Advertisement

ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಿ: ವಿನೋತ್‌ ಪ್ರಿಯಾ

10:36 AM Feb 04, 2019 | Team Udayavani |

ಚಿತ್ರದುರ್ಗ: ಬ್ಯಾಂಕ್‌ ಅಧಿಕಾರಿಗಳು ಹಾಗೂ ಸಿಬ್ಬಂದಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದು ಜಿಲ್ಲಾಧಿಕಾರಿ ವಿನೋತ್‌ ಪ್ರಿಯಾ ಹೇಳಿದರು.

Advertisement

ಇಲ್ಲಿನ ತರಾಸು ರಂಗಮಂದಿರದಲ್ಲಿ ಭಾನುವಾರ ನಡೆದ ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ ಪ್ರಾದೇಶಿಕ ಕಚೇರಿ ವತಿಯಿಂದ ಹಮ್ಮಿಕೊಂಡಿದ್ದ ಚಿತ್ರದುರ್ಗ ವಲಯೋತ್ಸವದ ಸಮಾರೋಪ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಗ್ರಾಹಕರ ಜೊತೆ ನಿಮ್ಮ ವರ್ತನೆ ಯಾವ ರೀತಿ ಇರುತ್ತದೋ ಅದರ ಮೇಲೆ ಬ್ಯಾಂಕ್‌ನ ಅಭಿವೃದ್ಧಿಯಾಗುತ್ತದೆ. ಸಿಬ್ಬಂದಿಗಳ ನಡುವೆ ಅಧಿಕಾರದ ತಾರತಮ್ಯವಿರಬಾರದು. ಪರಸ್ಪರ ಸಹಕಾರ ಹಾಗೂ ಗ್ರಾಹಕರಿಗೆ ಒಳ್ಳೆಯ ಸೇವೆ ನೀಡಿದಾಗ ಮಾತ್ರ ಬ್ಯಾಂಕ್‌ ಪ್ರಗತಿಪಥದತ್ತ ಸಾಗುತ್ತದೆ. ಹಾಗಾಗಿ ಗ್ರಾಹಕರೊಂದಿಗೆ ಸೌಜನ್ಯದಿಂದ ವರ್ತಿಸಬೇಕು ಎಂದರು.

ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ ಚೇರ್ಮನ್‌ ಶ್ರೀನಿವಾಸ್‌ ಎಚ್. ಜೋಶಿ ಮಾತನಾಡಿ, ಇದು ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ನ ಹ್ಯಾಟ್ರಿಕ್‌ ವಲಯೋತ್ಸವ. ಇನ್ನು ಮುಂದೆ ಪ್ರತಿ ವರ್ಷ ನಿರಂತರವಾಗಿ ವಲಯೋತ್ಸವ ನಡೆಯುತ್ತಿರಬೇಕು. ಅದಕ್ಕೆ ಬೇಕಾದ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.

ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿಗಳ ಸಹಕಾರದ ಜೊತೆಗೆ ಸಿಬ್ಬಂದಿಗಳ ಕುಟುಂಬದ ತ್ಯಾಗವೂ ಇದೆ. ಪ್ರಧಾನ ವ್ಯವಸ್ಥಾಪಕರು, ಸಹಾಯಕ ಪ್ರಧಾನ ವ್ಯವಸ್ಥಾಪಕರು, ಅಧಿಕಾರಿಗಳು, ಸಿಬ್ಬಂದಿ ಎನ್ನುವ ತಾರತಮ್ಯವಿಲ್ಲದೆ ಎಲ್ಲರೂ ಒಟ್ಟಿಗೆ ಕೈಜೋಡಿಸಿ ಪರಸ್ಪರ ಸಹಕಾರದಿಂದ ಕೆಲಸ ಮಾಡಿದಾಗ ಮಾತ್ರ ಬ್ಯಾಂಕಿನಿಂದ ಗ್ರಾಹಕರಿಗೆ ಉತ್ತಮ ಸೇವೆ ನೀಡಬಹುದು ಎಂದರು.

ಸಿಬ್ಬಂದಿಗಳಿಗೆ ಕೆಲಸ ಮಾಡುವ ಹುಮ್ಮಸ್ಸು, ಉತ್ಸಾಹದ ಜೊತೆಗೆ ಬದ್ಧತೆಯೂ ಇರಬೇಕು. ಪ್ರತಿ ವರ್ಷ ವಲಯೋತ್ಸವ ಆಚರಿಸುವುದರಿಂದ ಪರಸ್ಪರ ಪರಿಚಯ, ವಿಚಾರ ವಿನಿಮಯ ಮಾಡಿಕೊಳ್ಳಲು ನೆರವಾಗಲಿದೆ. ಅಲ್ಲದೆ ನಾಯಕತ್ವ ಗುಣವೂ ಬೆಳೆಯುತ್ತದೆ ಎಂದು ತಿಳಿಸಿದರು.

Advertisement

ವರ್ಷವಿಡೀ ಬ್ಯಾಂಕಿನಲ್ಲಿ ಕೆಲಸ ಮಾಡಿ ದಣಿಯುವ ಸಿಬ್ಬಂದಿಗಳಿಗೆ ಹಾಗೂ ಕುಟುಂಬದವರಿಗೆ ವರ್ಷಕ್ಕೊಮ್ಮೆ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಕ್ರೀಡಾ ಸ್ಪರ್ಧೆ ಏರ್ಪಡಿಸುವುದರಿಂದ ಮನಸ್ಸಿಗೆ ಮನರಂಜನೆ ಸಿಗುತ್ತದೆ. ಜೊತೆಗೆ ಪ್ರತಿಭೆ ಗುರುತಿಸಿಕೊಳ್ಳಲು ಇದೊಂದು ಉತ್ತಮ ಅವಕಾಶ ಎಂದು ಹೇಳಿದರು.

ಪ್ರಗತಿ ಕೃಷ್ಣ ಗ್ರಾಮೀಣ ಬ್ಯಾಂಕ್‌ ಪ್ರಧಾನ ವ್ಯವಸ್ಥಾಪಕ ರವೀಂದ್ರನಾಥ್‌, ಶೈಲೇಂದ್ರ ಉಡುಪ, ಸಹಾಯಕ ಪ್ರಧಾನ ವ್ಯವಸ್ಥಾಪಕ ಜಿ.ಆರ್‌. ಮಂಜುನಾಥ್‌, ನಬಾರ್ಡ್‌ ಡಿಡಿಎಂ ಮಾಲಿನಿ ಸುವರ್ಣ, ತಿಪ್ಪೇಸ್ವಾಮಿ, ಗೋಪಾಲಾಚಾರ್‌ ಇದ್ದರು. ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು.

ನಾನೂ ಬ್ಯಾಂಕ್‌ ಉದ್ಯೋಗಿಯಾಗಿದ್ದೆ…
ಐಎಎಸ್‌ ತೇರ್ಗಡೆಯಾಗುವುದಕ್ಕಿಂತ ಮುನ್ನ ನಾನು ಕೂಡ ಗ್ರಾಮೀಣ ಬ್ಯಾಂಕ್‌ವೊಂದರಲ್ಲಿ ಉದ್ಯೋಗಿಯಾಗಿದ್ದೆ. ಕೆಲಸದ ಮಧ್ಯೆ ಸ್ಪರ್ಧಾತ್ಮಕ ಪರೀಕ್ಷೆ ತಯಾರಿ ನಡೆಸಿದೆ. ಆದರೆ ಪರೀಕ್ಷಾ ಸಿದ್ಧತೆಗೆ ಬ್ಯಾಂಕ್‌ ಅಧಿಕಾರಿಗಳು ರಜೆ ಕೊಡುತ್ತಿರಲಿಲ್ಲ. ಹಾಗಾಗಿ ಕೆಲಸ ಮತ್ತು ಓದು ಎರಡನ್ನೂ ನಿಭಾಯಿಸಲು ಕಷ್ಟವಾಗುತ್ತಿತ್ತು. ಬ್ಯಾಂಕ್‌ ಅಧಿಕಾರಿಗಳ ವರ್ತನೆಗೆ ಬೇಸರಪಟ್ಟುಕೊಂಡಿದ್ದಾಗಿ ಜಿಲ್ಲಾಧಿಕಾರಿಯವರು ಹಿಂದಿನ ದಿನಗಳನ್ನು ನೆನಪಿಸಿಕೊಂಡರು.

Advertisement

Udayavani is now on Telegram. Click here to join our channel and stay updated with the latest news.

Next