Advertisement

ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಮುಳುಗಿದ ಬಿಡಿಎ ಹಣ!

12:48 PM Feb 24, 2018 | |

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ (ಬಿಡಿಎ) ಸೇರಿದ ಸಾವಿರಾರು ಕೋಟಿ ಹಣವನ್ನು ಅನಧಿಕೃತವಾಗಿ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಹೂಡಿಕೆ ಮಾಡಿ ನಷ್ಟ ಉಂಟುಮಾಡಿದ ಆರೋಪದ ಹಿನ್ನೆಲೆಯಲ್ಲಿ ಮೂವರು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಿಮಿನಲ್‌ ಮೊಕದ್ದಮೆ ದಾಖಲಿಸಿ, ಅವರ ಎಲ್ಲ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳಬೇಕು ಎಂದು ಸಾರ್ವಜನಿಕ ಲೆಕ್ಕಪತ್ರಗಳ ಸಮಿತಿ ಶಿಫಾರಸು ಮಾಡಿದೆ.

Advertisement

ಬಿಡಿಎ ಹಣಕಾಸು ಸಮಿತಿ ಸದಸ್ಯರಾಗಿದ್ದ ಸಂದೀಪ್‌ ದಾಶ್‌, ಎಂ.ಎನ್‌. ಶೇಷಪ್ಪ ಮತ್ತು ಬಿ. ಗಂಗಣ್ಣ ತಮ್ಮ ಅಧಿಕಾರಾವಧಿಯಲ್ಲಿ ಪ್ರಾಧಿಕಾರದ 4,046.45 ಕೋಟಿ ರೂ.ಗಳನ್ನು ಮ್ಯೂಚುವಲ್‌ ಫ‌ಂಡ್‌ಗೆ ಅನಧಿಕೃತವಾಗಿ ಹೂಡಿಕೆ ಮಾಡಿದ್ದಾರೆ. ಇದರಿಂದ ಪ್ರಾಧಿಕಾರಕ್ಕೆ 192.41 ಕೋಟಿ ರೂ. ನಷ್ಟ ಉಂಟಾಗಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಸಿವಿಲ್‌ ಹಾಗೂ ಕ್ರಿಮಿನಲ್‌ ಮೊಕದ್ದಮೆ ದಾಖಲಿಸುವ ಜತೆಗೆ ಅವರೆಲ್ಲರ ಆಸ್ತಿಗಳನ್ನು “ಪ್ರಾಪರ್ಟಿ ಅಟ್ಯಾಚ್‌ಮೆಂಟ್‌’ ಮಾಡಿ, ಹಣ ವಸೂಲಿಗೆ ಶೀಘ್ರ ಕ್ರಮ ಕೈಗೊಳ್ಳಬೇಕು ಎಂದು ಸಮಿತಿ ತಿಳಿಸಿದೆ.

ನಗರಾಭಿವೃದ್ಧಿ ಇಲಾಖೆಗೆ ಸಂಬಂಧಿಸಿದಂತೆ 2014-15ನೇ ಸಾಲಿನ ಮಹಾ ಲೆಕ್ಕಪರಿಶೋಧಕರ (ಸಾಮಾನ್ಯ ಮತ್ತು ಸಾಮಾಜಿಕ ವಲಯ) ವರದಿಯಲ್ಲಿನ “ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದಿಂದ ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಮಾಡಿದ ಹೂಡಿಕೆಗಳು’ ಕುರಿತು ಶುಕ್ರವಾರ ವಿಧಾನಸಭೆಯಲ್ಲಿ ಮಂಡಿಸಿದ ಸಾರ್ವಜನಿಕ ಲೆಕ್ಕಪತ್ರ ಸಮಿತಿ ವರದಿಯಲ್ಲಿ ಈ ಶಿಫಾರಸು ಮಾಡಲಾಗಿದೆ.

ಯಾರ್ಯಾರು ಎಷ್ಟೆಷ್ಟು ಹೂಡಿಕೆ?: ಸಂದೀಪ್‌ ದಾಶ್‌ 2,202.90 ಕೋಟಿ ರೂ., ಶೇಷಪ್ಪ 567.55 ಕೋಟಿ ಹಾಗೂ ಗಂಗಣ್ಣ 133 ಕೋಟಿ ರೂ.ಗಳನ್ನು ಮ್ಯೂಚುವಲ್‌ ಫ‌ಂಡ್‌ಗಳಲ್ಲಿ ಅನಧಿಕೃತವಾಗಿ ಹೂಡಿಕೆ ಮಾಡಿದ್ದಾರೆ. ಈ ಹೂಡಿಕೆಗಳಿಂದ 2015ರ ಜುಲೈ ಅಂತ್ಯಕ್ಕೆ ಪ್ರಾಧಿಕಾರಕ್ಕೆ 192.41 ಕೋಟಿ ರೂ. ನಷ್ಟವಾಗಿದೆ. ದಲ್ಲಾಳಿಗಳ ಮೂಲಕ ಮಾಡಲಾಗಿದ್ದ ಈ ಹೂಡಿಕೆಗಾಗಿ ಮ್ಯೂಚುವಲ್‌ ಫ‌ಂಡ್‌ ಕಂಪನಿಗಳು 50.71 ಕೋಟಿ ಕೋಟಿ ರೂ. ಕಮೀಷನ್‌ ನೀಡಿವೆ. ಈ ಹಣವನ್ನು ಹಣಕಾಸು ಸದಸ್ಯರು ಬೇನಾಮಿ ಮೂಲಗಳಿಗೆ ತಲುಪಿಸಿದ್ದಾರೆ ಎಂದೂ ಸಮಿತಿ ಅನುಮಾನ ವ್ಯಕ್ತಪಡಿಸಿದೆ. 

1999-2014ರ ಅವಧಿಯಲ್ಲಿ ಬಿರ್ಲಾ ಸನ್‌ಲೈಫ್, ಐಎನ್‌ಜಿ ಆಂಡ್‌ ಅಲೈಯನ್ಸ್‌ ಮ್ಯೂಚುವಲ್‌ ಫ‌ಂಡ್ಸ್‌, ಎಚ್‌ಡಿಎಫ್ಸಿ, ಜೂರಿಚ್‌ ಆಂಡ್‌ ಮೋರ್ಗನ್‌ ಸ್ಪಾನ್ಲಿ, ಎಚ್‌ಎಸ್‌ಬಿಸಿ ಮ್ಯೂಚುವಲ್‌ ಫ‌ಂಡ್‌, ಪ್ರಿನ್ಸಿಪಲ್‌, ಟಾಟಾ, ಸುಂದರಂ, ಜೆಎಂ, ಎಸ್‌ಬಿಐ, ತಾರಸ್‌, ಢಾಯಿಷೆ, ಯುಟಿಐ, ಬಿಎನ್‌ಪಿ ಪರಿಭಾಸ್‌ ಆಂಡ್‌ ಎಬಿಎನ್‌ ಆನ್ರೋ ಸೇರಿದಂತೆ 13 ಕಂಪೆನಿಗಳಿಗೆ ಹಣ ಹೂಡಿಕೆ ಮಾಡಲಾಗಿದೆ. 

Advertisement

ಮೌಖೀಕ ಸೂಚನೆ; ಹಣ ವರ್ಗಾವಣೆ!: ಬಿಡಿಎ ಹಣಕಾಸು ಸದಸ್ಯರ ಮೌಖೀಕ ಆದೇಶದ ಮೇಲೆಯೇ ಅಂತರಬ್ಯಾಂಕ್‌ಗಳಿಗೆ ಕನಿಷ್ಠ 60 ಕೋಟಿಯಿಂದ ಗರಿಷ್ಠ 1,324.45 ಕೋಟಿ ರೂ. ವರ್ಗಾವಣೆ ಮಾಡಲಾಗಿದೆ! 1999-2014ರ ಅವಧಿಯಲ್ಲಿ ಹಣಕಾಸು ಸದಸ್ಯರ ಮೌಖೀಕ ಸೂಚನೆಗಳ ಆಧಾರದ ಮೇಲೆ ವಿವಿಧ ಬ್ಯಾಂಕ್‌ಗಳು ಚಾಲ್ತಿ ಖಾತೆಗಳಿಗೆ ಹಣ ವರ್ಗಾವಣೆ ಮಾಡಿವೆ. ಆದರೆ, ಈ ಬಗ್ಗೆ ಬ್ಯಾಂಕ್‌ಗಳಿಗೆ ಅಧಿಕಾರ ನೀಡಿರುವ ಬಗ್ಗೆ ಬಿಡಿಎನಲ್ಲಿ ಯಾವುದೇ ದಾಖಲೆಗಳಿಲ್ಲದಿರುವುದನ್ನು ಸಿಎಜಿ ಪತ್ತೆ ಮಾಡಿದ್ದು, ಇದನ್ನು ಸಾರ್ವಜನಿಕ ಲೆಕ್ಕಪತ್ರ ಸಮಿತಿಯು ಉಲ್ಲೇಖೀಸಿದೆ.

ಅದಲು-ಬದಲು: ಸುಮಾರು 3.07 ಕೋಟಿ ರೂ. ಮೊತ್ತದ ಬ್ಯಾಂಕರ್‌ಗಳ ಚೆಕ್‌ ಅನ್ನು ಬಿಡಿಎ ಬದಲಿಗೆ ಬಿಎಂಆರ್‌ಸಿಎಲ್‌ ಪರವಾಗಿ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಹೂಡಿಕೆ ಮಾಡಿರುವುದು ಕಂಡುಬಂದಿದೆ. ಆದರೆ, ಈವರೆಗೂ ಪ್ರಾಧಿಕಾರಕ್ಕೆ ಈ ಹಣ ಹಿಂಪಾವತಿ ಆಗಿಲ್ಲ. 2007ರ ಜೂನ್‌ನಲ್ಲಿ ಪ್ರಿನ್ಸಿಪಲ್‌ ಮ್ಯೂಚುವಲ್‌ ಫ‌ಂಡ್‌ನ‌ಲ್ಲಿ ಬಿಡಿಎಗೆ ಸೇರಿದ 3.07 ಕೋಟಿ ಹಣವನ್ನು ಹಣಕಾಸು ಸದಸ್ಯ ದಾಶ್‌, ಬಿಎಂಆರ್‌ಸಿಎಲ್‌ ಪರವಾಗಿ ಹೂಡಿಕೆ ಮಾಡಿದ್ದಾರೆ. 2015ರ ಅಂತ್ಯದವರೆಗೂ ಈ ಹಣ ಹಿಂಪಾವತಿ ಆಗಿಲ್ಲ. ಈ ಹಿನ್ನೆಲೆಯಲ್ಲಿ ತಪ್ಪಿತಸ್ಥರ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳುವ ಮೂಲಕ ಹಣ ವಸೂಲಾತಿ ಮಾಡಬೇಕು ಎಂದು ಸಮಿತಿ ಶಿಫಾರಸು ಮಾಡಿದೆ.

Advertisement

Udayavani is now on Telegram. Click here to join our channel and stay updated with the latest news.

Next