Advertisement

ಪರಿಹಾರ ಕಾಣದ ಬಿಸಿಎಂ ಹಾಸ್ಟೆಲ್‌ ಅವ್ಯವಸ್ಥೆ!

10:51 PM Jan 23, 2021 | Team Udayavani |

ಕುಂದಾಪುರ: ಇಲ್ಲಿನ ಶಾಸ್ತ್ರಿ ಸರ್ಕಲ್‌ ಬಳಿ ಇರುವ ಬಿಸಿಎಂ ಹಾಸ್ಟೆಲ್‌ನ ತ್ಯಾಜ್ಯ ನೀರು ಸಮಸ್ಯೆ ಬಗೆಹರಿಸಲು ಇಂದಿನವರೆಗೂ ಯಾರಿಗೂ ಸಾಧ್ಯವಾಗಿಲ್ಲ. ಜಿ.ಪಂ. ಉಪಾಧ್ಯಕ್ಷರು, ಪುರಸಭೆ ಸದಸ್ಯರು, ಮುಖ್ಯಾಧಿಕಾರಿ, ಹಿಂದುಳಿದ ವರ್ಗಗಳ ಕಲ್ಯಾಣ ಆಯೋಗದ ಅಧ್ಯಕ್ಷರೇ ಪರಿಶೀಲಿಸಿದರೂ ಸಮಸ್ಯೆ ಮಾತ್ರ ಪರಿಹಾರವಾಗಿಲ್ಲ. ಸದ್ಯಕ್ಕೆ ಕೇಳಿಬರುತ್ತಿರುವ ಉತ್ತರ ಒಂದೇ ಪರಿಹಾರವಾಗಲಿದೆ, ಆದರೆ ಈಗ ಅನುದಾನ ಇಲ್ಲ!

Advertisement

ಏನಿದು ಸಮಸ್ಯೆ? :

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಮೂಲಕ ಡಿ. ದೇವರಾಜ ಅರಸು ಬಿಸಿಎಂ ಮೆಟ್ರಿಕ್‌ ಅನಂತರದ ಬಾಲಕಿಯರ ಹಾಸ್ಟೆಲ್‌ 2001ರಲ್ಲಿ ಮಂಜೂರಾಗಿದೆ. ಇಲ್ಲಿನ ತಾಲೂಕು ಪಂಚಾಯತ್‌ ಬಳಿಯ ರಸ್ತೆಯಲ್ಲಿ ಹೋಗುವಾಗ ಹಾಸ್ಟೆಲ್‌ನ ಹೊಸ ಕಟ್ಟಡ ಕಾಣುತ್ತದೆ. ಅಲ್ಲಿಂದ ಮುಂದೆ ಸಾಗಿದಾಗ ವಾಸನೆ ಮೂಗಿಗೆ ಅಡರುತ್ತದೆ. ಹಾಗೆ ಮೂಗು ಮುಚ್ಚಿಕೊಂಡು ಹೋದರೆ ಸಿಗುವುದೇ ಬಿಸಿಎಂ ಹಳೆ ಹಾಸ್ಟೆಲ್‌!  ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವತಿಯಿಂದ ನಡೆಸಲ್ಪಡುತ್ತಿರುವ ಹಳೆ ಕಟ್ಟಡದಲ್ಲಿ ಈ ಹಿಂದೆ ಮಿತಿಗಿಂತ ಹೆಚ್ಚಿನ ಸಂಖ್ಯೆ ವಿದ್ಯಾರ್ಥಿಗಳು ಇದ್ದರು. 100 ಮಕ್ಕಳ ಸಾಮರ್ಥ್ಯ ಇದ್ದಾಗ 200 ಮಕ್ಕಳನ್ನು  ತುಂಬಿಸಲಾಗಿತ್ತು. ಅಷ್ಟು ಮಂದಿ ಇರುವ ಜಾಗದಲ್ಲಿ ಸೀಮಿತ ಸಂಖ್ಯೆಯ ಶೌಚಾಲಯ, ಸ್ನಾನದ ಕೋಣೆ, ಬಟ್ಟೆ  ಒಗೆಯುವ ಸ್ಥಳವನ್ನು ಬಳಸಿ ಉಳಿದು ಕೊಳ್ಳಬೇಕಿತ್ತು. ಆ ಬಳಿಕ ಕೆಲವು ಮಕ್ಕಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸಲಾಯಿತು.

ದುರ್ಗಂಧ :

ಸ್ನಾನಗೃಹದ, ಬಟ್ಟೆ ಒಗೆದ ನೀರು ರಸ್ತೆ  ಬದಿಯ ಚರಂಡಿ ಸೇರುತ್ತದೆ. ಇದು ಅಸಾಧ್ಯ  ವಾತಾವರಣ ಉಂಟು ಮಾಡುತ್ತದೆ. ಇಲ್ಲೇ ಸನಿಹದಲ್ಲಿ ಮಹಿಳಾ ಮಂಡಳಗಳ ಒಕ್ಕೂಟ, ಸಾಂತ್ವನ ಕೇಂದ್ರ, ರೋಟರಿ ಸಭಾಂಗಣ, ಅಂಬೇಡ್ಕರ್‌ ಸಭಾಭವನ ಇದ್ದು ಸಾರ್ವಜನಿಕರು ಬರುತ್ತಾರೆ. ಇಲ್ಲಿಗೆ ಬರುವವರಿಗೆಲ್ಲ ನೀರು ಹರಿವ ವೇಳೆ ವಾಸನೆ ಸಹಿಸಿಕೊಳ್ಳಬೇಕಾದ್ದು ಅನಿವಾರ್ಯ.

Advertisement

ಸ್ವಚ್ಛತೆ ಇಲ್ಲ :

ಸ್ವಚ್ಛ ಕುಂದಾಪುರ ಎಂದು ಘೋಷಣೆ ಹಾಕುವ ಕುಂದಾಪುರ ಪುರಸಭೆಗೆ ಈ ಕೊಳಚೆಯಿಂದಾಗಿ  ಕಪ್ಪುಚುಕ್ಕಿ ಇಟ್ಟಂತಾ ಗಿದೆ. ತಾ.ಪಂ. ಸನಿಹ ದಾಟಿ ಬಂದವರಿಗೆಲ್ಲ ಈ ದುರ್ನಾತವೇ ಮೊದಲ ಸ್ವಾಗತವಾಗಿದೆ. ಬಿಸಿಎಂ ಇಲಾಖೆ ಕೂಡಾ ಮಕ್ಕಳ ಆರೋಗ್ಯದ ದೃಷ್ಟಿಯಿಂದ, ಸಾರ್ವಜನಿಕ ಹಿತದೃಷ್ಟಿಯಿಂದ ಯೋಚಿಸಬೇಕಿದೆ.

ನಿಂತಿಲ್ಲ ವಾಸನೆ :

ಕೋವಿಡ್ ಎಂದು ಹಾಸ್ಟೆಲ್‌ಗ‌ಳು ಭಣಗುಟ್ಟಿತು. ಆದರೆ ಕೋವಿಡ್ ಸಂದರ್ಭ ಕ್ವಾರಂಟೈನ್‌ ಸೆಂಟರ್‌ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಹಾಗಾಗಿ ಹಾಸ್ಟೆಲ್‌ಗ‌ಳು ಭಣಗುಟ್ಟಲಿಲ್ಲ. ಜನ ತಪ್ಪಲಿಲ್ಲ. ಜನರಿಗೆ ತ್ಯಾಜ್ಯ ನೀರಿನ ತೊಂದರೆಯೂ ತಪ್ಪಲಿಲ್ಲ.

ಭರವಸೆ :

ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್‌ ಹೆಗ್ಡೆ ಅವರು ಕೆಲ ದಿನಗಳ ಹಿಂದೆ ಭೇಟಿ ನೀಡಿ ತ್ಯಾಜ್ಯ ನೀರಿನ ಸಮಸ್ಯೆ ಪರಿಹರಿಸುವಂತೆ ಸೂಚಿಸಿದ್ದಾರೆ. ಪ್ರಸ್ತುತ ಸಮಸ್ಯೆ ಇದ್ದರೆ ಪುರಸಭೆಯಿಂದ ತ್ಯಾಜ್ಯವನ್ನು ಕೊಡೊಯ್ಯುವ ವ್ಯವಸ್ಥೆ ಮಾಡಲಾಗುವುದು ಎಂದು ಪುರಸಭೆ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ ತಿಳಿಸಿದ್ದಾರೆ. ತ್ಯಾಜ್ಯ ನೀರು ರಸ್ತೆ ಬದಿಗೆ ಚರಂಡಿಗೆ ಹೋಗದಂತೆ ಮಾಡಿ ಇಲ್ಲೇ ಶುದ್ಧಗೊಳ್ಳುವ ಪ್ರಕ್ರಿಯೆಗೆ ಬೇಕಾದ ಯೋಜನೆಗೆ ನೀಲನಕಾಶೆ ತಯಾರಾಗಿಲ್ಲ. ಅನುದಾನಕ್ಕೆ ಬೇಡಿಕೆ ಇಟ್ಟಿಲ್ಲ ಎಂದು ಜನ  ಇಲ್ಲಿಯ ಗ್ರಾಮಸ್ಥರು ತಿಳಿಸಿದ್ದಾರೆ. ಈ ಸಮಸ್ಯೆ ಕುರಿತು “ಉದಯವಾಣಿ’ “ಸುದಿನ’ ವರದಿ ಮಾಡಿತ್ತು.

ಈಗಾಗಲೇ ಬಂದ ಅನುದಾನ ಲಭ್ಯ ಇಲ್ಲ. ಯೋಜನೆ ತಯಾರಾದ ಕೂಡಲೇ ಅನುದಾನ‌ಕ್ಕೆ ಬರೆಯಲಾಗುವುದು. ಶೀಘ್ರವೇ ಕಾಮಗಾರಿ ಮಾಡಲಾಗುವುದು. -ನರಸಿಂಹ ಪೂಜಾರಿ,  ತಾಲೂಕು ವಿಸ್ತರಣಾಧಿಕಾರಿ,  ಬಿಸಿಎಂ ತಾಲೂಕು ಕಲ್ಯಾಣಾಧಿಕಾರಿ (ಪ್ರಭಾರ) 

ಎಂಜಿನಿಯರ್‌ ಮೂಲಕ ನಕ್ಷೆ ಯೋಜನೆಯ ರೂಪರೇಷೆ ನಡೆಯುತ್ತಿದ್ದು ತ್ಯಾಜ್ಯ ನೀರು ಕಟ್ಟಡದ ಆವರಅಣದಿಂದ ಹೊರಗೆ ಹೋಗದೇ ಒಳಗೇ ಶುದ್ಧಗೊಳ್ಳುವಂತೆ ಮಾಡಲಾಗುವುದು. ತ್ಯಾಜ್ಯ ನೀರಿಗೆ ಹೊಸ ಟ್ಯಾಂಕ್‌ ಕೂಡಾ ರಚನೆಯಾಗಲಿದೆ. ವಾಸನೆ ಬರದಂತೆ ಮಾಡಲು ಪುರಸಭೆಯಿಂದ ಸ್ವಚ್ಛಗೊಳಿಸಲಾಗುವುದು. -ಗಿರೀಶ್‌ ಜಿ.ಕೆ. ಸದಸ್ಯರು, ಪುರಸಭೆ

Advertisement

Udayavani is now on Telegram. Click here to join our channel and stay updated with the latest news.

Next