Advertisement

ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಬಿಸಿಸಿಐ ವೆಬ್‌ಸೈಟ್‌ ಹರಾಜಿಗೊಳಗಾಯ್ತು!

06:40 AM Feb 05, 2018 | Team Udayavani |

ಮುಂಬೈ: ವಿಶ್ವದ ಅತ್ಯಂತ ಶ್ರೀಮಂತ ಕ್ರಿಕೆಟ್‌ ಸಂಸ್ಥೆ ಎನಿಸಿಕೊಂಡಿರುವ ಬಿಸಿಸಿಐ ಅತ್ಯಂತ ಮುಜುಗರ ಸನ್ನಿವೇಶವೊಂದಕ್ಕೆ ಒಳಗಾಗಿದೆ. ತನ್ನ ವೆಬ್‌ಸೈಟ್‌ ಬಿಸಿಸಿಐ. ಟಿವಿಯ ಪರವಾನಗಿಯನ್ನೇ ನವೀಕರಿಸಿಕೊಳ್ಳಲು ವಿಫ‌ಲವಾಗಿದೆ. ನವೀಕರಣಕ್ಕೆ ಶನಿವಾರ ಅಂತಿಮ ಗಡುವಾಗಿದ್ದರೂ ಆ ಕೆಲಸವಾಗದಿರುವುದರಿಂದ ಕ್ರಿಕೆಟ್‌ ವಲಯದಲ್ಲಿ ಭಾರೀ ಟೀಕೆಗೊಳಗಾಗಿದೆ.

Advertisement

ಇದೇ ವೇಳೆ ಬಿಸಿಸಿಐ ಪರವಾನಗಿಯನ್ನು ನವೀಕರಣ ಮಾಡಿಕೊಳ್ಳದಿರುವುದರಿಂದ ಡೊಮೈನ್‌ ನೀಡಿರುವ ರಿಜಿಸ್ಟರ್‌.ಕಾಮ್‌ ಮತ್ತು ನಮಿjàತ್‌.ಕಾಮ್‌ಗಳು ವೆಬ್‌ಸೈಟ್‌ ವಿಳಾಸವನ್ನು ಹರಾಜಿಗಿಟ್ಟಿವೆ. ಈಗಾಗಲೇ 7 ಮಂದಿ ಬಿಡ್‌ ಸಲ್ಲಿಕೆ ಮಾಡಿದ್ದಾರೆ. ಸಲ್ಲಿಕೆಯಾಗಿರುವ ಬಿಡ್‌ಗಳಲ್ಲಿ ಕನಿಷ್ಠ ಮೊತ್ತ 4425 ರೂ.ಗಳಾಗಿದ್ದು, ಗರಿಷ್ಠ ಮೊತ್ತ 17,318 ರೂ.ಗಳಾಗಿವೆ.

ವೆಬ್‌ಸೈಟ್‌ಗೆ ಪರವಾನಗಿ ಮುಗಿಯಲು ಕೊನೆಯ ದಿನಾಂಕ ಪೆ.2ನೇ (ಶುಕ್ರವಾರ) ತಾರೀಖಾಗಿತ್ತು. 3ರಂದು ಶನಿವಾರ ಅದನ್ನು ನವೀಕರಣ ಮಾಡಲೇಬೇಕಾಗಿತ್ತು. ಆದರೆ ಭಾನುವಾರ ಸಂಜೆಯಾದರೂ ಬಿಸಿಸಿಐ ವೆಬ್‌ಸೈಟ್‌ ತನ್ನ ಕಾರ್ಯಾಚರಣೆ ಆರಂಭಿಸಿರಲಿಲ್ಲ. ಬದಲಿಗೆ ಬಿಡ್‌ ಸಲ್ಲಿಕೆ ಮಾಡಿದ 7 ಮಂದಿಯ ಹೆಸರು ಮಾತ್ರ ಅದರಲ್ಲಿ ಕಾಣುತ್ತಿತ್ತು. ಇಂತಹದೊಂದು ದುಸ್ಥಿತಿಯನ್ನು ಬಿಸಿಸಿಐ ತಂದುಕೊಟ್ಟಿದ್ದೇಕೆ, ಈ ಘಟನೆ ಉದ್ದೇಶಪೂರ್ವಕವಾಗಿ ನಡೆದಿದೆಯೇ ಎಂಬ ಪ್ರಶ್ನೆ ಮೂಡಿದೆ.

ಸದ್ಯ ಬಿಸಿಸಿಐನಲ್ಲಿ ಲೋಧಾ ಸಮಿತಿ ಶಿಫಾರಸನ್ನು ಅಳವಡಿಕೆ ಮಾಡಿಕೊಳ್ಳುವ ಸಂಬಂಧ ಭಾರೀ ತಿಕ್ಕಾಟ ನಡೆಯುತ್ತಿದೆ. ಸರ್ವೋಚ್ಚ ನ್ಯಾಯಾಲಯ ನಿಯೋಜಿತ ಸಮಿತಿ ಮತ್ತು ಬಿಸಿಸಿಐ ಪದಾಧಿಕಾರಿಗಳ ನಡುವೆ ಒಳಗೊಳಗೆ ಘರ್ಷಣೆ ನಡೆದಿದೆ. ಇನ್ನೂ ಶಿಫಾರಸುಗಳು ಪೂರ್ಣ ಜಾರಿಯಾಗದಿರುವುದು ಮತ್ತು ಅದನ್ನು ಜಾರಿ ಮಾಡಲು ಬಹುತೇಕರಿಗೆ ಆಸಕ್ತಿಯಿಲ್ಲದಿರುವುದರಿಂದ ಈ ಸಮಸ್ಯೆ ಉದ್ಭವಿಸಿರಬಹುದು ಎಂದು ಊಹಿಸಲಾಗಿದೆ.

ಲಲಿತ್‌ ಮೋದಿ ಮಾಲಿಕತ್ವ!: ವಿಶೇಷವೆಂದರೆ ಬಿಸಿಸಿಐನ ಈ ಡೊಮೈನ್‌ ಮಾಲಿಕತ್ವ ಬಿಸಿಸಿಐನಿಂದ ಉಚ್ಚಾಟಿಸಲ್ಪಟ್ಟಿರುವ ಲಲಿತ್‌ ಮೋದಿ ಹೆಸರಲ್ಲಿದೆ! 2009ರ ಐಪಿಎಲ್‌ನಲ್ಲಿ ಹಗರಣ ನಡೆಸಿದ ಸಂಬಂಧ ಮೋದಿ ಬಂಧನಕ್ಕೆ ಆದೇಶ ಹೊರಟಿದ್ದು, ಅವರೀಗ ಇಂಗ್ಲೆಂಡ್‌ನ‌ಲ್ಲಿ ವಾಸಿಸುತ್ತಿದ್ದಾರೆ.

Advertisement

ಬೇಜವಾಬ್ದಾರಿಗೆ ಟೀಕೆ: ಬಿಸಿಸಿಐ ವೆಬ್‌ಸೈಟನ್ನು ವಿಶ್ವಾದ್ಯಂತ ಹಲವು ವೀಕ್ಷಿಸುತ್ತಾರೆ. ಅದರಲ್ಲೂ ಭಾನುವಾರ ಭಾರತ-ಆಫ್ರಿಕಾ ನಡುವೆ 2ನೇ ಏಕದಿನ ಪಂದ್ಯ ನಡೆದಿತ್ತು. ಈ ಸಂದರ್ಭದಲ್ಲಿ ಸ್ಕೋರ್‌ ಸೇರಿದಂತೆ ಇತರೆ ಮಾಹಿತಿಗಾಗಿ ಈ ಸೈಟನ್ನು ವೀಕ್ಷಿಸಲಾಗುತ್ತದೆ. ಅದಲ್ಲದೇ ವಿವಿಧ ರೀತಿಯ ಕ್ರಿಕೆಟ್‌ ಮಾಹಿತಿಗಳಿಗಾಗಿಯೂ ಪರಿಶೀಲಿಸಲಾಗುತ್ತದೆ. ಇದೆಲ್ಲ ಗೊತ್ತಿದ್ದರೂ ಬಿಸಿಸಿಐ ತನ್ನ ಸೈಟನ್ನು ನವೀಕರಿಸಿಕೊಂಡಿಲ್ಲ ಎನ್ನುವುದು ವಿಪರ್ಯಾಸ ಎಂದು ಟೀಕೆಗೊಳಗಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next