ಬೆಂಗಳೂರು: ಕಳಂಕಿತ ರಾಜಕಾರಣಿಗಳ ವಿರುದ್ಧದ ಪ್ರಕರಣ ಇತ್ಯರ್ಥದ ಸಂಬಂಧ ವಿಶೇಷ ನ್ಯಾಯಾಲಯ ಸ್ಥಾಪಿಸಲು ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ತಾಕೀತು ಮಾಡಿರುವುದು ಸ್ವಾಗತಾರ್ಹ. ಆರೋಪ ಸಾಬೀತಾದ ಭ್ರಷ್ಟ ರಾಜಕಾರಣಿಗಳಿಗೆ ಅಜೀವ ನಿಷೇಧ ಹೇರುವ ಕಾಯ್ದೆ ಜಾರಿಯಾಗಬೇಕು ಎಂದು ಸ್ವಾತಂತ್ರ್ಯಹೋರಾಟಗಾರ ಎಚ್.ಎಸ್.ದೊರೆಸ್ವಾಮಿ ಆಗ್ರಹಿಸಿದ್ದಾರೆ.
ನಗರದ ಪ್ರಸ್‌ಕ್ಲಬ್‌ನಲ್ಲಿ ಶನಿವಾರ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಣ ಬಲದಿಂದ ಚುನಾವಣೆಗೆ ಗೆಲ್ಲುತ್ತಿರುವುದರಿಂದಲೇ ದೇಶದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಅದಕ್ಕೆ ಕಡಿವಾಣ ಬೀಳಬೇಕಾದರೆ ಭ್ರಷ್ಟಾಚಾರಿಗಳು ಜೀವನ ಪರ್ಯಂತ ಚುನಾವಣೆಗೆ ಸ್ಪರ್ಧೆ ಮಾಡದಂತಾಗಬೇಕು ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಪ್ರಬಲ ಲೋಕಪಾಲ್ ಜಾರಿಗೆ ಒತ್ತಾಯಿಸಿ ದೇಶವ್ಯಾಪಿ ಹೋರಾಟ ನಡೆದಾಗ ಅದನ್ನು ಮೋದಿ ಬೆಂಬಲಿಸಿದ್ದರು.ಆದರೆ ಪ್ರಧಾನಿಯಾದ ಮೇಲೆ ಜನ್‌ಲೋಕಪಾಲ್ ಜಾರಿಯ ಬಗ್ಗೆ ಮಾತನಾಡುತ್ತಿಲ್ಲ ಎಂದು ಟೀಕಿಸಿದರು.
ಲೋಕಾಯುಕ್ತ ಇಲಾಖೆ ಈ ಹಿಂದೆ ರಾಷ್ಟ್ರಮಟ್ಟದಲ್ಲಿ ಹೆಸರು ಮಾಡಿತ್ತು.ಭಷ್ಟರಾಜಕಾರಣಿಗಳಿಗೆ ಇದು ತೂಗುಗತ್ತಿಯಾಗಿತ್ತು. ಇಂತಹ ಲೋಕಾಯುಕ್ತವನ್ನು ಇದೀಗ ಮುಖ್ಯಮಂತ್ರಿ ಸಿದ್ಧರಾಮಯ್ಯ ದುರ್ಬಲಗೊಳಿಸಿ ಎಸಿಬಿ ರಚನೆ ಮಾಡಿರುವುದು ಸರಿ ಅಲ್ಲ. ವಿರೋಧ ಪಕ್ಷದ ನಾಯಕರಾಗಿದ್ದ ವೇಳೆ ಸಂತೋಷ ಹೆಗೆಡೆ ಕಾರ್ಯವೈಖರಿಯನ್ನು ಹೊಗಳಿದವರು ಈಗ ಇಡೀ ಲೋಕಾಯುಕ್ತವನ್ನೆ ಹಲ್ಲು ಕಿತ್ತಹಾವು ಮಾಡಿರುವುದು ಎಷ್ಟು ಸರಿ ಪ್ರಶ್ನಿಸಿದರು.
ಮಾಜಿ ಸ್ಪೀಕರ್ ಕೃಷ್ಣ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಮತ್ತು ಸಿದ್ದರಾಮಯ್ಯ ಭ್ರಷ್ಟಾಚಾರದ ಪ್ರಧಾನ ಷೋಷಕರು. ಭ್ರಷ್ಟಾಚಾರ ನಿಗ್ರಹ ಮಾಡುವ ಧೈರ್ಯ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಲ್ಲ ಎಂದು ದೂರಿದರು. ಕೇಂದ್ರ ಸರ್ಕಾರ ಸಿಬಿಐಅನ್ನು ದುರ್ಬಳಕೆ ಮಾಡಿಕೊಂಡರೆ ಇತ್ತ ರಾಜ್ಯ ಸರ್ಕಾರ ಸಿಬಿಐ ಸೇರಿದಂತೆ ಇನ್ನಿತರ ತನಿಖಾ ಸಂಸ್ಥೆಗಳನ್ನು ಕೈಗೊಂಬೆ ಮಾಡಿಕೊಂಡಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾಜಿ ಸಂಸದ ಪಿ. ಕೋದಂಡರಾಮಯ್ಯ ಉಪಸ್ಥಿತರಿದ್ದರು.