Advertisement

ಬೆಳ್ಳಂದೂರು ಕೆರೆಯಂಗಳಕ್ಕೆ ಬಿಡಿಎ ಅಡಿ

12:18 PM Apr 25, 2017 | Team Udayavani |

ಬೆಂಗಳೂರು: ಬೆಳ್ಳಂದೂರು ಕೆರೆಯನ್ನು ಉಳಿಸಲು ಈ ಕೂಡಲೇ ಕ್ರಮ ಕೈಗೊಳ್ಳಬೇಕು ಎಂಬ ರಾಷ್ಟ್ರೀಯ ಹಸಿರು ನ್ಯಾಯಧೀಕರಣದ (ಎನ್‌ಜಿಟಿ) ಆದೇಶದ ಪಾಲನೆಗೆ ಅಡಿ ಇಟ್ಟಿರುವ ಬಿಡಿಎ ಸೋಮವಾರದಿಂದ ಕೆರೆ ಸ್ವತ್ಛಗೊಳಿಸುವ ಕಾರ್ಯ ಆರಂಭಿಸಿದೆ. ಕೆರೆಯಲ್ಲಿ ವ್ಯಾಪಕವಾಗಿ ಬೆಳೆದಿರುವ ಜೊಂಡು ಹುಲ್ಲನ್ನು ಶೀಘ್ರ ತೆರವುಗೊಳಿಸಲು ಅತ್ಯಾಧುನಿಕ ಯಂತ್ರಗಳನ್ನು ಬಳಸಿಕೊಳ್ಳಲು ಮತ್ತು ಕೆರೆಯಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸಲು “ವಾಯುಪೂರಕ’ ಯಂತ್ರಗಳನ್ನು ಬಿಡಿಎ ಅಳವಡಿಸಿದೆ. 

Advertisement

ಕೆರೆಯನ್ನು ಸ್ವತ್ಛಗೊಳಿಸುವ ಗುತ್ತಿಗೆಯನ್ನು ಬಿಡಿಎ “ಹಾರ್ವಿನ್‌ ಕನ್‌ಸ್ಟ್ರಕ್ಷನ್‌ ಪ್ರೈವೇಟ್‌ ಲಿಮಿಟೆಡ್‌’ಗೆ ನೀಡಿದೆ. ಕಂಪನಿಯು ಸೋಮವಾರದಿಂದ ಕೆಲಸ ಆರಂಭ ಮಾಡಿದೆ. ಗುತ್ತಿಗೆದಾರರಿಗೆ ಬಿಡಿಎ ಎಂಜಿನಿಯರ್‌ಗಳು ಸಹ ನೆರವಾಗುತ್ತಿದ್ದಾರೆ. ಸೋಮವಾರ ಮಧ್ಯಾಹ್ನ 2 ಗಂಟೆಯಿಂದ ಕೆರೆಯ ಒಂದು ಭಾಗದಲ್ಲಿ ಸ್ವತ್ಛತಾ ಕಾರ್ಯ ಆರಂಭವಾಯಿತು.

ಕೆರೆಗೆ ಸಂಪರ್ಕ ಕಲ್ಪಿಸುವ ಉದ್ದೇಶದಿಂದ ಯಮಲೂರು ಕೆರೆಯ ಭಾಗದ ದಡದಲ್ಲಿನ ಹುಲ್ಲು, ಗಿಡ-ಘಂಟಿಗಳನ್ನು ತೆರವುಗೊಳಿಸಿ ಕಂದಕ ನಿರ್ಮಿಸುವಲ್ಲಿ ಬಿಡಿಎ ಕೆರೆಯ ವಿಭಾಗದ ಅಧೀಕ್ಷಕ ನಾಗರಾಜ್‌ ಅವರ ನೇತೃತ್ವದ ತಂಡ ನಿರತವಾಗಿದೆ. 

ಬೆಳ್ಳಂದೂರು ಕೆರೆ 900 ಎಕರೆ ಪ್ರದೇಶವಿರುವ ಕಾರಣ ಕೆರೆಯನ್ನು ಐದು ಹಂತಗಳಲ್ಲಿ ಸ್ವತ್ಛಗೊಳಿಸಲು ಅಧಿಕಾರಿಗಳು ತೀರ್ಮಾನಿಸಿದ್ದಾರೆ. ಮೊದಲಿಗೆ ಬೆಳ್ಳಂದೂರು ಗ್ರಾಮದ ಕಡೆಯಿಂದ ಕಾಮಗಾರಿ ಆರಂಭಿಸಿ ನಂತರದಲ್ಲಿ ಯಮಲೂರು ಕೋಡಿ, ಇಬ್ಬಲೂರು ಕೆರೆ, ಚಲಘಟ್ಟ ಮತ್ತು ಆಗರದ ಕೆರೆ ಬಳಿಯ ವೈ ಜಂಕ್ಷನ್‌ ಬದಿಯಿಂದ ಕಾರ್ಯಾಚರಣೆ ನಡೆಸಲು ನಿರ್ಧರಿಸಲಾಗಿದೆ. 

ಕೆರೆಯಲ್ಲಿ ಭಾರಿ ಪ್ರಮಾಣದ ಜೊಂಡು, ಹುಲ್ಲು, ಗಿಡ-ಘಂಟಿಗಳಿರುವುದರಿಂದಾಗಿ ಅತ್ಯಾಧುನಿಕ ತಂತ್ರಜ್ಞಾನದ ಜೊಂಡು ತೆರವು ಯಂತ್ರಗಳ ಬಳಕೆಗೆ ಬಿಡಿಎ ತೀರ್ಮಾನಿಸಿದೆ. ಅದರ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಹೈದರಾಬಾದ್‌ ಮತ್ತು ಮುಂಬೈನಿಂದ ಯಂತ್ರಗಳನ್ನು ತರಿಸಲು ನಿರ್ಧರಿಸಿದ್ದು, ಕೆರೆ ಸ್ವತ್ಛಗೊಳಿಸುವ ಕಾರ್ಯ ಪೂರ್ಣ ಪ್ರಮಾಣದಲ್ಲಿ ಗುರುವಾರದಿಂದ ಆರಂಭವಾಗಲಿದೆ.  

Advertisement

ಕೆರೆಯ ವಿಸ್ತೀರ್ಣ ಹೆಚ್ಚಾಗಿರುವುದರಿಂದಾಗಿ ಕೆರೆಯ ಸ್ವತ್ಛತಾ ಕಾರ್ಯ ಒಂದು ತಿಂಗಳೊಳಗಾಗಿ ಪೂರ್ಣಗೊಳಿಸಲು ಸಾಧ್ಯವಿಲ್ಲ. ಕನಿಷ್ಠ ಎಂದರೂ ಸಂಪೂರ್ಣ ಕೆರೆಯನ್ನು ಸ್ವತ್ಛಗೊಳಿಸಲು ಮೂರು ತಿಂಗಳು ಕಾಲಾವಕಾಶ ಬೇಕಾಗುತ್ತದೆ. ಈಗಾಗಲೇ ಕೆರೆಯ ಸ್ವತ್ಛಗೊಳಿಸುವ ಕಾರ್ಯ ಆರಂಭವಾಗಿದ್ದು, ಯಂತ್ರಗಳು ಬಂದ ನಂತರ ಕೆಲಸ ಇನ್ನಷ್ಟು ವೇಗ ಪಡೆದುಕೊಳ್ಳಲಿದೆ. ಈಗಾಗಲೇ ಕ್ರಿಯಾಯೋಜನೆ ರೂಪಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು. 

ಕೆರೆಯೊಳಗೆ ಹಿಟಾಚಿ ಸೇರಿದಂತೆ ಇನ್ನಿತರ ಯಂತ್ರಗಳು ಪ್ರವೇಶಿಸಲು ರಸ್ತೆ ನಿರ್ಮಾಣ, ದಡದಲ್ಲಿರುವ ಹುಲ್ಲು ತೆರವು, ಕೆರೆಯಿಂದ ತೆಗೆದ ಜೊಂಡು ಹುಲ್ಲು ಸಾಗಿಸುವ ವಾಹನಗಳಿಗೆ ದಾರಿ ಮತ್ತು ಹುಲ್ಲು ವಿಲೇ ವಾರಿ ಮಾಡಲು ಸ್ಥಳ ಗುರುತು ಸೇರಿದಂತೆ ಹಲವು ಪೂರ್ವ ಸಿದ್ದತಾ ವ್ಯವಸ್ಥೆಗಳನ್ನು ಸೋಮವಾರ ಮಾಡಲಾಯಿತು. 

ಆಮ್ಲಜನಕ ಹೆಚ್ಚಿಸಲು ವಾಯುಪೂರಕ ಯಂತ್ರ ಅಳವಡಿಕೆ: ಬೆಳ್ಳಂದೂರು ಕೆರೆ ಸಂಪೂರ್ಣ ವಾಗಿ ಕಲುಷಿತ ಗೊಂಡಿರುವುದ ರಿಂದಾಗಿ ಕೆರೆಯಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಿಸುವ ಉದ್ದೇಶದಿಂದ ಪ್ರಾಯೋಗಿಕವಾಗಿ ಸದ್ಯ ಎರಡು ವಾಯುಪೂರಕ ಯಂತ್ರಗಳನ್ನು ಬಿಡಿಎ ಅಳವಡಿಸಿದೆ. ಕೆರೆಯಲ್ಲಿನ ಜೊಂಡು, ಹಲ್ಲು ತೆರವುಗೊಳಿಸುವುದರಿಂದ ಹೆಚ್ಚಿನ ಪ್ರಮಾಣದ ರಾಸಾಯನಿಕ ಅಂಶಗಳು ನೀರಿನಿಂದ ಹೊರಗೆ ಬರಲಿವೆ.

ಹೀಗಾಗಿ ಕೆರೆಯ ಸ್ವತ್ಛತಾ ಕಾರ್ಯ ಪೂರ್ಣಗೊಂಡ ಕೂಡಲೇ ಕೆರೆಯಲ್ಲಿ 150 ವಾಯುಪೂರಕ ಯಂತ್ರಗಳನ್ನು ಅಳವಡಿಸಲು ಬಿಡಿಎ ಚಿಂತಿಸಿದೆ. ಈ ಯಂತ್ರಗಳು ಕೆರೆಯ ಆಳದಿಂದ ನೀರನ್ನು ಮೇಲಕ್ಕೆ ಚಿಮ್ಮಿಸಲಿದ್ದು ಈ ಕ್ರಿಯೆಯಿಂದ ನೀರಿನಲ್ಲಿ ಆಮ್ಲಜನಕ ಪ್ರಮಾಣ ಹೆಚ್ಚಾಗಲಿದೆ ಎಂದು ತಜ್ಞರ ಹೇಳಿದ್ದಾರೆ. 

ಕೆರೆ ಸ್ವತ್ಛಗೊಳಿಸಲು ಎರಡು ಯಂತ್ರ: ಬೆಳ್ಳಂದೂರು ಕೆರೆಯಲ್ಲಿ ಭಾರಿ ಪ್ರಮಾಣದಲ್ಲಿ ಬೆಳೆದುಕೊಂಡಿರುವ ಜೊಂಡು ತೆರವು ಗೊಳಿಸಲು ಗುತ್ತಿಗೆದಾರರು ಅತ್ಯಾಧುನಿಕ ಯಂತ್ರಗಳನ್ನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಟ್ರಕ್‌ ಮೂಲಕ ಗುರುವಾರದ ಹೊತ್ತಿಗೆ ಎರಡು ಜೊಂಡು ತೆರವುಗೊಳಿಸುವ ಯಂತ್ರಗಳು ನಗರಕ್ಕೆ ಬರಲಿವೆ.

ಪ್ರತಿ ಯಂತ್ರ ಗಂಟೆಗೆ 2 ರಿಂದ 3 ಎಕರೆಯಷ್ಟು ಪ್ರದೇಶ ದಲ್ಲಿನ ಜೊಂಡನ್ನು ತೆರವುಗೊಳಿಸಲಿದ್ದು, ಮೂರು ತಿಂಗಳಲ್ಲಿ ಕೆರೆಯಲ್ಲಿನ ಜೊಂಡು-ಹುಲ್ಲು ತೆರವುಗೊಳ್ಳಲಿದೆ ಎಂದು ಗುತ್ತಿಗೆದಾರರು  ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next