ ವರೆಗಿನ ಅಂಕಿಅಂಶಗಳ ಪ್ರಕಾರ ಕೋವಿಡ್ ಮತ್ತು ಅದರ ಸಂಕೀರ್ಣ ಸಮಸ್ಯೆಗಳಿಂದ ಸರಿಸುಮಾರು 65 ಸಾವಿರ ಮಂದಿ ಸಾವನ್ನಪ್ಪಿದ್ದಾರೆ. ಆದರೆ ಭಾರತದಲ್ಲಿ ಪ್ರತೀ ವರ್ಷ ಕ್ಯಾನ್ಸರ್‌ ಸಂಬಂಧಿ ಸಾವುಗಳ ಸಂಖ್ಯೆ 7 ಲಕ್ಷಕ್ಕಿಂತಲೂ ಹೆಚ್ಚು. ಇದರಲ್ಲಿ ಸ್ತನ ಕ್ಯಾನ್ಸರ್‌ನಿಂದ ಉಂಟಾಗುತ್ತಿರುವ ಮೃತ್ಯುಗಳೇ 80 ಸಾವಿರಕ್ಕೂ ಅಧಿಕವಿರುತ್ತವೆ.

 

ವಿವಿಧ ಅಂಗಾಂಗಗಳಲ್ಲಿ ಉಂಟಾಗುವ ಕ್ಯಾನ್ಸರ್‌ಗಳ ಪೈಕಿ ಸ್ತನದ ಕ್ಯಾನ್ಸರ್‌ ಅತೀ ಸಾಮಾನ್ಯವಾದುದಾಗಿದೆ. ಸ್ತನದ ಕ್ಯಾನ್ಸರ್‌ ಬಗ್ಗೆ ನಾವು ಏಕೆ ಹೆಚ್ಚು ತಿಳಿದುಕೊಳ್ಳಬೇಕು ಎಂಬುದಕ್ಕೆ ಕಾರಣಗಳು ಇಲ್ಲಿವೆ:

  • ಮರಣದ ದರ ಅತೀ ಹೆಚ್ಚು ಇರುವ ಕ್ಯಾನ್ಸರ್‌ ಇದು.
  • ತಪಾಸಣೆ ಮತ್ತು ಕ್ಷಿಪ್ರ ರೋಗ ಪತ್ತೆ ಸಾಧ್ಯವಿದೆ.
  • ಸುಲಭವಾಗಿ ಚಿಕಿತ್ಸೆ ನೀಡಬಹುದಾಗಿದೆ, ಉತ್ತಮ ಚಿಕಿತ್ಸೆಗಳು ಲಭ್ಯವಿವೆ.
  • ಬೇಗನೆ ಪತ್ತೆ ಹಚ್ಚಿದರೆ ಮರಣವನ್ನು ತಡೆಯಬಹುದಾಗಿದೆ.
  • ಜಗತ್ತಿನ ಅನೇಕ ದೇಶಗಳು ಆರೋಗ್ಯ ಶಿಕ್ಷಣ ಕಾರ್ಯಕ್ರಮಗಳ ಮೂಲಕ ಸ್ತನದ ಕ್ಯಾನ್ಸರ್‌ ಬಗೆಗಿನ ತಿಳಿವಳಿಕೆಯನ್ನು ಹೆಚ್ಚಿಸುವಲ್ಲಿ ಸಫ‌ಲವಾಗಿವೆ; ಭಾರತದಲ್ಲಿಯೂ ಇದು ಈ ಹೊತ್ತಿನ ಅಗತ್ಯವಾಗಿದೆ.
Advertisement

ಸ್ತನದ ಕ್ಯಾನ್ಸರ್‌: ಅಪಾಯಾಂಶಗಳು :

ಸ್ತನದ ಕ್ಯಾನ್ಸರ್‌ನ ಅನೇಕ ಅಪಾಯಾಂಶಗಳು ಇನ್ನೂ ತಿಳಿದುಬಂದಿಲ್ಲ. ಸ್ತನದ ಕ್ಯಾನ್ಸರ್‌ ಉಂಟಾಗಲು ಅನೇಕ ಕಾರಣಗಳು ಇರುತ್ತವೆಯಾದ್ದರಿಂದ ಒಂದು ಕಾರಣವನ್ನು ಬೆಟ್ಟು ಮಾಡುವುದು ಸಾಧ್ಯವಿಲ್ಲ. ಇವುಗಳಲ್ಲಿ ಕೆಲವು ಕಾರಣಗಳನ್ನು ಬದಲಾಯಿಸಬಹುದು, ಕೆಲವನ್ನು ಸಾಧ್ಯವಿಲ್ಲ. ಪುರುಷರಲ್ಲಿಯೂ ಸ್ತನದ ಕ್ಯಾನ್ಸರ್‌ ಉಂಟಾಗುವುದಿದೆಯಾದರೂ ಅದು ಅಪರೂಪ. ಹಿರಿಯ ಮಹಿಳೆಯಾಗಿರುವುದು, ಸ್ತನದ ಕ್ಯಾನ್ಸರ್‌ನ ಕೌಟುಂಬಿಕ ಇತಿಹಾಸ, ವಂಶವಾಹಿ ಮ್ಯುಟೇಶನ್‌, ಹಾರ್ಮೋನ್‌ ಅಸಮತೋಲನ (ಬೇಗನೆ ಪ್ರೌಢಾವಸ್ಥೆಗೆ ಬಂದಿರುವುದು. ಋತುಚಕ್ರ ಬಂಧ ವಿಳಂಬವಾಗುವುದು, ಬಂಜೆತನ, ಹಾರ್ಮೋನ್‌ ಬದಲಾವಣೆ ಚಿಕಿತ್ಸೆಗೆ ಒಳಗಾಗಿರುವುದು), ಬೊಜ್ಜು, ಮದ್ಯಪಾನ, ಧೂಮಪಾನಗಳು ಗೊತ್ತಿರುವ ಅಪಾಯಾಂಶಗಳಾಗಿವೆ.

ಸ್ತನದ ಕ್ಯಾನ್ಸರ್‌ ಸಂಬಂಧಿ ಮರಣವನ್ನು ತಡೆಯಲು  ಬೇಗನೆ ರೋಗ ಪತ್ತೆ ಅತ್ಯಂತ ಮುಖ್ಯವಾಗಿದೆ. ಶೀಘ್ರ ರೋಗ ಪತ್ತೆಗೆ ಸಲಹೆಗಳು

  • ಸ್ತನಗಳಲ್ಲಿ ಶಂಕಾಸ್ಪದವಾದ ಗಡ್ಡೆಯಂತಹ ಬೆಳವಣಿಗೆ (ವಿಶೇಷವಾಗಿ ಹಿರಿಯ ಮಹಿಳೆಯರಲ್ಲಿ) ಕಂಡುಬಂದರೆ ಓಂಕಾಲಜಿಸ್ಟ್‌ ಅವರನ್ನು ಕಂಡು ಸಮಾಲೋಚನೆ ನಡೆಸಬೇಕು.
  • ಸ್ತನಗಳ ಸ್ವಯಂ ತಪಾಸಣೆಯನ್ನು ನಿಯಮಿತವಾಗಿ ನಡೆಸುತ್ತಿರಬೇಕು.
  • ಸ್ತನದ ಕ್ಯಾನ್ಸರ್‌ನ ಬಲವಾದ ಕೌಟುಂಬಿಕ ಇತಿಹಾಸ ಇದ್ದಲ್ಲಿ ಓಂಕಾಲಜಿಸ್ಟ್‌ ಬಳಿ ನಿಯಮಿತವಾಗಿ ಚೆಕ್‌ಅಪ್‌ ಮಾಡಿಸಿಕೊಳ್ಳುತ್ತಿರಬೇಕು.
  • 40 ವರ್ಷ ವಯಸ್ಸಿನ ಬಳಿಕ ನಿಯಮಿತವಾಗಿ ದ್ವಿಪಕ್ಷೀಯ ಮ್ಯಾಮೊಗ್ರಾಮ್‌ ಮಾಡಿಸಿಕೊಳ್ಳಬೇಕು (50 ವರ್ಷ ವಯಸ್ಸಿನ ವರೆಗೆ ವರ್ಷಕ್ಕೆ ಎರಡು ಬಾರಿ, 50 ವರ್ಷ ವಯಸ್ಸಿನ ಬಳಿಕ ವರ್ಷಕ್ಕೆ ಒಂದು ಬಾರಿ).

 

ಡಾ| ಹರೀಶ್‌ ಇ.

ಸರ್ಜಿಕಲ್‌ ಓಂಕಾಲಜಿಸ್ಟ್‌,

ಕೆಎಂಸಿ ಆಸ್ಪತ್ರೆ, ಮಂಗಳೂರು

Advertisement

Udayavani is now on Telegram. Click here to join our channel and stay updated with the latest news.

Next