Advertisement

ಬಿಡಿಎ ದೃಷ್ಟಿ ಆನ್‌ಲೈನ್‌ನತ್ತ

03:10 PM Jul 01, 2018 | Team Udayavani |

ಬೆಂಗಳೂರು: ರಾಜಧಾನಿಯಲ್ಲಿ ತಾನು ನಿರ್ಮಿಸಿರುವ ಫ್ಲ್ಯಾಟ್‌ಗಳಿಗೆ ಬೇಡಿಕೆ ಕುಗ್ಗಿರುವ ಹಿನ್ನೆಲೆಯಲ್ಲಿ ಶತಾಯಗತಾಯ ಗ್ರಾಹಕರನ್ನು ಸೆಳೆಯಲೇಬೇಕೆಂಬ ನಿರ್ಧಾರಕ್ಕೆ ಬಂದಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ರಿಯಲ್‌ ಎಸ್ಟೇಟ್‌ ವೆಬ್‌ ಪೋರ್ಟಲ್‌ಗ‌ಳ ಮೊರೆ ಹೋಗಲು ಚಿಂತನೆ ನಡೆಸಿದೆ.

Advertisement

ನಗರದ ಪ್ರಮುಖ ಸ್ಥಳಗಳಲ್ಲಿ ನಿರ್ಮಿಸಿರುವ ಫ್ಲ್ಯಾಟ್‌ಗಳನ್ನು ತ್ವರಿತವಾಗಿ ಮಾರಾಟ ಮಾಡಲು ಮುಂದಾಗಿರುವ ಬಿಡಿಎ, ಮ್ಯಾಜಿಕ್‌ ಬ್ರಿಕ್ಸ್‌, ಹೌಸಿಂಗ್‌ಡಾಟ್‌ಕಾಮ್‌, ನೋಬ್ರೋಕರ್‌, 99ಎಕರ್ ರೀತಿಯ ಆನ್‌ಲೈನ್‌ ರಿಯಲ್‌ ಎಸ್ಟೇಟ್‌ ಪೋರ್ಟಲ್‌ಗ‌ಳ ಮೂಲಕ ಗ್ರಾಹಕರನ್ನು ತಲುಪಲು ಸಿದ್ಧತೆ ನಡೆಸಿದೆ. 

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ 2011-12ರಿಂದ ಈವರೆಗೆ 29 ಯೋಜನೆಗಳ ಅಡಿಯಲ್ಲಿ ಸುಮಾರು 14 ಸಾವಿರ ಪ್ಲ್ರಾಟ್‌ಗಳ ನಿರ್ಮಾಣ ಕಾರ್ಯ ಕೈಗೊಂಡಿದೆ. ಬೆಂಗಳೂರು ಸುತ್ತಮುತ್ತಲ 12 ಸ್ಥಳಗಳಲ್ಲಿ ವಸತಿ ಸಮುಚ್ಚಯಗಳನ್ನು
ನಿರ್ಮಿಸಿದೆ. ನಂದಿನಿ ಲೇಔಟ್‌ನಲ್ಲಿ 1, ವಳಗೇರಹಳ್ಳಿಯಲ್ಲಿ 6, ಕೊಮ್ಮಘಟ್ಟ ಮತ್ತು ಕಣಿಮಿಣಿಕೆಯಲ್ಲಿ 5, ದೊಡ್ಡಬನಹಳ್ಳಿ ಮತ್ತು ಗುಂಜೂರಿನಲ್ಲಿ 2, ತಿಪ್ಪಸಂದ್ರ ಮತ್ತು ಕೊತ್ತನೂರಿನಲ್ಲಿ ತಲಾ ಒಂದೊಂದು ಅಪಾರ್ಟ್‌ಮೆಂಟ್‌ ನಿರ್ಮಿಸಿದೆ.

ಈಗಾಗಲೇ 17 ಯೋಜನೆಗಳ ಕಾಮಗಾರಿ ಪೂರ್ಣಗೊಂಡಿದ್ದು, 8ರಿಂದ 9 ಸಾವಿರ ಪ್ಲ್ರಾಟ್‌ ಗಳ ನಿರ್ಮಾಣ ಮುಗಿದಿದೆ. ಈ ಪೈಕಿ 7 ಸಾವಿರ ಪ್ಲ್ರಾಟ್‌ಗಳನ್ನು ಈಗಾಗಲೇ ಹಂಚಿಕೆ ಮಾಡಲಾಗಿದೆ. ಕಣಮಿಣಿಕೆ ಮತ್ತು ಕೊಮ್ಮಘಟ್ಟದಲ್ಲಿ 1,500ರಿಂದ 2,000 ಪ್ಲ್ರಾಟ್‌ಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಇವುಗಳ ಮಾರಾಟಕ್ಕೆ ರಿಯಲ್‌ ಎಸ್ಟೇಟ್‌ ವೆಬ್‌ ಪೋರ್ಟಲ್‌ಗ‌ಳ ಮೊರೆ ಹೋಗಲು ಚಿಂತನೆ ನಡೆಸಿರುವುದಾಗಿ ಬಿಡಿಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಟೆಂಡರ್‌ ಮೂಲಕ ಆಯ್ಕೆ: ಬಿಡಿಎ ನಿರ್ಮಿಸಿರುವ ಅಪಾರ್ಟ್‌ಮೆಂಟ್‌ಗಳಲ್ಲಿನ ಪ್ಲ್ರಾಟ್‌ಗಳ ಪ್ರಚಾರ ಮತ್ತು ಮಾರಾಟ ಮಾಡಲು ಈಗಾಗಲೇ ಹಲವು ರಿಯಲ್‌ ಎಸ್ಟೇಟ್‌ ವೆಬ್‌ ಪೋರ್ಟಲ್‌ಗಳು ಪ್ರಾಧಿಕಾರವನ್ನು ಸಂಪರ್ಕಿಸಿವೆ. ಈ
ಸಂಬಂಧ ಖಾಸಗಿ ಕಂಪನಿಯ ಉನ್ನತಾಧಿಕಾರಿಗಳು, ಬಿಡಿಎ ಹಿರಿಯ ಅಧಿಕಾರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ. ಜತೆಗೆ ಇನ್ನೂ ಕೆಲವು ಆನ್‌ಲೈನ್‌ ಕಂಪನಿಗಳು ಆಸಕ್ತಿ ತೋರಿದ್ದು, ಅಂತಿಮವಾಗಿ ಟೆಂಡರ್‌ ಮೂಲಕ ಆಯ್ಕೆ ಪ್ರಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

Advertisement

ಲಾಭವಾದರೆ ಮುಂದುವರಿಕೆ: ವೆಬ್‌ ಪೋರ್ಟಲ್‌ ಮೂಲಕ ಪ್ರಚಾರ, ಮಾರಾಟಕ್ಕೆ ಟೆಂಡರ್‌ ಮೂಲಕ ಆಯ್ಕೆಯಾಗುವ ಸಂಸ್ಥೆ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು. ನಂತರ ಗ್ರಾಹಕರಿಂದ ನಿರೀಕ್ಷಿತ ಸ್ಪಂದನೆ ದೊರೆಯದಿದ್ದರೆ ಮತ್ತಷ್ಟು ಕಂಪನಿಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗುವುದು. 

ಒಂದೊಮ್ಮೆ ಆಗಲೂ ನಿರೀಕ್ಷೆಯಷ್ಟು ಪ್ಲ್ರಾಟ್‌ಗಳು ಮಾರಾಟವಾಗದಿದ್ದರೆ ಆನ್‌ಲೈನ್‌ ಮೂಲಕ ಮಾರಾಟ ಮಾಡುವ ಪ್ರಯತ್ನ ಕೈಬಿಡಲಾಗುವುದು ಎಂದು ಬಿಡಿಎ ಹಿರಿಯ ಅಧಿಕಾರಿಯೊಬ್ಬರು “ಉದಯವಾಣಿ’ಗೆ ಮಾಹಿತಿ ನೀಡಿದ್ದಾರೆ. 

ಎಂಬಿಎ ಪದವೀಧರರ ನೇಮಕ ರಿಯಲ್‌ ಎಸ್ಟೇಟ್‌ ಮಾರುಕಟ್ಟೆಯಲ್ಲಿ ನಿರೀಕ್ಷಿತ ಮಾರಾಟದ ಗುರಿ ತಲುಪಲು ವಿಫ‌ಲವಾಗಿರುವ ಬಿಡಿಎ, ರಿಯಲ್‌ ಎಸ್ಟೇಟ್‌ ವೆಬ್‌ ಪೋರ್ಟಲ್‌ಗ‌ಳ ಜತೆಗೆ ಎಂಬಿಎ ಪದವೀಧರರ ನೆರವು ಪಡೆ
ಯುವ ಬಗ್ಗೆಯೂ ಆಲೋಚನೆ ನಡೆಸಿದೆ. ಆ ಹಿನ್ನೆಲೆಯಲ್ಲಿ ಉದ್ಯಮಶೀಲತೆ ಕೌಶಲ್ಯ ಹೊಂದಿರುವ ಪ್ರತಿಭಾನ್ವಿತ ಎಂಬಿಎ ಪದವೀಧರರನ್ನು ಬಿಡಿಎ ನೇಮಕ ಮಾಡಿಕೊಳ್ಳಲಿದೆ. ಈಗಷ್ಟೇ ಎಂಬಿಎ ಪದವಿ ಮುಗಿಸಿರುವ ವಿದ್ಯಾರ್ಥಿಗಳನ್ನು ಈ ಕಾರ್ಯಕ್ಕೆ ನೇಮಿಸಿಕೊಳ್ಳುವ ಉದ್ದೇಶ ಪ್ರಾಧಿಕಾರಕ್ಕಿದೆ.

ಫ್ಲ್ಯಾಟ್‌ಗಳ ಮಾರಾಟದಲ್ಲಿ ನಿರೀಕ್ಷಿತ ಗುರಿ ಸಾಧಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಲವು ಯೋಜನೆಗಳನ್ನು
ರೂಪಿಸಿದೆ. ಇದರಲ್ಲಿ ಎಂಬಿಎ ಪದವೀಧರರ ನೆರವು ಪಡೆಯುವ ಚಿಂತನೆ ಕೂಡ ಸೇರಿದೆ. 
ರಾಕೇಶ್‌ ಸಿಂಗ್‌ ಬಿಡಿಎ ಆಯುಕ್ತ

ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next