ಮುಂಬೈ: ಭಾರತೀಯ ಕ್ರಿಕೆಟ್ ಮಂಡಳಿ (ಬಿಸಿಸಿಐ)ಗೆ ತನ್ನ ಸಂವಿಧಾನವನ್ನು ತಿದ್ದುಪಡಿ ಮಾಡಲು ಸುಪ್ರೀಂ ಕೋರ್ಟ್ ಅನುಮತಿ ನೀಡಿದಾಗ, ಸೌರವ್ ಗಂಗೂಲಿ ಸೇರಿದಂತೆ ಬಿಸಿಸಿಐ ಪದಾಧಿಕಾರಿಗಳು ಮತ್ತೊಂದು ಅವಧಿಗೆ ತಮ್ಮ ಅಧಿಕಾರದಲ್ಲಿ ಮುಂದುವರಿಯುತ್ತಾರೆ ಎಂದು ವರದಿಯಾಗಿತ್ತು. ಆದರೆ, ಇತ್ತೀಚೆಗೆ ಹೊಸದಿಲ್ಲಿಯಲ್ಲಿ ನಡೆದ ಬಿಸಿಸಿಐನ ಉನ್ನತ ಅಧಿಕಾರಿಗಳ ಸಭೆಯಲ್ಲಿ ಗಂಗೂಲಿ ಬಿಸಿಸಿಐ ಅಧ್ಯಕ್ಷರಾಗಿ ಎರಡನೇ ಅವಧಿಗೆ ಮುಂದುವರಿಯಲು ಬಯಸುತ್ತಿಲ್ಲ ಎಂದು ವರದಿಯಾಗಿದೆ.
ದೈನಿಕ್ ಜಾಗರಣ್ ವರದಿಯಂತೆ, ಸಭೆಯಲ್ಲಿ ಪ್ರಸ್ತುತ ಪದಾಧಿಕಾರಿಗಳಲ್ಲದೆ, ಕೆಲವು ಹಿರಿಯ ಅಧಿಕಾರಿಗಳು ಕೂಡಾ ಭಾಗವಹಿಸಿದ್ದರು. ರಾಜೀವ್ ಶುಕ್ಲಾ, ಮಾಜಿ ಅಧ್ಯಕ್ಷ ಎನ್.ಶ್ರೀನಿವಾಸನ್ ಕೂಡಾ ಸಭೆಯ ಭಾಹವಾಗಿದ್ದರು ಎನ್ನಲಾಗಿದೆ.
ಮೊದಲು ಸಭೆಯ ಹೊಸದಿಲ್ಲಿಯ ಖಾಸಗಿ ಹೋಟೆಲೊಂದರಲ್ಲಿ ನಡೆದಿದ್ದರೆ, ಎರಡನೇ ಸಭೆಯು ಭಾರತೀಯ ಜನತಾ ಪಕ್ಷದ ಪ್ರಮುಖ ನಾಯಕರೊಬ್ಬರ ನಿವಾಸದಲ್ಲಿ ನಡೆದಿದೆ ಎಂದು ವರದಿ ತಿಳಿಸಿದೆ.
ಇದನ್ನೂ ಓದಿ:ಕಂಟೆಂಟೇ ಸ್ಟ್ರಾಂಗು ಗುರೂ… ದೇಸಿ ಸೊಗಡಿಗೆ ಪ್ರೇಕ್ಷಕನ ಜೈಕಾರ
ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರ ಅಧಿಕಾರವಧಿ ಈ ತಿಂಗಳು ಅಂತ್ಯವಾಗಲಿದೆ. ಆದರೆ ಅವರು ಮತ್ತೆ ಸ್ಪರ್ಧೆ ನಡೆಸುವುದಿಲ್ಲ. ಆದರೆ ಕಾರ್ಯದರ್ಶಿ ಜಯ್ ಶಾ ಅವರು ಮತ್ತೆ ಅದೇ ಹುದ್ದೆಯಲ್ಲಿ ಮುಂದುವರಿಯಲು ಸ್ಪರ್ಧಿಸಲಿದ್ದಾರೆ ಎಂದು ಸಭೆಯಲ್ಲಿ ನಿರ್ಣಯಿಸಲಾಗಿದೆ.
ವಿಶ್ವದ ಶ್ರೀಮಂತ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಗಂಗೂಲಿ ಸ್ಪರ್ಧೆ ನಡೆಸದಿದ್ದರೆ ಅವರು ಜಯ್ ಶಾಗೆ ದಾರಿ ಮಾಡಿಕೊಡುತ್ತಾರೆ ಎಂಬ ವಾದಗಳು ಇದೀಗ ತಲೆಕೆಳಗಾಗಿದೆ. ಸದ್ಯದ ವರದಿಯ ಪ್ರಕಾರ ಸದ್ಯದ ಉಪಾಧ್ಯಕ್ಷ ರಾಜೀವ್ ಶುಕ್ಲಾ ಮತ್ತು ಮಾಜಿ ಆಟಗಾರ ರೋಜರ್ ಬಿನ್ನಿ ಅವರು ಅಧ್ಯಕ್ಷೀಯ ಹುದ್ದೆ ರೇಸ್ ನಲ್ಲಿರುವ ಪ್ರಮುಖರಾಗಿದ್ದಾರೆ.