Advertisement

ಬಿಡಿಎನಲ್ಲಿ 150 ಕೋಟಿ ರೂ. ಭ್ರಷ್ಟಾಚಾರ..!

10:11 AM Nov 21, 2021 | Team Udayavani |

ಬೆಂಗಳೂರು: ಬಿಡಿಎನಲ್ಲಿ ಸತತ 2 ದಿನಗಳ ಶೋಧ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ) ಅಧಿಕಾರಿಗಳು, ಬಿಡಿಎನಲ್ಲಿ ನಡೆಯುತ್ತಿದ್ದ ಅಂದಾಜು 150 ಕೋಟಿ ರೂ.ಗಳ ಭ್ರಷ್ಟಾಚಾರ ಬಯಲಿಗೆಳೆದಿದ್ದಾರೆ. ಮತ್ತೂಂದೆಡೆ ಎಸಿಬಿ ಬಿಡಿಎ ಕಚೇರಿಗೆ ಬೀಗ ಹಾಕಿಮಂಗಳವಾರದವರೆಗೆ ತಮ್ಮ ವಶಕ್ಕೆ ಪಡೆದುಕೊಂಡಿದೆ.

Advertisement

ಬಿಡಿಎ ಅರ್ಕಾವತಿ, ಕೆಂಪೇಗೌಡ, ವಿಶ್ವೇಶ್ವರಯ್ಯ, ಕೆಂಗೇರಿ, ಉಳ್ಳಾಲ, ಸ್ಯಾಟಲೈಟ್‌ ವ್ಯಾಪ್ತಿಯಲ್ಲಿರುವ ಬಿಡಿಎ ನಿವೇಶನಗಳನ್ನು ಅಕ್ರಮವಾಗಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಅನರ್ಹ ವ್ಯಕ್ತಿಗಳಿಗೆ 150 ಕೋಟಿಗೂ ಹೆಚ್ಚು ಮೌಲ್ಯ ದ ಜಾಗ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ಬಿಡಿಎ ಅರ್ಕಾವತಿ ಬಡಾವಣೆ, ಕೆಂಪೇಗೌಡ ಬಡಾವಣೆ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಲ್ಲಿ ಸುಮಾರು ರೂ.75 ಕೋಟಿ ರೂ.ಮೌಲ್ಯದ 6 ನಿವೇಶನಗಳನ್ನು ಸುಳ್ಳು ಮಾಹಿತಿ ನೀಡಿ ನಕಲಿ ದಾಖಲಾತಿಗಳನ್ನು ಸೃಷ್ಟಿಸಿ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಶಾಮೀಲಾಗಿ ಬೆಲೆ ಬಾಳುವ ನಿವೇಶನಗಳನ್ನು ಅನರ್ಹ ವ್ಯಕ್ತಿಗೆ ಮಂಜೂರು ಮಾಡಿದ್ದಾರೆ. ಈ ಬಗ್ಗೆ ಮೂಲ ದಾಖಲೆ ಪಡೆದ ಎಸಿಬಿ ತನಿಖೆಗೆ ಮುಂದಾಗಿದೆ.

ಕೆಂಗೇರಿ ಹೋಬಳಿ ಉಳ್ಳಾಲ ಗ್ರಾಮದಲ್ಲಿ ಬಿಡಿಎ ಅಧಿಕಾರಿಗಳು ಖಾಸಗಿ ವ್ಯಕ್ತಿ ಮತ್ತು ಮಧ್ಯವರ್ತಿಗಳ ಜತೆ ಸೇರಿ ನಿರ್ದಿಷ್ಟ ವ್ಯಕ್ತಿಯಿಂದ ಯಾವುದೇ ಜಮೀ ನನ್ನು ಸ್ವಾದೀನ ಪಡಿಸಿಕೊಳ್ಳದಿದ್ದರೂ ಸುಳ್ಳು ದಾಖಲೆ ಸೃಷ್ಟಿಸಿ ಬದಲಿ ನಿವೇಶನವಾಗಿ 1800 ಚ.ಅ ಅಳತೆಯ ಸುಮಾರು 1.5 ಕೋಟಿ ರೂ. ಮೌಲ್ಯದ ನಿವೇಶನವನ್ನು ಅಕ್ರಮವಾಗಿ ನೀಡಿದ್ದಾರೆ.

ಕೆಂಗೇರಿ ಸ್ಯಾಟಲೈಟ್‌ಟೌನ್‌ ಬಳಿಯೂ ಖಾಸಗಿ ಇದೇರೀತಿ ಬಿಡಿಎ ಅಧಿಕಾರಿಗಳು, ನಕಲಿ ದಾಖಲೆಗಳನ್ನು ಸೃಷ್ಟಿಸಿ 1000 ಚ.ಅ ಅಳತೆಯ 80 ಲಕ್ಷ ರೂ. ಮೌಲ್ಯದ ನಿವೇಶನ ನೀಡಿದ್ದಾರೆ. ನಗರ ಚಂದ್ರಾಲೇಔಟ್‌ನಲ್ಲೂ ನಕಲಿ ದಾಖಲೆ ಸೃಷ್ಟಿಸಿ 5 ಕೋಟಿ ರೂ. ಮೌಲ್ಯದ 2400 ಚ.ಅ ನಿವೇಶನವನ್ನು ಅಕ್ರಮವಾಗಿ ಮಂಜೂರು ಮಾಡಿದ್ದಾರೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೂಲ ನಿವೇಶನ ಫ‌ಲಾ ನುಭವಿಯವರ ಮೂಲ ದಾಖಲಾತಿಗಳನ್ನೇ ತಿದ್ದುಪಡಿಗೊಳಿಸಿ, 30 ಲಕ್ಷ ರೂ. ಮೌಲ್ಯದ ನಿವೇಶನ ಅನರ್ಹ ವ್ಯಕ್ತಿಗೆ ನೀಡಿದ್ದಾರೆ.

ಬಿಡಿಎ ವಿಶ್ವೇಶ್ವರಯ್ಯ ಬಡಾವಣೆಯಲ್ಲಿ ಮೂಲ ಫ‌ಲಾನುಭವಿಗೆ ಮಂಜೂರಾದ 52 ಲಕ್ಷ ರೂ. ಮೌಲ್ಯದ ನಿವೇಶನವನ್ನು ಅನರ್ಹ ವ್ಯಕ್ತಿಗೆ ನೀಡಲಾಗಿದೆ. ಅರ್ಕಾವತಿ ಬಡಾವಣೆಯಲ್ಲಿ ಫ‌ಲಾನುಭವಿಯೊಬ್ಬರಿಗೆ ನಿವೇಶನ ಮಂಜೂರಾಗಿದ್ದರೂ, ಯಾವುದೇ ಕಾರಣ ಇಲ್ಲದೆ ದುರುದ್ದೇಶದಿಂದ ಕೆಂಪೇಗೌಡ ಬಡಾವಣೆಯಲ್ಲಿ ನಿವೇಶನವನ್ನು ಮಂಜೂರು ಮಾಡಲಾಗಿದೆ. ಬಿಡಿಎ ಭೂಸ್ವಾಧೀನಕ್ಕೆ ಸಂಬಂಧಪಟ್ಟಂತೆ ಭೀಮನಕುಪ್ಪೆ ಗ್ರಾಮ, ಕೆಂಪೇಗೌಡ ಬಡಾವಣೆ ಹಾಗೂ ಡಾ.ಕೆ.ಶಿವರಾಮ ಕಾರಂತ್‌ ಬಡಾವಣೆ ಹಾಗೂ ಇತರೆಡೆಯೂ ಬಿಡಿಎ ಅಧಿಕಾರಿಗಳು ಮಧ್ಯವರ್ತಿಗಳ ಜತೆ ಸೇರಿದೊಡ್ಡ ಸಂಖ್ಯೆಯಲ್ಲಿ ಅಕ್ರಮದಲ್ಲಿ ಎಸಗಿದ್ದಾರೆ. ಈ ಕುರಿತು ದಾಖಲೆಗಳು ಮತ್ತು ನೋಂದಣಿಗಳನ್ನು ಅಮಾ ನತು ಪಡಿಸಲಾಗಿದೆ.

Advertisement

ಖಾಸಗಿ ವ್ಯಕ್ತಿಗಳಿಗೆ ಮಣೆ: ಬಿಡಿಎ ಭೂಸ್ವಾಧೀನಕ್ಕೆ ಸಂಬಂಧ ಸರ್ಕಾರಿ ಜಮೀನುಗಳನ್ನು ಖಾಸಗಿ ವ್ಯಕ್ತಿಗಳು ಮಾಲಿಕತ್ವ ಹೊಂದಿರುವಂತೆ ಅಕ್ರಮ ದಾಖಲಾತಿಗಳನ್ನು ಸೃಷ್ಟಿಸಿ ಬಿಡಿಎ ಅಧಿಕಾರಿ ಮತ್ತು ಸಿಬ್ಬಂದಿ ಖಾಸಗಿ ವ್ಯಕ್ತಿಗಳೊಂದಿಗೆ ಶಾಮೀಲಾಗಿ ಕೊಟ್ಯಂತರ ರೂ. ಮೌಲ್ಯದ ಪರಿಹಾರ ಧನವನ್ನು ಖಾಸಗಿ ವ್ಯಕ್ತಿಗಳಿಗೆ ನೀಡಲಾಗಿದೆ. ಬಿಡಿಎ ಅಂಜನಾಪುರ ಬಡಾವಣೆಯಲ್ಲಿ ಫ‌ಲಾನುಭವಿಗಳಿಗೆ ಸೇರಿದ ನಿವೇಶನವೊಂದು ಒತ್ತುವರಿಯಾಗಿದ್ದು ಈ ಬಗ್ಗೆ ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕಾದ ಬಿಡಿಎ ಅಧಿಕಾರಿಗಳು, ಬೇರೆ ಬಡಾವಣೆಯಲ್ಲಿ ನಿವೇಶನವನ್ನು ನೀಡಿ ಸದರಿ ನಿವೇಶನವನ್ನು ಇತರೆ 3ನೇ ವ್ಯಕ್ತಿಗೆ ಮಂಜೂರು ಮಾಡಿ ಅಕ್ರಮವೆಸಗಿದ್ದಾರೆ.

ಅರ್ಕಾವತಿ ಬಡಾವಣೆ ಮತ್ತು ಇನ್ನು ಕೆಲವು ಬಡಾವಣೆಗಳಲ್ಲಿ, ಕೆಲವು ಅರ್ಜಿದಾರರು ನಿವೇಶನ ಮಂಜೂರಾತಿ ಪಡೆದು ನಿಗದಿತ ಸಮಯದಲ್ಲಿ ಹಣ ಸಂದಾಯ ಮಾಡಿದ್ದರೂ ಅವರಿಗೆ ಲೀಸ್‌ ಕಂ ಸೇಲ್‌ ಡೀಡ್‌(ಎಲ್‌ ಸಿಎಸ್‌ಡಿ)ಗಳನ್ನು ಮಾಡಿ, ನಿಗದಿತ ಅವಧಿಯೊಳಗೆ ಮನೆಗಳನ್ನು ಕಟ್ಟಿಕೊಂಡಿದ್ದರೂ, ಅಬ್ಲ್ ಲ್ಯೂಟ್‌ ಸೇಲ್‌ ಡೀಡ್‌(ಎಎಸ್‌ಡಿ)ಗಳನ್ನು ಮಾಡಿಕೊಡದೆ ಉದ್ದೇಶಪೂರಕವಾಗಿ ವಿಳಂಬ ಮಾಡಿದ್ದಾರೆ.‌

ಅದೇ ರೀತಿ ನಿಗದಿತ ಅವಧಿಯೊಳಗೆ ಬಿಡಿಎ ನಿಗದಿ ಪಡಿಸಿರುವ ಹಣವನ್ನು ಸಂದಾಯ ಮಾಡಿದ ಅರ್ಜಿದಾರರಿಗೆ ನಿವೇಶನ ಹಂಚಿಕೆ ಪತ್ರ ನೀಡದೆ ಅನವ್ಯಶಕ ವಿಳಂಬ ನೀತಿ ಅನುಸರಿಸಲಾಗಿದೆ. ಈ ಎಲ್ಲ ಪ್ರಕರಣಗಳ ಮೂಲ ದಾಖಲೆ ವಶಕ್ಕೆ ಪಡೆದ ಎಸಿಬಿ ತೀವ್ರ ತನಿಖೆಗೆ ಮುಂದಾಗಿದೆ. 2 ದಿನಗಳ ದಾಳಿಯಲ್ಲಿ ಬಿಡಿಎ ಕಚೇರಿಯಲ್ಲಿ ನಡೆ ಯುತ್ತಿದ್ದ ಭಾರೀ ಅಕ್ರಮ ಬಯಲಾಗಿದ್ದು, ಅಧಿಕಾರಿ, ಸಿಬ್ಬಂದಿ ಮತ್ತು ಮಧ್ಯವರ್ತಿಗಳ ಬಗ್ಗೆ ಮಾಹಿತಿ ಸಂಗ್ರಹಿ ಸಲಾಗುತ್ತಿದೆ. ಮಂಗಳವಾರ ಮತ್ತೆ ಶೋಧ ಕಾರ್ಯ ಮುಂದುವರಿಯಲಿದೆ ಎಂದು ಎಸಿಬಿ ತಿಳಿಸಿದೆ.

ಬಿಡಿಎ ಭ್ರಷ್ಟಾಚಾರ ವಿರುದ್ಧ ನಾನೂ ದೂರು ನೀಡಿದ್ದೆ

ಸಾರ್ವಜನಿಕರೊಂದಿಗೆ ನಾನೂ ಬಿಡಿಎ ಭ್ರಷ್ಟಾಚಾರ ವಿರುದ್ಧ ಎಸಿಬಿಗೆ ದೂರು ನೀಡಿದ್ದೇ ನೆ. ತಪ್ಪಿತಸ್ಥ ಅಧಿಕಾರಿಗಳು ಮತ್ತು ಸಿಬ್ಬಂದಿ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಬಿಡಿಎ ಅಧ್ಯಕ್ಷ ಎಸ್‌.ಆರ್‌.ವಿಶ್ವನಾಥ್‌ ತಿಳಿಸಿದರು. ಬಿಡಿಎ ಅಕ್ರಮದ ವಿರುದ್ಧ ಸಾರ್ವಜನಿಕರಿಂದ ದೂರುಗಳು ಬಂದಿರುವ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ, ಅರ್ಕಾವತಿ ಬಡಾವಣೆಯಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿ ಕಡತಗಳನ್ನು ಪರಿಶೀಲಿಸಿದ್ದಾರೆ.

ಇದನ್ನೂ ಓದಿ;- ಮೇಲ್ಮನೆಗೆ ಸಂಬಂಧಿಗಳ ಕದನ?

ಬಿಡಿಎ ಅಕ್ರಮ ಕುರಿತು ಎಸಿಬಿಗೆ ಸಂಪೂರ್ಣ ಸಹಕಾರ ನೀಡಲಾಗುತ್ತದೆ. ಎಸಿಬಿ ಅಧಿಕಾರಿಗಳು ಲಭ್ಯ ದಾಖಲೆಗಳನ್ನು ಪರಿಶೀಲನೆ ನಡೆಸಿ ವರದಿ ನೀಡಲಿದ್ದಾರೆ. ದಾಳಿ ಕುರಿತು ಪೂರ್ಣ ಮಾಹಿತಿ ಪಡೆದು ಸಿಎಂಗೆ ವಿವರಣೆ ನೀಡುತ್ತೇನೆ. ಪ್ರತ್ಯೇಕ ತನಿಖಾ ಸಂಸ್ಥೆ ರಚನೆ ಅಗತ್ಯವೂ ಬೀಳಬಹುದು ಎಂದರು.

ಮಹಿಳೆಯೊಬ್ಬರ ಹೆಸರಿನಲ್ಲಿ ಎಂಟು ನಿವೇಶನ!

ದಾಳಿ ವೇಳೆ ಮಹಿಳೆಯೊಬ್ಬ ಹೆಸರಿನಲ್ಲಿ 8 ನಿವೇಶನ ಮಂಜೂರು ಮಾಡಿರುವುದು ಬೆಳಕಿಗೆ ಬಂದಿದೆ. ವಿಪರ್ಯಾಸವೆಂದರೆ ಈ ವಿಚಾರ ಆ ಮಹಿಳೆಗೆ ಗೊತ್ತಿಲ್ಲ. ಬಿಡಿಎ ಅಧಿಕಾರಿಗಳು ಮಧ್ಯವರ್ತಿಗಳ ಜತೆ ಸೇರಿಕೊಂಡು ಅಕ್ರಮವಾಗಿ ನಿವೇಶನ ಮಂಜೂರು ಮಾಡಿಕೊಳ್ಳಲು ಮಹಿಳೆಯೊಬ್ಬರ ಹೆಸರಿನಲ್ಲಿ ನಗರದ ವಿವಿಧೆಡೆ ಎಂಟು ನಿವೇಶನ ಮಂಜೂರು ಮಾಡಿದ್ದಾರೆ. ಈ ದಾಖಲೆ ದೊರೆತ ಕೂಡಲೇ ಎಸಿಬಿ ಅಧಿಕಾರಿಗಳು, ಆ ಮಹಿಳೆಯನ್ನು ನೇರವಾಗಿ ಸಂಪರ್ಕಿಸಿದಾಗ ಆ ರೀತಿಯ ಯಾವುದೇ ನಿವೇಶನ ಖರೀದಿಸಿಲ್ಲ ಎಂದಿದ್ದಾರೆ ಎಂದು ಎಸಿಬಿ ಮೂಲಗಳು ತಿಳಿಸಿವೆ

ಕಮಿಷನ್‌ ದಂಧೆ: ಕಾಂಗ್ರೆಸ್‌ಗೆ ತಿರುಗೇಟು

ಕಮೀಷನ್‌ ದಂಧೆಯನ್ನು ಆರಂಭ ಮಾಡಿದ್ದೇ ಕಾಂಗ್ರೆಸ್‌. ಅವರ ಆಡಳಿತದಲ್ಲಿ ಶೇ. 20 ಮಾತ್ರ ಫ‌ಲಾನುಭವಿಗಳಿಗೆ ತಲುಪುತ್ತಿತ್ತು. ಉಳಿದ ಹಣ ಏಜೆನ್ಸಿಗಳಿಗೆ ಹೋಗುತ್ತಿತ್ತು. ಯಾವುದೇ ದಾಖಲೆ ಇಲ್ಲದೇ ಆರೋಪ ಮಾಡುವುದು ಸರಿಯಲ್ಲ. ದೂರಿಗೆ ತಕ್ಕಂತೆ ನಿಖರವಾದ ದಾಖಲೆ ಕೊಡಲಿ. ಸರ್ಕಾರ ಸೂಕ್ತ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಬಿಡಿಎ ಅಧ್ಯಕ್ಷ ವಿಶ್ವನಾಥ್‌ ತಿರುಗೇಟು ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next