Advertisement
ಬಿಜೆಪಿಯವರೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಬದಲಾವಣೆ ಮಾಡಲು ಯತ್ನಿಸುತ್ತಿದ್ದಾರೆ ಎಂದು ಸಿದ್ದರಾಮಯ್ಯ ನೀಡಿದ ಹೇಳಿಕೆಗೆ ತಿರುಗೇಟು ನೀಡಿರುವ ವಿಶ್ವನಾಥ್, ಸಿದ್ದರಾಮಯ್ಯ ಅಧಿಕಾರದ ಕನಸು ಕಾಣುತ್ತಿದ್ದಾರೆ. ಬಹುಶಃ 60 ರಿಂದ 70 ಪಂಚೆಗಳನ್ನು ಖರೀದಿಸಿರಬಹುದು ಎಂದು ಲೇವಡಿ ಮಾಡಿದರು.
Related Articles
Advertisement
ಹಾದಿ ತಪ್ಪಿಸಿದ ಕಾಂಗ್ರೆಸಿಗರು
ಇಡೀ ದೇಶ ಕೊರೊನಾದಿಂದ ತತ್ತರಿಸಿ ಹೋಗುತ್ತಿರುವ ಈ ಸಂದರ್ಭದಲ್ಲಿ ಕಾಂಗ್ರೆಸ್ ನಾಯಕರು ತಮ್ಮ ಪಕ್ಷಕ್ಕೆ ಸಂಬಂಧವಿಲ್ಲದ ವಿಚಾರಗಳನ್ನು ಪ್ರಸ್ತಾಪ ಮಾಡಿ ಒಣ ರಾಜಕೀಯ ಮಾಡುತ್ತಿದ್ದಾರೆ ಎಂದು ಕಿಡಿ ಕಾರಿದ ವಿಶ್ವನಾಥ್, ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವುದು ಉತ್ತಮ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಲಹೆ ಮಾಡಿದ್ದರೆ ಇದೇ ಕಾಂಗ್ರೆಸ್ ನಾಯಕರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿ ಜನರನ್ನು ಹಾದಿ ತಪ್ಪಿಸಿದರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಯಾಗಿದ್ದ ವೇಳೆ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದರೆ ಸಿದ್ದರಾಮಯ್ಯ ಮತ್ತವರ ಪಕ್ಷ ಚುನಾವಣೆಯಲ್ಲಿ ಏಕೆ ಸೋಲನುಭವಿಸಬೇಕಿತ್ತು. ಸದಾ ಆಂತರಿಕ ಕಚ್ಚಾಟದಲ್ಲೇ ತೊಡಗಿರುವ ಆ ಪಕ್ಷದ ಮುಖಂಡರೆನಿಸಿಕೊಂಡಿರುವ ಸಿದ್ದರಾಮಯ್ಯನವರಿಗೆ ಕವಡೆ ಕಿಮ್ಮತ್ತಿಲ್ಲ ಎಂದು ಟೀಕಿಸಿದರು.
ಆದರೆ, ಲಸಿಕೆಯು ಜೀವ ಉಳಿಸುತ್ತದೆ ಎಂದು ತಿಳಿದ ಮೇಲೆ ಏಪ್ರಿಲ್ ನಲ್ಲಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನ ಇನ್ನಿತರೆ ನಾಯಕರು ಲಸಿಕೆ ಹಾಕಿಸಿಕೊಂಡಿದ್ದಾರೆ. ಈ ಬಗ್ಗೆ ಮೊದಲೇ ಸರ್ಕಾರದ ಜತೆ ಸೇರಿ ಜನ ಜಾಗೃತಿ ಮೂಡಿಸಿದ್ದರೆ ಜನರಲ್ಲಿ ಕಾಂಗ್ರೆಸ್ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಮೂಡುತ್ತಿತ್ತು. ಆದರೆ, ನಾಯಕರ ಇಬ್ಬಗೆಯ ಧೋರಣೆ ಜನರಿಗೆ ಗೊತ್ತಾಗಿದ್ದು, ನಗೆಪಾಟಿಲಿಗೆ ಈಡಾಗಿದ್ದಾರೆ ಎಂದು ಲೇವಡಿ ಮಾಡಿದರು.
ಕೊರೊನಾ ಕಾರ್ಯದಲ್ಲಿ ಪಾಲ್ಗೊಳ್ಳಲಿ: ತಾಕೀತು
ಇದೇ ವೇಳೆ, ಬಿಜೆಪಿ ಮುಖಂಡರಾದ ಮಾಡಾಳು ವಿರೂಪಾಕ್ಷಪ್ಪ, ನಿರಂಜನ್ ಕುಮಾರ್ ಮತ್ತು ಶಂಕರ್ ಗೌಡ ಪಾಟೀಲ್ ಅವರು ಮಾತನಾಡಿ, ನಮ್ಮ ಪಕ್ಷದ ಬಗ್ಗೆ ಮಾತಾಡಲು ಸಿದ್ದರಾಮಯ್ಯಗೆ ಅಧಿಕಾರ ಏನಿದೆ? ಎಂದು ಪ್ರಶ್ನಿಸಿದರು.
ಯಡಿಯೂರಪ್ಪ ಬದಲಾವಣೆ ಬಗ್ಗೆ ಕೆಲವು ಶಾಸಕರು ಪ್ರಯತ್ನ ಮಾಡುತ್ತಿದ್ದಾರೆಂಬುದು ಕೇವಲ ಊಹಾಪೋಹ. ಹಾಗೊಂದು ವೇಳೆ ಪ್ರಯತ್ನ ನಡೆಸಿದ್ದರೆ ಅದು ಕೈಗೂಡುವುದಿಲ್ಲ ಎಂದು ತಿರುಗೇಟು ನೀಡಿದರು.
ಇನ್ನೂ ಎರಡು ವರ್ಷಗಳ ಕಾಲ ಯಡಿಯೂರಪ್ಪ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ. ಯಾರೋ ಒಂದಿಬ್ಬರು ದೆಹಲಿಗೆ ಹೋದ ತಕ್ಷಣಕ್ಕೆ ಯಡಿಯೂರಪ್ಪ ಬದಲಾವಣೆ ಸಾಧ್ಯವಿಲ್ಲ. ಪರಿಸ್ಥಿತಿ ಹೀಗಿರುವಾಗ ನಾವು ಯಡಿಯೂರಪ್ಪ ಪರ ಸಹಿ ಸಂಗ್ರಹ ಮಾಡುವ ಅಗತ್ಯವೂ ಇಲ್ಲ ಎಂದು ಅವರು ಹೇಳಿದರು.