ಬೆಂಗಳೂರು: ಸರ್ಕಾರಿ ಭೂಮಿಯಲ್ಲಿದ್ದ ಶೆಡ್ ತೆರವುಗೊಳಿಸಲು ತೆರಳಿದ್ದ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಬಿಎಂಟಿಎಫ್ ಅಧಿಕಾರಿಗಳಿಗೆ ಭೂ ಮಾಲೀಕರು ಬೆದರಿಕೆ ಹಾಕಿ, ತಳ್ಳಾಡಿ, ಹಲ್ಲೆಗೆ ಮುಂದಾದ ಘಟನೆ ಮಂಗಳವಾರ ನಡೆದಿದೆ.
ನ್ಯೂ ತಿಪ್ಪಸಂದ್ರದ ಕೃಷ್ಣಭವನ್ ಹೋಟೆಲ್ ಪಕ್ಕದಲ್ಲಿ ಬಿಡಿಎಗೆ ಸೇರಿದ 60*40 ವಿಸ್ತೀರ್ಣದ ಜಾಗವಿದ್ದು, ಸಂತೋಷ್ ರೆಡ್ಡಿ, ವಿಶ್ವನಾಥ್ ರೆಡ್ಡಿ ಸೇರಿ ಮತ್ತಿತರರು ಆ ಜಾಗ ಸ್ವಾಧೀನಪಡಿಸಿಕೊಂಡು ಶೆಡ್ ನಿರ್ಮಾಣ ಮಾಡಿಕೊಂಡಿದ್ದರು. ಹೀಗಾಗಿ ಮಂಗಳವಾರ ಬೆಳಗ್ಗೆ 7.30ರ ಸುಮಾರಿಗೆ ಬಿಡಿಎ ಎಂಜಿನಿಯರ್‌ಗಳು ಹಾಗೂ ಬಿಎಂಟಿಎಫ್ ಅಧಿಕಾರಿಗಳು ತೆರಳಿ ಶೆಡ್ ತೆರವುಗೊಳಿಸುವ ಕಾರ್ಯ ನಡೆಸುತ್ತಿದ್ದರು.
ಈ ಸಂಧರ್ಭದಲ್ಲಿ ಸ್ಥಳಕ್ಕೆ ಆಗಮಿಸಿದ ಸಂತೋಷ್ ರೆಡ್ಡಿ, ವಿಶ್ವನಾಥ್ ರೆಡ್ಡಿ ಸೇರಿದಂತೆ ಹಲವರು, ಜಾಗ ತಮಗೆ ಸೇರಿದ್ದು ಎಂದು ವಿರೋಧ ವ್ಯಕ್ತಪಡಿಸಿದ್ದಾರೆ. ಜತೆಗೆ, ಆಕ್ರೋಶಗೊಂಡು ಅಧಿಕಾರಿಗಳನ್ನು ತಳ್ಳಾಡಿ, ಕರ್ತವ್ಯಕ್ಕೆ ಅಡ್ಡಿಪಡಿಸಿ ಹಲ್ಲೆ ನಡೆಸಲು ಮುಂದಾಗಿದ್ದಾರೆ. ಕೂಡಲೇ ಸ್ಥಳದಲ್ಲಿದ್ದ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದರು.
ಘಟನೆಗೆ ಸಂಬಂಧಿಸಿದಂತೆ ಬಿಡಿಎ ಅಧಿಕಾರಿಗಳು ನೀಡಿರುವ ದೂರಿನ ಅನ್ವಯ ಸಂತೋಷ್ ರೆಡ್ಡಿ, ವಿಶ್ವನಾಥ್ ರೆಡ್ಡಿ ಸೇರಿದಂತೆ ಮತ್ತಿತರರ ವಿರುದ್ಧ ಸರ್ಕಾರಿ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿ, ಬೆದರಿಕೆ ಸಂಬಂಧ ಜೀವನ್ ಭೀಮಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿ ಸಂತೋಷ್ ರೆಡ್ಡಿಯನ್ನು ಬಂಧಿಸಿದ್ದು, ಉಳಿದವರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿ ಮಾಹಿತಿ ನೀಡಿದರು.
ಶೆಡ್ ನಿರ್ಮಾಣ ಮಾಡಿಕೊಂಡಿರುವ ಜಾಗ ತಮಗೇ ಸೇರಿದ್ದು ಎಂಬ ವಾದ ಆರೋಪಿಗಳದ್ದಾಗಿದೆ. ಆದರೆ, ಅದು ಬಿಡಿಎಗೆ ಸೇರಿದ ಜಾಗವಾಗಿರುವ ಕಾರಣ, ಶೆಡ್ ತೆರವುಗೊಳಿಸಿ ಸ್ಥಳ ಸ್ವಾಧೀನಪಡಿಸಿಕೊಳ್ಳಲು ಬಿಡಿಎ ಅಧಿಕಾರಿಗಳು ತೆರಳಿದ್ದರು ಎಂದು ಅಧಿಕಾರಿ ಹೇಳಿದರು.