ಯಾವುದೇ ನಗರ ಅಥವಾ ಪಟ್ಟಣಗಳಲ್ಲಿ ಅಭಿವೃದ್ಧಿ ಅಥವಾ ಮೂಲಸೌಕರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಸಂದರ್ಭದಲ್ಲಿ ಒಂದಿಷ್ಟು ದೂರಗಾಮಿ ಚಿಂತನೆ ನಡೆಸುವುದು ಅತ್ಯವಶ್ಯವಾಗಿದೆ. ಇಂಥ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದಕ್ಕೂ ಮುನ್ನ ಕನಿಷ್ಠ ಮುಂದಿನ 2-3 ದಶಕಗಳಲ್ಲಿ ನಗರ ಅಥವಾ ಪಟ್ಟಣಕ್ಕೆ ಸೇರ್ಪಡೆಯಾಗಲಿರುವ ಪ್ರದೇಶಗಳು, ಹೆಚ್ಚಲಿರುವ ಜನಸಂಖ್ಯೆಮತ್ತು ಅಗತ್ಯವಿರುವ ಮೂಲಸೌಕರ್ಯಗಳ ಯೋಜನೆಗಳನ್ನು ವಿನ್ಯಾಸಗೊಳಿಸಬೇಕು. ಅದರೆ ಇತ್ತೀಚಿನ ದಶಕಗಳಲ್ಲಿ ಇಂತಹ ದೂರದೃಷ್ಟಿಯುಳ್ಳ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ನಮ್ಮ ಆಡಳಿತ ವ್ಯವಸ್ಥೆ ಎಡವಿರುವುದು ಸ್ಪಷ್ಟ. ಇದಕ್ಕೆ ತಾಜಾ ನಿದರ್ಶನಗಳು ಬೆಳ್ತಂಗಡಿ ತಾಲೂಕಿನ ಪ.ಪಂ. ವ್ಯಾಪ್ತಿಯಲ್ಲಿ ಹಲವಾರಿವೆ.
ಬೆಳ್ತಂಗಡಿ ಪಟ್ಟಣದ ಅಭಿವೃದ್ಧಿಗಾಗಿ ಮಹಾಯೋಜನೆ ಸಿದ್ಧಪಡಿಸಲು ನಮ್ಮ ಆಡಳಿತ ವ್ಯವಸ್ಥೆಗೆ ಸಾಧ್ಯವಾಗಿಲ್ಲ. ಇಂದಿಗೂ ಓಬಿರಾಯನ ಕಾಲದ ಒಳಚರಂಡಿ ವ್ಯವಸ್ಥೆಯನ್ನೇ ಪಟ್ಟಣ ಪಂಚಾಯತ್ ನೆಚ್ಚಿಕೊಂಡಿದ್ದರೆ, ವಸತಿ ನಿರ್ಮಾಣಕ್ಕಿರುವ ತೊಡಕು ನಿವಾರಣೆಯಾಗಿಲ್ಲ. ಪಟ್ಟಣದಲ್ಲಿ ಪಾರ್ಕಿಂಗ್ ಸಮಸ್ಯೆ ಕಗ್ಗಂಟಾಗಿಯೇ ಉಳಿದಿದೆ. ಪ.ಪಂ. ವ್ಯಾಪ್ತಿಯು ಹಳೆಕೋಟೆಯಿಂದ ಆರಂಭವಾಗಿ ಲಾೖಲ ಸೇತುವೆ ಅಂಚಿನವರೆಗಿದೆ. ಪ್ರಮುಖವಾಗಿ ರಾ. ಹೆದ್ದಾರಿ-73 ಹಾದುಹೋಗಿರುವುದರಿಂದ ಇನ್ನಿಲ್ಲದಷ್ಟು ವಾಹನ ದಟ್ಟಣೆ ಇಲ್ಲಿದೆ.
ನಗರಾಭಿವೃದ್ಧಿ ಪ್ರಾಧಿಕಾರದಿಂದ ಇತ್ತೀಚೆಗೆ ಮಹಾ ಯೋಜನೆ ತರುವ ವಿಚಾರವಾಗಿ ಸರ್ವೇ ಕಾರ್ಯ ನಡೆದಿತ್ತು. ಪಟ್ಟಣಗಳ ಚರಂಡಿ ವ್ಯವಸ್ಥೆ, ರಸ್ತೆ, ಪಟ್ಟಣದ ಸಂಪೂರ್ಣ ಚಿತ್ರಣವನ್ನು ಬದಲಾಯಿಸುವ ನಿರೀಕ್ಷೆ ನಾಗರಿಕರಲ್ಲಿ ಗರಿಗೆದರಿತ್ತು. ಆದರೆ ಯಾವುದೂ ಕಾರ್ಯಗತಗೊಳ್ಳದೆ ಜನರ ತಾಳ್ಮೆ ಪರೀಕ್ಷಿಸುವಂತಾಗಿದೆ. ಇವೆಲ್ಲದರ ನಡುವೆ ರಾ.ಹೆದ್ದಾರಿಯನ್ನು ಚತುಷ್ಪಥಗೊಳಿಸಲು ಸರ್ವೇ ಕಾರ್ಯ ಆರಂಭಗೊಂಡಿದೆ. ಹೆದ್ದಾರಿ ಚತುಷ್ಪಥವಾದಲ್ಲಿ 48 ಅಡಿ ಅಗಲದ ರಸ್ತೆ ಬೆಳ್ತಂಗಡಿ ಪೇಟೆಯಲ್ಲಿ ಹಾದುಹೋಗಲಿದೆ. ಆದರೆ ಆಟೋ, ಟ್ಯಾಕ್ಸಿ ಪಾರ್ಕಿಂಗ್ ಸಹಿತ ಖಾಸಗಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೆ ಉಪಕ್ರಮಗಳೇನು ಎಂಬುದರ ಕುರಿತಾಗಿಯೂ ಈಗಲೇ ಸ್ಥಳೀಯಾಡಳಿತ ಮತ್ತು ಜನಪ್ರತಿನಿಧಿಗಳು ಚಿಂತಿಸಬೇಕಿದೆ.
ಇದು ಕೇವಲ ಬೆಳ್ತಂಗಡಿ ಪಟ್ಟಣದ ಸಮಸ್ಯೆ ಮಾತ್ರವಲ್ಲ. ತಾಲೂಕು ಕೇಂದ್ರದ ಸನಿಹದಲ್ಲಿಯೇ ಇರುವ ಕುವೆಟ್ಟು ಗ್ರಾಮದ ಗುರುವಾಯನಕೆರೆ ಪೇಟೆ, ಉಜಿರೆ ಗ್ರಾ.ಪಂ. ವ್ಯಾಪ್ತಿಯ ಉಜಿರೆ ಪೇಟೆಯೂ ಇವೇ ಸಮಸ್ಯೆಗಳನ್ನು ಎದುರಿಸುತ್ತಿವೆ. ಉಜಿರೆ ಮತ್ತು ಗುರುವಾಯನಕೆರೆಯಲ್ಲಿ ಟ್ರಾಫಿಕ್ ಸಮಸ್ಯೆ ಮಾಮೂಲಿಯಾಗಿದೆ. ರಸ್ತೆಗಳು ವಿಸ್ತರಣೆಯಾದರೆ ಸಂಚಾರ ಸಮಸ್ಯೆ ನಿವಾರಣೆಯಾದೀತು. ಆದರೆ ಭವಿಷ್ಯದಲ್ಲಿ ಪಾರ್ಕಿಂಗ್ ಸಮಸ್ಯೆ ನೀಗಬಹುದೇ ಅಥವಾ ಪಾರ್ಕಿಂಗ್ ಗೊಂದಲದಿಂದಾಗಿ ಸಂಚಾರ ದಟ್ಟಣೆ ಹೆಚ್ಚಾಗಲಿದೆಯೇ ಎಂಬ ಪ್ರಶ್ನೆಗಳು ಇಲ್ಲಿನ ಜನರನ್ನು ಕಾಡತೊಡಗಿದೆ.
ಸದ್ಯೋಭವಿಷ್ಯದಲ್ಲಿ ಬೆಳ್ತಂಗಡಿ ಪಟ್ಟಣ ನಗರವಾಗಿ ಅಭಿವೃದ್ಧಿ ಹೊಂದಲಿರುವುದ ರಿಂದ ಇದಕ್ಕೆ ಪೂರಕವಾದ ಮೂಲಸೌಕರ್ಯ ಮತ್ತು ಅಭಿವೃದ್ಧಿ ಯೋಜನೆಗಳನ್ನು ಕೈಗೆತ್ತಿಕೊಳ್ಳುವುದು ಅತ್ಯವಶ್ಯವಾಗಿದೆ.
– ಸಂ