ಬೆಂಗಳೂರು : ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಲ್ಲಿ ಬ್ರೋಕರ್ ಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುತ್ತದೆ ಎಂದು ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ಹೇಳಿದ್ದಾರೆ.
ಬಿಡಿಎ ಬ್ರೋಕರ್ ಗಳ ಮೇಲೆ ಎಸಿಬಿ ದಾಳಿ ನಡೆಸಿರುವ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಅವರು, ಬಿಡಿಎ ಮತ್ತು ಸಾರ್ವಜನಿಕರಿಗೆ ವಂಚನೆ ಮಾಡಿ ನಷ್ಟವನ್ನು ಉಂಟು ಮಾಡುವ ಬ್ರೋಕರ್ ಗಳ ಮೇಲೆ ದಾಳಿ ನಡೆಸಿರುವುದು ಸ್ವಾಗತಾರ್ಹವಾಗಿದೆ ಎಂದು ತಿಳಿಸಿದ್ದಾರೆ.
ನಾನು ಬಿಡಿಎ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ತಕ್ಷಣ ಬಿಡಿಎ ಆವರಣದೊಳಕ್ಕೆ ಏಜೆಂಟರಿಗೆ ನಿರ್ಬಂಧ ವಿಧಿಸುವ ಮೂಲಕ ಸಂಸ್ಥೆಗೆ ಒಳ್ಳೆಯ ಹೆಸರನ್ನು ತರುವ ಪ್ರಯತ್ನ ನಡೆಸಿದ್ದೇನೆ. ಇದಕ್ಕೆ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಂಪೂರ್ಣ ಬೆಂಬಲ ನೀಡುತ್ತಿದ್ದಾರೆ. ಅಲ್ಲದೇ, ಏಜೆಂಟರ್ ಗಳ ಹಾವಳಿ ತಪ್ಪಿಸುವ ನಿಟ್ಟಿನಲ್ಲಿ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲು ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದಾರೆ ಎಂದು ವಿಶ್ವನಾಥ್ ತಿಳಿಸಿದರು.
ಈ ಹಿಂದೆ ರೈತರು ಮತ್ತು ಜನಸಾಮಾನ್ಯರು ಬಂದರೆ ಯಾವುದೇ ಕೆಲಸ ಆಗುವುದಿಲ್ಲ. ಏಜೆಂಟರು ಬಂದರೆ ಕೆಲಸ ಆಗುತ್ತದೆ ಎಂಬ ಭಾವನೆ ಇತ್ತು. ಪರಿಸ್ಥಿತಿಯೂ ಅದೇ ರೀತಿ ಇತ್ತು. ಆದರೆ, ನಾನು ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡ ನಂತರ ಇಂತಹ ಚಟುವಟಿಕೆಗಳಿಗೆ ಕಡಿವಾಣ ಹಾಕಿ ಸಾರ್ವಜನಿಕರು ಮುಕ್ತವಾಗಿ ಬಿಡಿಎಗೆ ಬಂದು ಕೆಲಸ ಮಾಡಿಸಿಕೊಳ್ಳುವ ವಾತಾವರಣ ನಿರ್ಮಾಣವಾಗಿದೆ. ಈ ವಾತಾವರಣವನ್ನು ಮತ್ತಷ್ಟು ಸುಧಾರಣೆ ಮಾಡಲು ಅಧಿಕಾರಿಗಳು ಮತ್ತು ಸಿಬ್ಬಂದಿಯೊಂದಿಗೆ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ ಎಂದು ಹೇಳಿದರು.
ಬ್ರೋಕರ್ ಗಳ ವಿರುದ್ಧ ನಾನು ಹೇಳಿಕೆ ಕೊಟ್ಟಿದ್ದಕ್ಕೆ ಒಬ್ಬ ಬ್ರೋಕರ್ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ. ಆ ಬ್ರೋಕರ್ ಮೇಲೆಯೂ ಎಸಿಬಿ ದಾಳಿ ನಡೆಸಿದ್ದು, ಅವರೆಲ್ಲರ ಅಕ್ರಮಗಳೆಲ್ಲವೂ ತನಿಖೆಯಿಂದ ಹೊರ ಬರಲಿ ಎಂದರು.
ಇದನ್ನೂ ಓದಿ : ಪಿರಿಯಾಪಟ್ಟಣ: ವಿಜೃಂಭಣೆಯಿಂದ ನಡೆದ ಕೋಟೆ ಮಾರಮ್ಮ ದೇವಿಯ ವಾರ್ಷಿಕ ಮಹೋತ್ಸವ
ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಏಜೆಂಟ್ ಗಿರಿ ನಿಲ್ಲಬೇಕೆಂದು ಹೇಳಿಕೆ ನೀಡಿರುವುದಕ್ಕೆ ನನ್ನ ಸಹಮತವಿದೆ. ಏಜೆಂಟರು ಜನಸಾಮಾನ್ಯರಿಗೆ ಮತ್ತು ಬಿಡಿಎಗೆ ಕೋಟ್ಯಾಂತರ ರುಪಾಯಿ ಮೋಸ ಮಾಡಿದ್ದಾರೆ. ಇನ್ನೂ ಇಬ್ಬರು ಮೂವರು ಏಜೆಂಟರು ಎಸಿಬಿ ದಾಳಿಯಿಂದ ತಪ್ಪಿಸಿಕೊಂಡಿದ್ದಾರೆ. ಅವರ ಮೇಲೆಯೂ ದಾಳಿ ನಡೆಸಿದರೆ ಮತ್ತಷ್ಟು ಅಕ್ರಮಗಳು ಬಯಲಿಗೆ ಬರಬಹುದು ಎಂದು ಹೇಳಿದರು.